ನಟ್ಟನಡು ರಾತ್ರಿಯಲಿ
ಹುತ್ತಗಟ್ಟಿತು ಕತ್ತಲು
ತುಟ್ಟತುದಿ ಕೋವಿಯಲಿ
ಹೆಡೆಯ ಎತ್ತಿತು ಸುತ್ತಲು
ಬುಸ್ಸೆನ್ನುವ ಭಾವದಲ್ಲಿ
ಸತ್ತ ಸಂಬಂಧಗಳು
ವಿಷನಾಗರ ನಾಲಗೆಯಲ್ಲಿ
ನಕ್ಷತ್ರಗಳ ನುಂಗಿದವು
ಗೋರಿಯೊಳಗೆ ತಂಗಿದವು
ಆಕಾಶದ ಹಣೆಯಲ್ಲಿ
ಕುಂಕುಮದ ಚಂದಿರನ
ಒಂದೇಕ್ಷಣ ಒರೆಸಿದವು
ಕರಿಮಣಿಗಳ ಕಿತ್ತವು
ಬೆಳದಿಂಗಳ ಬಸಿದವು.
ಮುಖ ಕಾಣದ ಸುಖ ಸಹಿಸದ
ಕುಣಿವ ಮೂಳೆಗತ್ತಲು
ಇತಿಹಾಸದ ಪರಿಹಾಸದ
ಹುಸಿಪಾಠವು ಎತ್ತಲು
ಸದ್ದಿಲ್ಲದೆ ಗೆದ್ದಲ ಗೆದ್ದು
ಗಾದಿಯ ಏರಿತು ಹಾವು
ಹೊರಗಿನ ಕತ್ತಲು ಒಳಗನು ಸೇರಿ
ಹತ್ತಿರವಾಯಿತು ಸಾವು
ಬೆಳಕಿನ ಚಿಗುರಿಗೆ ಉಗುರನು ಹಾಕಿ
ಕನಸನು ಕೊಂದಿತ್ತು-
ಕತ್ತಲು-
ಕನಸನು ಕೊಂದಿತ್ತು.
*****