ಚರಿತ್ರೆಯ ಚಂದಿರ ಸುರಿಸಿದ್ದು
ಬೆಳದಿಂಗಳಲ್ಲ ಗೆಳೆಯ,
ಮಟಮಟ ಮಧ್ಯಾಹ್ನದ ಬಿಸಿಲು.
ಈ ಬಿಸಿಲಿಗೊ ನೂರೆಂಟು ಟಿಸಿಲು!
ಬೆಳೆಯುತ್ತ ಇಳಿಯುತ್ತ ಭೂಮಿಗೆ
ಭೂತ ಬೆಂಗಾಡಿನ ಪಾತಾಳವಾಗುತ್ತ
ಪಾತಾಳದೊಳಗೊಂದು ಪುರಾಣವಾಗುತ್ತ
ನೋಟದೊಳಗೆ ನುಗ್ಗುವ ನೀರು
ಪುರಾಣ ಪುಣ್ಯ ಪಾನಕವಾಗಿದೆ,
ಚರಿತ್ರೆ ಚಂದಿರ ಕರಗುತ್ತಿದೆ.
ಈಗ ಹೇಳು ಗೆಳೆಯಾ
ಸೋಸಿದರೆ ಸಿಕ್ಕುವುದು ಏನು?
ಚರಿತ್ರೆ, ಪುರಾಣ ಅಥವಾ ನಾನು?
*****