೧೯೪೯ರಿಂದ ಕಾವ್ಯಕೃಷಿ ಆರಂಭಿಸಿ ಇದುವರೆಗೂ ಹದಿನಾಲ್ಕು ಕವನಸಂಕಲನ ಹೊರತಂದಿರುವ ಚೆನ್ನವೀರ ಕಣವಿ ಅವರದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಇತರ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿಗಳನ್ನು ಪಡೆದಿರುವ ಕಣವಿಯವರ ಸಮಗ್ರ ಕಾವ್ಯದ ಸಂಪುಟ ಮೂರು ಮುದ್ರಣಗಳನ್ನು ಕಂಡಿದೆ. ಇವಲ್ಲದೇ ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಎಂಬ ವಿಮರ್ಶಾ ಗ್ರಂಥಗಳನ್ನೂ ‘ಮಧುರಚೆನ್ನ’ ಎಂಬ ಜೀವನ ಚರಿತ್ರೆಯನ್ನೂ ‘ಹಕ್ಕೀಪುಚ್ಛ’ ಎಂಬ ಮಕ್ಕಳ ಪುಸ್ತಕವನ್ನೂ ಅವರು ರಚಿಸಿದ್ದಾರೆ. “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಕರ್ನಾಟಕ ರಾಜ್ಯ ನಾಮಕರಣದ ಸಂದರ್ಭದ ಕವಿತೆ ಅವರ ಭಾಷಾಪ್ರೇಮಕ್ಕೆ ಸಾಕ್ಷಿಯಾದರೆ “ವಿಶ್ವವಿನೂತನ ವಿದ್ಯಾಕೇತನ” ಕವಿತೆಯು ನಾಡಗೀತೆಯಂತೆ ಪ್ರಸಿದ್ಧವಾಗಿ ಅವರಿಗೆ ಹೆಸರು ತಂದುಕೊಟ್ಟಿದೆ.
ಕುವೆಂಪು ಬೇಂದ್ರೆಯವರಂತೆಯೇ, ಅವರ ಪ್ರಭಾವಕ್ಕೊಳಗಾಗಿಯೇ, ನವೋದಯದಲ್ಲಿ ಕಾವ್ಯಕೃಷಿ ಪ್ರಾರಂಭಿಸಿದ ಕಣವಿಯವರು ನವ್ಯ, ನವ್ಯೋತ್ತರ ಕಾವ್ಯಮಾರ್‍ಗದಲ್ಲಿ ಹಾದು ಬಂದಿದ್ದಾರೆ. ಆದರೆ ಯಾವುದರ ಪ್ರಭಾವಕ್ಕೂ ಒಳಗಾಗದೇ ಒಳಗಾದರೂ ಬಿಡಿಸಿಕೊಂಡು ಯಾವ ಪಂಥಕ್ಕೂ ಅಡಿಯಾಳಾಗದೇ ಉಳಿದ ಕಾರಣದಿಂದಲೇ ಇವರನ್ನು ಜಿ.ಎಸ್. ಶಿವರುದ್ರಪ್ಪನವರೊಂದಿಗೆ ಸೇರಿಸಿ ಸಮನ್ವಯ ಕವಿ ಎಂದು ಕೆಲವರು ಗುರುತಿಸಿದರು. ಆದರೆ ಅನೇಕ ವಿಮರ್ಶಕರು ಹೀಗೆ ಗುರುತಿಸುವುದನ್ನು ಒಪ್ಪುವಂತೆ ತೋರುವುದಿಲ್ಲ. ೧೯೮೯ರಲ್ಲಿ ಪ್ರಕಟವಾದ ‘ಹೊಂಬೆಳಕು’ ಎಂಬ ಕಣವಿ ಸಮಗ್ರ ಕಾವ್ಯಕ್ಕೆ ಮುನ್ನುಡಿ ಬರೆದಿರುವ ಜಿ.ಎಸ್. ಆಮೂರ ಅವರು “ಸಮನ್ವಯ” ಎಂಬ ಪದದಲ್ಲಿ ಯಾವ ಅರ್ಥವೂ ಕಾಣುವುದಿಲ್ಲ. ಏಕೆಂದರೆ ನವೋದಯ ನವ್ಯ ನವ್ಯೋತ್ತರ ಕಾವ್ಯಮಾರ್ಗಗಳ ಸಮನ್ವಯಕ್ಕೆ ಅವರೆಂದೂ ಪ್ರಯತ್ನಿಸಿಲ್ಲ” ಎನ್ನುತ್ತಾರೆ. ನವೋದಯದಿಂದ ನವ್ಯಕ್ಕೆ ಹೊರಳುವಾಗ ನವ್ಯದ ದಟ್ಟ ಪ್ರಭಾವಕ್ಕೆ ಒಳಗಾದ ಉದಾಹರಣೆ ಕಣವಿಯವರ ಯಾವ ಕವಿತೆಯಲ್ಲಿಯೂ ಇಲ್ಲ. ನವ್ಯಕಾವ್ಯ ಪ್ರವರ್‍ತಕರಾದ
ಗೋಪಾಲಕೃಷ್ಣ ಅಡಿಗರೇ “ಕಟ್ಟುವೆವು ನಾವು” ಎಂಬ ನವೋದಯ ಧಾಟಿಯ ಕವಿತೆ ರಚಿಸಿದ ನಂತರ ‘ಚಂಡೆ ಮದ್ದಳೆ’ಯಂತಹ ಸಂಪೂರ್‍ಣ ನವ್ಯಕ್ಕೆ ತೆತ್ತುಕೊಂಡ ಕಾವ್ಯ ರಚಿಸಿ ತಮ್ಮ ಛಾಪು ಮೂಡಿಸಬೇಕಾಯಿತು. ಅವರಿಂದ ‘ಪುಷ್ಪಕವಿಯ ಪರಾಕು” ಎಂದು ವಿಡಂಬನೆಗೊಂಡ ಕೆ.ಎಸ್.ನ. ಅವರು ನಮ್ಮ ಕವಿತೆಯಲ್ಲಿ ತಮ್ಮ ಗಟ್ಟಿಯಾದ ಪ್ರವೇಶವನ್ನು ಸಾರುವ ಸಲುವಾಗಿಯೇ “ಗಡಿಯಾರದಂಗಡಿಯ ಮುಂದೆ” ಎಂಬ ಪಕ್ಕಾ ನವ್ಯ ಕವನ ಬರೆಯಬೇಕಾಯಿತು. “ಅರ್ಥವಾಗುವ ಹಾಗೆ ಬರೆಯಬೇಕು” ಎಂದು ನವ್ಯ ಕಾವ್ಯದ ಸಂವಹನದ ಕೊರತೆಯನ್ನು ಮಾಸ್ತಿ ವಿಡಂಬಿಸಿದರೆ ಅಡಿಗರು ಅದಕ್ಕೂ ವಿಡಂಬನೆಯಲ್ಲೇ ಉತ್ತರ ಕೊಟ್ಟರು. ಆದರೆ ಕಣವಿಯವರ ಯಾವ ಕವಿತೆಯೂ ಈ ರೀತಿಯ ಸಂಘರ್ಷಕ್ಕೆ ಉದಾಹರಣೆಯಾದ ದಾಖಲೆಗಳಿಲ್ಲ. ಇದೇ ಮಾತು ಜಿ.ಎಸ್.ಎಸ್. ಅವರಿಗೂ ಅನ್ವಯಿಸುತ್ತದೆ. “ಮುಂಬೈ ಜಾತಕ”ದಂತಹ ಪಕ್ಕಾ ನವ್ಯಕವಿತೆ ಬರೆದ ಅವರು ತಮ್ಮನ್ನು ತಾವು ಎಂದೂ ಸಮರ್ಥಿಸಿಕೊಳ್ಳಬೇಕಾಗಲಿಲ್ಲ. ಹೀಗಾಗಿಯೇ ಇವರಿಬ್ಬರನ್ನು ಸಮನ್ವಯ ಕವಿಗಳೆಂದು ಕರೆದಿರಬಹುದೇ ಎಂಬ ಗುಮಾನಿ ನನಗೆ ಇನ್ನೂ ಇದೆ.
ನವೋದಯ ಕಾವ್ಯವು ತನ್ನ ಸಿದ್ಧಿಯ ಪರಾಕಾಷ್ಠೆ ತಲುಪಿದ್ದ ಕಾಲದಲ್ಲಿ ಅದರ ಪ್ರಮುಖ ಕೇಂದ್ರವಾದ ಧಾರವಾಡದಲ್ಲಿ ಕಣವಿಯವರ ಕಾವ್ಯೋದ್ಯೋಗ ಪ್ರಾರಂಭವಾಯಿತು. ಗೆಳೆಯರ ಗುಂಪಿನ ಸೆಳೆತಕ್ಕೆ ಒಳಗಾಗಿ ಗುಂಪಿನ ಸತ್ವ ಹೀರಿಕೊಂಡೂ ತಮ್ಮ ಪ್ರತಿಭೆಗೆ ಒಗ್ಗುವಂತೆ ಬರೆದವರು ಚೆನ್ನವೀರ ಕಣವಿ ಮಾತ್ರ. ಹೀಗಾಗಿ, ತಮ್ಮ ಕಾವ್ಯ ಜೀವನದ ಉದ್ದಕ್ಕೂ ಆಯ್ಕೆಯ ವಿಷಯದಲ್ಲಿ ತೋರಿರುವ ಧೈರ್ಯ, ಸ್ವಾತಂತ್ರ್ಯ, ಪ್ರಾಮಾಣಿಕತೆ ಅವರಿಗಿರುವುದರಿಂದಲೇ ಪ್ರಭಾವವನ್ನು ಅರಗಿಸಿಕೊಂಡೂ ಉಳಿಯುವುದು ಅವರಿಗೆ ಸಾಧ್ಯವಾಯಿತು. ಸಮಕಾಲೀನ ಸಾಹಿತ್ಯ ಚಳವಳಿಗಳೊಂದಿಗೆ ಅವರು ಹೊಂದಿದ ಸಂಬಂಧ ಮತ್ತು ಅವರ ಕಾವ್ಯದ ಮೇಲಿನ ಸಾಹಿತ್ಯಕ ಪ್ರಭಾವಗಳು, ಅವರ ಕಾವ್ಯಮಾರ್‍ಗ ಮತ್ತು ಮನೋಧರ್ಮಗಳ ಕುರಿತು ವಿಮರ್‍ಶಕರು ವಿವರವಾಗಿ ಚರ್ಚಿಸಿದ್ದಾರೆ. ಬೇಂದ್ರೆ, ವಿನಾಯಕರಂಥವರು ಅವರ ಸಂಕಲನಗಳಿಗೆ ಮುನ್ನುಡಿ ಬರೆದಿದ್ದಾರೆ. ೧೯೮೯ರಲ್ಲೇ ಜಿ.ಎಸ್. ಆಮೂರ ಬರೆದ ಸಮಗ್ರ ಕಾವ್ಯದ ಮುನ್ನುಡಿಯನ್ನು ನಂತರದ ಎಲ್ಲಾ ಮುದ್ರಣಗಳಲ್ಲೂ ಉಳಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ವಿಮರ್ಶಕರು ಅವರ ಬಗ್ಗೆ ಆಡಿರುವ ಕೆಲವು ಮಾತುಗಳ ಮೂಲಕ ಅವರ ಕಾವ್ಯದ ಒಟ್ಟು ಮೌಲ್ಯಮಾಪನವನ್ನು ಮಾಡಬಹುದಾಗಿದೆ. ಬೇಂದ್ರೆ, ಅಡಿಗರಂತೆ ಇವರು ಮಾರ್ಗ ಪ್ರವರ್ತಕರಲ್ಲ ಎನ್ನುವ ಆಮೂರ ಅವರು ಆದರ್ಶವಾದ, ನಿಸರ್ಗ ಪ್ರೇಮ, ಭಾವನಿಷ್ಠೆ, ರೊಮ್ಯಾಂಟಿಕ್ ಸಮದರ್ಶನ, ಸಮಭಾವ, ಸ್ವೀಕೃತಿ, ಮೌಲ್ಯಗಳ ನಂಬಿಕೆ, ಭಾರತೀಯ ಸಂದರ್ಭದ ಅಭಿಜಾತ ಒಲವು ಇವುಗಳ ಮೂಲಕ ಕಣವಿಯವರು ತಮ್ಮ ವೈಶಿಷ್ಟ್ಯ ಕಾದುಕೊಂಡಿದ್ದಾರೆ ಎನ್ನುತ್ತಾರೆ. ‘ನೆಲಮುಗಿಲು’ ಸಂಕಲನಕ್ಕೆ ಮುನ್ನುಡಿ ಬರೆದಿರುವ ಬೇಂದ್ರೆ (ಕಾವ್ಯಕ್ಷಿಯ ಮುನ್ನುಡಿಯಲ್ಲಿ ಹೇಳಿದಂತೆ) “ಜಾತಿ ಅದೇ, ಆದರೆ ಒಂದು ಪೊಗರು ಕಣಕಣದಲ್ಲಿ ಪಿಂಡಗೊಂಡಿದೆ. ವಿನಯವೂ ಅಷ್ಟೇ ದಿಟವಾಗಿದೆ. ವಿನಯ ಹಳಸುವ ಬದುಕಲ್ಲ, ವಿಶಿಷ್ಟಕ್ಕೆ ತೊಡಕಲ್ಲ ಇದು ಧಾರವಾಡದ ತತ್ವ” ಅನ್ನುತ್ತಾರೆ. “ಆಕಾಶ ಬುಟ್ಟಿ’ಗೆ ವಿಮರ್ಶೆ ಬರೆದಿರುವ ಅಡಿಗರು ಇವರ ಕವಿತೆಗಳನ್ನು ಸಂಧಿಕಾಲದ ಪದ್ಯಗಳೆಂದೂ ನವ್ಯವಿಧಾನವನ್ನು ಒಪ್ಪಿಕೊಂಡೂ ಹಳೆಯ ಸಂಪ್ರದಾಯದ ಉರುಳಿಗೆ ಸಿಕ್ಕು ಶಿಥಿಲವಾಗಿದೆ ಎಂದೂ ಕರೆದರು. ‘ಉದಯವಾಣಿ’ ಪತ್ರಿಕೆಗೆ ಕಣವಿಯವರ ಬಗ್ಗೆ ಬರೆಯುತ್ತಾ ಎನ್‌ಎಸ್ ಲಕ್ಷ್ಮೀನಾರಾಯಣ ಭಟ್ಟರು “ಕಾವ್ಯಾಕ್ಷಿ” ಸಂಕಲನದ ‘ಕೋಗಿಲೆ’ ಎಂಬ ಕವಿತೆಯಲ್ಲಿ “ಈಗ ತಾನ ಬಂದಿತೇನ ಮಧುರ ಕಂಠ ಕೋಗಿಲೆ” ಎಂಬ ಸಾಲನ್ನು ಬಂದಿದೇನೆ ಎಂದು ಓದಿಕೊಂಡರೆ ಕನ್ನಡ ಕಾವ್ಯಲೋಕಕ್ಕೆ ಆಗಮಿಸುತ್ತಿರುವುದನ್ನು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿರುವ ಕಣವಿಯವರ ವಿಶಿಷ್ಟ ಸೌಜನ್ಯವನ್ನೂ ವಿನಯವನ್ನೂ ಗುರುತಿಸುತ್ತಾರೆ. ಕಣವಿಯವರ ಕಾವ್ಯಜೀವನ ಮೂಲತಃ ಪರಿಸರ ಸಂವೇದಿಯಾದುದು ಎನ್ನುವ ಜಿಎಸ್‌ಎಸ್ ‘ಯಾವುದೇ ಒಂದು ಸಿದ್ಧಾಂತಕ್ಕೆ ಗಂಟುಬಿದ್ದು ಸ್ಥಗಿತವಾಗದೇ ಅದು ತನ್ನ ಅಭಿರುಚಿ ಹಾಗೂ ಕಾವ್ಯ ಪ್ರಜ್ಞೆಯೊಂದಿಗೆ ಗಂಟುಹಾಕಿಕೊಳ್ಳುತ್ತಾ ಚಲನಶೀಲವಾಗುತ್ತಾ ಜೀವಂತ ಗತಿಯನ್ನು ಪ್ರಕಟಿಸಿಕೊಂಡಿದೆ ಎನ್ನುತ್ತಾರೆ. ನವೋದಯದಲ್ಲಿ ಪ್ರಾರಂಭಿಸಿಯೂ ನವ್ಯ ಮತ್ತು ನವ್ಯೋತ್ತರ ಕಾವ್ಯಮಾರ್ಗದ ವಿಶಿಷ್ಟ ಧ್ವನಿಯಾಗಿ (ಜಿಎಸ್‌ಎಸ್ ಅವರಂತೆಯೇ) ಉಳಿದ ಕಣವಿಯವರು “ತಂತ್ರ ವಿನ್ಯಾಸದ ಮಟ್ಟಿಗೆ ಎಂಥ ಸಮನ್ವಯವನ್ನೂ ಸಲೀಸಾಗಿ ಸಾಧಿಸಬಲ್ಲ, ಆದರೆ ತನ್ನ ಸತ್ವದಲ್ಲಿ ಪ್ರತಿಭೆಯ ಪ್ರಭಾವದಿಂದ ನವ್ಯವನ್ನು ತಮ್ಮ ಸವ್ಯಸಾಚಿತನದ ಒಂದು ಹವ್ಯಾಸವಾಗಿ ಮಾಡಿಕೊಂಡವರು” ಎಂದು ಗೌರೀಶ ಕಾಯ್ಕಿಣಿ ಹೇಳಿದರೆ, “ಅವರ ನವ್ಯೋತ್ತರ ಕವಿತೆಗಳ ಕುರಿತು ಅವನ್ನು ಒಂದು ಸೂತ್ರದಲ್ಲಿ ಹಿಡಿದಿಡಲಾಗದಿದ್ದರೂ ಅವರ ಕಾವ್ಯವು ಯಾವ ಐಡಿಯಾಲಜಿಗೂ ಬದ್ಧವಾಗದೆಯೇ ತನ್ನ ಸಂವೇದನಾ ಶೀಲತೆಯನ್ನು ಉಳಿಸಿಕೊಂಡು ಬಂದಿದೆ” ಎಂದು ಆಮೂರ ಹೇಳುತ್ತಾರೆ. “ಬರಹವನ್ನು ಮೀರಿದ ಬದುಕಿನಲ್ಲಿ ಕ್ರಿಯೆ ಎಂಥದಿರಬಹುದು ಎಂಬ ಪ್ರಶ್ನೆಗೆ ಕಣವಿ ಉತ್ತರಿಸುವುದಿಲ್ಲ. ಆದರೆ ತಮ್ಮ ಬದುಕಿನ ಮಿತಿಯಲ್ಲಿ ಎಲ್ಲರಿಗಿಂತ ಹೆಚ್ಚು ಜೀವಂತವಾಗಿರುವ ಕವಿ” ಎಂದು ಚಂಪಾ ಹೇಳುತ್ತಾರೆ. ಕಣವಿಯವರೇ ತಮ್ಮ “ಜೀವಧ್ವನಿ”ಯ ಎರಡು ಮಾತುವಿನಲ್ಲಿ “ಎಷ್ಟೇ ಪ್ರಯತ್ನ ಪಟ್ಟರೂ ಕವಿ ತನ್ನನ್ನು ಇಡಿಯಾಗಿ ಒಂದು ಕವಿತೆಯಲ್ಲಿ ಅಭಿವ್ಯಕ್ತಿಗೊಳಿಸಿಕೊಳ್ಳುವುದು ಬಹುಮಟ್ಟಿಗೆ ಅಸಾಧ್ಯ” ಎಂದಿದ್ದಾರೆ.
“ಸಾವು” ಮತ್ತು “ಕಾಮ”ದ ಬಗ್ಗೆ ಬರೆಯದೇ ಇರುವ ಕವಿ ಅಥವಾ ಲೇಖಕ ಮೇಜ ರೈಟರ್ ಅಲ್ಲ ಎಂಬ ಒಂದು ಮಾತಿದೆ. ಆದ್ದರಿಂದಲೇ “ಮಹಾಭಾರತ”ದಲ್ಲಿ ಇವೆರಡನ್ನೂ ಆಮೂಲಾಗ್ರವಾಗಿ ‘ಶೋಧಿ’ಸಿರುವ ವ್ಯಾಸರನ್ನು ಮಹಾಕವಿ ಎಂದು ನಾವು ಒಪ್ಪುತ್ತೇವೆ. ಕಣವಿ ಯವರ “ದೀಪಧಾರಿ” ಸಂಕಲನದ “ಮೃತ್ಯುಬಂಧ” ಒಂದೂವರೆ ಪುಟಗಳ ಮೂರು ಭಾಗಗಳ ಕವಿತೆ. ಇದಲ್ಲದೇ ಮೃತ್ಯುವನ್ನು ಹಗುರವಾಗಿಯೂ ಗಂಭೀರವಾಗಿಯೂ ವಿಡಂಬನೆಯಾಗಿಯೂ ಬಳಸಿಕೊಂಡಿರುವ ಇತರ ಕವಿತೆಗಳೆಂದರೆ ‘ನಂಜುಂಡನಾಗಿ ಬಾಳು’, ‘ಬಂಧದಿಂ ಬಿಡುಗಡೆಗೆ’, ‘ಸಾವುದೆಲ್ಲಾ ಸತ್ತು’, ‘ಮೃತ್ಯುವಿಗೆ’, ‘ಮೃತ್ಯುಘೋಷಣೆ’, ‘ಹಿರಿಯರ ಸಾವು’, ‘ನೇಣು ನುಡಿದದ್ದು’, ‘ಹೆಬ್ಬಾವು’. ಇವುಗಳೊಂದಿಗೆ ಹೋಲಿಸಿದಾಗ ಬಹು ಹಿಂದೆಯೇ ಬರೆದ ‘ಮೃತ್ಯುಬಂಧ’ ಎಂಬ ಕವಿತೆ ವಿಶೇಷವಾಗಿ ನಿಲ್ಲುತ್ತದೆ.
“ಅಲ್ಲಿಯೇ ಕುಳಿತಿತ್ತು ಹಾವು”
ಎಂದು ಪ್ರಾರಂಭವಾಗುವ ಈ ಕವಿತೆಯು ಎರಡನೇ ಭಾಗಕ್ಕೆ ಹೋಗುತ್ತಲೇ ವಾಚ್ಯವಾಗಿ ಬಿಡುವುದರಿಂದ ಇದಕ್ಕೆ ಸಾವು ಎಂಬ ಅರ್ಥವಲ್ಲದೇ ಕಾಮ ಎಂಬ ಅರ್ಥಕೊಡಲು ಸಾಧ್ಯವಾಗುವುದಿಲ್ಲ.
ಮತ್ತೆಗೆ ಸುರುಳಿ ಸುತ್ತಿ ಹಡೆಯತ್ತಿ ಆಡುತಿತ್ತು
ಕೈಮಾಡಿ ಕರೆವಂತೆ ಮೋಹಬಂಧ
ಜೋಡು ನಾಲಗೆ ನಾ ಮುಂಚು ತಾ ಮುಂಚು
….
ಸಳ ಸಳ ಮಿಂಚು ಹರಿದಾಡಿ
ಎಂಬ ಹಾವಿನ ಚಲನವಲನದ ಚಿತ್ರವತ್ತಾದ ವಿವರಣೆಯಲ್ಲಿ ಹಾವಿನ ಭಯಂಕರ ಚಿತ್ರವೇನೂ ಇಲ್ಲ. ಕವಿ ಅಲ್ಲೇ ಓಡಾಡುವಾಗ ಅದನ್ನು ಕಂಡಿಲ್ಲ, ಆದರೆ ಅದು ಅವರನ್ನು ಕಂಡಿರಬಹುದು, ಕಂಡಿದೆ. ಅಷ್ಟೇ ಅಲ್ಲ ಹೊಂಚುಹಾಕುತ್ತಿದೆ. ಹೀಗೆ ಸಾವು ಎಂದೂ ನಮ್ಮನ್ನು ಮೀರಿದ್ದು ನಮಗಿಂತ ದೊಡ್ಡದು. ಕವಿತೆಯ ಎರಡನೇ ಭಾಗದಲ್ಲಿ
“ಹುಟ್ಟಿನಿಂದಲೇ ಬಂತು ಬೆನ್ನಹಿಂದೆ”
ಎಂಬ ಮಾತು. ನಮ್ಮ ಅವೇ ಅವೇ ಹಳೆಯ ಮಾತುಗಳಿವೆಯಲ್ಲಾ ಜಾತಸ್ಯ ಮರಣಂಧ್ರುವಂ ಇತ್ಯಾದಿಗಳ ನೆನಪಾಗುತ್ತದೆ. ಅದು ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುವ, ಅದು ಹಿಂಬಾಲಿಸುತ್ತಲೇ ಇರುವ ಅರಿವು ಕವಿಗಿದೆ. ಆದರೆ ಆಶ್ಚರ್ಯವೆಂದರೆ ಅದರ ಹೆಡೆಯ ಕೆಳಗೆ ಕುಳಿತೇ ನಾವು ಈ ಬದುಕಿನ ಎಂಥೆಂಥ ಆಮೋದ ಸವಿಯುತ್ತೇವಲ್ಲಾ… ಹಕ್ಕಿಯ ಹೆಜ್ಜೆ…. ನಕ್ಷತ್ರ…. ಇವುಗಳ ಮುಂದೆ, ಅದು ನಮ್ಮ ಬೆನ್ನಹಿಂದಿದೆ ಎಂಬುದನ್ನೇ ಮರೆತುಬಿಡುತ್ತೇವಲ್ಲಾ. ಅದೂ ಹಾಗೆಯೇ ಯಾರೋ ಪುಂಗಿ ಊದಿದರೆಂದು ಅತ್ತ ಕಡೆ ಗಮನಹರಿಸಿ ನಮ್ಮನ್ನು ಮರೆತಂತೆ ನಟಿಸುತ್ತದೆ. ಆದರೆ ಮರೆಯುವುದಿಲ್ಲ. ಕವಿತೆಯ ಮೂರನೇ ಭಾಗದಲ್ಲಿ ಆಗಲೇ ಮುಪ್ಪು ಆವರಿಸಿಕೊಂಡಾಗಿದೆ. ಮುಪ್ಪಿನ ಜೊತೆ ಜೊತೆಗೇ ನೂರಾಎಂಟು ಕಾಯಿಲೆಗಳು, ನಾಡಿ ಸಿಗುತ್ತಿಲ್ಲ. ಮರಳಿನಲ್ಲಿ ಪಾದವನ್ನು ಎಳೆದೆಳೆದು ನಡೆಯುವಂತೆ ಪ್ರಯಾಸಕರ ಅದರ ಬಡಿತ, ಔಷಧಿಯ ಚಮಚೆಯೂ ಕೊನೆಯ ಗಳಿಗೆಯನ್ನು ಎಣಿಸುತ್ತಿದೆ. ಗಿಣಿಯಿದ್ದ ಪಂಜರ ಯಾರಿಗೂ ಅರಿವಾಗದಂತೆ ಖಾಲಿಯಾಗಿದೆ. ಸಪ್ತಸಾಗರ ಶೋಧಿಸಿದರೂ ಆ ಗಿಣಿ ಇನ್ನು ಸಿಗುವುದಿಲ್ಲ. ಕತ್ತಲಲ್ಲಿ ಹಾರಿಹೋದ ಗಿಣಿ ಅದು, ಎತ್ತ ಹಾರಿತೋ ತಿಳಿಯದು. ಮುಂದೆ ಸ್ವರ್ಗವೋ ನರಕವೋ ದೇವದೇವಿಯರ ಲೋಕವೋ… ಅದೇನಾದರೂ ಇರಲಿ, ಮಣ್ಣಿನಿಂದ ಬಂದ ದೇಹ ಅದು, ಮಣ್ಣಿನ ಬೊಂಬೆ, ಈ ವಿಶ್ವದ ಅಗಾಧತೆಯಲ್ಲಿ ಅದೊಂದು ಸಣ್ಣ ಬೊಂಬೆ. ಅದೂ ಈಗ ಹೊರಡಬೇಕು. ಪ್ರಾಣವೇ ಹೋದ ಮೇಲೆ ದೇಹಕ್ಕೇನು ಬೆಲೆ. ಅದಕ್ಕೆ ಸಂಸ್ಕಾರ ವಾಗಬೇಡವೆ? ಅದು ಜಗತ್ತನ್ನೇ ಕೇಳುತ್ತಿದೆ, “ಹೊತ್ತಾಯ್ತು (ಅಂದರೆ ಹೆಚ್ಚು ಕಾಲ ಇಟ್ಟರೆ ಹಣ ಕೊಳೆಯುತ್ತದೆ) ನಾನಿನ್ನು ಹೋಗಿಬರಲೆ?” ಅದನ್ನು ಜಗತ್ತು ಶವಸಂಸ್ಕಾರ, ತಿಥಿಮತಿ ಇತ್ಯಾದಿಗಳಿಂದ ಬೀಳ್ಕೊಡುತ್ತದೆ. ಹೀಗೆ ಬಾಳನ್ನು ಗೆದ್ದು ಸಾವು ವಿಜೃಂಭಿಸುತ್ತದೆ.
ಕನ್ನಡದ ಎಲ್ಲ ದೊಡ್ಡ ಕವಿಗಳೂ ತಮ್ಮ ಒಂದಲ್ಲ ಒಂದು ಕವಿತೆಯಲ್ಲಿ ಮೃತ್ಯುವಿನ ಸಮೀಪ ಹೋಗಿ ಬಂದಿದ್ದಾರೆಂಬುದೇ ಒಂದು ಅಚ್ಚರಿಯ ಸಂಗತಿಯಾದರೂ ಸತ್ಯ. ಹೀಗಾಗಿ ಈ ಕವಿತೆಯನ್ನು ಕ್ವಚಿತ್ತಾಗಿ ಕೆ.ಎಸ್.ನ. ಅವರ ‘ತೆರೆದ ಬಾಗಿಲು’ ಮತ್ತು ‘ಮನೆಯಿಂದ ಮನೆಗೆ’, ನಿಸಾರ್ ಅಹಮದ್ ಅವರ ‘ರಾಮನ್ ಸತ್ತ ಸುದ್ದಿ’ ಕವಿತೆಗಳೊಂದಿಗೆ ಹೋಲಿಸಬೇಕೆನ್ನಿಸುತ್ತಿದೆ. ಕೆ.ಎಸ್.ನ. ನವೋದಯದಿಂದ ನವ್ಯಕ್ಕೆ ತುಂಬಾ ಉದಾರವಾಗಿ ಸಂಪೂರ್ಣವಾಗಿ ತೆರೆದು ಕೊಂಡವರು, ಮನೆಯಿಂದ ಮನೆಗೆ ವರ್‍ಗವಾಗಿ ಹೋಗುವ ಬದುಕಿನಲ್ಲಿ ಈ ಒಳಮನೆಗಳ ಸಹವಾಸ ಸಾಕು ಸಾಕಾಗಿ ಕೊನೆಗೆ ಕಾದಿರುವ ಹೊರಮನೆಯ ಆದರವಿರದ, ಕದವಿರದ, ಹೋದವರು ಹಿಂದಿರುಗಿ ಬರಲು ದಾರಿಗಳಿರದ ಆ ಮನೆಯು ಮನಸ್ಸನ್ನಾಕರ್‍ಷಿಸಿ ಮೃತ್ಯುವಿನ ಅನಿವಾರ್‍ಯತೆಯನ್ನು ಹೇಳುತ್ತಿದ್ದರೆ, ‘ತೆರೆದ ಬಾಗಿಲು’ ಶೀರ್‍ಷಿಕೆಯೇ ಮೃತ್ಯುವನ್ನು ಆಹ್ವಾನಿಸುತ್ತಿದೆ. ಪಕ್ಕದ ರಸ್ತೆಯ ನರಸಿಂಹಸ್ವಾಮಿ ಸತ್ತಿದ್ದಾರೆ. ಅದು ಪೇಪರ್ ಆಫೀಸಿಗೆ ತಲುಪಿ ತಾನೇ ಸತ್ತನೆಂದು ಭಾವಿಸಿ ಮಾರನೇ ದಿನ ಬರುವ ಸಂತಾಪ ಸೂಚಕ ಪತ್ರಗಳ ನೆನಪಾಗಿ ದಿಗಿಲಾಗುವ ಕವಿಗೆ ಊರಿನಿಂದೊಬ್ಬ ನಂಟ ಬರುತ್ತಾನೆ. ಅವನೊಂದಿಗೆ ಕುಶಲೋಪರಿಯಾಗುವ ವೇಳೆಗೆ ಮೂವರು ಬ್ರಾಹ್ಮಣರು ಬರುತ್ತಾರೆ. ಮೂರು ಬೆಂಕಿಗಳಂತೆ ಮೂರು ಕಾಲಗಳಂತೆ ಮೂರು ತಲೆಮಾರುಗಳ ಸುಕೃತವೇ ಮೈವೆತ್ತಂತೆ. ಅಕ್ಷತೆ ಕೈಲಿ ಹಿಡಿದು ಬಂದವರು ವಾಸ್ತವವಾಗಿ ಮೃತ್ಯುವಿನ ಪ್ರತಿನಿಧಿಗಳೇ ಆಗಿ ಕವಿಯೇ ಅವರಿಗೆ ತೆರೆದ ಬಾಗಿಲಾಗುತ್ತಾನೆ.
ಹನುಮ ಹಳ್ಳಿಯವ. ಅವನಿಗೆ ರಾಮನ್ ಸತ್ತರೂ ಅಷ್ಟೇ ರಸಲ್ ಸತ್ತರೂ ಅಷ್ಟೇ. ಆದರೂ ಕವಿಗೆ ರಾಮನ್ ಸತ್ತ ತಳಮಳ, ಅದನ್ನು ಹನುಮನಿಗೆ ಹೇಗೆ ಹೇಳಬೇಕೆಂಬ ಜಿಜ್ಞಾಸೆ ಹೇಗೆ ಹೇಳಿದರೂ ಅದು ಅವನಿಗೆ ಅರ್ಥವಾಗುವುದಿಲ್ಲ. ಕೊನೆಗೆ ತಾನು ಸತ್ತರೂ ಅಷ್ಟೇ, ಈ ಹನುಮ ಸತ್ತರೂ ಅಷ್ಟೇ. ಯಾರಿಗೂ ತಿಳಿಯುವುದಿಲ್ಲ ಅನ್ನಿಸುವ ಮೂಲಕ ಸಾವಿನ ಅಗಾಧತೆ ಇಡಿ ಇಡಿಯಾಗಿ ಆವರಿಸಿಕೊಳ್ಳುತ್ತದೆ.
ನವೋದಯದಲ್ಲಿ ಬಂದ ಕಣವಿಯವರ ‘ಮೃತ್ಯು ಬಂಧ”ದೊಂದಿಗೆ ನವ್ಯದಲ್ಲಿ ಬಂದ ಈ ಎರಡು ಕವಿತೆಗಳನ್ನು ಹೋಲಿಸುವ ಮೂಲಕ ನವ್ಯದ ಸಂಕೀರ್ಣತೆಯಲ್ಲಿ ‘ಸಾವಿ’ನಂತಹ ಪ್ರೌಢ ವಿಷಯಗಳು ಹೇಗೆ ಜಟಿಲತೆಯ ಅರ್ಥವಿಸ್ತಾರ ಹೊಂದಿದುವು ಎಂಬುದರ ಅರಿವೂ ಆಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಇಂತಹ ಮೃತ್ಯುಕವಿತೆಗಳ ತೌಲನಿಕ ಅಧ್ಯಯನಕ್ಕೆ ಅವಕಾಶ ತೆರೆದೇ ಇದೆ.
ಧಾರವಾಡದಲ್ಲಿ ಬೇಂದ್ರೆಯವರ ಉತ್ತರಾಧಿಕಾರಿ ಕವಿಯಾಗಿ ಎಷ್ಟು ಹಿರಿಯರೋ ವ್ಯಕ್ತಿಯಾಗಿ ಅಷ್ಟೇ ಸಜ್ಜನರೂ ಆದ ಕಣವಿಯವರ ಈ ಕವಿತೆಯ ಕುರಿತು ನಾಲ್ಕು ಮಾತು ಬರೆಯಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆಂದು ಭಾವಿಸಿ ಇದಕ್ಕೆ ಕಾರಣರಾದವರಿಗೆಲ್ಲಾ ನನ್ನ ಕೃತಜ್ಞತೆಗಳನ್ನು ಈ ಮೂಲಕ ಅರ್ಪಿಸಲು ಇಚ್ಛಿಸುತ್ತೇನೆ.
*****
ಚೆನ್ನವೀರ ಕಣವಿ ಅಭಿನಂದನಾ ಗ್ರಂಥಕ್ಕೆ ಬರದ ಲೇಖನ.