ಮಾತುಮಾತಿಗೆ ಸಿಟ್ಟುಮಾಡಿದಿರಿ
ಪಾತ್ರೆ ಪಗಡೆಗಳ ಒಡೆದುಹಾಕಿದಿರಿ
ಕಂಡಕಂಡವರಿಗೆ ಕೆಂಡವಾದಿರಿ
ಸಿಟ್ಟು ನಾಶಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ
ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ
ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ
ಸಾಕೆಂಬ ಪದವನ್ನೆ ಮರೆತುಬಿಟ್ಟಿರಿ
ಆಸೆಯೇ ದುಃಖಕ್ಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ
ಅನ್ಯರೆಂದು ಹಿಂಸೆ ನೀಡಿದಿರಿ
ಆಟವೆಂದು ಬೇಟೆಯಾಡಿದಿರಿ
ಹಾರುವ ಪಾರಿವಕೆ ಗುರಿಯಿಟ್ಟು ಹೊಡೆದಿರಿ
ಹಿಂಸೆಯೇ ಬಹು ದೊಡ್ಡ ಪಾಪವೆಂದ ನಮ್ಮ
ಬುದ್ಧನ ಕೇಳಿದಿರ
ಕರುಣೆ ತೋರಿದರೆ ತಮಗೇನು ಎಂದಿರಿ
ದಾನಧರ್ಮಗಳೆಲ್ಲ ಸುಳ್ಳು ಎಂದಿರಿ
ಪಡೆಯದಲ್ಲದೆ ಕೊಡಲಾರೆವೆಂದಿರಿ
ಕಾರಣ ವಿನಾ ಪ್ರೀತಿ ನಿಜವಾದ ಪ್ರೀತಿಯೆಂದ ನಮ್ಮ
ಬುದ್ಧನ ಕೇಳಿದಿರ
ಗಹಗಹ ನಗೆಗಿಂತ ಮುಗುಳುನಗೆ ಮಿಗಿಲೆಂದ
ಬಡಬಡ ನುಡಿಗಿಂತ ಮೌನವ ಲೇಸೆಂದ
ಆಧ್ಯಾತ್ಮಕಿಂತ ಮಹಾಮೌನವೇ ಒಳಿತೆಂದ
ನಮ್ಮ ಬುದ್ಧನ ಕೇಳಿದಿರ
ನೀವು ನಮ್ಮ ಬುದ್ಧನ ಕೇಳಿದಿರ
*****