ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ಆರಂಭದಲ್ಲೇ ಉತ್ತರ ಭಾರತದ ಕಳಿಂಗ ದೇಶದವರೆಗೂ ಸಿದ್ಧಿ ಪ್ರಸಿದ್ಧಿ ಹೊಂದಿತ್ತು!
ವಿಜಯನಗರ ಸಾಮ್ರಾಜ್ಯವನ್ನು ತೌಳವ ನರಸನಾಯಕ ಅಳುತ್ತಿದ್ದ. “ಅಧಾರ್ಮಿಕರಾದ ಮಹಾರಾಜರು ಎಂದೂ ಶ್ರೇಯಸ್ಸು ಹೊಂದಲಾರರು” ಎಂಬ ಒಂದೇ ಒಂದು ಮೂಲ ಮಂತ್ರದಿಂದ ಇಡೀ ಭರತ ಖಂಡದೆಲ್ಲಲ್ಲ ವಿಜಯನಗರ ಸಾಮ್ರಾಜ್ಯ ಪ್ರಭುದ್ಧ ಮಾನಕ್ಕೆ ಬಂತು.
ಇತ್ತ- ಕಳಿಂಗ ದೇಶದ ಬಸವಭಟ್ಟನೆಂಬ ಉದ್ದಾಮ ಪಂಡಿತರತ್ನ ಆಸ್ಥಾನದ ಪಂಡಿತ ಪಾಮರ ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಬರೀ ವಾದವಿವಾದ ಮಾಡುತ್ತಾ ಪಾಂಡಿತ್ಯತನ ಪ್ರದರ್ಶಿಸುತ್ತಾ ಎಲ್ಲ ರಾಜ್ಯಗಳನ್ನು ಗೆಲ್ಲುತ್ತಾ ಮೀಸೆ ತಿರುವುತ್ತಾ ಹೊಗಳು ಭಟ್ಟರನ್ನು ಹಿಂದಿಟ್ಟುಕೊಂಡು ವಿಜಯನಗರ ಸಾಮ್ರಾಜ್ಯಕ್ಕೆ ಒಂದು ದಿನ ಎಡಗಾಲಿಟ್ಟು ವಾದ್ಯ ಮೇಳ, ಶಂಕು, ಜಾಗಟೆ, ತುತ್ತೂರಿ ಮೇಲು ಪಂಚಾಂಗವನ್ನು ಓದುತ್ತಾ ಮೆರವಣಿಗೆಯಲ್ಲಿ ಜಯಘೋಷ ಮೊಳಗಿಸುತ್ತಾ ಬಸವಭಟ್ಟ ವಿಜಯನಗರ ಸಾಮ್ರಾಜ್ಯವನ್ನು ಪ್ರವೇಶಿಸಿದ.
ಇಡೀ ವಿಜಯನಗರ ಸಾಮ್ರಾಜ್ಯ ಅಲ್ಲಾಡಿ ಸದ್ದಡಗಿತು! ಉತ್ತರದಿಂದ ದಕ್ಷಿಣದವರೆಗೆ ಬಸವ ಭಟ್ಟನನ್ನು ಗೆದ್ದ ರಾಜ ಮಹಾರಾಜರಿಲ್ಲ! ಹೋಗಲಿ ಉದ್ದಾಮ ಪಂಡಿತ ಪಾಮರರಿಲ್ಲ. ಶರಣಾಗತಿಯೊಂದೇ ಈಗಿರುವ ಮಾರ್ಗವೆಂದು ರಾಜಾಧಿರಾಜ ತೌಳವ ನರಸನಾಯಕ ತಲೆಗೆ ಕೈಹೊತ್ತು ಕುಳಿತೇ ಬಿಟ್ಟ!
ಒಂದು ದಿನ- ಬಸವಭಟ್ಟರಿಗೂ ವ್ಯಾಸರಾಜರಿಗೂ ವಾದ ವಿವಾದ ಶುರುವಾಯಿತು. ಎರಡು ಹಗಲು ಮೂರು ರಾತ್ರಿ ತರ್ಕಬದ್ಧ ವಾದ ಸರಣಿಯು ಸಾಗಿತು! ವೇದವೇದಾಂತ ತರಂಗಗಳಲ್ಲಿ ಪರಿಪೂರ್ಣರಾಗಿದ್ದ ವ್ಯಾಸರಾಜರು ತಮ್ಮ ತತ್ವಸಿದ್ಧಾಂತ ಪ್ರಮಾಣ ಬದ್ಧವಾದ ವಾದವಿವಾದಗಳಲ್ಲಿ ಸಂಪೂರ್ಣವಾಗಿ ಗೆದ್ದರು! ಬಸವಭಟ್ಟರು ಸೋತು ಶರಣಾದರು.
ಅದಕ್ಕೆ ಪ್ರತಿಯಾಗಿ ತೌಳವ ನರಸನಾಯಕ ಬಸವಭಟ್ಟರನ್ನು ಅವರಿಂದೆ ಬಂದಿದ್ದ ಹೊಗಳುಭಟ್ಟರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಕಣ್ಣೀರಿಟ್ಟು- ‘ಅಯ್ಯೋ ನಮ್ಮನ್ನು ಮನ್ನಿಸಿ, ನಮ್ಮ ಕಳಿಂಗ ದೇಶದ ರಾಜನಿಂದ ಪ್ರೇರೇಪಿತನಾಗಿ ನಮ್ಮ ಶಿಷ್ಯರೊಡಗೂಡಿ ನಿಮ್ಮನ್ನು ನಿಮ್ಮ ಸಾಮ್ರಾಜ್ಯವನ್ನು ಅವಮಾನಿಸಿ ಹೀಯಾಳಿಸಬೇಕೆಂದು ದುಷ್ಟಾಲೋಚನೆ ಇಟ್ಟುಗೊಂಡು ಬಂದವನನ್ನು ಸನ್ಮಾನಿಸಿದ್ದು ಕಣ್ಣು ತೆರೆಸಿದೆ. ನಮ್ಮನ್ನೆಲ್ಲ ಮನ್ನಿಸಿ’ ಎಂದು ಶ್ರೀಪಂಚಿಯ ಲಿಂಗವನ್ನು ಪ್ರೀತಿಪೂರ್ವಕವಾಗಿ ಬಸವಭಟ್ಟ ನೀಡಿದ.
ಅದಕ್ಕೆ ನರಸನಾಯಕ ‘ವಿಜಯನಗರ ಸಾಮ್ರಾಜ್ಯದಲ್ಲಾದ ಕಹಿಯನ್ನು ಇಲ್ಲೇ ಬಿಟ್ಟು ಸನ್ಮಾನವೆಂಬ ಸಿಹಿಯೊಂದಿಗೆ ಕಳಿಂಗ ದೇಶವನ್ನು ತಲುಪಿ’ ಎಂದು ಎಲ್ಲರೆದುರಿಗೆ ಬೆನ್ನುತಟ್ಟಿ ಕಳಿಸಿಕೊಟ್ಟ.
*****