ಮಹಿಳೆಯರ ಒಂದೊಂದು ನೋಟ, ಮಾತುಕತೆಗಳಿಗೂ
ಒಂದೊಂದು ವಿಶೇಷಾರ್ಥ ಕಲ್ಪಿಸುವ
ಮಾಮೂಲಿ ಗಂಡಸರ ಜಾತಿಗೆ ಸೇರಿದವನು ನಾನು.
ಅಲ್ಲೀವರೆಗೆ ನನ್ನನ್ನು ಯಾರೂ ಅಷ್ಟೊಂದು
ಹಚ್ಚಿಕೊಂಡಿರಲಿಲ್ಲ.
ನನ್ನ ಪ್ರತಿಭೆಯ ಕುರಿತು ಮಾತಾಡಿರಲಿಲ್ಲ
ಕಷ್ಟ, ಸುಖಗಳಿಗೆ ಸ್ಪಂದಿಸಿರಲಿಲ್ಲ.
ನನ್ನ ಗುಣಕನುಗುಣವಾಗಿ
ನನ್ನನ್ನು ನಾನೇ ಭಾರಿ ವ್ಯಕ್ತಿಯೆಂದುಕೊಂಡು
ನನ್ನನ್ನು ಒಲಿಸಿಕೊಳ್ಳುವ
ಯತ್ನ ವಿದೆಂದು
ನೀವಿಷ್ಟೊಂದು ಆದರಿಸುವ ಕಾರಣವೇನೆಂದು ಕೇಳಿದೆನು
ನೇರವಾಗಿ
ನನ್ನ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ
ಸೂಕ್ಷ್ಮದಲ್ಲಿ ಅರಿತರು
ದೂರ ದೂರ ಹೋದರು
ಬದಲಾಗದಿದ್ದ ನಾನು
ಅವರು ತೋರಿದ ಔದಾರ್ಯಕ್ಕೆ
ಅದಕೆ ಇದಕೆ ಸಮಮಾಡಿ
ನಿಮ್ಮಿಚ್ಛೆಯೇ ನನ್ನಿಚ್ಛೆಯೆಂದು ಪತ್ರ ಬರೆದು ಹಾಕಿದೆನು.
ನನಗಂದು ತಿಳಿಯಲಿಲ್ಲ
ನಾನೆಂತಹ ಅಲ್ಪ, ಅಪಾತ್ರನೆಂದು
ನನ್ನದು ಅಪಾರ್ಥವೆಂದು
ಒಳ್ಳೆಯ ಮನಸೇನೆಂದು, ಎಂತಹದಿರುತ್ತದೆಯೆಂದು.
*****