ಅಜ್ಜಯ್ಯಾ! ಎಂದರೆ ರಾಮಯ್ಯನವರಿಗೆ ಬಲು ಸಿಟ್ಟು. ಅದು ಊರ ಮಕ್ಕಳಿಗೆ ಗೊತ್ತು. ಆ ಸಿಟ್ಟಿನ ನೋಟ ನೋಡುವುದೆಂದರೆ ಅವರಿಗಿಷ್ಟ. ಆದುದರಿಂದ ರಾಮಯ್ಯನವರು ಎತ್ತ ಸುಳಿಯಲಿ, ಬೀದಿಯ ಎಡದಿಂದ ಬಲದಿಂದ, ಮುಂದಿಂದ ಹಿಂದಿಂದ. ಅಜ್ಜಯ್ಯಾ! ಅಜ್ಜಯ್ಯಾ! ಅಜ್ಜಯ್ಯಾ!’ ತನ್ನ ಊರುಗೋಲನ್ನು ಎತ್ತಿ ಹಿಡಿದು ರಾಮಯ್ಯನವರು ಆ ಪೋರರನ್ನು ಓಡಿಸಿದರೆ, ಅವು ಮಂಗಗಳಂತೆ ಕಿರಿಚುತ್ತಾ ಬೀದಿ ಬಿಟ್ಟು ಮನೆ ಹತ್ತುವವು. ಆದರೆ ಬಾಗಿಲ ಎಡೆಯಿಂದ ಹಿತವಡಿಯ ಕಿಡಕಿಯಿಂದ ಉಪ್ಪರಿಗೆಯ ಮೇಲಿಂದ ಬಚ್ಚಲಿನ ಕಿಂಡಿಯಿಂದ… ಅಲ್ಲಿಂದ-ಇಲ್ಲಿಂದ ಎಂದನ್ನಲು ಬರುವುದಿಲ್ಲ- ಎಲ್ಲಿಂದಲೋ ‘ಅಜ್ಜಯ್ಯಾ! ಅಜ್ಜಯ್ಯಾ! ಕೂಹು! ‘ಕೂಹು’ ಎಂದಾಗ ನೆನೆಪಾಯಿತು ಇನ್ನೊಬ್ಬರ ಪೇಚಾಟ; ನಮ್ಮೂರಲ್ಲಿ ‘ಹೇಟುಬೂಟಿ’ನ ಉದ್ದದವರೊಬ್ಬರಿದ್ದರು. ‘ಕುಹೂ’ ಎಂದರೆ ತನ್ನನ್ನು ಗೇಲಿಮಾಡುತ್ತಾರೆಂದು ಅವರ ನಂಬುಗೆ. ಅದು ಹೇಗೋ ಮಕ್ಕಳಿಗೆ ಗೊತ್ತಾಯಿತು. ಮತ್ತು ಕೇಳಬೇಕೆ? ಅವರ ದೊರೆಟೋಪಿ ಕಾಣುವುದೇ ತಡ, ಎಲ್ಲಿಂದಲೋ ‘ಕುಹು! ಕುಹು!’ ಹಾಗೆಯೇ ರಾಮಯ್ಯನವರ ಪಾಡು. ಮಕ್ಕಳು ಮೊದಮೊದಲು ಅವರನ್ನು ‘ಅಜ್ಜಯ್ಯ’ ಎಂದಿದ್ದಾಗ ಅವರು ಸಿಟ್ಟಿಗೇರದೆ ಸುಮ್ಮಗಿದ್ದು ಬಿಟ್ಟಿದ್ದರೆ ಈ ಚಟ ಬರುತ್ತಲೇ ಇದ್ದಿಲ್ಲ. ಮಕ್ಕಳು ಅವರನ್ನು ‘ಅಜ್ಜಯ್ಯಾ’ ಎನ್ನಲು ಕಾರಣವಿತ್ತು. ರಾಮಯ್ಯನವರು ಸಿಟ್ಟಾಗಲೂ ಕಾರಣವಿದ್ದಿಲ್ಲವೆನ್ನಲು ಬರುವುದಿಲ್ಲ.
ಅಜ್ಜನಂತಿದ್ದವರನ್ನು ಮಕ್ಕಳು ‘ಅಜ್ಜಯ್ಯಾ’ ಎನ್ನುವುದು ಮುದ್ದಿನ ಮಾತು. ಮಕ್ಕಳು ಮೊದಮೊದಲು ರಾಮಯ್ಯನವರನ್ನು ಹಾಗೆಂದು ಕರೆದುದು ಆ ಭಾವದಿಂದಲೆ. ಅವರಿಗೆ ವಯಸ್ಸು ಸುಮಾರು ೬ಂ. ಆ ವಯೋಧರ್ಮದ ಲಕ್ಷಣಗಳು ಅವರ ಅಂಗಾಂಗಗಳಲ್ಲಿ ತೋರಿಬರುತ್ತಿದ್ದುವು. ಎಂದ ಮೇಲೆ ಮಕ್ಕಳು ಅವರನ್ನು ‘ಅಜ್ಜಯ್ಯಾ’ ಎನ್ನದಿರುವರೇ? ಆದರೆ ರಾಮಯ್ಯನವರಿಗೆ ಅದನ್ನೊಪ್ಪಿಕೊಳ್ಳಲಿಕ್ಕೆ ಮನಸ್ಸಿದ್ದಿಲ್ಲ. ಏಕೆಂದರೆ ಅವರಿಗಿನ್ನೂ ಮದುವೆಯಾಗಬೇಕೆಂದಿತ್ತು. ಈ ವರೆಗೆ ಮದುವೆ ಯಾಗಿದ್ದಿಲ್ಲವೆಂದಲ್ಲ, ಆಗಿದ್ದ ಮೂರೂ ಕೈತಪ್ಪಿ ಹೋಗಿದ್ದುವು! ಈಗ ನಾಲ್ಕನೆಯದಕ್ಕಾಗಿ ಕನ್ಯಾನ್ವೇಷಣವು ಭರದಿಂದ ಸಾಗುತ್ತಿದೆ. ಅದು ಕಾರಣ ಬಾಗಿದ ಬೆನ್ನನ್ನು ಕೂಡಿದಷ್ಟು ಮಟ್ಟಿಗೆ ನೆಟ್ಟಗೆ ಮಾಡಿ ನಡೆಯುತ್ತಾರೆ. ಬಿದ್ದ ಸಾಲುಹಲ್ಲುಗಳ ಜಾಗದಲ್ಲಿ ಕೃತಕ ಹಲ್ಲುಗಳ ‘ಸೆಟ್ಟು’ ಇದೆ. ಕೂದಲಿಗೆ ಕಪ್ಪು ರಂಗು ಬಳಿದಿದೆ. ಮೇಲಾಗಿ ತನಗೆ ವೃದಾಪ್ಯವು ಬಂದಿದೆಯೆಂದು ಅವರೆಂದೂ ನಂಬಲಾರರು. ಅದೇನೋ ಒಂದು ಶನಿ, ಕೆಮ್ಮಿನಿಂದ ಕೃಶವಾಗಿದ್ದಾರೆ, ಅಷ್ಟೆ! ಅದು ಬಂತೆಂದರೆ ಪ್ರಚಂಡ ಮಾರುತನೆಬ್ಬಿಸಿದ ಶರಧಿಯ ತರಂಗಮಾಲೆಗಳಂತೆ ಮೇಲುಮೇಲು ಅವರನ್ನಪ್ಪಳಿಸುತ್ತದೆ. ಆದರೆ ಅದನ್ನು ನಿರ್ಮೂಲಗೊಳಿಸಿ ನವಯೌವನವನ್ನು ಹೊಂದುವುದು ದೊಡ್ಡದಲ್ಲವೆಂದು ಅವರ ಗ್ರಹಿಕೆ; ಬೇಕಾದಷ್ಟು ದುಡ್ಡಿದೆ, ವೈದ್ಯರಿದ್ದಾರೆ; ಅವರಿಂದಾಗದಿದ್ದರೆ, ಪತ್ರಿಕೆಗಳ ಜಾಹಿರಾತಿನಿಂದ ಪ್ರಸಿದ್ದಿ ಪಡೆದ ಔಷಧಗಳಿವೆ. ತಾರುಣ್ಯವನ್ನು ಬರಿಸುವ ಗ್ಯಾರೆಂಟೀಯಿರುವ ಮದ್ದುಗಳೆ ಅವೆಲ್ಲ! ತರಿಸಿಕೊಂಡರಾಯಿತು; ನಿಸ್ಸಂದೇಹವಾಗಿ ಬಂದೇ ಬಿಡುತ್ತೆ ಯೌವನ! ಈ ವಿಷಯದಲ್ಲಿ ಗಾಬರಿಯೇ ಇಲ್ಲ ಅವರಿಗೆ, ಆದರೆ ಈಗ ಬರಬೇಕಾದುದು ಆ ಬರುವ ತಾರುಣ್ಯಕ್ಕೆ ಸರಿಹೋಗುವ ತರುಣೀಮಣಿ! ಮೂರಾದ ಮೇಲೆ ಏಕೆಂಬಿರಾ! ಇನ್ನೂ ಅಪುತ್ರರು! ‘ಅಪುತ್ರಸ್ಯ ಗತಿರ್ನಾಸ್ತಿ’ ಎಂದು ಶಾಸ್ತ್ರೋಕ್ತಿಯಿದೆಯಲ್ಲ! ಅಷ್ಟು ಮಾತ್ರವಲ್ಲ, ಅವರ ಕೈ ಹಿಡಿವವಳಿಗೆ ಏನೂ ಕಡಮೆಯಾಗದು: ಚಿನ್ನಾಭರಣಗಳು ಪೆಟ್ಟಿಗೆ ತುಂಬ ಇವೆ, ಸೀರೆ ರವಕೆಗಳೂ ರಾಶಿರಾಶಿ ಬಿದ್ದಿವೆ. ನಗದು ಹಣವಿದೆ, ಜಮೀನಿದೆ, ಉಪ್ಪರಿಗೆಯ ಮನೆಯಿದೆ! ಇನ್ನೇನು ಬೇಕಯ್ಯಾ ಹುಡುಗಿಗೆ? ರಾಮಯ್ಯನವರ ಆಶಾಕಾಂಕ್ಷೆಗಳು ಹೀಗಿರುವಾಗ ಮಕ್ಕಳೆಲ್ಲ ‘ಬಾವಯ್ಯಾ! ಬಾವಯ್ಯಾ!’ ಎಂದು ಕೂಗಿ ಕೂಗಿ ಕರೆಯುವ ಬದಲಾಗಿ ‘ಆಜ್ಜಯ್ಯಾ! ಅಜ್ಜಯ್ಯಾ’ ಎಂದರೆ ಅವರಿಗೆ ಕೆಂಡದಂಥಾ ಸಿಟ್ಟು ಬಾರದಿದ್ದೀತೇ, ನೀವೇ ಹೇಳಿ. ಆ ಪರಿಸ್ಥಿತಿಯಲ್ಲಿ ಮಕ್ಕಳು ಕೂಗುವುದೂ, ಸಹಜ, ಅವರಿಗೆ ಸಿಟ್ಟು ಬರುವುದೂ ತಪ್ಪಲ್ಲ, ಆದರೆ ಮುಂದೇನಾಯಿತು ಎನ್ನುವಿರಾ? ಕೇಳಿ:-
ರಾಮಯ್ಯನವರಿಗೆ ಈ ಚಿಕ್ಕ ಪೋರರ ಕಾಟಕ್ಕಿಂತಲೂ ದೊಡ್ಡ ಪಟಿಂಗರ ಉಪಟಳವು ಕಳವಳವನ್ನುಂಟುಮಾಡಿತು. ಇವರೆಲ್ಲಿ ಹೆಣ್ಣಿಗೆ ಕಣ್ಣಿಟ್ಟರೂ ಅಲ್ಲಿ ಅವರ ಕಲ್ಲು ಬೀಳುತ್ತಿತ್ತು. ಈ ಹರೆಯದವರಿಗೆ ಪಾಪ! ಮುದುಕನ ಸಂಕಷ್ಟ ಒಂದಿಷ್ಟಾದರೂ ಬಗೆಮುಟ್ಟ ಬೇಡವೇ? ಸುಧಾರಕರ ‘ಲೆಕ್ಚರ’ನ್ನು ಕೇಳಿ ತಲೆತಿರುಗಿ ಈ ಚಂದ್ರಪುರದ ಯುವಕರು ‘ಕನ್ಯಾ ಸಂರಕ್ಷಣಾ ಸಂಘ’ ಎಂಬುದನ್ನೇರ್ಪಡಿಸಿಕೊಂಡಿದ್ದರು. ‘ಶಾರದಾ ಬಿಲ್’ ಅಂಗೀಕೃತವಾದಂದು ಊರಲ್ಲೆಲ್ಲ ಇವರ ಉಪನ್ಯಾಸಗಳೇನು? ಮೆರವಣಿಗೆ ಯೇನು! ಜಯಘೋಷವೇನು! ಸಾಲದುದಕ್ಕೆ ರಾಮಯ್ಯನವರಲ್ಲಿಗೆ ಹೋಗಿ ಅವರಿಗೊಂದು ‘ಅಲ್ಟಿ ಮೇಟಮ್’ ಕೊಟ್ಟೇ ಬಿಟ್ಟರು! ‘ನೀವೆಲ್ಲಾದರೂ ಚಿಕ್ಕ ಹುಡುಗಿಯನ್ನು ಮದುವೆ ಮಾಡಿಕೊಂಡರೆ ಜಾಗ್ರತೆ! ನಮ್ಮ ಸಂಘವಿದೆ! ಹುಡುಗಿಯನ್ನು ನಿಮ್ಮ ಐಶ್ವರ್ಯಕ್ಕೆ ಧಾರೆಯೆರೆಯಿಸಿಕೊಳ್ಳುವ ಬದಲಾಗಿ ನಿಮ್ಮ ಐಶ್ವರ್ಯವನ್ನೆ ನಮ್ಮದರಂತಹ ಸಾರ್ವಜನಿಕಹಿತ ಸಂಘಕ್ಕೆ ದಾನಮಾಡಿಬಿಡಬಾರದೇಕೆ? ಸಂಘವು ನಿಮ್ಮನ್ನು ಚೆನ್ನಾಗಿ ಕಾಪಾಡುವುದು. ನಿಮಗಂತೂ ಮದುವೆಯಾಗಬೇಕೆಂದೇ ಇದ್ದರೆ ನಿಮ್ಮಂಥ ಮುದಿವಿಧುರನಿಗೆ ತಕ್ಕ ಐವತ್ತು ವರುಷದ ವಿಧವೆಯನ್ನು ನಾವು ಗಂಟು ಹಾಕಿಕೊಡುವೆವು…..’ ಎಂಬಷ್ಟರಲ್ಲಿ ಕೇಳಿ ಸಹಿಸಲಾರದ ರಾಮಯ್ಯ ನಡನಡುಗುತ್ತ-ಐವತ್ತು ವರುಷದ ವಿಧವೆಯನ್ನು ನೀವೇ ಕೈ ಹಿಡಿದು ಸುಧಾರಕರೆಂಬುದನ್ನು ಕಾರ್ಯತಃ ತೋರಿಸಿ! ಸಾಕು ನಿಮ್ಮ ಪರೋಪದೇಶಪಾಂಡಿತ್ಯ! ಕಾಸು ಕೈಯಲ್ಲಿಲ್ಲದ ನಿರುದ್ಯೋಗಿ ಪೋಲಿಗಳಿಗೆಲ್ಲ ಸಂಘ! ಇಂತಹ ಒಂದಲ್ಲ-ನೂರು ಸಂಘಗಳು ಈ ಚಂದ್ರಪುರಿಯಲ್ಲೇಳಲಿ, ಅವುಗಳ ಇದಿರಿದಿರೇ ಹುಡುಗಿಯೊಂದನ್ನು ಮದುವೆಯಾಗದಿದ್ದರೆ ನಾನು ರಾಮಯ್ಯನೇ ಅಲ್ಲ!’ ಎಂದು ಗುಡುಗುಡಿಸಿದರು, ಆ ಯುವಕರು ಬಿಟ್ಟು ಕೊಡುವವರೇ? ಮದುವೆ ಸಾಕೋ ಸಾಕು ಎಂದು ನಿಮ್ಮಿಂದೆನ್ನಿಸದಿದ್ದರೆ ನೀವು ಹೇಳುವಂತೆ ನಾವು ಪೋಲಿಗಳೇ ಸರಿ!’ ಎಂದು ಪಂಥ ತೊಟ್ಟೇ ಹಿಂದೆ ಕಾಲಿಟ್ಟರು. ಆದುದರಿಂದ ರಾಮಯ್ಯನವರು ಹಲವು ಕಡೆಗಳಲ್ಲಿ ಪ್ರಬಲ ಪ್ರಯತ್ನ ಮಾಡಿದರು. ಅನೇಕ ಪುರೋಹಿತ ಭಟ್ಟರ ಕಡುಸನಾತನಿಗಳ-ಕೈ ಕಾಲು ಕಟ್ಟಿದರು ದುಡ್ಡು ಕೊಟ್ಟು ಅಡ್ಡ ಬಿದ್ದರು. ಬಹು ದೂರದವರೆಗೂ ಅವರ ಕನ್ಯಾನ್ವೇಷಣಯತ್ನ ಸಾಗಿತು. ಬಹಳ ರಹಸ್ಯವಾಗಿಯೂ ನಡೆಯಿತು. ಆದರೆ ಅದೆಲ್ಲ ಆ ಯುವಕ ಕೂಟಕ್ಕೆ ಹೇಗೋ ಗೊತ್ತಾಗಿ ಸಾಗದೆ ಹೋಯಿತು, ಮಾತ್ರವಲ್ಲ, ಹಣ್ಣಿನ ಮೇಲೆ ಬರೆಯೆಳೆದಂತೆ ಅವರು ರಾಮಯ್ಯನನ್ನು ನೋಡಿದಾಗಲೆಲ್ಲ, ಏನ್ರಿ, ನೀವು ಮದುವೆಮಾಡಿಕೊಂಡಿರೆಂದು ಊರಲ್ಲಿ ಸುದ್ದಿ! ಹೌದೇ?’ ಎಂದು ಗೇಲಿ ಮಾಡುವುದು ಬೇರೆ. ಆದುದರಿಂದ ಎಷ್ಟು ವೆಚ್ಚವಾದರೂ ಆಗಲಿ, ಒಮ್ಮೆಗೆ ಒಂದು ಹುಡುಗಿಯನ್ನು ಮದುವೆಯಾಗಿ ಆ ಪೋಲಿಗಳ ಮೂಗು ಮುರಿಯಬೇಕೆಂಬ ಛಲವು ರಾಮಯ್ಯನವರಲ್ಲಿ ದಿನಗಳೆದಂತೆ ಪ್ರಬಲವಾಯಿತು.
* * * *
ಒಂದು ದಿನ ಈ ರಾಮಯ್ಯನವರು ತನಗೆ ವಕ್ರಸಿದ ಶನಿ ತೊಲಗಿ ಹೋಗುವ ಕಾಲ ಬಂತೆಂದು ಹಿಗ್ಗಿದರು. ಏಕೆಂದರೆ ಆದಿನ ಸಾಯಂಕಾಲ ರುದ್ರಪುರದ ಯಾವುದೋ ಒಂದು ಶಿವಾಲಯದ ಜೀರ್ಣೋದ್ಧಾರಕ್ಕಾಗಿ ಧನಸಂಗ್ರಹ ಮಾಡುತ್ತ ಊರೂರು ತಿರುಗುತ್ತ ಒಬ್ಬ ಬ್ರಾಹ್ಮಣನು ಅವರ ಮನೆಗೆ ಬಂದನು. ಊಟೋಪಚಾರಗಳಾದ ತರುವಾಯ ರಾಮಯ್ಯ ನವರು ಅತಿಥಿಯೊಡನೆ ತನ್ನ ಮನಸ್ಸಿನ ಬಯಕೆಯನ್ನು ಹೇಳಿಕೊಂಡರು. ‘ಆ ಶಿವನು ನನ್ನ ಮನೋಭೀಷ್ಟ ನಡೆಸಿಕೊಟ್ಟರೆ, ನಾನೊಬ್ಬನೇ ಆ ಜೀರ್ಣೋದ್ಧಾರ ಕಾರ್ಯವನ್ನು ನೆರವೇರಿಸುವೆನು’ ಎಂದು ಹರಕೆ ಹೊತ್ತರು. ಬ್ರಾಹ್ಮಣನ ಮುಖವರಳಿತು. ‘ಹಾಗಾದರೆ ಆ ಶಿವನೇ ನನ್ನನ್ನು ತಮ್ಮ ಬಳಿಗೆ ಕಳುಹಿಸಿರಬೇಕು! ಆ ಶಿವಾಲಯದ ಅರ್ಚಕರಲ್ಲಿ ಒಂದು ಹೆಣ್ಣಿದೆ-ಅವರ ಸೋದರ ಸೊಸೆ. ತಂದೆತಾಯಿಗಳ್ಯಾರೂ ಇಲ್ಲ. ಅವರ ಕುತ್ತಿಗೆಗೆ ಕೊರಡಾಗಿದ್ದಾಳೆ; ಪ್ರಾಯ ತುಂಬಿದೆ. ಲಿಂಬೆಯ ಹಣ್ಣಿನಂಥ ಬಣ್ಣ ಆ ಹುಡುಗಿಯದು! ರೂಪದಲ್ಲಿ ರತಿ . . . . . . .’ ಎಂಬಷ್ಟರಲ್ಲಿ ರಾಮಯ್ಯನವರ ಮೋರೆ ಅರಳಿ ಅರಳಾಯಿತು!
‘ಸ್ವಾಮೀ, ಮೆಲ್ಲಗೆ ಮಾತಾಡಿ ಹೇಗಾದರೂ ಮಾಡಿ ಆ ಹುಡುಗಿಯನ್ನು ಈ ಮನೆ ಸೇರಿಸಿ! ಈ ಮನೆಯ ದೀಪ ಉಳಿಸಿ! ನಿಮಗೆ ಏನು ಬೇಕಾದರೂ . . . . . .”
‘ಹಾಗಾದರೆ ಕೇಳಿ, ನಾನೇ ಆ ಅರ್ಚಕ! ತಮ್ಮಿಂದ ನನ್ನ ದೇವಸ್ಥಾನ ಉದ್ಧಾರವಾಗಿ ನನಗೊಂದು ಜೀವನದ ಮಾರ್ಗವಾಗುವುದಿದ್ದರೆ….’
‘ಸ್ವಾಮಿ, ಮೆಲ್ಲಗೆ ಮಾತಾಡಿ, ಮೆಲ್ಲಗೆ! ಇಲ್ಲಿ ಗೋಡೆಗಳಿಗೂ ಕಿವಿಯಿದೆ! ಇಲ್ಲೊಂದು ಪೋಲಿಗಳ ಸಂಘ ಉಂಟು! ಅವರಿಗೆ ಗೊತ್ತಾದರೆ ಹುಡುಗಿಯನ್ನೇ ಹಾರಿಸಿಬಿಟ್ಟಾರು! ಸುಧಾರಕರ ಕೂಟ!…..’
‘ಸತ್ತರಯ್ಯ ಅವರು’ ನಮ್ಮೂರಿಗೆ ಬಂದು ನನ್ನ ಸೊಸೆಯನ್ನು ಹಾರಿಸುವುದೆ? ಏನೋ ನಿಮ್ಮೂರಲ್ಲಿ, ಅವರನ್ನು ಬೆಳೆಯಿಸಿಟ್ಟಿದ್ದೀರಿ! ಕೊಬ್ಬಿ ಹೋಗಿದ್ದಾರೆ! ನಮ್ಮೂರಲ್ಲಾದ್ದರೆ ನಮ್ಮ ಅಗ್ರಹಾರದ ಸನಾತನಿಗಳು ಅವರ ಟೊಂಕ ಮುರಿದುಹಾಕಿಬಿಡುತ್ತಿದ್ದರು! ಸುಧಾರಕರು! ಧರ್ಮದ್ರೋಹಿಗಳು! ನಾಸ್ತಿಕರು! ನರಕಕ್ಕೆ . . . . . .”
ಅವರೊಳಗಾದ ಉದ್ದದ ಮಾತುಕತೆಯನ್ನು ಗಿಡ್ಡಾಗಿ ಹೆಳುವುದಾದರೆ, ಅಂದಿನಿಂದ ಮೂರನೆಯ ದಿನವಾದ ಗುರುವಾರ ಸಾಯಂಕಾಲ ಎಂಟು ಗಂಟೆಯ ರೈಲಿನಲ್ಲಿ ರಾಮಯ್ಯನವರು ಗುಟ್ಟಾಗಿ ರುದ್ರಪುರದ ಸ್ಟೇಷನಿನಲ್ಲಿ ಇರಬೇಕು; ಹತ್ತು ಗಂಟೆಗೆ ಮದುವೆ; ಹನ್ನೆರಡು ಗಂಟೆಯ ಮೈಲು ಹತ್ತಿ ಬೆಳಗಾಗುವುದರೊಳಗೆ ರಾಮಯ್ಯನವರು ಹುಡುಗಿಯೊಡನೆ ಮನೆಮುಟ್ಟಬೇಕು; ಎಲ್ಲವೂ ರಹಸ್ಯವಾಗಿ ಶೀಘ್ರವಾಗಿ ನಡೆಯಬೇಕೆಂದೇ ರಾಮಯ್ಯನವರ ಹಟ. ಹಾಗೇನು ಬೆದರಬೇಕಾಗಿಲ್ಲವೆಂದೂ ತಾನು ಬಡವನಾದರೂ ತನ್ನಲ್ಲಿಗೆ ರಾಯರು ದಿಬ್ಬಣನಂತೆ ಬಂದು ನಾಲ್ಕು ದಿವಸದ ಮದುವೆಯನ್ನು ಶಾಸ್ತ್ರೋಕ್ತವಾಗಿ ಮುಗಿಯಿಸಿಕೊಂಡು ಬ್ರಾಹಣನ ಆಗ್ರಹಪೂರ್ವಕ ವಿನಂತಿ. ಆದರೆ ಜಾಗಟೆಗೊಂದೇ ಸ್ವರವೆಂಬಂತೆ ರಾಮಯ್ಯನವರು ಹಿಡಿದ ಛಲ ಬಿಡಲೊಲ್ಲರು. ಮಾತ್ರವಲ್ಲ, ತಾನು ಹೇಳಿದಂತೆ ಶೀಘ್ರವಾಗಿ ಹುಡುಗಿಯನ್ನ ಮದುವೆಮಾಡಿಸಿ ಕಳುಹಿಸಿಕೊಡುವುದಾದರೆ ಅಂದೇ ಅಲ್ಲೇ ಜೀರ್ಣೋದ್ಧಾರ ಕಾರ್ಯಕ್ಕೆ ಮಂಗಡವಾಗಿ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟು ಬರುವುದಾಗಿ ಬ್ರಾಹ್ಮಣನಿಗೆ ಆಸೆ ಹುಟ್ಟಿಸಿ ತನ್ನ ದಾರಿಗೆ ತಂದುಬಿಟ್ಟರು. ರುದ್ರಪುರವು ಅಷ್ಟೊಂದು ದೂರವಿದ್ದಿಲ್ಲ-ಚಂದ್ರಪುರದಿಂದ ಆರು ತಾಸಿನ ರೈಲುಗ್ರಯಾಣದೊಳಗೆ.
ಶುಕ್ರವಾರದ ದಿನ ಬೆಳಗ್ಗೆ ಎಂಟೊಂಬತ್ತು ತಾಸಿನೊಳಗೆ ಊರಲ್ಲೆಲ್ಲ ಸುದ್ದಿ-ರಾಮಯ್ಯನವರ ಕೈ ನನೆಯಿತೆಂದು! ಮದುಮಗಳನ್ನು ನೋಡುವುದಕ್ಕಾಗಿ ಊರು ಊರೆ ಅಲ್ಲಿ ಕೂಡಿತು. ಮುದುಕನ ಹೆಂಡತಿಯನ್ನು ನೋಡುವುದರಲ್ಲಿ ಮಂದಿಗೆಷ್ಟೊಂದು ಕುತೂಹಲ. ಬೆಳಗಿನ ಮನೆಗೆಲಸವನ್ನಲ್ಲೇ ಬಿಟ್ಟು ಓಡಿದರು ಹೆಂಗಸರು; ಹೊಲದತ್ತ ಹೊರಟ ಗಂಡಸರು ಸುದ್ದಿ ಕೇಳಿ ರಾಮಯ್ಯನಲ್ಲಿಗೆ ನಡೆದರು, ಶಾಲೆಗೆ ಹೊತ್ತಾಗುವುದೆಂದೆಣಿಸದೆ ಬಾಲಕ ಬಾಲಕಿಯರೂ ಸಾಗಿದರು ಆ ಕಡೆಗೆ, ರಾಮಯ್ಯನವರಿಗೂ ಊರೆಲ್ಲ ಬರಬೇಕೆಂದಿತ್ತು; ತನ್ನ ಪರಾಕ್ರಮವನ್ನು ತೋರ ಬೇಕೆಂದಿತ್ತು; ಆ ಪೋಲಿಗಳ ಕೂಟವನ್ನು ಜರೆಯಬೇಕೆಂದಿತ್ತು. ‘ಶಾರದಾ ಬಿಲ್ಲು! ಅವರ ಎದೆಗೆಬಿಟ್ಟು ಕೊಳ್ಳಲಿ! ಹುಡುಗಿಗೆ ೧೫ ವರುಷ ದಾಟಿದೆ; ೧೬-೧೭ ಎಂದರೂ ನೀವೇನೊ ಒಪ್ಪುವಿರಿ; ಹಾಗಿಲ್ಲವೆ ಆ ತುಂಬಿದ ಮೈಯೊಡ್ಡು? ನಾನು ಮದುವೆಯಾಗಲು ನಿಶ್ಚಿಸಿದ ಹುಡುಗಿಯನ್ನು ಹಾರಿಸಿಯಾದರೂ ಮದುವೆ ತಪ್ಪಿಸುತ್ತಾರಂತೆ! ಇನ್ನು ಬರಲಿ ತಪ್ಪಿಸುವವರು! ಹಾರಿಸಲಿ ನೋಡೋಣ! ಕ್ರಿಮಿನಾಲ್, ಲೋಕಪ್ಪ್! ಹಾರಿಸುವುದ ಮೈದಾನಿಗೆ ಹೋಗಿ ಗಾಳಿಪಟ ಹಾರಿಸಲಿ ಆ ನಿರುದ್ಯೋಗಿ ಪೋಲಿಗಳು!’ ಎಂದೆಲ್ಲ ಬಂದವರೊಡನೆ ರಾಮಯ್ಯನವರು ಆಟೋಪದಿಂದ ಮಾತಾಡು ತಿರಲು ಆ ಕೂಟದ ರಂಗ ಬಂದ, ಗೋಪ ಬಂದ, ಅವರ ಹಿಂದೆ ಶ್ಯಾಮ, ಭೀಮ, ರಾಮ, ವೆಂಕ್ಟು ಇತ್ಯಾದಿ ಕೂಟಕೂಟವೇ ಬಂದಂತಾಯಿತು. ’ಏನ್ರಿ, ರಾಮಯ್ಯನೋರೇ, ಕಡೆಗೂ ನೀವೇ ಗೆದ್ದು ಬಿಟ್ಟರಲ್ಲಾ! ಎಂಥಾ ಹರೆಯದ ಹುಡುಗಿಯನ್ನೇ ಕೈ ಹಿಡಿದುಬಿಟ್ಟಿರಿ!’ ಎಂದ ರಾಮು.
‘ಅಲ್ಲ ಮತ್ತೆ! ನಿಮ್ಮಂಥ ಪೋಲಿ ಹುಡುಗರ ಬೊಗಳಿಕೆಗೆ ಹೆದರಿ ಸುಮ್ಮಗೆ ಕೂತುಬಿಡುತ್ತೇನೆಂತ ತಿಳಿದ್ರೋ ನೀವೆಲ್ಲ?’ ಎನ್ನುತ್ತ ರಾಮಯ್ಯನವರು ಬಗ್ಗಿದ ಬೆನ್ನು ನೆಟ್ಟಗೆ ಮಾಡಿ ಇಲ್ಲದ ಮೀಸೆಯ ಕಡೆಗೆ ಬೆರಳು ಏರಿಸಿ ಇನ್ನೇನಾದರೂ ಪೋಕಾಟಿಗೆ ಎಬ್ಬಿಸಿದಿರೆಂದರೆ ಕ್ರಿಮಿನಾಲ್! ನಿಮಗೆಲ್ಲ ಲೋಕಪ್ಪ್! ಜಾಗ್ರತೆ!’ ಎಂದು ಎಚ್ಚರಿಸಿದರು.
ಆದರೆ ಭೀಮನು, ನೋಡಿದಿಯಾ, ಶ್ಯಾಮಾ, ರಾಮಯ್ಯನವರ ಹೆಂಡತಿ ನಾಟಕದ ಪಾರ್ಟನಂತೆ ಎಷ್ಟು ಮುದ್ದು ಮುದ್ದಾಗಿ ಕಾಣುತ್ತಾಳೆ! ಎನ್ನುತ್ತ ಮುಂದುರಿವದು ಮದುಮಗಳ ಸೆರಗಿಗೇ ಕೈಕೊಟ್ಟ! ಮುದುಕನು ತನ್ನ ದೊಣ್ಣೆಯ ಕಡೆಗೆ ಕೈಚಾಚಿದ, ನೆರೆದವರು ಭೀಮನನ್ನು ತಡೆಯಲು ಮುಂದಾದರು, ಮದುಮಗಳು ಬಿಕ್ಕಿ ಬಿಕ್ಕಿ ಅಳುತ್ತ ‘ಮುದುಕನ ಹೆಂಡತಿಯಾಗಿ ಸಿಕ್ಕುವರಿಂದ ಸೆರಗಿಗೆ ಕೈಯಿಕ್ಕಿಸಿಕೊಳ್ಳುವ ಈ ದುಃಖ ಬೇಡಾ!’ ಎಂದು ಮೊರೆಯಿಡುತ್ತಿದ್ದಂತೆಯೇ ಭೀಮನು ಸೆರಗನ್ನು ಎಳೆದುಹಾಕಿ ಶೀರೆಯನ್ನು ಬಿಚ್ಚುತ್ತಿದಾನೆ! ಅಯ್ಯೋ! ಏನನ್ಯಾಯ! ಏನನ್ಯಾಯ! ಎಂದು ಅಲ್ಲಿದ್ದವರೆಂದಂತೆ ನೀವೂ ಹೇಳುವಿರಾ? ಅನ್ಯಾಯವೆಲ್ಲಿಂದ ಬಂತು? ನೋಡಿ, ಶೀರೆಯು ಭೀಮನ ಕೈಯಲ್ಲಿದೆ! ತಾಲೀಮು ಉಡುಗೆಯಿಂದೊಪ್ಪುವ ಹುಡುಗನಾಗಿ ನಿಂತಿದ್ದಾನೆ-ಆ ಮದುಮಗಳು! ಕೈ ಚಪ್ಪಾಳೆಯ ಹೊಡೆತವೇ ಹೊಡೆತ, ಕೆಲವರು ಕಿಬ್ಬದಿ ಹಿಡಕೊಂಡು ನಗುತ್ತಿದ್ದಾರೆ! ಕೆಲವರು ತೆರೆದ ಕಣ್ಣು ಬಾಯಿ ಮುಚ್ಚದೆ ನೋಡುತ್ತಿದ್ದಾರೆ! ರಾಮಯ್ಯನೋರೇ, ಈ ಹುಡುಗನಿಗೆ ಶೀರೆ ಉಡಿಸಿ ಕುಳ್ಳಿರಿಸಿಕೊಂಡು ನಮಗೆಲ್ಲ ಇಷ್ಟು ಗಿಲೀಟು ಹಚ್ಚಿದಿರಿ! ಇನ್ನು ಇವನನ್ನೇ ದತ್ತ ಸ್ವೀಕಾರಮಾಡಿಕೊಂಡು ಬಿಡಿ! ನಮ್ಮ ಸಂಘವು ಉದ್ಧಾರವಾಗುತ್ತೆ’ ಎಂದು ನಗುತ್ತಿದ್ದಾನೆ ಭೀಮ. ‘ನಿಮ್ಮ ಸಂಘ ಹಾಳಾಗಿ ಹೋಗಲಿ!’ ಎನ್ನುತ್ತ ನೆಲಕ್ಕೆ ಕೈ ಹೊಡೆಯುತ್ತಿದ್ದಾನೆ ಮುದುಕ, ಕೂಟದವರು ನಗುತ್ತ ಹೋಗುತ್ತಿದ್ದಾರೆ!
*****