ಅಬ್ಬೆಪಾರಿಗಳು ಮನೆವಾಳ್ತನಕಿರಬಾರದು
ಕೈ ಹಿಡಿದವಳು ಸೇರಿದಂತೆ ಎಲ್ಲರಿಗೂ ಸದರ
ಮನೆ ಅಳಿಯ
ಅತ್ತ ಮಗನೂ ಅಲ್ಲದ ಇತ್ತ ನೆಂಟನೂ ಅಲ್ಲದ
ಆಟಕ್ಕುಂಟು ಲೆಕ್ಕಕ್ಕಿಲ್ಲದ
ಮುಲಾಜು ಬದುಕಿನ ವ್ಯಕ್ತಿ
ಸರಿಕಂಡದ್ದ ಮಾಡುವ ಹಾಗಿರಲ್ಲ
ಸ್ವತಂತ್ರವಾಗಿ ನಡೆಯೋ ಹಾಗಿರಲ್ಲ
ವ್ಯಕ್ತಿ ಗೌರವ ಕೇಳೋ ಹಾಗಿರಲ್ಲ
ಸ್ವಲ್ಪ ಹಾಗೆ ಹೀಗೆ ಮಾಡಿದೆಯೋ
“ಊಂ! ನಿನ್ನನ್ನ ನಾವೇನೋ ಅಂದು ಕೊಂಡಿದ್ದೆವೆಲ್ಲಪ್ಪೋ…!
ಅದೆಲ್ಲಾ ಬಿಟ್ಟು ಬಿಡಪ್ಪ
ಕಲಿತಿದ್ದೆಲ್ಲಾ ಖರ್ಚು ಮಾಡಬೇಡ” ವೆಂದು ಗದರಿಸಿ, ಮೂದಲಿಸಿ
ಎಚ್ಚರಿಸುವರು.
ನಾದಾರಾಗಿರುವಾಗ,
ಸಕಲಿಷ್ಟು ನೀನೆ, ನಿನ್ನದೆ ಅಂದವರು
ಸ್ವಲ್ಪ ಗಂಟಾಗಿ,
ಮಕ್ಕಳು ಮರಿ ಕೈಗೆ ಬಂದ ಮೇಲೆ
ಈಯಪ್ಪ ನೊಬ್ಬನನ್ನು ತಂದು ಮೂಲ ಮಾಡಿಕೊಂಡೆವೆಂದು
ನೇರವಾಗಿ ಅನ್ನುವರು
ಥತ್ ಇವನ! ಎಂದು
ಅಪ್ಪನ ಮನೆಗೆ ಹೋದರೆ
ಇದ್ದ ಬದ್ದವರೆಲ್ಲಾ
ಇಷ್ಟು ದಿನ ವೆಲ್ಲಿದ್ದೆ?
ದುಡಿಮೆಯೇನು ಮಾಡಿದೆ?
ನಾಟಕವಾಡ ಬೇಡ
ನಿನ್ನದೇನಿದ್ದರೂ ಅಲ್ಲೆ!
ನೀನೆ ಯೋಚನೆ ಮಾಡು
ನಿನ್ನ ಹಾಗೇ ನಾವೂ ಹೋಗಿದ್ದು
ಈಗ ನೀನು ಬಂದ ಹಾಗೆಯೇ ನಾವು ಇಂದು ಬಂದಿದ್ದರೆ
ಇಲ್ಲಿ ಏನಾದರೂ ಉಳಿದಿರುತ್ತಿತ್ತಾ?
ತ್ಯಾರಕಾರ ನಂಗೆ ಬಂದು ಬಿಟ್ಟ!
ಎಲ್ಲಿಂದ ಬರುತ್ತೆ?
ದುಡಿಲಿಲ್ಲ; ದುಃಖ ಪಡಲಿಲ್ಲ
ನಡಿ, ನಡಿಯಣ್ಣ! ವೆನ್ನುವರು
ಜನ ನಂಬುವ ಹಾಗಿಲ್ಲ;
ಅತ್ತಲೂ ಇರುವರು ಇತ್ತಲೂ ಇರುವರು
ಅವರಿಗೂ ಹೇಳುವರು ನಮಗೂ ಹೇಳುವರು
ಕೆಟ್ಟರೆ ನೋಡೆವಲ್ಲಾ ಎನ್ನುವರು
ಸಾವರಿಸಿ, ಸಾವರಿಸಿ ಸೋತು
ಇನ್ನು ಆಗುವುದಿಲ್ಲ ವೆಂದಾಗ
ಅವರಿವರ ಕೈ ಕಾಲು ಕಟ್ಟಿ ಪಂಚಾಯತಿ ಕಲೆಸಿದೆವೆಂದರೆ-
“ಯಾರೂ ಅನ್ಯಾಯಕ್ಕೆ ಹೋಗ ಬಾರದು
ಆವತ್ತಿಗೂ ಇವತ್ತಿಗೂ ಮಾತು ಒಂದೇ ಆಗಿರಬೇಕು
ನಿಜ! ನಿನ್ನನ್ನು ನಾವು ಮಗನನ್ನಾಗಿ ಮಾಡಿಕೊಂಡು ಬಂದೆವು
ನೀನೂ ಅಂಗೆ ನಡಕೊಂಡೆ
ಇವತ್ತು ಕಂಡವರ ಮಕ್ಕಳು ಅಂತ ಇಲ್ಲದ್ದ ನುಡಿಬಾರದು
ನಿನ್ನ ಅಂಗೆ ಇಂಗೆ ಅಂದರೆ ನಮ್ಮ ನಾಲಿಗೆಗೆ ಉಳಬಿದ್ದಾವು!
ನಾವಿಲ್ಲಿ ಉಗಿತಿದ್ದೀವಪ್ಪಾ ಅಂದರೆ ನೀನು ದಾಟಿ ನಡೆದಿಲ್ಲ
ನಾವು ಕೂಡ ತಪ್ಪಿ ಏನೂ ನಡೆದಿಲ್ಲ
ಕೊಟ್ಟು, ಲಕ್ಷಣವಾಗಿ ಮದುವೆ ಮಾಡಿಹೆವು
ಅಳಿಯ ಮಗಳ ವೈಭವ ನೋಡಿ ಕಣ್ಣು ಪಾಪ ಕಳಕೊಂಡಿಹೆವು
ನಿನ್ನ, ನಿನ್ನ ಸಂಸಾರವನ್ನ, ಮಕ್ಕಳು ಮರಿಯನ್ನ ಸುಖವಾಗಿ
ನೋಡಿಕೊಂಡು ಬಂದಿಹೆವು
ಹಾಗಂತ, ಇವತ್ತು ನೀವು ಅಂಗೆ ಹೋಗಿರಪ್ಪ ಎಂದರೆ
ಅದೇವರು ಮೆಚ್ಚೇನಾ, ಮೆಚ್ಚಾನಾ !?
ನಿನಗೆ ಗೊತ್ತಿದೆ
ಏನೆದೆ ಏನಿಲ್ಲ ಅಂತ
ಈ ಮನೆ ಆವತ್ತು ನಿನ್ನದೆ ಈವತ್ತೂ ನಿನ್ನದೆ
ಬೆಳೆಯೋ ನಿನ್ನ ಅಳಿಯರಿಗೇನು ಕೊಡುತ್ತೀಯೋ
ನಿನ್ನ ಸೊಸೆಯರನ್ನ ಏನು ಮಾಡುತೀಯೋ
ಅವರನ್ನು ಹೇಗೆ ರತಿ ರಂಗೋಲಿ ಹತ್ತಿಸಬೇಕೋ
ಏನಪ್ಪಾ! ಇದನೆಲ್ಲಾ ನೀನು ನಿಧಾನವಾಗಿ ಯೋಚನೆ ಮಾಡಿ
ತೂಗಿ, ತೂಕ ಮಾಡಿ ಹಂಚಿಕೊಟ್ಟು ಹೋಗು
ಸರಿಯೇನ್ರಪ್ಪಾ!
ಇಲ್ಲಿ ಯಾರು ಧರ್ಮ, ಕರ್ಮ, ತಿಳಿಯದವರೇನಿಲ್ಲ
ನೀವೂ ಸ್ವಲ್ಪ ಆಲೋಚನೆ ಮಾಡಿ
ಹೀಗೀಗೆ ಹೋಗಿರಪ್ಪವೆಂದರೆ
ನಾವು ಹತ್ತು ಜನದ ಮಾತ ತೆಗೆದು ಹಾಕೋಕೆ ಬರುತ್ತಾ!?
ಇವತ್ತು ಅಳಿಯ ಮಗಳು ಸ್ವಲ್ಪವಾದರೂ ಪ್ರಪಂಚ ತಿಳಿದವರು
ಪ್ರಾಯದ ಮಕ್ಕಳು,
ಎಲ್ಲಿಯಾದರೂ, ಏನಾದರೂ ಮಾಡಿಕೊಂಡು ಬದುಕಬಲ್ಲರು
ನಮ್ಮದಿನ್ನೇನು ಉಳಿದಿದೆ?
ಊರು ಹೋಗೆನ್ನುವುದು ಕಾಡು ಬಾ ಎನ್ನುವುದು
ನಮ್ಮ ಮಕ್ಕಳು ಯಾವ ದಿನ ಮಾನದವರು
ಬದುಕು, ಬಾಳು ಗೊತ್ತಿಲ್ಲದವರು
ಇವರು ಊರಲ್ಲಿ ಬೂದಿ ಬಿಸಾಕಿ ಕೊಂಡಿರಬೇಕು
ನಮ್ಮ ಮನೆಯ ದೀಪವೂ ಉರಿಬೇಕು
ಇದರಲ್ಲಿ ಯಾರಿಗೂ ತಿಳಿಯದೆ ಇರುವುದು ಏನೂ ಇಲ್ಲ
ನೋಡ್ರಪ ಇರೋದಿದು!
ದೈವದವರು ನೀವು ಹೇಗೆ ಅಂದರೆ ಹಾಗೆನ್ನುವವರು ನಾವು,
ಎನ್ನುವರು
ಮಾತಿನ ಮೋಡಿಯಲ್ಲಿ ಮುಚ್ಚಿ ಹಾಕುವರು; ನಡಿ ಎನ್ನುವರು
ಅಲ್ಲಿಂದ ಇಲ್ಲೀವರೆಗೆ ಆಸೆಯಿಟ್ಟುಕೊಂಡು
ಎದೆ ಮುರುಕೊಂಡವನು
ಕೊಟ್ಟಿದ್ದ ಇಸುಕೊಂಡು
ಅಪ್ಪುಗೈ ಇಟ್ಟು ಕೊಂಡು ಹೊರಬರಬೇಕು
ಎಲಾ ಹೊಸದಾಗಿ ಶುರು ಮಾಡಬೇಕು
ತಪ್ಪಿ ಬಾಯಿ ಮಾಡಿದೆಯೋ
ಸಣ್ಣವರಿಂದ ಹಿಡಿದು ದೊಡ್ಡವರವರೆಗೆ
“ಏನಾದರೂ ಇವನು ಕ್ರಿಯ ಹಿಡಿಯಲಿಲ್ಲ ಕಣಯ್ಯ” ವೆಂಬ
ಆರೋಪ ಹೊರಿಸುವರು
*****