ಬಜಾರಿನಲ್ಲಿ ಇದ್ದ ಬುದ್ಧ
ರಾಮ, ಕೃಷ್ಣ, ಶಿವ, ಗಾಂಧಿ
ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ.
ಮೊಂಡು ಕೈ, ಹರಿದ ಅಂಗವಸ್ತ್ರ….
ಬುದ್ಧ ಹೌದೋ ಅಲ್ಲವೋ ಎಂದು
ಅನುಮಾನಿಸುವಷ್ಟು ಚಿಂದಿಯಾಗಿದ್ದ.
ಆದರವೇ ಜಾಜ್ವಲ್ಯಮಾನ ಕಣ್ಣುಗಳು
ಸೆಳೆದವು, ಹೊಳೆದವು ಫಳ ಫಳ
ಪುಳಕಿತಳಾಗಿ ಮನೆಗೆ ಕರೆದೆ, ಬಂದ.
ಒಣಗಿದ ಹೂವು, ಆರಿದ ದೀಪ, ಪಿನ್ನು,
ಪುಸ್ತಕ, ಎಂಜಲು ತಟ್ಟೆ, ಒಣಗಿದ ಬಟ್ಟೆ,
ಹಣ್ಣು-ತರಕಾರಿಯ ಒತ್ತರಿಸಿ, ಅಂಗೈಯಲ್ಲಿ
ಗುಡಿಸಿ, ಸಾರಿಸಿ ಜಾಗ ಮಾಡಿಕೊಟ್ಟೆ-
ಮೇಜಿನ ಮೂಲೆಯಲಿ ಕೂತ.
ಅವನು ಬುದ್ಧ
ಮೈತ್ರಿ-ಕರುಣೆಯ ಸಾಕಾರ
ಅವನದೇ ಮಾತು: ಸಂಸಾರ ದುಃಖಸಾಗರ
ಆಶೆಯೇ ದುಃಖಕ್ಕೆ ಮೂಲ, ಜೀವನವು ನಶ್ವರ.
ಮಾರನಿಗೊಲಿದಿದ್ದ ನಾವು ಅವನ ಮುಂದೆಯೆ
ಶುರು ಹಚ್ಚಿಕೊಂಡೆವು ವ್ಯವಹಾರ
ಮನೆ ಮಂದಿಯ ಮೋಹ, ಮದ, ಮತ್ಸರ
ಆತಂಕ, ಆವೇಶ, ದುಃಖ, ಕೋಪ
ಎಲ್ಲವೂ ಈಗವನ ಸಮ್ಮುಖ!
ದೂಷಣೆ, ಶೋಷಣೆ, ಘೋಷಣೆ
ಯುದ್ಧ-ಕದನ ವಿರಾಮಗಳಿಗೆ-
ಅವನೇ ಸಾಕ್ಷಿ, ಅವನದೇ ರಾಯಭಾರ.
ರೋಗ ರುಜಿನ, ಮರಣ ಎಲ್ಲವುಗಳಿಗೆ
ಅವನೇ ಕಾರಣ, ಅವನಿಂದಲೇ ಶಮನ!
ಅಷ್ಟಾಂಗ ಮಾರ್ಗಗಳಿಗೆ ನಮಿಸಿದೆವು ನಿಜ,
ಆಚರಿಸಿದೆವೋ ಅನುಮಾನ!
ಏರಿದ ಎತ್ತರ, ಇಳಿದ ಪ್ರಪಾತ,
ಕವಿದ ಕಾರ್ಮೋಡ, ಕರಗಿದ ಕಾವಳ-
ಇಲ್ಲದೆಯೂ ಇದ್ದಂತೆ, ಜೊತೆಗಿದ್ದ….
ಇಪ್ಪತ್ತು ವರುಷವಾಯಿತು ಬುದ್ಧ
ನಮ್ಮಲ್ಲಿಗೆ ಬಂದು-
ನಮ್ಮೊಂದಿಗೇ ನಿಂದು, ನೊಂದು, ಬೆಂದು;
ಈಗವನು ನಮ್ಮವನು, ನಮ್ಮಲ್ಲೇ ಒಂದು.
ಇನಿತೂ ಬದಲಾಗಿಲ್ಲ….ಅದೇ
ಗುಂಡು ಮುಖ, ತುಂಡು ಬಾಯಿ
ಮೊಂಡು ಕೈ, ಹರಿದ ಅಂಗವಸ್ತ್ರ,
ಅದೇ ಮೌನ, ಸಮಾಧಾನ
ನಾವೂ ಅಷ್ಟೆ, ಇನಿತೂ ಬದಲಾಗಿಲ್ಲ!
ಅದೇ ವೇಗ, ಅದೇ ಭೋಗ,
ಅದೇ ತನ್ಹಾ….ಅದೇ ತಲ್ಲಣ!!
*****