ನಾಲ್ಕು ಜನರಿರುವ ಜಾಗವನ್ನು ದಾಟಿ ಹೋಗ ಬೇಕೆಂದರೆ
ಕುತ್ತಿಗೆಗೆ ಬರುವುದು
ಜನರ ನೋಟ ಹೊಟ್ಟೆಯೊಳಗೆ ಕಟ್ಟು ಚೂರಿಯನ್ನಾಡಿಸಿದಂತಾಗುವುದು
ಮಾತುಗಳು ನಗಾರಿಯ ಭೇರಿಯಂತೆ ತಮಟೆ ಹರಿಯುವವು
ತಲೆ, ತಂತಾನೆ ಮಣ ಭಾರ ವಾಗುವುದು; ಮೇಲೆತ್ತದಂತಾಗುವುದು
ನಿತ್ರಾಣವಾಗಿ ಕಾಲುಗಳು ಕಿತ್ತಿಡಲಾಗದಷ್ಟು ಭಾರವಾಗುವವು
ಜೀವ ಮುದ್ದೆ, ಮುದ್ದೆಯಾಗುವುದು.
ಬಸವಿಯ ಮಗಳಾದ ಪಾಪಕ್ಕಾಗಿ ಎಲ್ಲಾ ಸಹಿಸ ಬೇಕಾಗುವುದು
ಹೊರಗೆ ಈ ವಾಡು
ಒಳಗೆ, ಕೇಳೋದೆ ಬೇಡ!
ನಮ್ಮನ್ನು ಸಾಕಿದ ದೊಡ್ಡಮ್ಮನ ಮಗನೂ
ಮಾತಿಗೆ ಬಂದರೆ ಏನೇನೂ ಉಳಿಸನು, ಜನ್ಮ ಜಾಲಾಡಿ ಬಿಡುವನು-
“ನಿಮಗೆ ಯಾರಿದ್ದರು?
ನಾನೊಬ್ಬ ಕೈ ಹಿಡಿಯದಿದ್ದರೆ
ಎಂದೋ ತುರುಕರು, ತುಂಡರ ಪಾಲಾಗಿ ಹೋಗಿ ಬಿಡುತ್ತಿದ್ದಿರಿ,
ನಿಮ್ಮಮ್ಮ, ಬೀದಿ ನಾಯಿಯಂತೆ
ಸಿಕ್ಕಿದವರಿಗೆ ಬಸುರಾಗಿ, ಸಿಕ್ಕಲ್ಲಿ ಈದುಕೊಂಡು, ಹಾಗೇನೆ,
ಮೂರು ಹೆಣ್ಣು ಬೋಕಿಗಳನ್ನು ಕಟ್ಟಿ ಕೊಂಡು
ಹೊಸ್ತಿಲಿಂದ ಹೊಸ್ತಿಲಿಗೆ ತಳ, ಕೂಳಿಗಾಗಿ ಅಲೆಯುತ್ತಿದ್ದಾಗ
ಪಾಪ! ಅಂದ ನಾನು ಕರಕೊಂಡು ಬಂದು
ಒಳಗಿಟ್ಟು ಕೊಂಡೆ;
ಒಂದು ಗೌರವ, ಬಾಳು ಕೊಟ್ಟೆ ಕಣಿರೆ” ಎನ್ನುವನು
ಮಾಡಿದ್ದ ಆಡಿದರೆ ಏನು ಬಂತು? ಹೇಳಿ
ಕಟ್ಟಿ ಕೊಂಡವನೋ…
ದೇವರಿಗೆ ಪ್ರೀತಿಯಾಗ ಬೇಕು!-
ಅಂಬದ ಮಾತಿಲ್ಲ
ಕೊಡದ ಚಿತ್ರ ಹಿಂಸೆಯಿಲ್ಲ
ಅವನಿಗೆ ನಾನೊಬ್ಬಳು ಮನುಷ್ಯಳೆಂಬುದೇ ಗೊತ್ತಿಲ್ಲ
ನನಗೆ ಅನುಭವಿಸದೆ ವಿಧಿಯಿಲ್ಲ
ಬಿಟ್ಟನೆಂದರೆ ಬರಮಾಡಿಕೊಳ್ಳುವರಾರು!
ಹೊರಟೆನೆಂದರೆ ಹೋಗುವುದೆಲ್ಲಿಗೆ?
ನನಗೆ, ನನ್ನವರೆ, ತನ್ನವರೆ, ಮನೆಯೆ, ಮಠವೆ?
ಯಾರಿದ್ದಾರೆ? ಏನಿದೆ?
ಇದ್ದರೂ ಇಲ್ಲೆ ಬಿದ್ದರೂ ಇಲ್ಲೆ! ನನಗಿರುವುದು ಇದೊಂದೆ!
ಇದ್ದೊಬ್ಬ ತಾಯಿಯೂ ಹೆಣವಾಗಿ ಇಲ್ಲೆ ಬಿದ್ದಿಹಳು
ಎಲ್ಲೆಲ್ಲೋ ಬಿದ್ದೆದ್ದು ಬರುವನು
ತಿಂದು, ಕುಡಿದು ಮಜಾ ಮಾಡಿ ಲಾಕ್ ಲೇಕ್ ಮಾಡುವನು
ಯಾರು ಯಾರನ್ನೋ ಕಟ್ಟಿ ಕೊಂಡು ಬರುವನು
ಹೊತ್ತು ಗೊತ್ತೆಂಬುದೇ ಇಲ್ಲ
ಬಂದಾಗ ಬಾಗಿಲು ತೆರೆಯಬೇಕು
ಈಗ ಆಗ ಬೇಕೆಂದರೆ ಆಗ ಆಗಬೇಕು
ಒಳಗೆ ಐತ್ತೆ ಇಲ್ಲ ಅನ್ನೋದು ನೋಡಲ್ಲ
ತನಗೆ ಹೇಗೊ ತನ್ನ ಹಿಂದೆ ಬಂದಿರುವವರಿಗೂ ಹಾಗೇ
ಏನೂ ಕಡಿಮೆಯಾಗಬಾರದು
ಹಾಗೇನಾದರೂ ಆಯಿತೋ ಕೆಂಡ, ಕೆಂಡವನ್ನೇ ಕಾರುವನು
ಮಹಾರಾಯ! ತಾನು ಸಾಕಿರುವ ನಾಯಿಗೆ ತೋರಿಸುವಷ್ಟು ಪ್ರೀತಿ
ತೋರಿಸಿದ್ದರೂ ಎಷ್ಟೋ ಆಗುತ್ತಿತ್ತು
ಏನಾದರೂ ಮಾಡಲಿ ಬಿಡಲಿ
ಇರುಳು ಹಗಲು ಮಲಗಿ ಕೊಂಡಿರಲಿ ಕೇಳುವ ಹಾಗಿಲ್ಲ
ಬಾಯಿತಪ್ಪಿ ಅಂದರೂ
ಆಂ! ಊಂ… ಊ….!
ಉಸಿರು ಬಿಟ್ಟರೆ ನೋಡು
ತಲೆ ಹೊಯ್ದ ಎಲೆ ಮುಚ್ಚಿ ಬರುವೆ ಹುಷಾರ್!
ಎಚ್ಚರಿಕೆಯಲ್ಲಿರು ಎನ್ನುವನು
ಅದು ಹೋಗಲಿ ಬಿಡಿ!
ಇವುಗಳ ತಲೆ ಬಿದ್ದೋಗ
ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಾದರೂ ಕೂಡ
ನೋಡಿ, ಮಾಡಿ ಮಾತಾಡುವುದಿದೆಯೆ?
“ಲೇ! ಅಪ್ಪನ ಗುರುತು ಅರಿಯದವಳೆ! ಹಾರಾಡ ಬೇಡ”
ವೆನ್ನುವವು
ಥೂ! ಇಂತಾ ಜನ್ಮಬೇಕಿತ್ತಾ?
ಯಾವ ತಾಯಿಗ್ಗಂಡ ಮಾಡಿದನೋ ಈ ಬಸವಿ ಬಿಡೋದಾ!
ಇವನ ವಂಶ ನಿರ್ವಂಶವಾಗಿ ಹೋಗಾ!
ಅವನನ್ನು ಮೆಟ್ಟು ಬೀಳುವಾಗ ಮೆಟ್ಟು ತಗೊಂಡು ಹೊಡಿಬೇಕು
*****