ಶತ್ರುವು ಕಾಣುತ್ತಿಲ್ಲ ನಮಗೆ ಶತ್ರುವು ಕಾಣುತ್ತಿಲ್ಲ
ಅಡಗಿರಬಹುದು ಒಳಗೆ; ಅವನು ಕಾಣುತ್ತಿಲ್ಲ ಹೊರಗೆ ||ಪ||
ಸುಳಿವು ಸಿಕ್ಕರೂ ಅವನ ಹಿಡಿವುದು ಬೇಕಿಲ್ಲ
ಹಿಡಿಯದೆ ಯುದ್ಧವು ಎಲ್ಲಿ? ನಮ್ಮ ದಾರಿಗೆ ಭವಿಷ್ಯ ಎಲ್ಲಿ? //ಅ.ಪ.//
ಅಕ್ಕಪಕ್ಕದವರು ಇಲ್ಲಿ; ನಡೆದಿರಲು ಬಹುಮುಂದೆ
ಹಾರಿಸಿ ಎಲ್ಲರೂ ಧ್ವಜವ; ಭಾವಿಸಿ ತಾವೆಲ್ಲರೂ ಒಂದೆ
ಅರಿಯಲಿಲ್ಲ ನಮ್ಮನು ನಾವು . . . .
ಕಳೆಯಲಿಲ್ಲ ನಮ್ಮೊಳ ಬೇವು ||೧||
ಸಮಸ್ಯೆ ಯಾವುದೂ ಅಲ್ಲ; ಅದಕೆ ಪರಿಹಾರ ಇರುವಾಗ
ಆ ದಿಕ್ಕಿನಲಿ ನಡಿಗೆ; ನಾಳೆಯೆ ಸಮೃದ್ಧಿ ತರುವಾಗ
ಕೂರುವುದೇಕೆ ಕೈಚೆಲ್ಲಿ . . . .
ಬನ್ನಿರಿ ಹೊರಗೆ ಬಿಟ್ಟು ಚಳಿ ||೨||
ಆಕಾಶವ ದಿಟ್ಟಿಸಿದವರು; ಇಲ್ಲಿಯೆ ಕುಳಿತಿರುವಾಗ
ನೆಲವನ್ನೆಚ್ಚಿ ನಡೆದವರು; ಊರನು ಸೇರಿರುವಾಗ
ಯಾವುದು ಆಯ್ಕೆ ನಿಮಗೆ . . . .
ಯಾವುದು ಮಾದರಿ ನಮಗೆ ||೩||
*****