ಪುಂಸ್ತ್ರೀ – ೭

ಪುಂಸ್ತ್ರೀ – ೭

ಬೇಡೆನಗೆ ಹಸ್ತಿನೆಯ ಭಿಕ್ಷೆಯು

ಅನ್ಯದೇಶದ ಯುವತಿಯೊಬ್ಬಳು ವೃದ್ಧ ಬ್ರಾಹ್ಮಣನೊಬ್ಬನೊಡನೆ ತನ್ನ ದರ್ಶನಾಕಾಂಕ್ಷಿಯಾಗಿ ಬಂದಿರುವಳೆನ್ನುವುದನ್ನು ಕಾವಲು ಭಟ ಹೇಳಿದಾಗ ಸಾಲ್ವಭೂಪತಿಗೆ ಪರಮಾಶ್ಚರ್ಯವಾಯಿತು. ಮಗಳ ಮದುವೆಗೆ ಧನಕನಕ ಬೇಡಲೆಂದು ಬರುವ ಸೌಭದ ಕನ್ಯಾಪಿತೃಗಳು ಮಗಳಂದಿರೊಂದಿಗೆ ಅವನ ಭೇಟಿಗಾಗಿ ಕಾದು ನಿಲ್ಲುತ್ತಿದ್ದರು. ಅದಕ್ಕೆಂದೇ ಕುಜವಾರ ಎರಡು ಗಂಟೆಗಳನ್ನವನು ಮೀಸಲಾಗಿಟ್ಟಿದ್ದ. ಇಂದು ಕುಜವಾರವಲ್ಲ. ಬಂದಿರುವವರು ಪರದೇಶೀಯರು. ಯಾರಿರಬಹುದು ಎಂದು ಒಂದು ಕ್ಷಣ ಚಿಂತಿಸಿದ. ಯಾರೂ ಆಗಿರಲಿ, ಬಂದವರನ್ನು ಸುಮ್ಮನೆ ಕಾಯಿಸುವುದು ತಪ್ಪೆಂದು ತಕ್ಷಣ ಒಳ ಬರಹೇಳಿದ.

ಪುರೋಹಿತ ದೇವೀಚರಣದಾಸನೊಡನಿದ್ದ ಅಂಬೆಯನ್ನು ನೋಡಿ ಅವನ ಮುಖ ಕಂದಿತು. ಕಾಶೀರಾಜ್ಯದ ಉಪವನದ ಆ ವಿಶಾಲ ಸರೋವರದಲ್ಲಿ ಅವಳನ್ನು ಅತ್ಯಂತ ವಿಸ್ಮಯಕರ ರೀತಿಯಲ್ಲಿ ತಾನು ಭೇಟಿಯಾದಾಗಿನ ರಸಮಯ ಸನ್ನಿವೇಶ ಮತ್ತು ಮಾತುಕತೆಗಳು ನೆನಪಾದವು. ಅವಳಿಗೆ ಮನಸ್ಸಿದ್ದರೂ ಅವಳು ಅವನೊಡನೆ ಅಲ್ಲಿಂದ ಹೊರಟು ಬಂದಿರಲಿಲ್ಲ. ಮರುದಿನ ಸ್ವಯಂವರ ಮಂಟಪದಲ್ಲಿ ನೆರೆದಿದ್ದ ವಿವಾಹಾಕಾಂಕ್ಷಿ ರಾಜಮಹಾರಾಜರುಗಳನ್ನು ಅವನು ಗೆದ್ದು ಅಂಬೆಯ ಕೈಯಲ್ಲಿದ್ದ ಸ್ವಯಂವರದ ಮಾಲೆ ತನ್ನ ಕುತ್ತಿಗೆಗೆ ಬೀಳುವ ದಿವ್ಯಕ್ಷಣಕ್ಕಾಗಿ ಕಾದಿದ್ದ. ತನ್ನ ಇಷ್ಟಾರ್ಥ ಈಡೇರುವ ಹಂತದಲ್ಲಿ ಆ ಭೀಷ್ಮ ಗೂಳಿಯಂತೆ ಸ್ವಯಂವರ ಮಂಟಪಕ್ಕೆ ನುಗ್ಗಿ ತನ್ನ ಕನಸನ್ನು ನುಚ್ಚುನೂರು ಮಾಡಿದ್ದು ನೆನಪಾಗಿ ಅವನ ಮನದಲ್ಲಿ ವಿಷಾದ ಆವರಿಸಿ ಕೊಂಡಿತು. ಆವರೆಗೆ ಅಜೇಯನಾಗಿದ್ದವನನ್ನು ಭೀಷ್ಮ ಅವನಿಗೆ ಗೊತ್ತಿರದ ಕೌಶಲದಿಂದ ಸೋಲಿಸಿದ್ದ. ತಾನು ಸೋಲಿಸಿದ್ದ ರಾಜ ಮಹಾರಾಜರುಗಳ ಸಮ್ಮುಖದಲ್ಲಿ ಭೀಷ್ಮನಿಂದ ಭಂಗಿತನಾದಾಗ, ದಸ್ಯುವೆಂಬ ಕಾರಣಕ್ಕೆ ತನ್ನನ್ನು ಹೀಯಾಳಿಸುತ್ತಿದ್ದ ಆರ್ಯಾವರ್ತದ ಜಾತ್ಯಂಧ ಕ್ಷತ್ರಿಯರು ಒಳಗೊಳಗೇ ಸಂತೋಷಪಟ್ಟಿರುತ್ತಾರೆಂಬುದು ಅವನಿಗೆ ದೃಢವಾಗಿ ಗೊತ್ತಿತ್ತು. ಮೊದಲ ಬಾರಿಗೆ ಅವನ ಧಮನಿಗಳಲ್ಲಿ ಪ್ರೀತಿಯ ನವಿರು ನೆತ್ತರು ಸಂಚರಿಸುವಂತೆ ಮಾಡಿದ್ದ, ಚಿಂತನೆ, ರೂಪ ಮತ್ತು ಧೈರ್ಯಕ್ಕಾಗಿ ಆರ್ಯಾವರ್ತದ ಸ್ತ್ರೀರತ್ನವೆಂದು ಕರೆಯಬಹುದಾಗಿದ್ದ ಅಂಬೆ ಶಾಶ್ವತವಾಗಿ ಅವನ ಕೈತಪ್ಪಿ ಹೋಗಿದ್ದಳು. ಯಾವ ಅಂಬೆಯನ್ನು ತಾನು ಯಾವಜ್ಜೀವ ಪರ್ಯಂತ ಕಾಣಲಾರೆನೆಂದು ಅವನು ಅಂದುಕೊಂಡಿದ್ದನೋ ಅದೇ ಅಂಬೆ ಅವನೆದುರು ನಿಂತಿದ್ದಾಳೆ. ಮುಖದಲ್ಲಿ ದಣಿವಿದ್ದರೂ ಕಣ್ಣುಗಳಲ್ಲಿ ಅದೇ ಮಿಂಚು ಉಳಿದುಕೊಂಡಿದೆ.

ಬಂದವರು, ಅವನ ಆಜ್ಞೆಯಂತೆ, ಆಸನಗಳಲ್ಲಿ ಕುಳಿತರು. ತಂಪು ಪಾನೀಯ ಕುಡಿದು ದಣಿವಾರಿಸಿಕೊಂಡರು. ಸಾಲ್ವಭೂಪತಿ ವೃದ್ಧಬ್ರಾಹ್ಮಣನತ್ತ ಪ್ರಶ್ನಾರ್ಥಕ ನೋಟ ಹರಿಸಿದ. ಪುರೋಹಿತ ದೇವೀ ಚರಣದಾಸ ತನ್ನ ಪರಿಚಯ ಹೇಳಿಕೊಂಡ: “ನಾನು ಬ್ರಹ್ಮಶ್ರೀ ಪುರೋಹಿತ ದೇವೀ ಚರಣದಾಸ ಚತುರ್ವೇದಿ. ಹಸ್ತಿನಾವತಿಯ ಆಸ್ಥಾನ ವಿದ್ವಾಂಸ. ಆಚಾರ್ಯ ಭೀಷ್ಮರ ಆಣತಿಯಂತೆ ಸೌಭಕ್ಕೆ ಬಂದಿದ್ದೇನೆ. ಕಾಶೀರಾಜ ಪ್ರತಾಪಸೇನನ ಹಿರಿಗುವರಿಯಾದ ಈ ಅಂಬೆಯನ್ನು ನಿನ್ನ ವಶಕ್ಕೊಪ್ಪಿಸಲು ನನಗೆ ಆಣತಿಯಾಗಿದೆ. ಇವಳನ್ನು ನಿನ್ನ ಪಟ್ಟಮಹಿಷಿಯನ್ನಾಗಿ ಮಾಡಿ ಕೀರ್ತಿವಂತನಾಗು. ಹಿರಿಯನಾಗಿ ಆಶೀರ್ವಾದ ರೂಪದಲ್ಲಿ ಈ ಮಾತು ಹೇಳಿದ್ದೇನೆ. ಇನ್ನು ನನ್ನ ಮರು ಪಯಣಕ್ಕೆ ನೀನು ಅನುಮತಿ ಕೊಡಬೇಕು.”

ಪುರೋಹಿತ ದೇವೀ ಚರಣದಾಸನ ಅವಸರ ನೋಡಿ ಸಾಲ್ವಭೂಪತಿಗೆ ನಗು ಬಂತು: “ಪುರೋಹಿತರೇ, ಸೌಭದಿಂದ ಹಸ್ತಿನಾವತಿಗೆ ಹೋಗುವುದೆಂದರೆ ಅದೇನು ಮಕ್ಕಳಾಟವೆ? ಪ್ರಾಯಃ ಹಸ್ತಿನಾವತಿಯ ರಥವನ್ನು ನೀವು ಗಡಿಪ್ರದೇಶದಲ್ಲಿಯೇ ನಿಲ್ಲಿಸಿರಬೇಕು. ಅಲ್ಲಿಂದ ಇಲ್ಲಿಯವರೆಗೆ ನಡೆದೇ ನಿಮಗೆ ಆಯಾಸವಾಗಿರಬಹುದು. ನೀವು ಹಿರಿಯರು, ಜ್ಞಾನಶೀಲರು. ಮತ್ತೆ ಅದೇ ಹಾದಿಯನ್ನು ತಕ್ಷಣ ಕ್ರಮಿಸುವಾಗ ನಿಮ್ಮ ದೇಹಕ್ಕೆಷ್ಟು ದಣಿವಾದೀತು? ಸಾಲ್ವ ಭೂಪತಿಯನ್ನು ಸಂಸ್ಕೃತಿಹೀನನೆಂದು ಭಾವಿಸಬೇಡಿ. ಇಲ್ಲಿಯವರೆಗೆ ನಾನಾಗಿ ಹಸ್ತಿನಾವತಿಯ ವಿರೋಧ ಕಟ್ಟಿಕೊಂಡವನಲ್ಲ. ಮೊನ್ನೆ ಸ್ವಯಂವರ ಕಣದಲ್ಲಿ ಭೀಷ್ಮನೊಡನೆ ಕಾದಾಡಿದ್ದೇನೆ. ಅದು ಪಣ. ಅದರಲ್ಲಿ ಸೋಲು ಗೆಲವು ಇದ್ದದ್ದೆ. ಸೋಲನ್ನು ಶತ್ರುತ್ವವಾಗಿ ಪರಿವರ್ತಿಸುವುದು ಬರ್ಬರತೆಯಾಗುತ್ತದೆ. ನೀವೀಗ ಸೌಭದೇಶದ ಗೌರವಾನ್ವಿತ ಅತಿಥಿಗಳು. ಇಂದು ನಮ್ಮ ಅತಿಥಿ ಗೃಹದಲ್ಲಿ ಉಳಕೊಂಡು, ನಮ್ಮ ಆದರಾತಿಥ್ಯ ಸ್ವೀಕರಿಸಿ ದಣಿವಾರಿಸಿಕೊಂಡು ನಾಳೆ ಹಿಂದಕ್ಕೆ ಹೋಗುವಿರಂತೆ. ಹಸ್ತಿನಾವತಿಯ ಮಹಾವಿದ್ವಾಂಸ ಚತುರ್ವೇದಿಯೊಬ್ಬರು ದಸ್ಯುರಾಜ ಸಾಲ್ವಭೂಪತಿಯಲ್ಲಿಗೆ ಬರುವುದೆಂದರೆ ಅದು ನಮ್ಮ ಪರಮಭಾಗ್ಯ.”

ಪುರೋಹಿತ ದೇವೀ ಚರಣದಾಸ ಉಬ್ಬಿಹೋದ. ಮುಖವರಳಿಸಿಕೊಂಡು ಅವನೆಂದ: “ಮಹಾರಾಜಾ ನಿನ್ನ ಮನಸ್ಸು ಒಳ್ಳೆಯದು. ಅತಿಥಿಗಳನ್ನು ಗೌರವಿಸುವುದು ಸಂಸ್ಕೃತಿಸಂಪನ್ನರ ಲಕ್ಷಣ. ನಿನಗೆ ಒಳಿತಾಗಲಿ. ದೀರ್ಘಾಯುಷ್ಯಮಾನ್‌ ಭವ.”

ಸಾಲ್ವಭೂಪತಿ ಮಾತು ಮುಂದುವರಿಸಿದ: “ಆದರೆ ಚತುರ್ವೇದಿಗಳೇ, ನಿಮ್ಮ ಜತೆಯಲ್ಲೊಬ್ಬಳು ಕನ್ಯಾಮಣಿ ಇದ್ದಾಳೆ. ಇವಳು ಸ್ವಯಂವರದ ಪಣದ ಪ್ರಕಾರ ಹಸ್ತಿನಾವತಿಯ ಅಂತಃಪುರದಲ್ಲಿರಬೇಕಾದವಳು. ಕುರು ಸಮಾರ್‍ಆಟನ ಪಟ್ಟ ಮಹಿಷಿಯಾಗಬೇಕಿರುವ ಹೆಣ್ಣೊಬ್ಬಳನ್ನು ದಸ್ಯು ರಾಜ ಸಾಲ್ವಭೂಪತಿಗೆ ಕಾಣಿಕೆ ನೀಡಬೇಕಾದ ದುರವಸ್ಥೆ ಹಸ್ತಿನಾವತಿಗೇಕೆ ಬಂತು? ಏನು ಇದರ ಹಿಂದಿರುವ ಹೂಟ?”

ಪುರೋಹಿತ ದೇವಿಚರಣದಾಸ ಇಳಿದುಹೋದ. “ಸಾಲ್ವ ಭೂಪತೀ, ಎಂತಹ ಮಾತಾಡುತ್ತಿರುವೆ? ನಾನು ಆಚಾರ್ಯ ಭೀಷ್ಮರ ಆಣತಿಯಂತೆ ಇವಳನ್ನು ನಿನ್ನಲ್ಲಿಗೆ ಕರೆ ತಂದವನು. ಇದರ ಹಿಂದೆ ಇಲ್ಲದ ರಾಜಕಾರಣವನ್ನು ಹುಡುಕಬೇಡ. ಭೀಷ್ಮಾಚಾರ್ಯರು ಕಾಶಿಯಿಂದ ಮೂವರು ಅರಗುವರಿಯನ್ನು ಗೆದ್ದು ತಂದದ್ದು ಸಮ್ರಾಟ ವಿಚಿತ್ರವೀರ್ಯನಿಗಾಗಿ. ಅಂಬಿಕೆ ಮತ್ತು ಅಂಬಾಲಿಕೆ ಸಮ್ರಾಟಾನನ್ನು ವರಿಸಿದ್ದಾರೆ. ಈ ಅಂಬೆಯ ಅಂತರಂಗದಲ್ಲಿ ನೀನೇ ತುಂಬಿ ಕೊಂಡಿದ್ದೀಯಂತೆ. ದೇಹವನ್ನು ಒಬ್ಬರಿಗೆ, ಮನಸ್ಸನ್ನು ಇನ್ನೊಬ್ಬರಿಗೆ ನೀಡುವುದು ಪಾಪವಾಗುತ್ತದೆಂದು ಭಾವಿಸಿದ್ದಾಳೆ. ನಿನ್ನ ಬಗ್ಗೆ ಇವಳಿಗಿರುವ ಅಪಾರ ಪ್ರೀತಿಯನ್ನು ಅರ್ಥಮಾಡಿಕೊಂಡು ಅತ್ಯಂತ ಗೌರವದಿಂದ ಇವಳನ್ನು ಇಲ್ಲಿಗೆ ಆಚಾರ್ಯರು ಕಳಿಸಿಕೊಟ್ಟಿದ್ದಾರೆ. ಸಾಲ್ವಭೂಪತೀ, ಆರ್ಯಾವರ್ತದ ಪ್ರಕಾಂಡ ವೇದವಿದ್ವಾಂಸ ನಾನು. ಈ ಪ್ರಾಯದಲ್ಲಿ ನನ್ನೊಡನೆ ಅಂಬೆಯನ್ನು ಸೌಭದೇಶಕ್ಕೆ ಆಚಾರ್ಯರು ಕಳುಹಿಸಿಕೊಟ್ಟಿದ್ದಾರೆಂದರೆ ಅದು ಅವರ ಒಳ್ಳೆಯತನಕ್ಕೆ ದೃಷ್ಟಾಂತ. ಹಸ್ತಿನಾವತಿಗೆ ಯಾವ ದುರವಸ್ಥೆಯೂ ಬಂದಿಲ್ಲ. ಅದು ಹೆಣ್ಣುಗಳನ್ನು ಗೌರವಿಸುತ್ತದೆ ಮತ್ತು ಭಾವನೆಗಳಿಗೆ ಬೆಲೆಕೊಡುತ್ತದೆಂದು ತಿಳಿದುಕೋ. ಇಲ್ಲದ್ದನ್ನು ಯೋಚಿಸಿ ಮನಸ್ಸುಗಳನ್ನು ಮುರಿಯಬೇಡ”

ಸಾಲ್ವಭೂಪತಿ ತಲೆದೂಗಿದ. “ಚತುರ್ವೇದಿಗಳೇ, ಹಸ್ತಿನಾವತಿಯ ಭಾವನಿಷ್ಟೆಯನ್ನು ಮತ್ತು ನಿಮ್ಮ ರಾಜನಿಷ್ಟೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಆದರೆ ನೀವು ಕರೆ ತಂದಿದ್ದೀರಲ್ಲಾ ಈ ಅಂಬೆಯನ್ನು, ಇವಳಿಗೆ ಪ್ರೇಮನಿಷ್ಟೆ ಎಂಬುದೊಂದಿರುತ್ತಿದ್ದರೆ ಅಷ್ಟು ದೂರದ ಹಸ್ತಿನಾವತಿಯಿಂದ ಈ ಇಳಿಪ್ರಾಯದಲ್ಲಿ ಇಷ್ಟು ಕಷ್ಟಪಟ್ಟು ಸೌಭದೇಶಕ್ಕೆ ನೀವು ಬರಬೇಕಾದ ಪ್ರಮೇಯವೇ ಉದ್ಧವಿಸುತ್ತಿರಲಿಲ್ಲ.”

ಪುರೋಹಿತ ದೇವೀಚರಣದಾಸ ಮತ್ತು ಸಾಲ್ವಭೂಪತಿಯ ನಡುವಿನ ಸಂಭಾಷಣೆ ಯಾವ ಹಂತಕ್ಕೆ ಮುಟ್ಟುತ್ತದೆ ಮತ್ತು ಯಾವಾಗ ತನಗೆ ಮಾತಾಡಲು ಅವಕಾಶ ಸಿಗುತ್ತದೆಂದು ಕಾಯುತ್ತಿದ್ದ ಅಂಬೆ ಈಗ ಮಾತಾಡಿದಳು. “ಸಾಲ್ವಭೂಪತಿ, ನಿನ್ನ ಮಾತಿಗೆ ಉತ್ತರಿಸಬೇಕಾದವಳು ನಾನು. ಆದರೆ ಇದು ತುಂಬಿದ ಸಭೆಯೆದುರು ಚರ್ಚಿಸುವ ವಿಷಯವಲ್ಲ. ಈ ಪುರೋಹಿತರ ಸಮ್ಮುಖದಲ್ಲಿ ನಮ್ಮ ಮಾತುಕತೆ ನಡೆಯಲಿ. ದಯವಿಟ್ಟು ನಿನ್ನ ರಾಜ ಸಭೆಯನ್ನು ಮುಂದೂಡು.”

ತಕ್ಷಣ ಸಾಲ್ವನೆಂದ. “ರಾಜಕುಮಾರೀ, ಈ ಸಾಲ್ವಭೂಪತಿಯ ಜೀವನ ಒಂದು ತೆರೆದಿಟ್ಟ ಪುಸ್ತಕ. ಅಲ್ಲದಿರುತ್ತಿರುತ್ತಿದ್ದರೆ ಈ ಆರ್ಯಾವರ್ತದಲ್ಲಿ ಒಬ್ಬ ದಸ್ಯುವಿಗೆ ಇಂತಹ ರಾಜ್ಯವೊಂದನ್ನು ಕಟ್ಟಲು ಸಾಧ್ಯವಿರುತ್ತಿರಲಿಲ್ಲ. ಸ್ವಯಂವರ ಕಣದ ಯಾವುದೇ ಘಟನೆ ರಹಸ್ಯವಾಗಿ ಉಳಿದಿಲ್ಲ. ನಾವು ಮೂವರೇ ಮಾತಾಡಿಕೊಂಡರೆ ನನ್ನ ರಾಜ್ಯಕ್ಕೆ ಸತ್ಯ ತಿಳಿಯುವುದಿಲ್ಲ. ಗುಮಾನಿಗಳಿಗೆ ರೆಕ್ಕೆ ಪುಕ್ಕ ಹುಟ್ಟುವುದು ಬೇಡ. ನಿನಗೆ ಏನನ್ನು ಹೇಳಲಿಕ್ಕಿದೆಯೋ ಅದನ್ನು ಹೇಳಿ ಬೇಗ ಇಲ್ಲಿಂದ ತೆರಳು.”

ಅಂಬೆ ತಲ್ಲಣಗೊಂಡಳು. ಏನನ್ನು ಸೂಚಿಸುತ್ತಿದ್ದಾನೆ ಇವ? ಇವನ ಆಸ್ಥಾನಕ್ಕೆ ಕುಂದು ಕೊರತೆಗಳನ್ನು ನಿವೇದಿಸಿ ಪರಿಹಾರ ಪಡಕೊಳ್ಳಲು ಬಂದವರಲ್ಲಿ ಒಬ್ಬಳೆಂದು ಪರಿಗಣಿಸುತ್ತಿದ್ದಾನಾ? ಉಪವನದ ಸರೋವರದಲ್ಲಿ ಹೃದಯದಲ್ಲಿ ಪ್ರೇಮ ತರಂಗಗಳನ್ನು ಎಬ್ಬಿಸಿದವನು ಈಗ ಸುಂಟರಗಾಳಿಯಾಗುತ್ತಿದ್ದಾನೆ. ಸ್ವಯಂವರ ಮಂಟಪದಲ್ಲಿ ಆಚಾರ್ಯ ಭೀಷ್ಮರಿಂದಾದ ಮುಖಭಂಗಕ್ಕೆ ಯಾರನ್ನು ಬಲಿ ತೆಗೆದುಕೊಳ್ಳುತ್ತಿದ್ದಾನೆ ಇವ?

ಆರ್‍ದ್ರ ಸ್ವರದಲ್ಲಿ ಅಂಬೆಯೆಂದಳು. “ಸಾಲ್ವಭೂಪತೀ, ನಿನ್ನ ನೋವು ನನಗರ್ಥವಾಗುತ್ತದೆ. ಆದರೆ ನನ್ನ ನೋವನ್ನು ಅರ್ಥಮಾಡಿಕೊಳ್ಳಲು ನಿನ್ನಿಂದ ಸಾಧ್ಯವಾಗಿಲ್ಲ. ಈಗಿನ ವ್ಯವಸ್ಥೆಯಲ್ಲಿ ಹೆಣ್ಣೊಬ್ಬಳ ಮಿತಿಗಳ ಬಗ್ಗೆ ಸ್ವಲ್ಪವಾದರೂ ಯೋಚಿಸಿದ್ದೀಯಾ? ಸರೋವರದಲ್ಲಿ ನಿನ್ನ ಭೇಟಿಯಾದಾಗ, ನಿನ್ನ ವೀರವಾಕ್ಕುಗಳನ್ನು ಕೇಳಿದಾಗ ಪರಿಣಯ ಮಂಟಪದಲ್ಲಿ ನೀನು ಎಲ್ಲರನ್ನೂ ಗೆಲ್ಲಬಲ್ಲೆಯೆಂದುಕೊಂಡಿದ್ದೆ. ನೀನೇ ಗೆದ್ದಾಗ ಹೆಮ್ಮೆಯಿಂದ ನಿನ್ನ ರಥವೇರ ಹೊರಟವಳು ನಾನು. ಆಗ ಆಚಾರ್ಯ ಭೀಷ್ಮರ ಪ್ರವೇಶವಾಗದಿರುತ್ತಿದ್ದರೆ ನಿನ್ನ ಪಟ್ಟ ಮಹಿಷಿಯಾಗಿ ಈ ಸಿಂಹಾಸನದ ಎಡಪಾಶ್ರ್ವದಲ್ಲಿ ವಿರಾಜಮಾನಗಳಾಗಿಬಿಡುತ್ತಿದೆ. ಈಗ ನಿನ್ನೆದುರು ನಿಂತು ಕಳೆದು ಹೋದುದನ್ನು ನೆನಪಿಸಬೇಕಾದ ದಯನೀಯತೆ ನನ್ನದು. ಅಂದು ಪರಿಣಯ ಮಂಟಪದಲ್ಲಿ ಎಲ್ಲರೂ ಮಾತು ಕಳಕೊಂಡವರಂತಿದ್ದಾಗ ಒಬ್ಬಳು ಹೆಣ್ಣು ಮಗಳು ಏನನ್ನು ಮಾಡಲು ಸಾಧ್ಯವಿತ್ತು ಹೇಳು? ಕಾಶಿಯಿಂದ ಹಸ್ತಿನಾವತಿಗೆ ಹೋದ ಮೇಲೆ ನಮ್ಮಿಬ್ಬರ ಪ್ರೇಮದ ಬಗ್ಗೆ ತಿಳಿಸಲು ಅವಕಾಶ ಸಿಕ್ಕಿತು. ನಿನ್ನ ಮೇಲಿನ ಗೌರವದಿಂದ, ಮಾನವ ಸಹಜ ಭಾವನೆಗೆ ಬೆಲೆಗೊಟ್ಟು ಆಚಾರ್ಯರು ನನ್ನನ್ನು ನಿನ್ನಲ್ಲಿಗೆ ಕಳುಹಿಸಿದ್ದಾರೆ. ಪ್ರೀತಿಸಿ ನಂಬಿ ಬಂದವಳನ್ನು ಕೈ ಬಿಡುವುದು ಧರ್ಮವಾಗುವುದಿಲ್ಲ.”

ಕಾಶೀರಾಜ್ಯದ ಉಪವನದ ಶುಭ್ರಸ್ಫಟಿಕ ಸಲಿಲದ ವಿಶಾಲ ಸರೋವರ ಅವನ ಕಣ್ಣ ಮುಂದೆ ಪ್ರತ್ಯಕ್ಷವಾದಂತಾಯಿತು. ಸರೋವರದಲ್ಲಿ ಮೊದಲ ಬಾರಿಗೆ ಇವಳನ್ನು ಕಂಡಾಗ ಈ ಮೋಹಕ ರೂಪಿಗೆ ಸಂಪೂರ್ಣವಾಗಿ ಮನಸೋತಿದ್ದ. ಸ್ವರ್ಣ ಪುತ್ಥಳಿ ಜೀವತಳದಂತೆ ಇವಳ ಚಲನೆ. ಮೃದು ಮಧುರತೆಯೊಂದಿಗೆ ಕ್ಷಾತೃತ್ವದ ಕಠಿಣತೆಯನ್ನು ಮೈಗೂಡಿಸಿಕೊಂಡವಳು. ಹೆಣ್ಣುಗಳು ಇವಳಂತಿರುವುದು ಅಪೂರ್ವ. ಯಾವನೋ ಒಬ್ಬ ಅರಸನಿಗೆ ಹಂಸತೂಲಿಕಾತಲ್ಪದಲ್ಲಿ ಸಂಗಾತಿಯಾಗಿ, ಅವನಿಷ್ಟದಂತೆ ಒಡ್ಡಿಕೊಂಡು, ಅವನ ವೀರ್ಯದಿಂದ ಹೆತ್ತು ಹಾಕುವುದನ್ನು ಮಹತ್ಸಾಧನೆಯೆಂದು ತಿಳಿದುಕೊಂಡವಳಲ್ಲ. ತನ್ನ ಪತಿಯ ಪ್ರೇಮ ಅಖಂಡವಾಗಿ ತನ್ನದೊಬ್ಬಳದೇ ಆಗಿರಬೇಕೆಂದು ಬಯಸುವವಳು. ನಾನು ಕೂಡಾ ಏಕಪತ್ನೀ ವ್ರತದ ಮೌಲ್ಯಕ್ಕೆ ಬದ್ಧನಾದವ. ಇವಳು ನನ್ನ ರಾಣಿಯಾದರೆ ಸೌಭದೇಶದ ಸಮಸ್ತ ನಾರೀಸಂಕುಲದ ಹಣೆಯ ಬರಹ ಬದಲಾಗಿಬಿಡುತ್ತಿತ್ತು. ಇಲ್ಲಿನ ಎಲ್ಲಾ ಸ್ತ್ರೀಯರನ್ನು ಶಸ್ತ್ರ ವಿದ್ಯಾಪಾರಂಗತರನ್ನಾಗಿ ಮಾಡಿ, ಬಲಿಷ್ಠವಾದ ಪಡೆಯನ್ನು ನಿರ್ಮಿಸಿ ರಾಜ್ಯವನ್ನು ವಿಸ್ತರಿಸಬಹುದಿತ್ತು. ತಾವು ಆರ್ಯರೆಂದುಕೊಂಡು ದಸ್ಯುಗಳ, ಶೂದ್ರರ, ಸ್ತ್ರೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕ್ಷತ್ರಿಯರಿಗೊಂದು ಪಾಠ ಕಲಿಸಬಹುದಿತ್ತು. ತನ್ನ ಮಹತ್ವಾಕಾಂಕ್ಷೆಗಿವಳು ಒತ್ತಾಸೆಯಾಗಿ ಅದ್ಬುತಗಳನ್ನು ಸಾಧಿಸಿ, ಹುಟ್ಟಿನ ಕಾರಣವಾಗಿ ಜ್ಯೇಷ್ಠತೆಯ ಹಮ್ಮನ್ನು ಬೆಳೆಸಿಕೊಂಡ ಸಾಧನಾ ಶೂನ್ಯರಲ್ಲಿ ವಿವೇಕ ಮೂಡಿಸಲು ಇದ್ದ ಸಾಧ್ಯತೆಯೊಂದನ್ನು ಆ ಉದ್ದಗಡ್ಡದ ಗೊಡ್ಡು ಭೀಷ್ಮ ಹಾಳುಮಾಡಿ ಬಿಟ್ಟದ್ದನ್ನು ನೆನಪಿಸಿಕೊಂಡು ನಿಟ್ಟುಸಿರು ಬಿಟ್ಟು ಸಾಲ್ವಭೂಪತಿ ಹೇಳಿದ.

“ರಾಜಕುಮಾರೀ, ಸ್ವಯಂವರ ಮಂಟಪದಲ್ಲಿ ನೀವು ಮೂವರಿಗೆ ಏರಿರಿ ಎನ್ನಯ ರಥವ ಎಂದು ಭೀಷ್ಮ ಆಜ್ಞಾಪಿಸುವಾಗ ಅವನೊಡನೆ ಕದನಕ್ಕಿಳಿದು ಸೋತುಹೋದೆ. ಆಗ ನಿನ್ನೆಡೆ ಗೊಂದು ಹತಾಶ ನೋಟ ಹರಿಸಿದ್ದು ನಿನಗೆ ನೆನಪಿರಬಹುದು. ನೀನವನ ರಥ ಏರಲಾರೆ ಎಂಬುದು ಆಗಲೂ ನನ್ನ ನಿರೀಕ್ಷೆಯಾಗಿತ್ತು. ನೀನು ಅದನ್ನು ಹುಸಿಯಾಗಿಸಿದೆ. ನಿಜ ಹೇಳ ಬೇಕೆಂದರೆ ಭೀಷ್ಮನಲ್ಲಿ ಸೋತುದಕ್ಕೆ ಈಗಲೂ ನನಗೆ ಬೇಸರವಿಲ್ಲ ಅವನಿಗೆ ಪರಶುರಾಮರು ಚಾಪವಿದ್ಯೆ ಕಲಿಸಿದವರು. ಅಂತಹ ಗುರುಗಳಿಂದ ಧನುರ್ವೇದ ಕಲಿಯುವ ಯೋಗ ನನಗಿರಲಿಲ್ಲ. ಮುಂದೊಂದು ದಿನ ನನಗೆ ಗೊತ್ತಿಲ್ಲದ ಚಾಪವಿದ್ಯೆಯ ಮಗ್ಗಲುಗಳನ್ನೆಲ್ಲಾ ಕಲಿತು ಭೀಷ್ಮನ ಅಹಂಕಾರವನ್ನು ಮುರಿಯುತ್ತೇನೆ. ಹಿಂದಿನ ದಿನ ಸರೋವರದಲ್ಲಿ ನಿನ್ನನ್ನು ಭೇಟಿಯಾದಾಗಿನ ಮಾತುಕತೆಗಳು ನೆನಪಾಗಿ ನಿನ್ನೆಡೆಗೆ ನೋಟ ಹಾಯಿಸಿದವನು ನಾನು. ನನ್ನ ಕಣ್ಣೆದುರೇ ನೀನು ಅವನ ರಥ ಹತ್ತಿದೆ. ನಾನು ಬದುಕಿದ್ದೂ ಸತ್ತಂತಾದೆ. ಅಂಥದ್ದೊಂದು ಅಪಮಾನ ನನ್ನ ಜೀವನದಲ್ಲಿ ಅದುವರೆಗೆ ಆಗಿರರಲಿಲ್ಲ. ಏನನ್ನು ಬೇಕಾದರೂ ನಾವು ತಾಳಿಕೊಳ್ಳುಬಹುದು. ನಮ್ಮ ಅತ್ಯಂತ ಪ್ರೀತಿಪಾತ್ರರು ಮಾಡುವ ಅಪಮಾನವಿದೆಯಲ್ಲಾ ಅದು ಆತ್ಮವಿಶ್ವಾಸವನ್ನು ಉಡುಗಿಸಿ ಬಿಡುತ್ತದೆ. ಆತ್ಮವಿಶ್ವಾಸವಿಲ್ಲದವ ಬದುಕಿದ್ದೂ ಸತ್ತಂತೆಯೇ.”

ಅಂಬೆಯ ಕಣ್ಣ ಮುಂದೆ ಸರೋವರದಲ್ಲಿ ನಡೆದ ಘಟನೆಗಳು ಹಾದುಹೋದವು. ಅಲ್ಲಿ ಆ ಏಕಾಂತದಲ್ಲಿ ಅವಳು ಅರೆನಗ್ನ ಸ್ಥತಿಯಲ್ಲಿದ್ದಾಗಲೂ ಅವನು ಮನೋನಿಗ್ರಹ ಕಳಕೊಂಡಿರಲಿಲ್ಲ. ಅಲ್ಲಿಂದಲೇ ಅವಳನ್ನು ಸೌಭದೇಶಕ್ಕೆ ಕರಕೊಂಡು ಬರಲು ಅವನು ಸಿದ್ಧನಾಗಿದ್ದ. ಎಲ್ಲವನ್ನೂ ಚಾಕಚಕ್ಯದಿಂದ ನಿಭಾಯಿಸಿ, ಯಾರಿಗೂ ತೊಂದರೆಯಾಗದಂತೆ ಅವನ ಕೈ ಹಿಡಿಯಲು ಅವಳು ಮಾಡಿದ ಪ್ರಯತ್ನವನ್ನು ಅವನು ಅರ್ಥಮಾಡಿ ಕೊಳ್ಳುವಲ್ಲಿ ವಿಫಲನಾಗಿದ್ದ. ಅವನ ಏಕಪಕ್ಷೀಯ ತೀರ್ಮಾನದಿಂದ ಮನನೊಂದ ಅಂಬೆಯೆಂದಳು.

“ಸಾಲ್ವಭೂಪತೀ, ನಿನ್ನನ್ನು ಈಗಲೂ ಅಪಾರವಾಗಿ ಪ್ರೀತಿಸುತ್ತಿರುವವ ನಾನು. ನಿನ್ನನ್ನು ನಾನು ಅಪಮಾನಿಸುವುದೆ? ನಾನು ಭೀಷ್ಮರ ರಥವೇರಬೇಕಾಗಿ ಬಂದ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯ ನಿನಗಿದೆಯೆಂದು ಅಂದುಕೊಂಡಿದ್ದೆ. ಆಚಾರ್ಯರ ಬ್ರಹ್ಮಚರ್ಯ ದೀಕ್ಷ ಆರ್ಯಾವರ್ತದ ಮನೆ ಮಾತಾಗಿತ್ತು. ಅವರು ನಮ್ಮಪ್ಪನಿಗಿಂತಲೂ ಹಿರಿಯರು. ಅವರ ರೂಪಕ್ಕೋ, ಶೌರ್ಯಕ್ಕೋ ನಾನು ಮನಸೋಲುವ ಪ್ರಶ್ನೆಯೇ ಇರಲಿಲ್ಲ. ಅಂತಸ್ಸಾಕ್ಷಿಯಾಗಿ ಹೇಳುತ್ತಿದ್ದೇನೆ ನನ್ನ ಮೊದಲ ಮತ್ತು ಕೊನೆಯ ಪ್ರೇಮಿ ನೀನೇ. ನಿನ್ನನ್ನು ಗೆದ್ದ ಭೀಷ್ಮರು ಏರಿರಿ ಎನ್ನಯ ರಥಕೆ ಎಂದು ಆರ್ಭಟಸುವಾಗ ನಾನು ನಿನ್ನೊಡನೆ ಹೊರಟು ಬರಲು ಹೇಗೆ ಸಾಧ್ಯವಿತ್ತು? ಹಾಗೇನಾದರೂ ಹೊರಟು ಬಿಡುತ್ತಿದ್ದರೆ ಅದನ್ನವರು ಅಪಮಾನವೆಂದು ತಿಳಿದು ಕೊಳ್ಳುತ್ತಿದ್ದರು. ಸ್ವಯಂವರದ ಆಮಂತ್ರಣ ಸಿಗದ್ದಕ್ಕೆ ಕೆರಳಿ ಕೆಂಡಾಮಂಡಲವಾದವರು ಅವರು. ಅಪ್ಪ ಹಾಗೆ ಅಪಮಾನ ಮಾಡಿದರೆ ಮಗಳು ಹೀಗೆ ಅಪಮಾನ ಮಾಡುತ್ತಿದ್ದಾಳೆಂದು ಕೋಪ ಇಮ್ಮಡಿಸಿ ರಕ್ತಪಾತಕ್ಕೆ ಮುಂದಾಗಿಬಿಡುತ್ತಿದ್ದರು. ನಿನಗೇನಾದರೂ ಸಂಭವಿಸಿ ನಿನ್ನನ್ನು ನಾನು ಶಾಶ್ವತವಾಗಿ ಕಳಕೊಂಡು ಬಿಡುತ್ತೇನೆಂಬ ಭೀತಿ ನನ್ನನ್ನು ನಿನ್ನೊಡನೆ ಬಾರದಂತೆ ತಡೆಯಿತು.”

ಬಾಯೊಣಗಿ ಅಂಬೆ ಮಾತು ನಿಲ್ಲಿಸಿದಳು. ಸ್ಪಲ್ಪ ನೀರು ಕುಡಿದು ಸುಧಾರಿಸಿಕೊಂಡು ಮುಂದುವರಿಸಿದಳು: “ಶೌರ್ಯವೇ ಪಣವಾಗಿರುವ ಸ್ವಯಂವರ ಮಂಟಪದಲ್ಲಿ ಯಾವ ಕ್ಷತ್ರಿಯ ಪ್ರೇಮವನ್ನು ಒಂದು ಮೌಲ್ಯವೆಂದು ಸ್ವೀಕರಿಸುತ್ತಾನೆ? ಯೋಚನೆ ಮಾಡಿಯೇ ನಾನು ಭೀಷ್ಮನ ರಥವೇರಿದ್ದು. ಭೀಷ್ಮರು ಬ್ರಹ್ಮಚರ್ಯವನ್ನು ತ್ಯಜಿಸುವವರಲ್ಲವೆಂದು ಗೊತ್ತಿದ್ದೂ ಪಣಗೆದ್ದವನೇ ಪತಿಯಾಗಬೇಕೆಂದು ಪಟ್ಟು ಹಿಡಿದೆ. ವಿಚಿತ್ರವೀರ್ಯನಿಗಾಗಿ ಅವರು ಸ್ವಯಂವರ ಮಂಟಪಕ್ಕೆ ಬಂದದ್ದು ಅಧರ್ಮವೆಂದು ತೋರಿಸಿಕೊಟ್ಟೆ. ವಿವಾಹಾಕಾಂಕ್ಷಯಿಂದ ಬಂದ ಸಾಲ್ವಭೂಪತಿ ಧರ್ಮ ಪ್ರಕಾರವಾಗಿ ನನ್ನ ಪತಿಯಾಗುತ್ತಾನೆಂದು ವಾದಿಸಿದೆ. ನನ್ನ ನಿನ್ನ ಪ್ರೇಮವನ್ನು ಅವರಿಗೆ ಮನವರಿಕೆ ಮಾಡಿ ಅವರಾಗಿಯೇ ನನ್ನನ್ನು ನಿನ್ನಲ್ಲಿಗೆ ಕಳುಹಿಸಿಕೊಡುವಂತೆ ಮಾಡಿದೆ. ನಿನ್ನ ಮೇಲಿನ ನಿಷ್ಕಲ್ಮಶ ಪ್ರೀತಿಯಿಂದ ಉಟ್ಟ ಬಟ್ಟೆಯಲ್ಲೇ ಹಸ್ತಿನಾವತಿಯಿಂದ ಬಲುದೂರದಲ್ಲಿರುವ ನಿನ್ನ ಸೌಭಕ್ಕೆ ಬಂದು ಬಿಟ್ಟೆ. ಶೌರ್ಯದಿಂದ ನೀನು ಸಾಧಿಸಲಾಗದುದನ್ನು ನಿನಗೆ, ನಮ್ಮಪ್ಪ ಕಾಶೀರಾಜನಿಗೆ ಭೌತಿಕವಾಗಿ ಮತ್ತು ರಾಜಕೀಯವಾಗಿ ಏನೇನೂ ತೊಂದರೆಯಾಗದಂತೆ ನಿನ್ನ ಅಂಬೆ ಸಾಧಿಸಿ ತೋರಿಸಿದ್ದಾಳೆ. ಸಾಲ್ವಭೂಪತೀ, ಅಂಬೆ ತಪ್ಪು ಮಾಡಿಲ್ಲ. ನನ್ನನ್ನು ನೀನು ತಿರಸ್ಕರಿಸಬೇಡ.”

ಸಾಲ್ವಭೂಪತಿಯ ಅಂತಃಕರಣಕ್ಕೆ ಅಂಬೆಯ ಮಾತುಗಳು ನಾಟಿದವು. ಅವಳ ಬಗ್ಗೆ ಬಿರು ಮಾತುಗಳನ್ನಾಡಿದುದಕ್ಕೆ ಅವನಿಗೆ ನಾಚಿಕೆಯಾಯಿತು. ಏರಿರಿ ಎನ್ನಯ ರಥವ ಎಂದು ಭೀಷ್ಮ ಆಜ್ಞಾಪಿಸುವಾಗ ಅಲ್ಲಿದ್ದ ಯಾರಿಂದಲೂ ತಡೆಯಲು ಸಾಧ್ಯವಾಗಿರಲಿಲ್ಲ. ತಡೆಯ ಹೋದ ಅವನನ್ನು ಗೆದ್ದಾಗ ಭೀಷ್ಮನಿಗೆ ಸಹಜವಾಗಿ ಮೂವರು ರಾಜಕುಮಾರಿಯರ ಮೇಲೂ ಹಕ್ಕು ಪ್ರಾಪ್ತವಾಗಿತ್ತು. ಆ ಕ್ಷಣಕ್ಕೆ ಅಂಬೆ, ಅಂಬಿಕೆ, ಅಂಬಾಲಿಕೆಯರು ಭೀಷ್ಮನ ವಿಜಯದ ಫಲಗಳಾಗಿದ್ದರು. ಆಗ ಅಂಬೆಯೆಲ್ಲಾದರೂ ಅವನೆಡೆಗೆ ನಡೆದು ಬರುತ್ತಿದ್ದರೆ ಭೀಷ್ಮ ಸುಮ್ಮನಿರುತ್ತಿರಲಿಲ್ಲ. ಅವನನ್ನು ಕೊಂದು ಅವಳನ್ನು ಬಲಾತ್ಕಾರವಾಗಿ ತನ್ನ ರಥಕ್ಕೆ ಏರಿಸಿ ಕೊಂಡು ಹೋಗುತ್ತಿದ್ದ. ಪಣದ ಪ್ರಕಾರ ಅದು ಅಧರ್ಮವಾಗುತ್ತಿರಲಿಲ್ಲ. ಬಯಸಿ ಬಂದ ಹೆಣ್ಣೊಬ್ಬಳನ್ನು ಅವನ ಕಣ್ಣೆದುರೇ ಅವನಿಗಿಂತ ಬಲಶಾಲಿಯಾದವನೊಬ್ಬ ಬಲಾತ್ಕಾರದಿಂದ ರಥವೇರಿಸುವುದನ್ನು ನೋಡುತ್ತಾ ನಿಲ್ಲುವುದಕ್ಕಿಂತ ಗಂಡಿಗೆ ಸಾವು ಎಷ್ಟೋ ಶ್ರೇಯಸ್ಕರ. ಭೀಷ್ಮನ ರಥವನ್ನು ಅಂಬೆ ಏರುವುದನ್ನು ಅವನಿಂದ ನೋಡಲಾಗಿರಲಿಲ್ಲ. ಭೀಷ್ಮ ಅಂಬೆಯನ್ನು ಅವನೆಡೆಗೆ ಬರಗೊಟ್ಟರೂ, ಅವನಿಂದ ಸೋತಿದ್ದ ಕ್ಷತ್ರಿಯರು ಒಟ್ಟಾಗಿ ಅವನ ಮೇಲೆ ಮುಗಿ ಬೀಳುತ್ತಿದ್ದರು. ದಸ್ಯುರಾಜನನ್ನು ಮುಗಿಸಲು ಸಿಗುವ ಯಾವುದೇ ಅವಕಾಶವನ್ನು ಅವರು ಬಿಡುತ್ತಿರಲಿಲ್ಲ. ಹಿಂದಿನ ದಿನವೇ ಅಂಬೆ ತನ್ನೊಡನೆ ಹೊರಟು ಬಿಡಬೇಕಿತ್ತೆಂದು ಅವನಿಗನ್ನಿಸಿತು. ಅಲ್ಲದಿದ್ದರೆ ಸ್ಪರ್ಧಾರಂಭಕ್ಕೆ ಮುನ್ನ ವಿಷಯವನ್ನು ಅಪ್ಪನಿಗೆ ತಿಳಿಸುತ್ತಿದ್ದರೆ ಎಲ್ಲವೂ ಸರಿಯಾಗುತ್ತಿರಲಿಲ್ಲವೆ?

ಹಾಗೆಂದು ಯೋಚಿಸಿ ಸಾಲ್ವಭೂಪತಿ ಹೇಳಿದ. ಅಂಬೇ, ಅಂದು ಸರೋವರದಲ್ಲಿ ನಮ್ಮ ಮೊದಲ ಭೇಟಿಯಾದಾಗ ಸೌಭಕ್ಕೆ ಬಂದು ಬಿಡು ಎಂದು ನಿನ್ನಲ್ಲಿ ನಾನು ಯಾಚಿಸಿದೆ. ನೀನು ಏನೇನೋ ಕುಂಟು ನೆಪಗಳನ್ನು ಮುಂದೊಡ್ಡಿದೆ. ಅಂದೇ ನೀನು ಬಂದು ಬಿಡುತ್ತಿದ್ದರೆ ಇಂದು ಈ ಪರಿಸ್ಥತಿ ಉದ್ಧವವಾಗುತ್ತಿರಲಿಲ್ಲ. ಅದಾಗಲಿಲ್ಲ. ಹೋಗಲಿ. ಅರಮನೆಗೆ ಹಿಂದಿರುಗಿದ ಮೇಲೆ ತಂದೆಗೋ ತಾಯಿಗೋ ನಿನ್ನ ಮನದಿಂಗಿತವನ್ನು ನೀನು ತಿಳಿಸುತ್ತಿದ್ದರೂ ಹೀಗಾಗುತ್ತಿರಲಿಲ್ಲ. ಇದ್ಯಾವುದನ್ನೂ ನೀನು ಮಾಡದ ಕಾರಣ ನಾನು ಭೀಷ್ಮನಿಂದ ಭಂಗಿತನಾದೆ. ಪಣವನ್ನು ಗೆಲ್ಲಲಾಗದ ನಾನು ಈ ಹಂತದಲ್ಲಿ ನಿನ್ನನ್ನು ವರಿಸುವುದು ಅಧರ್ಮವಾಗುತ್ತದೆ. ಧರ್ಮದ ಪ್ರಶ್ನೆಯನ್ನು ಬದಿಗಿಟ್ಟರೂ ಈಗ ನೀನು ಸಾಲ್ವಭೂಪತಿಯನ್ನು ಮೆಚ್ಚಿದ ಅಂಬೆಯಲ್ಲ. ಭೀಷ್ಮ ಗೆದ್ದ ಅಂಬೆ. ನಿನ್ನನ್ನು ಪಟ್ಟದರಸಿಯಾಗಿ ನಾನು ಸ್ವೀಕರಿಸಲಾರೆ. ನನ್ನನ್ನು ಮತ್ತೆ ಕಾಡಬೇಡ. ನಿನ್ನ ದಾರಿ ನೀನು ನೋಡಿಕೋ.

ಅಂಬೆ ತಕ್ಷಣ ಮರುನುಡಿದಳು: “ಸಾಲ್ವಭೂಪತೀ, ನೀನು ಹೇಳಿದಂತೆ ಮಾಡಲು ಸಾಧ್ಯವಿತ್ತೇ ಎಂದು ಯೋಚಿಸಿ ನೋಡು. ಸ್ವಯಂವರಕ್ಕೆ ಶೌರ್ಯವೇ ಪಣವೆಂದು ಅಪ್ಪ ಘೋಷಿಸಿದಾಗಲೇ ಸ್ವಾತಂತ್ರ್ಯ ಕಳಕೊಂಡವಳು ನಾನು. ನಿನ್ನೊಡನೆ ನಾನು ಸರೋವರದಿಂದಲೇ ಹೊರಟು ಬರುತ್ತಿದ್ದರೆ ಆರ್ಯಾವರ್ತದ ರಾಜಮಹಾರಾಜರುಗಳು ನಿನ್ನನ್ನು ಜೀವಸಹಿತ ಬಿಡುತ್ತಿದ್ದರೆ? ಸ್ವಯಂವರದ ವಿಧಿನಿಯಮಗಳನ್ನು ಒಮ್ಮೆ ಗೊತ್ತುಪಡಿಸಿದ ಬಳಿಕ ಅದನ್ನು ಮೀರಲು ಅಪ್ಪನಿಗಾಗಲೀ, ಅಮ್ಮನಿಗಾಗಲೀ ಸಾಧ್ಯವಿತ್ತೆ? ಅಂದ ಮೇಲೆ ಸರೋವರ ಪ್ರಕರಣವನ್ನು ಅವರಿಗೆ ತಿಳಿಸುವ ಅಗತ್ಯವೇನಿತ್ತು? ವಾಸ್ತವದ ಅರಿವಿದ್ದೂ ನೀನು ನನ್ನ ಮೇಲೆ ತಪ್ಪನ್ನು ಹೊರಿಸುತ್ತಿದ್ದಿ. ನೀನು ಕಾವಲುಗಾರರ ಕಣ್ತಪ್ಪಿಸಿ ಉಪವನ ಪ್ರವೇಶಿಸಿದ್ದೇ ತಪ್ಪು. ದೊಡ್ಡ ಈಜುಗಾರನೆಂಬ ಹಮ್ಮು ಸರೋವರದಲ್ಲಿ ಈಜುತ್ತಿದ್ದ ನನ್ನ ಬಳಿಗೆ ನಿನ್ನನ್ನು ಬರುವಂತೆ ಮಾಡಿತು. ನನಗೆ ಪುರುಷಪ್ರೇಮದ ಪರಿಚಯವಾದದ್ದೇ ನಿನ್ನಿಂದ. ಅಂದು ನೀನು ನನ್ನ ಜೀವನದಲ್ಲಿ ಪ್ರವೇಶಿಸದೆ ಇರುತ್ತಿದ್ದರೆ ಇಂದಿನ ಈ ಸ್ಥತಿ ಉದ್ಧವಿಸುತ್ತಿರಲಿಲ್ಲ. ತಂಗಿಯಂದಿರ ಹಾಗೆ ನನ್ನ ವಿಧಿಯೇ ಹೀಗೆಂದು ನಾನೂ ವಿಚಿತ್ರವೀರ್ಯನ ಅಂತಃಪುರ ಸೇರಿಬಿಡುತ್ತಿದ್ದೆ.”

ಸಾಲ್ವಭೂಪತಿಯೆಂದ: “ನಾನು ಅಂದು ಉಪವನವನ್ನು ಪ್ರವೇಶಿಸಿದ್ದು ಒಂದು ಆಕಸ್ಮಿಕ. ನನ್ನ ಕುದುರೆಗಳು ಬಾಯಾರಿದ್ದವು. ನನಗೂ ವಿಶ್ರಾಂತಿ ಬೇಕೆನ್ನಿಸಿತ್ತು. ನಿನ್ನಪ್ಪ ಪ್ರತಾಪಸೇನ ಹಾದಿಯುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದರೆ ನಾನು ಉಪವನಕ್ಕೆ ಬರುತ್ತಿರಲಿಲ್ಲವೇನೋ? ಸರೋವರದ ದಂಡೆಯಲ್ಲಿ ಗಂಡುಡುಗೆ ಕಂಡು ಈಜುತ್ತಿರುವ ವ್ಯಕ್ತಿ ಗಂಡೆಂದೇ ಭ್ರಮಿಸಿದವನು. ದೂರಕ್ಕೆ ಯಾರೆಂದು ಗುರುತಿಸಲು ಸಾಧ್ಯವಾಗಿರಲಿಲ್ಲ. ಈಜೆಂದರೆ ನನಗೆ ಪ್ರಾಣ. ಸಮಾನ ವ್ಯಸನಿಗಳಲ್ಲಿ ಸಖ್ಯ ಬೆಳೆಯುತ್ತದೆಂದು ನಿನ್ನ ಸಮೀಪಕ್ಕೆ ಬಂದವನು ನಾನು. ದಂಡೆಯಲ್ಲಿ ಹೆಣ್ಣಿನ ಉಡುಗೆಗಳಿರುತ್ತಿದ್ದರೆ ನಾನು ಹಾಗೆ ಸರೋವರಕ್ಕಿಳಿಯುತ್ತಿರಲಿಲ್ಲ. ಸರೋವರದಲ್ಲಿ ಈಜುತ್ತಿರುವುದು ಹೆಣ್ಣೆಂದು ಗೊತ್ತಾದಾಗ ಕ್ಷಮೆ ಕೇಳಿ ಹಿಂದಿರುಗಿದವನು. ರಾಜದರ್ಪದ ಮಾತುಗಳನ್ನಾಡಿ ನನ್ನನ್ನು ನಿಲ್ಲಿಸಿದವಳು ನೀನು. ನೀನಲ್ಲಿ ನನ್ನನ್ನು ನಿಲ್ಲಿಸಿ ಅಷ್ಟು ಹೊತ್ತು ಮಾತಾಡದೆ ಇರುತ್ತಿದ್ದರೆ ಸ್ವಯಂವರ ಮಂಟಪದಲ್ಲಿ ನಾನು ಸೋತಾಗ ನನಗೆ ನೋವಾಗುತ್ತಿರಲಿಲ್ಲ. ನೀನು ಭೀಷ್ಮನ ರಥವೇರಿದ್ದನ್ನು ಅಪಮಾನವೆಂದು ಬಗೆದು ನಾನು ಕೊರಗಬೇಕಾಗಿರಲಿಲ್ಲ. ತಪ್ಪು ಮಾಡಿದವಳು ನೀನು. ಸುಮ್ಮನೆ ಸಾಲ್ವಭೂಪತಿಯ ಮೇಲೆ ತಪ್ಪು ಹೊರಿಸಬೇಡ.”

ಅಂಬೆ ದನಿ ತಗ್ಗಿಸಿದಳು: “ಸಾಲ್ವಭೂಪತಿ, ನಮ್ಮಿಬ್ಬರ ನಡುವೆ ಮೂಡಿದ ಪ್ರೀತಿಗೆ ನೀನು ಗಂಡಾಗಿರುವುದು ಮತ್ತು ನಾನು ಹೆಣ್ಣಾಗಿರುವುದೇ ಕಾರಣ. ಗಂಡು ಹೆಣ್ಣಿನ ನಡುವೆ ಮೂಡುವ ಪ್ರೀತಿಯನ್ನು ತಪ್ಪೆನ್ನುವಂತಿಲ್ಲ. ಅದು ನಿಸರ್ಗದ ನಿಯಮ. ನಮ್ಮಿಬ್ಬರ ಭೇಟಿ ಹಾಗೆ ಆ ಸರೋವರದಲ್ಲಿ ಆದದ್ದು ಪೂರ್ವ ನಿಯೋಜಿತವಲ್ಲ. ನಾವು ಪ್ರಕೃತಿಯ ಶಿಶುಗಳು. ಇಡೀ ಪ್ರಕರಣದಲ್ಲಿ ತಪ್ಪು ಮಾಡಿದವರು ಭೀಷ್ಮಾಚಾರ್ಯರು. ಆದರೆ ನಮ್ಮ ಪ್ರೀತಿಗೆ ಬೆಲೆಕೊಟ್ಟು ನನ್ನನ್ನು ನಿನ್ನಲ್ಲಿಗೆ ಗೌರವದಿಂದ ಅವರು ಕಳುಹಿಸಿ ಕೊಟ್ಟಿದ್ದಾರೆ. ಅಲ್ಲಿಗೆ ಅವರ ತಪ್ಪೋ ಪಾಪವೋ ಪರಿಮಾರ್ಜನೆಯಾದಂತಾಯಿತು. ಸಾಲ್ವಭೂಪತೀ, ನಿನ್ನೊಡನೆ ಮಾತುಕತೆ ನಡೆದ ಬಳಿಕ ನಾನು ಅಂಬೆಯಾಗಿ ಉಳಿದಿಲ್ಲ. ಸಾಲ್ವಭೂಪತಿಯ ದೇಹದ ಒಂದು ಭಾಗವಾಗಿ ಬಿಟ್ಟೆ. ನನ್ನ ಮನಸ್ಸಲ್ಲಿ ನೀನೇ ತುಂಬಿಕೊಂಡಿರುವೆ. ಒಬ್ಬನಿಗೆ ದೇಹವನ್ನು, ಇನ್ನೊಬ್ಬನಿಗೆ ಮನಸ್ಸನ್ನು ಕೊಡುವ ಶಿಕ್ಷಯಿಂದ ನನ್ನನ್ನು ಪಾರು ಮಾಡು. ನಾನೆಲ್ಲೂ ತಪ್ಪಿ ನಡೆದಿಲ್ಲ. ತಪ್ಪು ಮಾಡುತ್ತಿದ್ದರೆ ನಿನ್ನೆದುರು ಹೀಗೆ ನಿಂತು ಮಾತಾಡುವ ನೈತಿಕತೆ ನನ್ನಲ್ಲಿ ಎಲ್ಲಿರುತ್ತಿತ್ತು? ಆ ಸರೋವರದಲ್ಲೇ ಅಂಬೆ ದ್ವಿಕರಣ ಪೂರ್ವಕವಾಗಿ ನಿನ್ನವಳಾದಳು. ಈಗ ತ್ರಿಕರಣಪೂರ್ವಕವಾಗಿ ನಿನ್ನವಳನ್ನಾಗಿ ಮಾಡಿಕೋ. ಹೆಣ್ಣನ್ನು ಪ್ರೀತಿಯಿಂದ ಗೆಲ್ಲಬೇಕು ಎಂಬ ಪಾಠ ನಿನ್ನಿಂದ ಆರ್ಯಾವರ್ತಕ್ಕೆ ದೊರಕಲಿ. ಹೆಣ್ಣನ್ನು ಕೇವಲ ಭೋಗದ ವಸ್ತುವೆಂದು ಭಾವಿಸಿರುವ ಆರ್ಯಾವರ್ತದ ರಾಜರುಗಳಿಗೆ ಪ್ರೇಮದ ಮೌಲ್ಯವನ್ನು ತೋರಿಸಿಕೊಡು.”

ಸಾಲ್ವಭೂಪತಿ ಯೋಚಿಸತೊಡಗಿದ. ಈ ಪ್ರಕರಣದಲ್ಲಿ ನಾನು ಮತ್ತು ಅಂಬೆ ನೈಸರ್ಗಿಕವಾಗಿ, ವಯೋಸಹಜವಾಗಿ ಪರಸ್ಪರ ಪ್ರೀತಿಸಿದವರು. ಅದು ತಪ್ಪಲ್ಲ. ಎಲ್ಲವೂ ನಾವೆಣಿಸಿದಂತೆ ನಡೆಯುತ್ತಿದ್ದರೆ ಈಗವಳು ನನ್ನ ರಾಣಿಯಾಗಿರುತ್ತಿದ್ದಳು. ಆ ಭೀಷ್ಮನ ಅಕಾಲಿಕ ಪ್ರವೇಶ ಎಲ್ಲವನ್ನೂ ಹಾಳುಗೆಡಹಿಬಿಟ್ಟಿತು. ತಪ್ಪು ಅವನದ್ದು. ಆದರೆ ತಪ್ಪು ಅವನದ್ದೆ? ಆರ್ಯಾವರ್ತದ ಬೇರಾವ ಕ್ಷತ್ರಿಯನೂ ಪ್ರೇಮವನ್ನು ಗೌರವಿಸಿ ಅಂಬೆಯನ್ನು ಹೀಗೆ ಕಳುಹಿಸಿಕೊಡುತ್ತಿರಲಿಲ್ಲ. ಹಾಗಾದರೆ ತಪ್ಪಾದದ್ದು ಯಾರಿಂದ? ಕಾಶೀರಾಜ ನನ್ನನ್ನು ದಸ್ಯುವೆಂದು ದೂರವೇ ಇರಿಸಿದ್ದ. ಹಸ್ತಿನಾವತಿಗೂ ಆಮಂತ್ರಣ ಕಳುಹಿಸಿರಲಿಲ್ಲ. ಕುವರರಿಲ್ಲದ ಕಾಶೀರಾಜನ ಕುವರಿಯರನ್ನು ವಿವಾಹವಾದವರು ರಾಜ್ಯದ ಮುಂದಿನ ಅರಸರಾಗುತ್ತಾರೆ. ರಾಜ್ಯ ವಿಂಗಡಣೆಯಾಗಿ ದುರ್ಬಲ ಗೊಳ್ಳುವುದು ಬೇಡವೆಂದು ಮೂವರು ಕುವರಿಯರು ಒಬ್ಬನನ್ನೇ ವರಿಸಬೇಕಾದ ಅನಿವಾರ್ಯತೆಯನ್ನು ಕಾಶೀರಾಜ ಸೃಷ್ಟಿಸಿದ್ದ. ಸಮಷ್ಟಿಯಾಗಿ ಆ ನಿರ್ಧಾರವನ್ನು ತಪ್ಪೆನ್ನುವಂತಿಲ್ಲ. ಭೀಷ್ಮ ಬ್ರಹ್ಮಚಾರಿ. ವಿಚಿತ್ರವೀರ್ಯ ದುರ್ಬಲ ಸಮ್ರಾಟಾ. ವಿಚಿತ್ರವೀರ್ಯ ತನ್ನ ಅಳಿಯನಾಗುವುದು, ಸುಲಭವಾಗಿ ಕಾಶೀರಾಜ್ಯ ಕುರುಸಾಮ್ರಾಜ್ಯದ ಒಂದು ಭಾಗವಾಗುವುದು ಪ್ರತಾಪಸೇನನಿಗೆ ಇಷ್ಟವಿಲ್ಲದುದಕ್ಕೆ ಹಸ್ತಿನಾವತಿಗೆ ಆಮಂತ್ರಣ ಹೋಗಲಿಲ್ಲ. ಆಮಂತ್ರಣವಿಲ್ಲದಿದ್ದರೂ ಭೀಷ್ಮ ತಮ್ಮನಿಗಾಗಿ ಬಂದ. ವಿಚಿತ್ರವೀರ್ಯನೇ ಬರುತ್ತಿದ್ದರೆ ಅವನನ್ನು ಕ್ಷಣಾರ್ಧದಲ್ಲಿ ಗೆದ್ದುಬಿಡುತ್ತಿದ್ದೆ. ಭೀಷ್ಮನೇ ಬಂದುಬಿಟ್ಟ. ಹಾಗೆ ಬಾರದಿರುತ್ತಿದ್ದರೆ ಕುರುಸಾಮ್ರಾಜ್ಯ ದುರ್ಬಲವಾಗಿ ಬೇರೆ ರಾಜರುಗಳ ಪಾಲಾಗಿಬಿಡುತ್ತದೆ ಮತ್ತು ಅದಕ್ಕೆ ತಾನೇ ಕಾರಣನಾಗುತ್ತೇನೆಂದು ಭೀಷ್ಮ ಭೀತನಾಗಿರಬೇಕು. ನನ್ನ ಹಾಗೆ ಭೀಷ್ಮನನ್ನು ಸ್ವಯಂವರಕ್ಕೆ ಬರುವಂತೆ ಮಾಡಿದ್ದು ಸ್ವಾಭಿಮಾನ. ಅವನದ್ದು ಲವಲೇಶವೂ ಸ್ವಾರ್ಥವಿಲ್ಲದ ಸ್ವಾಭಿಮಾನ. ಕಾಶೀರಾಜ ನನ್ನನ್ನು, ಹಸ್ತಿನಾವತಿಯನ್ನು ದೂರ ಇಟ್ಟದ್ದನ್ನು ಕನ್ಯಾಪಿತೃವಿನ ಸ್ಥಾನದಲ್ಲಿ ನಿಂತು ನೋಡಿದರೆ ತಪ್ಪಾಗುವುದಿಲ್ಲ. ನನ್ನ ಮತ್ತು ಅಂಬೆಯ ಭೇಟಿ ಸರೋವರದಲ್ಲಾಗಿ ಪ್ರೀತಿ ಮೂಡಿದ್ದನ್ನು ಯಾರೂ ತಪ್ಪೆನ್ನುವಂತಿಲ್ಲ. ನಾನಾಗಲೀ, ಭೀಷ್ಮನಾಗಲೀ ಸ್ವಾಭಿಮಾನದಿಂದಾಗಿ ಸ್ವಯಂವರ ಮಂಟಪಕ್ಕೆ ಹೋದದ್ದೂ ತಪ್ಪಲ್ಲ. ನನಗೆ ಭೀಷ್ಮನನ್ನು ಗೆಲ್ಲಲಾಗುತ್ತಿದ್ದರೆ ಯಾವ ಸಮಸ್ಯೆಯೂ ಮೂಡುತ್ತಿರಲಿಲ್ಲ. ಭೀಷ್ಮ ಗೆದ್ದದ್ದು ನನ್ನನ್ನು ಮಾತ್ರವಲ್ಲ, ಅಂಬೆಯನ್ನೂ. ಆರ್ಯಾವರ್ತದ ಸಮಸ್ತ ರಾಜಮಹಾರಾಜರುಗಳ ಸಮ್ಮುಖದಲ್ಲಿ ಭೀಷ್ಮ ಗೆದ್ದ ಅಂಬೆಯನ್ನು ಸಾಲ್ವಭೂಪತಿ ಸ್ವೀಕರಿಸುವುದು ಹೇಗೆ?

ಸಾಲ್ವಭೂಪತಿ ಇಳಿದನಿಯಲ್ಲೆಂದ: ರಾಜಕುಮಾರೀ, ನಾನು ಯಾರ ಮೇಲೂ ತಪ್ಪನ್ನು ಹೊರಿಸುತ್ತಿಲ್ಲ. ಈ ಪ್ರಕರಣದಲ್ಲಿ ಒಳಗೊಂಡವರಲ್ಲಿ ಅವರ ನಡವಳಿಕೆಗಳಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇಡೀ ಪ್ರಕರಣವೊಂದು ನಾಟಕದಂತೆ, ನಾವೆಲ್ಲಾ ಸೂತ್ರದ ಗೊಂಬೆಗಳಂತೆ ಈಗ ನನಗೆ ಭಾಸವಾಗುತ್ತಿದೆ. ನಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರೆ ನಿನಗದು ಅರ್ಥವಾದೀತು. ಹಾಗೆ ಸರೋವರದಲ್ಲಿ ಭೇಟಿಯಾದ ಹೆಣ್ಣುಗಂಡು, ಈ ವಿಶ್ವದಲ್ಲಿ ನಾವು ಮಾತ್ರವೇ ಆಗಿರಬಹುದು. ನಮ್ಮ ಎಲ್ಲಾ ಸಂಕಷ್ಟಗಳಿಗೆ ಅದುವೇ ಕಾರಣವಾಗಿಬಿಟ್ಟಿದೆ. ಹಾಗೆ ಭೇಟಿಯಾದಾಗ ನಮ್ಮ ನಡುವೆ ಪ್ರೀತಿ ಮೂಡದಿರುತ್ತಿದ್ದರೆ ನೀನು ಅನಿವಾರ್ಯವಾಗಿ ಹಸ್ತಿನಾವತಿಯ ಅಂತಃಪುರದಲ್ಲಿರುತ್ತಿದ್ದೆ. ನಿನ್ನನ್ನು ಗೆದ್ದವನು ಭೀಷ್ಮ. ಧರ್ಮಬದ್ಧವಾಗಿ ನೀನು ಹಸ್ತಿನಾವತಿಗೆ ಸೇರಿದವಳು. ಗೆದ್ದವನು ನಿನ್ನನ್ನು ಯಾರಿಗೆ ಬೇಕಾದರೂ ನೀಡಬಹುದು. ಅದನ್ನು ಆರ್ಯಾವರ್ತ ಅಧರ್ಮವೆಂದು ಭಾವಿಸುವುದಿಲ್ಲ. ಪ್ರೇಮವನ್ನು ಒಂದು ಉನ್ನತ ಮೌಲ್ಯವೆಂದು ಲೋಕ ಇನ್ನೂ ಸ್ವೀಕರಿಸಿಲ್ಲ.”

ಅಂಬೆಯ ಮುಖ ಕಳೆಗುಂದುತ್ತಾ ಹೋಗುತ್ತಿತ್ತು. ಪುರೋಹಿತ ದೇವೀ ಚರಣದಾಸ ಆಗಿನಿಂದ ಚಡಪಡಿಸುತ್ತಿದ್ದ. ಸಾಲ್ವಭೂಪತಿಗೂ ಈ ಪ್ರಕರಣವನ್ನು ಬೇಗ ಮುಗಿಸಬೇಕೆಂದೆನಿಸಿತು. ಅವನು ಮಾತು ಮುಂದುವರಿಸಿದ: “ನಿನ್ನ ಭಾವನೆಯನ್ನು ಗೌರವಿಸಿ ಭೀಷ್ಮ ನಿನ್ನನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ. ಆ ಮಟ್ಟಿಗೆ ಅವನಿಗೆ ಪ್ರೇಮದ ಮೌಲ್ಯ ಅರ್ಥವಾಗಿದೆ. ಆರ್ಯಾ ವರ್ತದ ಇನ್ನೊಬ್ಬ ಕ್ಷತ್ರಿಯ ಹೀಗೆ ಮಾಡುತ್ತಿರಲಿಲ್ಲ. ನನ್ನ ಮಾತುಗಳಿಗೆ ದಯವಿಟ್ಟು ಅಪಾರ್ಥ ಕಲ್ಪಿಸಬೇಡ. ನನ್ನ ಪ್ರಕಾರ ನೀನೀಗ ಸೌಭಕ್ಕೆ ಹಸ್ತಿನಾವತಿ ನೀಡುತ್ತಿರುವ ಭಿಕ್ಷ. ಈ ಸಿಂಹಾಸನದಲ್ಲಿ ನೀನಿರುತ್ತಿದ್ದರೆ ನಿನಗೂ ಹಾಗೆ ಅನ್ನಿಸುತ್ತಿತ್ತು. ನಿನ್ನ ಮೇಲಿನ ಪ್ರೀತಿಯಿಂದ ನಾನು ಸ್ವಾಭಿಮಾನವನ್ನು ಬದಿಗಿಟ್ಟೇನು. ಆದರೆ ನನ್ನ ಪ್ರಜೆಗಳ ಕಣ್ಣಲ್ಲಿ ನಾನು ಏನಾಗಿಬಿಡಬಹುದೆಂಬುದನ್ನು ಯೋಚಿಸು. ಭೀಷ್ಮನ ಔದಾರ್ಯದಿಂದ ದೊರೆತವಳನ್ನು ಸೌಭದೇಶದ ಪಟ್ಟ ಮಹಿಷಿಯೆಂದು ಇವರು ಒಪ್ಪಿಕೊಳ್ಳುವುದಿಲ್ಲ. ಇಡೀ ಸಭೆಯಲ್ಲಿ ಒಬ್ಬರೂ ಮಾತಾಡದೆ ಕುಳಿತಿರುವುದನ್ನು ಗಮನಿಸು. ಸ್ವಸಾಮಥ್ರ್ಯದಿಂದ ಹೆಣ್ಣೊಬ್ಬಳನ್ನು ಗಳಿಸಲಾಗದವನನ್ನು ಗಂಡೆಂದು ಯಾರು ಭಾವಿಸುತ್ತಾರೆ? ರಾಜಕುಮಾರೀ, ಇನ್ನು ವಾದ ನಿಲ್ಲಿಸು. ನಿನ್ನಲ್ಲಿ ಮಾತಾಡಿದರೆ ಹಳೆಯ ಗಾಯಕ್ಕೆ ಹೊಸ ಜೀವ ಮೂಡುತ್ತದೆ. ದಯವಿಟ್ಟು ಹೊರಟು ಹೋಗು. ಎಲ್ಲಾದರೂ ಸುಖವಾಗಿ ಬಾಳು.”

ಸಾಲ್ವ – ಅಂಬೆಯರ ಮಾತಿನ ನಡುವೆ ತಾನು ಕಳೆದು ಹೋಗುತ್ತಿರುವುದು ಪುರೋಹಿತ ದೇವೀ ಚರಣದಾಸನ ಗಮನಕ್ಕೆ ಬಂತು. ಸಾಲ್ವಭೂಪತಿಯ ಮಾತುಗಳನ್ನು ಕೇಳಿದ ಮೇಲೆ ಇನ್ನಿವನು ಅಂಬೆಯನ್ನು ಸ್ವೀಕರಿಸಲಾರ ಎನ್ನುವುದು ಖಚಿತವಾಯಿತು. ಈಗವನು ಮಧ್ಯ ಪ್ರವೇಶಿಸಿದ: “ಅಂಬೇ, ನಿನ್ನನ್ನು ಸೌಭದೇಶಕ್ಕೆ ತಂದು ಬಿಡಲು ಆಚಾರ್ಯ ಭೀಷ್ಮರು ನನಗೆ ಆಜ್ಞಾಪಿಸಿದ್ದಾರೆ. ಅದನ್ನು ನಾನು ನೆರವೇರಿಸಿದ್ದೇನೆ. ನಿನ್ನನ್ನು ಸಾಲ್ವಭೂಪತಿಯ ವಶಕ್ಕೊಪ್ಪಿಸುವುದಷ್ಟೇ ನನ್ನ ಕೆಲಸ. ಇನ್ನು ನಾನಿಲ್ಲಿರುವುದರಲ್ಲಿ ಅರ್ಥವಿಲ್ಲ. ನಾನಿನ್ನು ಹಸ್ತಿನಾವತಿಗೆ ಹೊರಡಬೇಕಾಗಿದೆ. ನನ್ನಂತಹ ಬ್ರಾಹ್ಮಣೋತ್ತಮನನ್ನು ಬರಿಗೈಯಲ್ಲಿ ಕಳುಹಿಸುವುದು ಶಾಸ್ತ್ರ ಸಮ್ಮತವಾಗುವುದಿಲ್ಲ.”

ಪುರೋಹಿತ ದೇವೀಚರಣದಾಸ ಕೊನೆಯ ಮಾತುಗಳನ್ನು ತನ್ನನ್ನುದ್ದೇಶಿಯೇ ಹೇಳಿರ ಬೇಕೆಂದು ಸಾಲ್ವಭೂಪತಿಗನ್ನಿಸಿತು. ಅಲ್ಲದೆ ಈ ಸ್ಥತಿಯಲ್ಲಿ ಅಂಬೆ ಅದೇನನ್ನು ಅವನಿಗೆ ಕೊಟ್ಟಾಳು? ಪುರೋಹಿತ ದೇವೀ ಚರಣದಾಸನನ್ನು ಸಾಲ್ವಭೂಪತಿ ಸಾಂತ್ವನಪಡಿಸಿದ: “ಸ್ವಾಮೀ ಚತುರ್ವೇದಿಗಳೇ, ಅಂಬೆಯಿಂದ ಈಗ ನೀವೇನನ್ನೂ ನಿರೀಕ್ಷಿಸಲಾರಿರಿ ಎನ್ನುವುದು ನನ್ನ ಭಾವನೆ. ಹಸ್ತಿನಾವತಿಗೆ ಹಿಂದಿರುಗಿದ ಮೇಲೆ ಭೀಷ್ಮ ನಿಮಗೇನನ್ನಾದರೂ ಕೊಡದಿರುತ್ತಾನೆಯೆ? ನಿಮ್ಮಂತಹ ಘನ ವಿದ್ವಾಂಸರು ಸೌಭಕ್ಕೆ ಕಾಲಿಡುತ್ತಿರುವುದು ಇದೇ ಮೊದಲು. ವಿದ್ವಾಂಸರನ್ನು ಬರಿಗೈಯಲ್ಲಿ ಕಳುಹಿಸುವುದು ಅಧರ್ಮವಾಗುತ್ತದೆ. ಎಲ್ಲಿ ನಮ್ಮ ಕೋಶಾಧ್ಯಕ್ಷರು? ಈ ಚತುರ್ವೇದಿಗಳಿಗೆ ಐದು ನೂರು ಹೊನ್ನು ಕೊಟ್ಟು ಪೀತಾಂಬರ ಹೊದಿಸಿ ಗೌರವಿಸಿ.”

ಪುರೋಹಿತ ದೇವೀ ಚರಣದಾಸ ಅವನ್ನು ಸ್ವೀಕರಿಸಿ “ಇಷ್ಟಾರ್ಥ ಸಿದ್ಧಿರಸ್ತುಃ ಲೋಕಾ ಸಮಸ್ತಾ ಸುಖಿನೋ ಭವಂತು” ಎಂದು ಹರಸಿ ಹೊರಟ. ಆಗ ಸಾಲ್ವಭೂಪತಿಯೆಂದ: “ಚತುರ್ವೇದಿಗಳೇ, ಅಂಬೆ ಮತ್ತು ನಿಮ್ಮನ್ನು ಗಡಿಯವರೆಗೆ ನಮ್ಮ ರಥ ಕರೆದೊಯ್ಯುತ್ತದೆ. ಅಲ್ಲಿ ಹೇಗೂ ನಿಮ್ಮ ರಥ ಕಾದುಕೊಂಡಿರುತ್ತದೆ. ಹಸ್ತಿನಾವತಿಯಿಂದ ಬಂದದ್ದು ಹಸ್ತಿನಾವತಿಗೇ ಹಿಂದಿರುಗಲಿ.”

ಪುರೋಹಿತ ದೇವೀ ಚರಣದಾಸ ಸಂದಿಗ್ಧದಲ್ಲಿ ತೊಳಲಿದ. ಅಂಬೆಯನ್ನು ಸಾಲ್ವಭೂಪತಿಯ ವಶಕ್ಕೊಪ್ಪಿಸಿ ಬರಲು ಭೀಷ್ಮರಿಂದ ಆಜ್ಞಪ್ತನಾದವನು ಅಂಬೆಯನ್ನು ಮರಳಿ ಹಸ್ತಿನಾವತಿಗೆ ಕರೆದೊಯ್ಯುವುದೆ? ಸಮಾಧಾನದ ಸ್ವರದಲ್ಲಿ ಅವನು ಸಾಲ್ವಭೂಪತಿಗೆ ತಿಳಿ ಹೇಳಿದ: “ಭೂಪತೀ, ನಾಲ್ಕು ವೇದಗಳನ್ನು ಬಲ್ಲವನು ನಾನು. ಶಾಸ್ತ್ರಗಳನ್ನು ತಿಳಿದುಕೊಂಡವನು. ಭೀಷ್ಮ ಗೆದ್ದ ಅಂಬೆಯನ್ನು ಸಾಲ್ವ ಸ್ವೀಕರಿಸುವುದು ಅಧರ್ಮವೆಂದಾಗುತ್ತಿದ್ದರೆ ನಾನು ಇವಳನ್ನು ಇಲ್ಲಿಯವರೆಗೆ ಕರಕೊಂಡು ಬರುತ್ತಿರಲಿಲ್ಲ. ಇವಳು ಯಾವ ತಪ್ಪನ್ನೂ ಮಾಡಿದವಳಲ್ಲ. ಸುಖಭೋಗಕ್ಕೆ ಸೋಲುವವಳಾಗಿರುತ್ತಿದ್ದರೆ ಭಾವನೆಗಳಿಗೆ ಪ್ರಾಶಸ್ತ್ಯ ನೀಡಿ ಇಲ್ಲಿಗೆ ಬರುತ್ತಿರಲಿಲ್ಲ. ಇಂದ್ರನಿಂದ ಪತಿತಳಾದ ಅಹಲ್ಯೆಯನ್ನು ಗೌತಮರು ಸ್ವೀಕರಿಸಿದರು. ಅಹಲ್ಯೆ ಮಹಾಪತಿವ್ರತೆಯೆಂದು ಲೋಕ ಅವಳ ಸ್ಮರಣೆ ಮಾಡುತ್ತಿದೆ. ಗುರು ಬೃಹಸ್ಪತಿ ಆಚಾರ್ಯರ ಮಡದಿ ತಾರೆ ಚಂದ್ರನನ್ನು ಮೋಹಿಸಲಿಲ್ಲವೆ? ಅದನ್ನು ಲೋಕ ತಪ್ಪೆನ್ನಲಿಲ್ಲ. ಅಂಬೆ ನಿನ್ನನ್ನು ಬಿಟ್ಟು ಅನ್ಯರಿಗೆ ಮನದಲ್ಲಿ ಸ್ಥಾನ ಕೊಟ್ಟವಳಲ್ಲ. ಭೂಪತೀ, ನೀನು ತಪ್ಪು ಮಾಡುತ್ತಿರುವೆ. ಒಬ್ಬ ಹಿರಿಯನಾಗಿ ನಾನು ಹೇಳುತ್ತಿದ್ದೇನೆ. ಈ ಅಂಬೆಯನ್ನು ನಿರಾಕರಿಸಬೇಡ. ಅದು ತಪ್ಪಾಗುತ್ತದೆ. ಪ್ರಭು ಮಾಡುವ ತಪ್ಪು ಅಸಂಖ್ಯಾತ ಪ್ರಜೆಗಳ ಭವಿಷ್ಯಕ್ಕೆ ಮಾರಕವಾಗುತ್ತದೆ.”

ಸಾಲ್ವಭೂಪತಿ ತಲೆಕೊಡಹಿದ: “ಚತುರ್ವೇದಿಗಳೇ, ನಾನು ಗೌತಮನಷ್ಟು, ಬೃಹಸ್ಪತಿ ಆಚಾರ್ಯರಷ್ಟು ದೊಡ್ಡವನಲ್ಲ. ಹೇಗೆ ಯೋಚಿಸಿದರೂ ನನಗಿವಳು ಹಸ್ತಿನಾವತಿಯ ಭಿಕ್ಷಯಂತೆ ಗೋಚರಿಸುತ್ತಿದ್ದಾಳೆ. ಒಬ್ಬಳು ಹೆಣ್ಣಿಗಾಗಿ ನಾನು ನನ್ನ ಸ್ವಾಭಿಮಾನವನ್ನು ಬಲಿಗೊಡಲಾರೆ.”

ಅಂಬೆಗೆ ತಾನು ಸಂಪೂರ್ಣವಾಗಿ ಸೋತು ಹೋದ ಅನುಭವವಾಯಿತು. ಕೊನೆಯ ಪ್ರಯತ್ನವೆಂದುಕೊಂಡು ಅವಳು ಹೇಳಿದಳು: “ಸಾಲ್ವಭೂಪತೀ, ನನ್ನನ್ನು ಸೌಭದೇಶ ಹಸ್ತಿನಾವತಿಯ ಭಿಕ್ಷ ಎಂದೇಕೆ ಭಾವಿಸಬೇಕು? ಪ್ರೇಮಕ್ಕಾಗಿ ಅಂಬೆ ಹಸ್ತಿನಾವತಿಯನ್ನು ಧಿಕ್ಕರಿಸಿದಳು ಎಂದೇಕೆ ಭಾವಿಸಬಾರದು? ಪ್ರೇಮಕ್ಕಿಂತ ಮಿಗಿಲಾದ ಮೌಲ್ಯ ಇನ್ನೊಂದಿಲ್ಲವೆಂಬುದನ್ನು ಪ್ರತಿಷ್ಠಾಪಿಸಲು ಇದು ನಿನಗೆ ಸಿಕ್ಕ ಅವಕಾಶ. ನೀನು ರಾಜನಾದದ್ದು, ಆಮಂತ್ರಣವಿಲ್ಲದಿದ್ದರೂ ಕಾಶಿಗೆ ಬಂದದ್ದು ರೂಢಧರ್ಮವನ್ನು ಧಿಕ್ಕರಿಸಿ. ನಿನ್ನ ಪ್ರಜೆಗಳು ಏನಂದುಕೊಂಡಾರೋ ಎಂಬ ಅಪವಾದ ಭಯದಿಂದ ನೀನು ನಿನ್ನ ಅಂತಸ್ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವೆ. ಅದು ಅಧರ್ಮವಲ್ಲವೆ? ನಾಲ್ಕು ದಿನ ಮಾತಾಡುವ ಜನ ಮತ್ತೆ ಬದಲಾವಣೆಗಳನ್ನು ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಅಂಬೆಯ ಬಗ್ಗೆ ಹೀಗೆ ಮಾತಾಡಿಕೊಂಡೆವಲ್ಲಾ ಎಂದು ಅವರು ಪಶ್ಚಾತ್ತಾಪ ಪಡುವಂತೆ ನಡೆದು ತೋರಿಸುತ್ತೇನೆ. ನೀನು ಕೈಬಿಟ್ಟರೆ ನಾನು ಅನಾಥೆಯಾಗಿ ಬಿಡುತ್ತೇನೆ.”

ಸಾಲ್ವ ವಿಚಲಿತನಾದ. ತಲೆತಗ್ಗಿಸಿ ಸ್ವಲ್ಪ ಹೊತ್ತು ಯೋಚಿಸಿದ. ತಲೆಯೆತ್ತಿ ಸಭೆಯನ್ನೊಮ್ಮೆ ನೋಡಿದ. ಕಣ್ಣಿಗೆ ಸರಿಯಾಗಿ ಕಾಣಿಸುವ ಅಷ್ಟೂ ಮುಖಗಳನ್ನು ಓದಿಕೊಂಡ. ಕೊನೆಗೆ ದೃಢವಾದ ದನಿಯಲ್ಲಿ ಹೇಳಿದ: “ಭೀಷ್ಮನಿಂದ ಸೋಲುವ ಮೊದಲು ಪ್ರೇಮವನ್ನು ಅತ್ಯುನ್ನತ ಜೀವನ ಮೌಲ್ಯವೆಂದು ಸಾಧಿಸಿ ತೋರಿಸುವ ಅವಕಾಶ ನಮಗಿದ್ದುದು ನಿಜ. ಈಗ ನಾವದನ್ನು ಕಳ ಕೊಂಡಿದ್ದೇವೆ. ನಾನೀಗ ನಿನ್ನನ್ನು ಸ್ವೀಕರಿಸಿದರೆ ಅದು ನನ್ನ ದೌರ್ಬಲ್ಯದ ಸಂಕೇತವಾಗಿಬಿಡುತ್ತದೆ. ನನ್ನ ಮೇಲೆ ನಿನಗೆ ನಿಜವಾಗಿಯೂ ಪ್ರೀತಿ ಇರುವುದೇ ಆದರೆ ದಯವಿಟ್ಟು ಇಲ್ಲಿಂದ ಹೊರಟು ಹೋಗು.”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…