ಬಂಡಾಯ : ಯಾಕೆ ಜೀವಂತ?

ಬಂಡಾಯ : ಯಾಕೆ ಜೀವಂತ?

ಬಂಡಾಯದ ಸಂವೇದನೆ ಯಾವತ್ತೂ ಜೀವಂತವಾದುದು. ಇದು ಕೆಲವು ಕಾಲಗಳಲ್ಲಿ ಉನ್ನತಾವಸ್ಥೆಯಲ್ಲಿರಬಹುದು, ಇನ್ನೂ ಕೆಲವು ಕಾಲಗಳಲ್ಲಿ ಕ್ಷೀಣಾವಸ್ಥೆಯಲ್ಲಿರಬಹುದು. ಆದರೆ ಇವುಗಳಲ್ಲಿ ಯಾವೊಂದು ಅವಸ್ಥೆಯ ಅಸ್ತಿತ್ವವನ್ನು ಸಹ ಬಹುಮುಖಿ ಕಾರಣಗಳು ನಿರ್ಧರಿಸುತ್ತಿರುತ್ತವೆ ಎಂಬುದು ಇಲ್ಲಿ ಗಮನಾರ್ಹ. ಈ ಹಿನ್ನೆಲೆಯಲ್ಲಿ ಇದರ ಅಸ್ತಿತ್ವದ ಸ್ವರೂಪವನ್ನು ಕುರಿತ ಚರ್ಚೆ ಸಹಜವಾಗಿಯೇ ಸಂಕೀರ್ಣವಾಗಿರುತ್ತದೆ.

ಕನ್ನಡ ಅಥವ ಕರ್ನಾಟಕದ ಪರಂಪರೆಯಲ್ಲಿ ಪ್ರತಿಭಟನೆಯ ನೆಲೆಗಳು ಎಲ್ಲಾ ಕಾಲಗಳಲ್ಲಿಯೂ ವ್ಯಕ್ತವಾಗಿವೆ. ಇದಕ್ಕೆ ಕನ್ನಡದ ಶಿಷ್ಟ ಮತ್ತು ಜನಪದ ಸಾಹಿತ್ಯವೇ ಸಾಕ್ಷಿ. ಆದರೆ ಇದಿಷ್ಟರಿಂದಲೇ ಈ ಸಾಹಿತ್ಯವನ್ನು ಬಂಡಾಯ ಸಾಹಿತ್ಯವೆಂದು ಕರೆಯಲಾಗುವುದಿಲ್ಲ. ಕಾರಣ, ಇಂತಹ ಪ್ರತಿಭಟನೆಯ ನೆಲೆಗಳು ಯಾವುದೇ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಎದ್ದ ಧ್ವನಿಗಳಾಗಿರುತ್ತವೆ. ಈ ನೆಲೆಯಲ್ಲಿ ಪಂಪ, ನಯಸೇನ, ಹರಿಹರ, ರಾಘವಾಂಕ ಮೊದಲಾದ ದೊಡ್ಡ ಸಾಲಿನ ಕವಿ-ಕೃತಿಗಳನ್ನು ಹೆಸರಿಸಬಹುದು. ಇವರ ಈ ಬಗೆಯ ಧ್ವನಿ ಅಥವಾ ಕೃತಿಗಳು ಆ ಕಾಲಕ್ಕಾಗಲೇ ಇರುವ ವ್ಯವಸ್ಥೆಯನ್ನು ಬಹುಜನ ಸಮುದಾಯಪರವಾದ ನೆಲೆಯಲ್ಲಿ ಮಾರ್ಪಡಿಸುವ ಧ್ಯೇಯವನ್ನಾಗಲೀ ಅದಕ್ಕೆ ಬೇಕಾದ ಸಾಮಾಜಿಕ-ರಾಜಕೀಯ ಪ್ರಜ್ಞೆಯನ್ನಾಗಲಿ ಇಟ್ಟುಕೊಂಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಬಂಡಾಯ ಸಾಹಿತ್ಯವೆಂದು ಕರೆಯಲಾಗುವುದಿಲ್ಲ. ಇದಕ್ಕೆ ಹೊರತಾಗಿ ವಚನ ಸಾಹಿತ್ಯ ಕಾಣುತ್ತದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಇದು ಅನೇಕ ಮಿತಿಗಳ ನಡುವೆಯೇ ಬಂಡಾಯ ಸಾಹಿತ್ಯದ ಪೂರ್ವಕಾಲೀನ ಮಹತ್ವದ ಘಟ್ಟ ಎಂದು ಕರೆಯಲು ಸಾಧ್ಯವಿದೆ. ಇದಕ್ಕೆ ಕಾರಣ, ಸೈದ್ಧಾಂತಿಕ ನೆಲೆಯಲ್ಲಿ ಕಾಣಿಸಿಕೊಂಡ ನಡೆ ಮತ್ತು ನುಡಿಗಳಲ್ಲಿನ ಅಭಿನ್ನತೆ, ಅದುವರೆಗಿನ ಸಮಾಜ (ಕಲ್ಯಾಣ)ಕ್ಕಿಂತ ಭಿನ್ನವಾದ ಸಮಾಜವನ್ನು ಕಟ್ಟುವ ಕಲ್ಪನೆ, ಅದಕ್ಕಾಗಿ ಮೊಟ್ಟಮೊದಲಿಗೆ ನಡೆದ ಸಾಮೂಹಿಕ ಚರ್ಚೆ, ಅದರಲ್ಲಿ ಕೆಳವರ್ಗಗಳ ಸಂವೇದನೆಗಳೂ ಐತಿಹಾಸಿಕವಾಗಿ ದಾಖಲಾದದ್ದು ಇತ್ಯಾದಿ. ಹೀಗೆ ಜನಕೇಂದ್ರಿತ ಚಿಂತನೆಗಳಿಗೆ ಜನರಿಗೆ ತಿಳಿಯುವ ಭಾಷೆಯನ್ನೇ ಬಳಸಿ, ಅವನ್ನು ಆಂದೋಳನಕ್ಕೆ ಸಜ್ಜುಗೊಳಿಸಿದ್ದು ಸಾಂಸ್ಕೃತಿಕ ಮಹತ್ವದ ಸಂಗತಿಯಾಗಿದೆ. ಹೀಗೆ ಅನೇಕ ಆಯಾಮಗಳನ್ನು ಪಡೆದಿರುವ ವಚನ ಸಾಹಿತ್ಯವು ಹಸಿದವರ ಪರವಾದ ಸಾಹಿತ್ಯವಾಗಿ ಕನ್ನಡವನ್ನು ಪ್ರವೇಶಿಸಿತು. ಈ ಎಲ್ಲಾ ಚರ್ಚೆಯನ್ನು ಮಾಡಲು ಕಾರಣವೆಂದರೆ, ಅಂತಹ ಮತ್ತೊಂದು ಘಟ್ಟ ಕನ್ನಡದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡದ್ದು ಕಳೆದ ಶತಮಾನದ ಎಪ್ಪತ್ತರ ದಶಕದಿಂದೀಚೆಗೆ ಎಂಬುದನ್ನು ಹೇಳುವುದಾಗಿದೆ.

ಹೀಗೆ ಕನ್ನಡದ ಬಂಡಾಯ ಸಾಹಿತ್ಯ ಒಂದು ಸಾವಿರದ ಐದು ನೂರು ವರ್ಷಗಳ ಇತಿಹಾಸದಲ್ಲಿ ಎರಡು ಬಾರಿ ಮಾತ್ರ ಉನ್ನತಾವಸ್ಥೆಯಲ್ಲಿತ್ತು. ಇಲ್ಲೆಲ್ಲಾ ಮಾತನಾಡಿದವರು ಮುಖ್ಯವಾಗಿ ಹಸಿದವರು ಮತ್ತು ಅವರ ಪರವಾಗಿ ಮಾತನಾಡುವ ಕಾಳಜಿಯನ್ನಿಟ್ಟು ಕೊಂಡಿದ್ದವರು. ಇಂಥವರ ಸಾಹಿತ್ಯದಲ್ಲಿ ವಿಚಾರ ಸಾಹಿತ್ಯದ ತುಂಬು ಬೆಳೆಯಿದೆ. ಇದರ ಹೊರತಾಗಿ, ಹೊಟ್ಟೆ ತುಂಬಿದವರು ಹೊತ್ತು ಕಳೆಯಲಿಕ್ಕಾಗಿ ಬರೆಯುವ ಮತ್ತು ಓದುವ ಲಲಿತ ಪ್ರಬಂಧ ಮತ್ತು ಅದರ ಸಮ್ಮೋಹಕತೆ ಇಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಲಲಿತ ಪ್ರಬಂಧದ ಲಾವಣ್ಯವನ್ನು ತುಳುಕಿಸಿದ ಯಾವುದೇ ಪ್ರಕಾರದ ಸಾಹಿತ್ಯ ಮತ್ತು ಅವುಗಳ ಭಾವಶಿಲ್ಪಿಗಳನ್ನು ಮತ್ತು ಅವರ ಪೂರ್ವಾಪರಗಳನ್ನು ಲಕ್ಷಿಸಬೇಕು. ಅಂತೆಯೇ ವೈಚಾರಿಕ ಕೋಲ್ಮಿಂಚುಗಳನ್ನು ಹೊಮ್ಮಿಸಿದ ನೆಲದ ಬರಹಗಾರರನ್ನು ಸಹ ಲಕ್ಷಿಸಬೇಕು. ಈ ವರ್ಗೀಕರಣದ ಮೊದಲ ಭಾಗದ ಸಾಹಿತಿಗಳಲ್ಲಿ ಜನ ವಿರೋಧಿ ನೆಲೆಗಳು ಇಲ್ಲವೆಂದು ಹೇಳಿದರೂ ಅವರ ಸಾಹಿತ್ಯ ಎಷ್ಟರಮಟ್ಟಿಗೆ ಜನಪರವಾದುದು ಎಂಬ ಪ್ರಶ್ನೆ ಯಾವತ್ತೂ ಜೀವಂತವಾಗಿ ಉಳಿಯುತ್ತದೆ. ಈ ತಾತ್ವಿಕ ನೆಲೆಗಟ್ಟಿನಲ್ಲಿ ವಚನ ಮತ್ತು ಬಂಡಾಯದ ಘಟ್ಟಗಳನ್ನು ಹೊರತುಪಡಿಸಿದ ಕನ್ನಡ ಸಾಹಿತ್ಯವನ್ನು ಕೆಲವು ಪ್ರಶ್ನೆಗಳ ಮೂಲಕವೇ ಪ್ರವೇಶಿಸಬೇಕೆಂಬುದು ಈ ಕಾಲದ ಜರೂರು ಎನ್ನಿಸುತ್ತದೆ. ಇದು ದಾಳಿಯ ಮಾತಲ್ಲ; ವಸ್ತುನಿಷ್ಠ ನೆಲೆಯಲ್ಲಿ ಚರಿತ್ರೆಯನ್ನು ಅರಿಯುವ ಬಗೆ.

ಕನ್ನಡದ ಬದುಕಿನಲ್ಲಿ ಅಕ್ಷರ ಸಂಸ್ಕೃತಿ ವಿರಳ. ಈ ವಿರಳ ಸಂಸ್ಕೃತಿ ಅನ್ನದ ವಿಚಾರದಲ್ಲಿ ಭದ್ರ. ಅದಕ್ಕಾಗಿ ಅದರದು ಅಮೃತದ ಚಿಂತೆ ಮತ್ತು ಅಮೃತಮಯ ಚಿಂತನೆ. ಅಂತಹ ಅಮೃತವು ದೇವರಾಗಿ ನೆಲದಲ್ಲಿ ಓಡಾಡುವ ಮಾನವರನ್ನು ಬದುಕಿಸಿತೇ ವಿನಃ ಮನುಷ್ಯರಾಗಿದ್ದೂ ಪ್ರಾಣಿಹೀನ ಬದುಕನ್ನು ನಡೆಸುತ್ತಾ ಬಂದ ಮಾನವರನ್ನಲ್ಲ. ಆದ್ದರಿಂದಲೇ ಅಕ್ಷರ ಮೂಲದ ಈ ಬೆಳಕು ಸೀಮಿತ ಜನವರ್ಗದ ಕೃಪಾ ಶಕ್ತಿಯೇ ಹೊರತು ಸರ್ವಜನ ಸಮುದಾಯದ ಸೂರ್ಯ ಅಲ್ಲ.

ಹೀಗೆ ಸಾವಿರಾರು ವರ್ಷಗಳ ಚರಿತ್ರೆಯಲ್ಲಿ ಅಕ್ಷರವಾಗದ ಬದುಕು ಮೌನದಲ್ಲೆ ಉಸಿರುಗಟ್ಟಿತು. ಅದು ಸಂವಿಧಾನದ ರಕ್ಷೆಯಲ್ಲಿ ಅಕ್ಷರವನ್ನು ದಕ್ಕಿಸಿಕೊಂಡು ಮುಗಿಲು ಕೇಳುವಂತೆ ಮಾತನಾಡಲು ತೊಡಗಿದ್ದು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಎಂಬುದು ಈಗಾಗಲೇ ಪ್ರಚುರ.

ಅಂದು ಬಹುಜನ ಸಮುದಾಯದ ವಿವಿಧ ಜನಾಂಗಿಕ ಸಂವೇದನೆಗಳು ಮಾತನಾಡಿದವು. ಅವುಗಳಿಗೆ ತೀವ್ರ ಸಾಮಾಜಿಕ-ರಾಜಕೀಯ ಪ್ರಜ್ಞೆ ಇದ್ದಿತು. ವ್ಯವಸ್ಥೆಯನ್ನು ಆರೋಗ್ಯಕರವಾಗಿ ಪುನರ್ ನಿರ್ಮಿಸುವ ಕನಸು ಇತ್ತು. ಅಂತಹ ಕನಸಿನ ದಾರಿಯಲ್ಲಿ ಅನೇಕರಿಗೆ ಭ್ರಮನಿರಸನವಾಗಿರಬಹುದು. ಆದರೆ ಕನಸಿಗೆ ಭ್ರಮನಿರಸನವಾಗಿಲ್ಲ. ಅದು ಜೀವಂತ ವಾಹಿನಿ. ಆದ್ದರಿಂದಲೇ ಬಂಡಾಯವು ಒಂದು ಸಂವೇದನೆಯಾಗಿ ಇಂದಿಗೂ ಜೀವಂತವಿರುವುದು. ದಲಿತ, ಸ್ತ್ರೀ, ಮುಸ್ಲಿಂ, ಶೂದ್ರ ಮೊದಲಾದ ಆವತ್ತಿನ ಸಂವೇದನೆಗಳು ಇಂದಿಗೂ ಮಾತನಾಡಲು ಸಾಧ್ಯವಾಗುತ್ತಿರುವುದು.

ಎಪ್ಪತ್ತರ ದಶಕದ ಅನೇಕ ಸವಾಲುಗಳು ಇಂದಿಗೂ ಜೀವಂತವಾಗಿವೆ. ಜಾತೀಯತೆ, ವರ್ಗಸ್ವರೂಪ, ಧರ್ಮಾಂಧತೆ, ಇತಿಹಾಸದ ಮರು ಓದು, ವಿಶೇಷವಾಗಿ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಕಲ್ಪನೆ ಇತ್ಯಾದಿ. ಆದರೆ ಅವುಗಳನ್ನು ಕುರಿತ ಮಾತು ಇವತ್ತು ಕಡಿಮೆ. ಕಾರಣ, ಇವುಗಳಿಗಿಂತ ಭಿಕರವಾದ ಸವಾಲುಗಳು ಇಂದು ನಮ್ಮೆದುರಿಗಿದೆ.

ಭಾರತದ ಆಂತರಿಕ ಪ್ರಜಾಸತ್ತೆಯನ್ನು ನಾಶಮಾಡುತ್ತಿರುವ ಜಾಗತೀಕರಣ, ಸ್ವಾತಂತ್ರ್ಯದ ಧ್ಯೇಯ ಮಂತ್ರವಾದ ರಾಷ್ಟ್ರೀಕರಣವನ್ನು ಮೆಟ್ಟುತ್ತಿರುವ ಖಾಸಗೀಕರಣ, ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಅದರ ಮೂಲದ ಅಪರಾಧಗಳು, ಇವೆಲ್ಲದರ ನಡುವೆಯೇ ಅನ್ನವನ್ನು ದೂರ ಸರಿಸಿ ಜನರಿಗೆ ಹತ್ತಿರವಾಗುತ್ತಿರುವ ಕೋಮುವಾದ -ಇವೆಲ್ಲವೂ ದೇಶವನ್ನು ಸುಡುತ್ತಿವೆ. ಪರಿಣಾಮವಾಗಿ ಹೊಸ ಕಾಲದ ಬಂಡಾಯ ಸಾಹಿತ್ಯ ಅವತ್ತಿನ ವಿನ್ಯಾಸಕ್ಕಿಂತ ಭಿನ್ನವಾಗಿ ಮೈತಳೆಯುತ್ತಿದೆ. ಇಲ್ಲಿ ಹಿರಿಯ ತಲೆಮಾರಿನ ಬಂಡಾಯ ಸಾಹಿತಿಗಳು ಮಾತನಾಡುತ್ತಿದ್ದರೂ ಹೊಸ ತಲೆಮಾರಿನ ಬರಹಗಾರರು ವಿಶೇಷ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಬಂಡಾಯ ಪರಂಪರೆಯ ಶ್ರೀಮಂತ ಕುರುಹಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ಸಂವೇದನೆಯನ್ನು ಕಟ್ಟಿಕೊಡುತ್ತಿರುವ ಮುಳ್ಳೂರು ನಾಗರಾಜ, ಸತ್ಯಾನಂದ ಪಾತ್ರೋಟ, ಎಚ್.ಟಿ. ಪೋತೆ, ಮೊಗಳ್ಳಿ ಗಣೇಶ್, ಎಲ್. ಹನುಮಂತಯ್ಯ, ಎನ್.ಕೆ. ಹನುಮಂತಯ್ಯ, ಎಲ್.ಸಿ. ರಾಜು, ಸುಧಾಕರ, ಅರ್ಜುನ ಗೊಳಸಂಗಿ ಮೊದಲಾದ ಇವತ್ತಿನ ಅಸಂಖ್ಯಾ ಕವಿಗಳನ್ನು ಲಕ್ಷಿಸಬೇಕು. ಅಂತೆಯೇ ಮುಸ್ಲಿಂ ಸಂವೇದನೆಯ ಸಂದರ್ಭದಲ್ಲಿ ಕೆ. ಷರೀಪಾ, ದಸ್ತಗೀರಸಾಬದಿನ್ನಿ, ಅಬ್ದುಲ್ ರಷೀದ್, ಬಷೀರ್, ಮೊಹ್ಮದ್ ರಫಿ, ಅರಿಫ್ ಅರಿಕೇರ, ಸಿ.ಜಿ.ಪಾಶ, ಬಾಷ್ಯಗೂಳ್ಯಂ, ಬಿ. ಪೀರ್‌ಭಾಷ್ ಮೊದಲಾದವರನ್ನು ಇಲ್ಲಿ ಗಮನಿಸಬೇಕು. ಇನ್ನು ಸ್ತ್ರೀ ಸಂವೇದನೆಯ ಜಾಗದಲ್ಲಂತೂ ಡಿ.ಬಿ. ರಜಿಯಾ, ವಿಭಾ ತಿರಕಪಡಿ, ನೂರ್ ಜಹಾನ್, ಎಲ್.ಜಿ. ಮೀರಾ. ಎಚ್.ಎಲ್. ಪುಷ್ಪಾ , ವಿನಯಾ, ಸವಿತಾ ನಾಗಭೂಷಣ, ಎಸ್.ವಿ. ಪ್ರಭಾವತಿ ಮೊದಲಾದವರ ದೊಡ್ಡ ಪಡೆಯನ್ನು ಗುರುತಿಸುವಂತೆ, ಶೂದ್ರ ಸಂವೇದನೆಯ ನೆಲೆಯಲ್ಲಿ ರಾಜಪ್ಪ ದಳವಾಯಿ, ರಂಗರಾಜ ವನದುರ್ಗ, ಲಕ್ಷ್ಮೀಪತಿ ಕೋಲಾರ, ಎಚ್ಚೆನ್ ಸೋಮಶೇಖರಗೌಡ, ಎಂ.ಡಿ. ವಕ್ಕುಂದ, ದೇವುಪತ್ತಾರ್, ಸಚ್ಚಿದಾನಂದ ಸಾಲಿ, ಆನಂದ ಋಗ್ವೇದಿ, ವಿಕ್ರಮ ವಿಸಾಜಿ ಮೊದಲಾದವರನ್ನು ಗುರುತಿಸಬೇಕು. ಹೀಗೆ ದೊಡ್ಡ ಸಂಖ್ಯೆಯಲ್ಲಿ ಅಕ್ಷರವಾಗಿ ಹೊಮ್ಮುತ್ತಿರುವ ಈ ಧ್ವನಿಗಳು ಬಂಡಾಯ ಪರಂಪರೆಯ ಜೀವಂತ ವಕ್ತಾರರಾಗಿ ದಾಖಲಾಗುತ್ತಿದ್ದಾರೆ. ಅದರೆ ಇದನ್ನು ವಿಮರ್ಶಕರು ಗಮನಿಸಬೇಕಷ್ಟೆ.

ಅಂದು ಕಾಣಿಸಿಕೊಂಡ ಬಂಡಾಯ ಚಳವಳಿ ಅನೇಕ ಕಾರಣಗಳಿಂದ ಕ್ಷೀಣವಾಯಿತು. ಇದರ ಅಧೋಗತಿ ಶುರುವಾದದ್ದು ೧೯೮೩ ರಿಂದ ಈಚೆಗೆ. ಅಂದು ಚಳವಳಿಗಳ ಮೂಲ ಮತ್ತು ಅವುಗಳ ಬಲದಲ್ಲಿ ರಚನೆಯಾದ ಸರ್ಕಾರ ತುಂಬು ಚಾಣಾಕ್ಷತೆಯಿಂದ ದಲಿತ, ರೈತ ಮತ್ತು ಕನ್ನಡ ಚಳುವಳಿಯ ಕಬ್ಬನ್ನು ಅಗೆದು, ರಸವನ್ನು ಹೀರಿ, ಸಿಪ್ಪೆಯನ್ನು ಉಗಿದು ಬಿಟ್ಟಿತು. ಅದು ಚಳವಳಿಯ ಮೈ ಮಾತ್ರವಾಗಿ, ಅಂತಃಸತ್ವವನ್ನು ಕಳೆದುಕೊಂಡ ಬಂಜೆಯಾಯಿತು. ಅದು ಒಂದು ಕಾಲ. ಆ ಕಾಲದ ಮುಂದುವರಿಕೆಯ ಘಟ್ಟದಲ್ಲಿಯೇ ಕೋಮುವಾದಿ ಶಕ್ತಿಗಳು ದೇಶವನ್ನು ಸುಲಭವಾಗಿ ಆಳತೊಡಗಿದ್ದು ಮತ್ತು ಅಂತಹ ಮನಸ್ಸನ್ನೇ ಹೊಂದಿದ್ದ ಇನ್ನೊಂದು ಹೆಸರಿನ ರಾಜಕೀಯ ಶಕ್ತಿ ಸಾಮಾಜಿಕ ನ್ಯಾಯ ಕಲ್ಪನೆಯನ್ನು ಕೊಲ್ಲುವ ಗ್ಯಾಟ್ ಒಪ್ಪಂದಕ್ಕೆ ಸಹಿಯನ್ನು ಹಾಕಿದ್ದು. ಇಲ್ಲಿಂದಲೇ ತೀವ್ರವಾದದ್ದು ಜನ ಚಳುವಳಿಗಳು. ಒಂದೆಡೆಗೆ ಜಾಗತೀಕರಣದ ಪ್ರಕ್ರಿಯೆ ತೀವ್ರಗೊಂಡು ದೇಶದ ಉತ್ಪಾದನಾ ಶಕ್ತಿಯನ್ನು ಕುಂಟಿತಗೊಳಿಸಿ, ಅದನ್ನು ಆರ್ಥಿಕ ದಿವಾಳಿತನಕ್ಕೆ ದೂಡುತ್ತಿದ್ದರೆ, ಆಂತರಿಕ ನೆಲೆಯಲ್ಲಿ ಕೋಮುವಾದಿ ಶಕ್ತಿಗಳು ಶಿಕ್ಷಣವನ್ನು ಒಳಗೊಂಡಂತೆ ಸಮಾಜದ ಎಲ್ಲಾ ವಲಯಗಳನ್ನು ಆವರಿಸಿ, ಹಸಿವಿನ ಹೊಟ್ಟೆಗೆ ಅನ್ನದ ಬದಲು ಧರ್ಮವನ್ನು ಉಣಿಸುತ್ತಿವೆ. ಇಲ್ಲಿ ಮನುಷ್ಯ ಕಾಣುತ್ತಿಲ್ಲ; ದೇವರಷ್ಟೇ ಕಾಣುತ್ತಿದ್ದಾನೆ! ದೇವರಿಗೆ ರಕ್ತದ ಅಭಿಷೇಕವೂ ನಡೆದಿದ್ದು, ಚರಿತ್ರೆ ಮತ್ತು ಪುರಾಣಗಳ ಪಠಣವು ಭಾರತವನ್ನು ಭಕ್ತಿಯಲ್ಲಿ ಜಾಲಾಡಿಸುತ್ತಿವೆ.

ಇದು ಭಾರತದ ಇವತ್ತಿನ ವಿಕೃತ ರೂಪ. ಇಲ್ಲಿ ಸಾರಸ್ವತ ಮನಸ್ಸುಗಳಿಂದ ಸಾಂಸ್ಕೃತಿಕ ಶೋಧ ನಡೆದಿದೆ. ಸಮಾಜವಾದಿ, ಮಾರ್ಕ್ಸ್‌ವಾದಿ, ಅಂಬೇಡ್ಕರ್‌ವಾದಿ, ಪೆರಿಯಾರ್‌ವಾದಿ-ಹೀಗೆ ಅನೇಕ ಪಾತಳಿಗಳಲ್ಲಿ ತಾತ್ವಿಕ ಚಿಂತನೆ ನಡೆದಿದೆ. ಇಲ್ಲೆಲ್ಲಾ ಬಂಡಾಯದ ಹಿರಿಯ ಮನಸ್ಸುಗಳು ಹಾಜರಾಗುತ್ತಿರುವುದು ಸಮಾಧಾನಕರ ಸಂಗತಿ. ಇವರೊಂದಿಗೆ ಹೊಸ ತಲೆಮಾರು ಸಹ ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಿರುವುದು ಬೆಳವಣಿಗೆಯ ಮಹತ್ವದ ಸಂಗತಿ. ಉದ್ಯೋಗಮುಖಿ ಶಿಕ್ಷಣ ಮತ್ತು ಹೊಸ ವಿದ್ಯುನ್ಮಾನ ಮಾಧ್ಯಮಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಯುವ ಸಮೂಹದ ನಡುವೆಯೇ ಅವರ ಒಂದು ಪಡೆ ಸಾಮಾಜಿಕ ಚಿಂತನೆ ಮತ್ತು ಚಳುವಳಿಗಳತ್ತ ಚಲಿಸುತ್ತಿರುವುದು ಬಂಡಾಯದ ಆಶಾಸೂಚಿಯಾಗಿದೆ. ಆದ್ದರಿಂದಲೇ ಕಳೆದ ಹಲವು ತಿಂಗಳುಗಳಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಬಂಡಾಯಕ್ಕೆ ಹೊಸ ಜೀವಕಳೆ ಬರುತ್ತಿರುವುದು. ಉತ್ತರ ಕನ್ನಡ, ಗದಗ, ಬೆಂಗಳೂರು, ಹಾಸನ, ಬಿಜಾಪುರ, ಬಾಗಲಕೋಟೆ, ಕೋಲಾರ, ದಾವಣಗೆರೆ, ರಾಯಚೂರು, ಹಾವೇರಿ ಮೊದಲಾದ ವಿವಿಧ ಭಾಗಗಳಲ್ಲಿ ಪುನಾರಚನೆಗೊಂಡು,ಗಮನಾರ್ಹ ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ಪೂರೈಸುತ್ತಾ ಬಂದ ಬಂಡಾಯದ ಘಟಕಗಳು ಇಲ್ಲಿ ಸ್ಮರಣಯೋಗ್ಯ ಎನ್ನಿಸುತ್ತಿರುವುದು.

ಹೀಗೆ ಯಾವತ್ತೂ ಜೀವಂತವಾಗಿರುವ ಬಂಡಾಯವು ಇವತ್ತು ಚಳುವಳಿಗಳನ್ನು ತೀವ್ರಗೊಳಿಸಬೇಕಿರುವುದಲ್ಲದೆ,ಅವುಗಳಿಂದ ತಾನೂ ಸಹ ಸೈದ್ಧಾಂತಿಕವಾಗಿ ಗಟ್ಟಿಯಾಗಬೇಕಿದೆ. ಹಾಗಾದಾಗ ಮಹಾಲಿಂಗಪುರದ ಬಂಡಾಯ ಸಾಹಿತ್ಯ ಸಮ್ಮೇಳನ ಹೊಸ ದಿಗಂತಗಳನ್ನು ತೆರೆಯುವ ಆಶಾಕಿರಣವಾಗುತ್ತದೆ.
*****
ಉದಯವಾಣಿ, ೨೨ ನವೆಂಬರ್, ೨೦೦೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್ಮಯುದ್ದ
Next post ಬೂದಿಯ ಬೆಳಕು

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…