ಭರತಮಾತೆಯ ನುಡಿ

ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ?
ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ?
ಎಂದು ಮಲಿನತೆ ನೀಗುವೆ-ಮಗು
ಳೆಂದು ನುಗುಮುಖವಾಗುವೆ ?

ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ,
ಯಾರು ಜಾಡ್ಯವ ಹರಿಸಿ ನಮ್ಮಲಿ ಹೊಸದು ಜೀವವನಿಟ್ಟರೋ,
ಅವರೆ ಕಣ್ಣನು ಹಿರಿವರೇ-ಕುದಿ
ದವರೆ ಕೊರಳನು ಮುರಿವರೇ !

ಎಲ್ಲಿ ಧರ್ಮವ ಕಂಡು ಸಾರಿದ ನಿನ್ನ ಪೂರ್ವದ ಋಷಿಗಳು ?
ಎಲ್ಲಿ ಘನತೆಯ ಬದುಕ ಹಾಡಿದ ನಿನ್ನ ಸತ್ಯದ ಕವಿಗಳು ?
ಎಲ್ಲಿ ಧರ್ಮದ ಧಣಿಗಳು-ಅವ
ರೆಲ್ಲ ಜ್ಞಾನದ ಕಣಿಗಳು ?

ಎಲ್ಲಿ ಕಲೆಗಳ ಬೆಳಸಿ, ಲಕ್ಷ್ಮಿಯನೊಲಿಸಿ ನಿಲಿಸಿದ ಧೀರರು ?
ಎಲ್ಲಿ ರಾಜ್ಯವ ಕಟ್ಟಿ, ಶಾಂತಿಯ ಪ್ರಜೆಗೆ ಬೀರಿದ ವೀರರು ?
ಎಲ್ಲಿ ಆರ್‍ಯರ ರಾಜರು-ಈ
ಗೆಲ್ಲಿ ಸಾಹಸ ತೇಜರು ?

ಭರತಮಾತೆಯೆ, ಭರತಮಾತೆಯೆ, ನಮ್ಮ ಹಂಬಲು ಕೇಳದೆ ?
ದೇವಿ, ಮೌನವಿದೇನು, ಭಕ್ತರು ನಮಗೆ ನೀತಿಯ ಹೇಳದೆ ?
ಎಂದು ಮಕ್ಕಳಿಗೊಲಿಯುವೆ-ನುಡಿ,
ಎಂದು ನಮ್ಮಲಿ ನಲಿಯುವೆ ?

– ೨ –

ನಿನ್ನ ಧರ್ಮದ ದಿವ್ಯಪಥದಲಿ ಬದುಕ ತಿದ್ದದೆ ಹೋದೆವು ;
ನಿನ್ನ ಸೇವೆಯ ಮರೆತು ನಮ್ಮ ಹೋರಿ ಸೋತವರಾದೆವು ;
ನಿನ್ನ ಹೆರರಿಗೆ ಕೊಟ್ಟೆವು-ನೀ
ನಿನ್ನು ಸಾಕದೆ ಕೆಟ್ಟೆವು.

ನಮ್ಮ ಮನೆಯಲಿ ನಾವು ಹೆರರಿಗೆ ದುಡಿವ ತೊತ್ತುಗಳಾದೆವು ;
ನಮ್ಮ ಹಿರಿಯರ ಪುಣ್ಯ ಕೀರ್ತಿಯನುಳಿಸಿಕೊಳ್ಳದೆ ಹೋದೆವು ;
ನಮ್ಮ ಬಾಳಿಸು, ಕೂಡಿಸು-ಸಲ
ಹಮ್ಮ, ಸದ್ಗತಿ ನೋಡಿಸು.

-ಮಕ್ಕಳಿರ, ಅಕ್ಕರೆಯ ಮಕ್ಕಳ, ಹೆತ್ತ ಕರುಳನು ಮರೆವೆನೆ ?
ಸೊಕ್ಕಿ ಸೆಡೆದವರೀಗ ತಿಳಿದಿರಿ, ಇನ್ನು ನಿಮ್ಮ ನು ತೊರೆವೆನೆ ?
ಕೇಳಿ, ಎದೆಯಲಿ ಹದಿಯರಿ-ಹೊಸ
ಆಳ ಬಾಳಲಿ ಹುದಿಯಿರಿ.

ದೇವ ಸನ್ನಿಧಿಯಿಂದ, ಮಕ್ಕಳ, ಮೊದಲು ಧರ್ಮವ ತಂದೆನು ;
ಜೀವಕಲೆಗಳ ಕಲಿಸಿ ಸುಖದಲಿ ಸೊಬಗ ಬೆಳಸುತ ಬಂದೆನು ;
ಹಿಮದ ಗಿರಿಯಲಿ ಸುಳಿದೆನು-ಕುಡಿ
ನಿಮಿರಿ ತೆರೆಗಳ ತುಳಿದೆನು.

ಹೊಳೆದ ಸತ್ಯವ ಹಿಡಿದು ಮುಂದಕೆ ನೂಕಲಮ್ಮದೆ ಸೆಡೆದಿರಿ ;
ಹಳದ ನೆಮ್ಮುತ ಜಾತಿಮತಗಳ ಮದದ ಗುಹೆಯಲ್ಲಿ ಕೆಡೆದಿರಿ ;
ಬಯಲ ಬೆಳಕಿಗೆ ಮುಳಿದಿರಿ-ಸಮ
ದಯದ ನಡತೆಯ ಹಳಿದಿರಿ.

ಮತ್ತೆ ಮತ್ತೊಡಹುಟ್ಟಿನೊಲುಮೆಯನೊರೆವ ಗುರುಗಳನಿಳುಹಿದೆ;
ಒತ್ತಿ ಗಡಿಗಳ ಹಲವು ನಾಡನು ಬೆಸೆವ ರಾಜರ ಕಳುಹಿದೆ;
ಮರುಗಿ ಆಗಚ್ಚತ್ತಿರಿ-ಮ
ತ್ತೊರಗಿ ಮುಸುಕನು ಹೊತ್ತಿರಿ.

– ೩ –

ಕಾವಲೊಡೆದೆನು, ಪಡುವ ಕಣಿವೆಯ ತೆರೆದು ಸುರಿದೆನು ದಳವನು ;
ದೈವಭಕ್ತಿಯ, ಭ್ರಾತೃಧರ್ಮದ, ಧೀರ ಮುಸ್ಲಮಕುಳವನು
ಚಿಮ್ಮಿ, ಕೆರಳಿಸಿ, ಕಲೆತರು-ಅಹ !
ನಿಮ್ಮ ಸಮಕೇ ಮಲೆತರು.

ಕಡೆಗೆ ನೆನೆದೆನು ನನ್ನ ಮನೆತನ ನೇರವಾಗುವ ತೆರವನು,
ಕಡಲ ರಾಣಿ ಬ್ರಿಟಾನಿಯಳ, ನನ್ನಿ ನಿಯ ತಂಗಿಯ ನೆರವನು ;
ಗೆಲಿದು ನಾಡನು ಬೆಸೆದಳು-ನೆಲ
ದೊಲುಮೆಕಟ್ಟನು ಹೊಸೆದಳು.

ಸಕಲ ಧರ್ಮದ ತಿರುಳ ಹೊರೆದಳು, ಸಕಲ ಜ್ಞಾನವ ತೆರೆದಳು ;
ಸಕಲ ಸೀಮೆಯ ಬಳಕೆಗೆಳೆದಳು, ಸಕಲ ಕುಶಲವನೊರೆದಳು ;-
ಅವಳ ಗುಣವನ್ನು ಮೆರೆಯಿರಿ-ಕಳೆ
ದವಳ ಕೊರತೆಯ ಮರೆಯಿರಿ.

ಮುರಿಯಲಾಕೆಯ ವ್ರತವನಸುರರ ಮಕ್ಕಳುರಿದುರಿದೆದ್ದರು;
ಹರಡಿ ನೆಲಸಿದ ಮಗಳ್ದಿರಣುಗರು ತಾಯ ಕಾಯುತ ಬಿದ್ದರು ;
ಅವರು ಮಡಿದೆಡೆ ಮಡಿಯಿರಿ-ಬಿಡ
ದವರು ಹಿಡಿದುದ ಹಿಡಿಯಿರಿ.

ಹಿರಿಯ ಸಿರಿಯೊಕ್ಕಲಲಿ ಹೊಕ್ಕಿರಿ, ನಂಟನಳಿಯದೆ ಬಲಿಯಿರಿ ;
ಅರುಹಿ, ನಯದಲಿ ಹೋರಿ, ನಂಬಿಸಿ, ಮನೆಯನಾಳಲು ಕಲಿಯಿರಿ.
ಶಿಷ್ಟ ಮಾರ್ಗದಿ ನಡೆಯಿರಿ-ನಿ
ಮ್ಮಿಷ್ಟಸಿದ್ಧಿಯ ಪಡೆಯಿರಿ.

ಮರಳಿ ಸುಗುಣರ ಕಾರ್‍ಯದಕ್ಷರ ಹೆತ್ತು ಕೊರಗನು ತಳ್ಳುವೆ ;
ಮರಳಿ ಮಹಿಮೆಯ ತೋರಿ ಲೋಕದ ಜನದ ಪೂಜೆಯ ಕೊಳ್ಳುವೆ;
ಮಕ್ಕಳಿರ, ನಿಮಗೊಲಿಯುವೆ-ನಿ
ಮ್ಮಕರೆಗೆ ಮಿಗೆ ನಲಿಯುವೆ.

– ೪ –

ಧರ್ಮ ಶಾಂತಿ ಸ್ವತಂತ್ರವಲ್ಲದೆ ನಮ್ಮ ಹಿರಿಯರ ನುಡಿಗಳು ?
ಧರ್ಮ ಶಾಂತಿ ಸ್ವತಂತ್ರವೇ ನನ್ನಿನಿಯ ತಂಗಿಯ ಮುಡಿಗಳು ;
ಕೂಡ ಲೋಕವ ಕಾಯುವ-ಯಶ
ಗೂಡಿ ಮುಕ್ತಿಗೆ ಹಾಯುವ!

-ಭರತಮಾತೆಯೆ, ಭರತಮಾತೆಯೆ, ನಿನ್ನ ಮಾತನ್ನು ಮರೆಯೆವು ;-
ಹಿರಿಯ ಬಳಗದ ಕಾರ್‍ಯಚತುರೆಯ ಸಾಕುತಾಯಿಯ ತೊರೆಯೆವು ;
ಒಂದೆ ಜನವಾಗಿರುವೆವು-ಒಲಿ
ದೊಂದೆ ಭಾರವ ಹೊರುವೆವು.

ನಿನ್ನ ಹಿಂದಿನ ಭಾಗ್ಯವೆಲ್ಲವ ಮರಳಿ ಸಾಧಿಸಿ ಮೆರೆವೆವು ;
ನಿನ್ನ ಧರ್ಮಾಮೃತವ ಶೋಧಿಸಿ ಬರಡು ಲೋಕಕ್ಕೆರೆವೆವು ;
ದೈವಚಿತ್ತದಿ ನಿಲುವೆವು-ಸ
ತ್ಸೇವೆಗೆಯ್ಯುತ ಸಲುವೆವು.
*****
೧೯೧೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಿ ಶಾರದೆ
Next post ನಾನು ಮತ್ತು ಬದುಕು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…