ಮೊಳಕೆಯಲ್ಲೇ ಕೊರಳ ಕುಣಿಕೆ
ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು
ಸೆಟೆದ ಎದೆಯಲ್ಲಿ ನೆರೆಬಂದು
ಬಿಡದೆ ಬಂಡೆ ಸಂದಿಯಲ್ಲೂ ಚಿಗುರು
ಸುತ್ತಮುತ್ತೆಲ್ಲ ಮುನ್ನೂರು ಉಗುರು.
ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು
ಕಲ್ಲ ಕ್ಯಾಕರಿಸಿ ಅತ್ತ ಇತ್ತ ಒದ್ದು
ನಾನು ಊರ್ಧ್ವಕಾಮಿ;
ಕೊಂಬೆ ಕೊಂಬೆಗಳಲ್ಲಿ ಎಲೆಯಲೆಯ ಕಲಕಲರವೋನ್ಮೇಷ
ಚಿಟಕೆ ಕಣ್ಣುಗಳಲ್ಲಿ ತೊಂಡು ತೋಳುಗಳಲ್ಲಿ
ಬೆನ್ನು ಸವರುವ ಕೆಲಸ;
ನೀಳ ನಿರಿಗೆಗಳಲ್ಲಿ ನೀರಾಗಿ ಹರಿದು
ಮನದ ವನದಲ್ಲಿ ಕೈಗೆ ಕೈಕೂಡಿ ಆಲೆದು
ಸ್ವಪ್ನಸಾಮ್ರಾಜ್ಯ ಸಿಂಹಾಸನ
ಇದ್ದ ಪ್ರೀತಿಯೆಲ್ಲ ಗೆದ್ದ ಸವತಿಯಾದಾಗ ಕರುಳ ಆಕ್ರಂದನ.
ದಾರಿ ಹರಿದಾರಿಯಾಗಿ ರಹದಾರಿ ಇಲ್ಲವಾಗಿ
ಕಿರುಬ ಕರಡಿಗಳ ಕಾಡಿನಲ್ಲಿ ಒಬ್ಬಂಟಿಯಾಗಿ
ದಾರಿದಾಹದಲಿ
ಕಿತ್ತು ನೆಲದಲ್ಲಿ ಒಗೆದ ತೊಗಲು
ನೆತ್ತಿ ಹೊತ್ತಿನ ನಡುಹಗಲು.
ಮೈಯೆಲ್ಲ ಬಾಯಾಗಿ ಬಾಯಾರಿ ಬೆಂಡಾಗಿ
ರಾತ್ರಿ ಘರ್ಜನೆಗವಿಯಲ್ಲಿ ಅಗ್ನಿಸ್ಪರ್ಶ
ಕಾಂಡವೆಲ್ಲ ಕೆಂಡವಾಗಿ ಎಲೆಯ ಕೊಲೆಯಾಗಿ
ಆಯಿತೆ ಸರ್ವಾಂಗ ಇದ್ದಿಲು ಬಗ್ಗು!
ಯಾರಿಗಿರಬಹುದು ಗೋಡೆಗೀಚುವ ಹಿಗ್ಗು?
*****