ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು,
ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ?
ಬಿತ್ತಲು ಭೂಮಿಯಿಲ್ಲ – ಮಲಗಲು ಮನೆಯಿಲ್ಲ
ಕಷ್ಟ ಪಟ್ಟು ದುಡಿದರೂ ನಿನಗೆ
ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು.
ಉಸ್ಸೆಂದು ಕೂತು ಬರಿಗೈಯನ್ನು ನೋಡಿ
ಹಣೆ ಬರಹವೆಂದು ಹಳಿಯುವೆಯಾ ಚೋಮ?
ಹರಕು ಮುರುಕು ನೆಲ ನೋಡುವ
ಝೋಪಡಿಯಲಿ ದಿನಗಳ ನೂಕಿ
ಭಾಷಣಗಳ ಬೆಂಕಿಯಲಿ ನೀನು
ಬೆಂದು ಬೂದಿಯಾದೆಯಾ ಚೋಮ?
ಪರಮಾತ್ಮನ ಹೆಸರು ಹೇಳಿ
ಬಡ್ಡಿ ತಿನ್ನುವ ಜನಗಳಿಗೆ
ಚರ್ಮವನ್ನೆ ಸುಲಿದು ಕೊಟ್ಟು
ಬರಿಗೈಯಲಿ – ಖಾಲಿ ಹೊಟ್ಟೆ
ಗಾಳಿಯುಂಡು – ನೀರು ಕುಡಿದೆಯಾ?
ಗಾಳಿಯಲಿ ಜೀವ ಹಾರಿ ಹೋಗಿ
ಹಗುರವಾಗಿ ತೇಲುವ ನಿನ್ನ ಬದುಕು
ತೂಕವಿಲ್ಲ – ಭಾರವಿಲ್ಲದ
ಬರೀ ಎಲುಬಿನ ಗೂಡುಗಳು
ದುಃಖ ತುಂಬಿದ ಸಾಗರದಲಿ
ಕಾಡುವ ಸಾವಿರಾರು ಚಿಂತೆಗಳು.
ದಿನದಿನವೂ ಶಿಲುಬೆಗೇರುತ
ನಿನ್ನ ಬದುಕು-ಸಾಗಿದೆಯೇ ಚೋಮ?
ಅಸೆಂಬ್ಲಿಯಲ್ಲಿರುವ ಮೆತ್ತನ ಸೀಟುಗಳಿಗೆ
ಎತ್ತರದ ಪಂಚತಾರಾ ಹೋಟೇಲುಗಳಿಗೆ
ನಿನ್ನ ಕೂಳಿನ ಕೂಗು ಕೇಳುವುದೆಂತು?
“ದೇವರು ಮಡಗ್ದಂಗಿರು” ಎಂದು
ಹೇಳುವ ಇವರು ನಿನಗೆ
ಬೇಕಾದರೆ ಭಜನೆ ಮಾಡಲು
ಗುಡಿ ಗುಂಡಾರಗಳ ಕಟ್ಟಿಸಿ ಕೊಡುವರು,
ಆದರೆ ನೀನು ಹೆಣೆದ ನಿನ್ನ ಬುಟ್ಟಿಗೆ
ನ್ಯಾಯವಾದ ಬೆಲೆ ಕೊಡಿಸಲಾರರು.
*****