ಒಳಹೊರಗ ತುಂಬು ತಳ ತುದಿಯ ತುಂಬು
ನನ್ನೆಲ್ಲ ಜೀವ ತುಂಬು
ನನದೆಂಬುವದೆಲ್ಲ ಸಂದುಗಳ ತುಂಬು
ಬಿಡಬೇಡವೆಲ್ಲು ಇಂಬು || ೧ ||
ನರಕದೊಳೆ ನಿಂತು ಸಗ್ಗಕ್ಕೆ ಕೈಯ
ಚಾಚುವೆನು ನಿನ್ನದಯದಿ
ಪಾಪವನೆ ತುಳಿದು ಪುಣ್ಯಕ್ಕೆ ಮೈಯ
ನೊಡ್ಡುವೆನು ನಿನ್ನ ಭಯದಿ || ೨ ||
ಕಟುಕಹಿಯು ನನಗೆ ಸುಧೆಯಾಗದಿಹುದೆ
ನೀನೊಲಿದು ಎನ್ನೊಳಿರಲು
ಇರುಳೆಲ್ಲವೆನಗೆ ಹಗಲಾಗದಿಹುದೆ
ನೀಯೆನ್ನ ಎದೆಗೆ ಬರಲು || ೩ ||
ಈ ದೇಹದಾಹ ಹಸಿದವರ ತೀಟೆ
ಬೇಟೆಯಲಿ ನಾಯಿಯಲ್ಲ
ಆ ದಾಹ ಬೇರೆ ಆ ಹಸಿವೆ ಬೇರೆ
ಅವಕಾಗಿ ಬದುಕಿದೆಲ್ಲ || ೪ ||
ಹುಳು ಕೂಡ ಇಲ್ಲಿ ಉಸಿರಾಡುತಿಹುದು
ಬಿಡುಗಡೆಯ ಬಾನಿನಲ್ಲಿ
ಅತ್ಯಂತ ಪಾಪಿಗುದ್ಧಾರವಿಹುದು
ಈ ಕ್ಷಮೆಯ ಭೂಮಿಯಲ್ಲಿ || ೫ ||
ಕಣಕಣವ ತುಂಬು ಚಣಚಣವ ತುಂಬು
ಜೀವನವ ಜಾಲ ತುಂಬು
ಬುವಿಬಾನು ತುಂಬಿ ವಿಶ್ವವನೆ ತುಂಬಿ
ದವನೆನ್ನನೊಲಿದು ತುಂಬು || ೬ ||
*****