ಮೊದಲ ಮಾತು
ಮಗಧ ದೇಶದ ಯಾವ ವಿದ್ವಾಂಸ
ದೀಕ್ಷೆಯನು ಪಡೆದನೊ
ರೇವತ ಮಹಾತೇರನಿಂದ
ಅವನ ಹೆಸರೆ ಬುದ್ಧಘೋಷ
ಅವನು ಆಮೇಲೆ
ಅನುರಾಧಾಪುರಕ್ಕೆ ಹೋಗಿ ಅಲ್ಲಿದ್ದು
ಪಿಟಕತ್ರಯಕ್ಕೆ ಟೀಕೆಯನ್ನೂ ಬರೆದು
ಹಾಗೂ ಯಾವ ಪ್ರಖ್ಯಾತ ಮಹಿಂದರು ಮೊದಲು
ಕಥೆಗಳ ಹೇಳಿದ್ದರೋ ಸಿಂಹಳಿಯಲ್ಲಿ
ಆ ಕಥೆಗಳನು ಮಾಗಧಿಗೆ ತಂದು
ಅಂಥ ಆ ಬುದ್ಧ ಘೋಷನು ಹೇಳಿರುವ ಕಥಯಿದು
ಕಾಲಾಂತರದ ಕಥೆ
ಕಾಲ ಮೀರದ ಹಾಗೆ
ಅರ್ಥಕಿಂತಲು ಮುಖ್ಯ
ಅರ್ಥವಂತಿಕಯೆಂದು
ಕಥೆ ಚಖ್ಖುಪಾಲನದು
ಅವನೂ ಮಹಾತೇರ
-ಕಣ್ಣು
ಕೊಟ್ಟಾಗಲೂ ತೆಗೆದಾಗಲೂ
ಇದ್ದ ಹಾಗೆ
ದಾರಿತಪ್ಪಿ ಅಲೆದಾಗಲೂ
ಅವನ ಜತೆ ಇರುವುದು…
ಹುಟ್ಟು
ಮುಗಿಲಗಲ ಮಳೆಯಂತೆ
ಕಡಲಾಳ ನೀರಂತೆ ಬೆಟ್ಟ-
ದೆತ್ತರ ಹುಲ್ಲ ನಿಗುರಂತೆ
ಕಣ್ಣು
ಕಂಡಂತೆ ಬೆಳಕು
ಕಿವಿ ಕೇಳಿದಂತೆ ಗಾಳಿಯ
ಸದ್ದು-ಎಲ್ಲದಕು
ಮಿಗಿಲು
ಅವಲೋಕಿತೇಶ್ವರನ
ದಯೆ. ಅಂಥ ದಯೆಯಿಂದ
ತುಂಬಿರಲು ಚೇತವನ
ಹೇಳುವೆನು
ಕೇಳೊಂದು
ದಿವಸ ಶ್ರಾವತ್ಥಿದೇಶದಲಿ
ಮುಂಜಾನೆ ಜಳಕಕ್ಕೆಂದು
ಮಹಾ
ಸ್ವರ್ಣನೆಂಬೊಬ್ಬ ವಣಿಕ
ಹತ್ತಿರದ ನದೀ
ತೀರದ ತನಕ
ಅದೋ
ಸೂರ್ಯ ಮೂಡುವ ಹೊತ್ತು
ನದಿಯಾಚೆಯಿಂದ ತಂ-
ಗಾಳಿಯೂ ಬೀಸುತಿತ್ತು
ಅಂಥ
ಗಾಳಿಯಲಿ ದಾರಿ
ಬದಿಗಿದ್ದ ಮರವೊಂದು
ಶಾಖೋಪಶಾಖೆಗಳ ನಿಗರಿ
ಆಚೆಯೇ
ಅಧೋಲೋಕಕ್ಕೆ ಈಚೆ ಸ್ವರ್ಗಕ್ಕೆ
ಇರಿಸಿರುವ ಏಣಿಯ ಹಾಗೆ
ತನ್ನ ಪಕ್ಕಕ್ಕೆ
ದೈವಗಳ
ಕರೆಯುವಂತಿತ್ತು
ಸಕಲ ಜೀವಿಗಳ ತೆಕ್ಕೆಯಲಿ
ಎತ್ತಿಕೊಂಡಂತಿತ್ತು
ಹಕ್ಕಿಗಳ
ಹಾಡೋ ಅಥವ
ಆ ಹೊತ್ತಿನ ಪವಾಡವೊ
ಅಂಥ ಕಲರವವ
ಕೇಳಿ
ನಿಂತು ನೋಡಿದನು ತಲೆಯೆತ್ತಿ
ಮಹಾಸ್ವರ್ಣ ಎಂದೂ
ನೋಡದ ರೀತಿ
ಅಂದು
ಅನಿಸಿತವನಿಗಿದು ಬರೀ
ಮರವಲ್ಲ; ಯಕ್ಷಗಂಧರ್ವರಿಗೆ
ತಕ್ಕ ವಾಸಸ್ಥಳವೆ ಸರಿ
ಇದನು
ಕಡೆಗಣಿಸಿ ಹೋಗುವುದು
ಸರಿಯಲ್ಲ ಹೀಗೆಂದು
ನೆಲವ ಸಾರಿಸಿ ಒಂದು
ದೀಪವ
ಅಲ್ಲಿ ಹಚ್ಚಿಟ್ಟು
ಮರದ ಕೊಂಬೆಯಲೊಂದು
ನಿಕೇತನವ ನಟ್ಟು
ಆಮೇಲೆ
ಪರಿಮಳ ದ್ರವ್ಯಗಳ
ತರಿಸಿ ಪೂಜಿಸಿ ಆತ
ಯಾವ ಧನಕನಕಗಳ
ಬೇಡದೆ
ಬೇಡಿದನೊಂದು ಮಗುವ-
ಆ ಮಗುವೆ ಮಹಾಪಾಲ
ಆಮೇಲೆ ಹುಟ್ಟಿದವ
ಚುಲ್ಲಪಾಲ
ಹೀಗವರು ಒಟ್ಟಿಗೇ
ಬೆಳೆದರೂ ಗೃಹಸ್ಥ-
ರಾದರೂ, ಅವರೊಳಗೆ
ಒಬ್ಬ ಮಾತ್ರವೇ
ಇದ್ದಲ್ಲಿ ಇರದೆ ಮನ
ಕಾಯುತ್ತಿದ್ದನು ತನ್ನ
ಪ್ರತ್ಯೇಕ ವಿಧಿಯ ದಿನ
ದಿನವೂ
ದಾರಿ
ಬುದ್ಧನೆಂದರೆ ಬುದ್ಧ
ಶುದ್ಧೋಧನನ ಮಗನ
ಬಗೆ ಶುದ್ಧ ನಗೆ ಶುದ್ಧ
ನಗೆಯ ಕಾರಣ ಶುದ್ಧ
ಹಾಗಿದ್ದ ಅವನ
ಮಾತುಗಳ ಕೇಳುವುದು-
ಕೇಳಿದರೆ ಮಹಾಪಾಲ
ಕೇಳುವನು ಪರಾತಕೆನ್ :
“ಕೇಳಿದಿಯ ನೀನು
ಕೇಳಬೇಕಾದವರ ?”
“ಕೇಳಿದೆನು- ಕೇಳಿದರೆ
ಕೇಳುವಂಥವರಲ್ಲ
ಅದೋ
ಬೆಳಕು ಹರಿದರು ಕೂಡ
ಮುಗಿವಂಥ ಕನಸಲ್ಲ!”
ಐದು ಬೇಸಿಗೆ ಐದು ಮಳೆಗಾಲ
ಆಮೇಲೆ ಮಾಗಿಯೂ
ಹಸಿರೆಲೆಯ ಭಾರದಲಿ
ಮರಮರವು ತೂಗಿ
ಐದು ವರುಷಕ್ಕೆ
ಐದು ವ್ರ್‍ಅತಧಾರಣವ
ಮಾಡಿದರೆ ಪಂಚಾಂಗ
ಆತನೇ ರಹಣನೂ
ಅಂಥವನು ಕೇಳುವನು
ಪರಾತಕೆನ ಹೀಗೆಂದು :
“ಧರ್ಮ ಯಾವದು ಅ-
ಧರ್ಮ ಯಾವುದು
ನೂರು ದಾರಿಗಳಲಿ ಸರಿ
ದಾರಿ ಯಾವುದು ?”
ಅದಕವನು : ಆಹ!
ನಡೆಯದೇ ತಿಳಿಯುವುದೆ
ದಾರಿಗಳ ಸರಿ ತಪ್ಪು ?
ಆದರೂ, ಮಹಾಪಾಲ ! ಯಾವ
ಧರ್ಮ ಪಾಲನೆಯಿಂದ
ರಹಂದನೆನಿಸುವನು ರಹಣ-ಆ
ಧರ್ಮಕ್ಕೆ ಹೆಸರುಗಳು
ವಿಪಸ್ಸಣ ಧೂರ
ಗಂಧದೂರ-
ಕಮ್ಮ
ಧಾನ ಭಾವನಗಳ ಪಠಣ
ವಿಪಸ್ಸಣ ಧೂರ
ಸುತ್ತ, ವಿನಯ, ಅಭಿಧಮ್ಮಗಳ
ತಿಳಿಯುವುದೆ
ಗಂಧ ದೂರ.”
“ಗಂಧದೂರಕ್ಕೆ ಎಲ್ಲುಂಟು ಸಮಯ ?
ವಿಪಸ್ಸಣ ಧೂರವೇ ಸರಿ!”
“ಸರಿ”ಯೆಂದು ಆತನೂ
ಅಂತೆಯೆ ಮಹಾಪಾಲ
ಪವಾರಣವ ಕೈಗೊಳಲು
ಹಲವು ಯೋಜನ ದೂರ
ಜತೆಗೂಡಿ ಇತರರ-
ಅಂಧನೆ ? ರಹಂದನೆ ?
ಎಷ್ಟು, ಕಾಡುಗಳಲ್ಲಿ
ಎಷ್ಟು ರಾತ್ರಿಗಳು
ಎಷ್ಟು ಬಯಲುಗಳಲ್ಲಿ
ಎಷ್ಟು ಹಗಲುಗಳು
ಹಾಗೆಯೇ ತೊರೆಗಳೂ
ಮರಗಳೂ ಮಡುಗಳೂ
ಬಹಳ ದಿನ ನಾವುಗಳು
ಒಂದು ದಿನ ತಲುಪಿದೆವು
ಒಂದು ಬೆಟ್ಟದ ಮನೆಯ
ಮೇಲಿಂದ ಉದಯಾಸ್ತ
ಕೆಳಗಿಂದ ಗ್ರಾಮ
ದಾರಕರ ದಯೆ ನಮ್ಮ
ಪಾತ್ರೆಗಳ ತುಂಬಿ
ಕಮ್ಮಧಾರದ ಪಠಣ
ನಾವುಗಳು ನಂಬಿ….
ನಂಬಲಿಲ್ಲವೆ ಕಣ್ಣು! ಆಹಾ!
ಕಣ್ಣವೈದ್ಯರು ಬಂದು
ಕಣ್ಣುಗಳ ನೋಡಿದರು
ನೋಡು ಮಹಾಪಾಲ-
ಇದೇನು ಎಂದು.
ಮಂಜು !
ಮಂಜಲ್ಲವೇ ಇದು ಇಂಥ ಮುಂಜಾನೆ
ಬೆಟ್ಟಗಳ ಮೇಲಿಂದ
ಇಳಿಯಬೇಕೋ ಎಂದು-
ಮುಂಜಾನೆ ಇಳಿಯುವುದು
ಸಂಜೆಯೂ ಇಳಿಯುವುದು
ಕಲ್ಲ ಕೊಟರೆಗಳಲ್ಲಿ
ತಡೆದದ್ದು ಬೀಳುವುದು
ನನ್ನ ಕಣ್ಣುಗಳ
ಹುಡುಕಿ ಬರುವುದು.
ವೈದ್ಯರನ್ನುವರು-ಮುಂಜಾನೆಯಲ್ಲ
ಸಂಜೆಯೂ ಅಲ್ಲ
ನಡು ಮಧ್ಯಾಹ್ನ ಇದು
ಕೇವಲ ಹುಲ್ಲ ಕಡ್ಡಿ !
ಉಪವಾಸ ಕಾಲ
ಉಣಲಾರೆ ತಿನ್ನಲಾರೆ
ವೈದ್ಯರ ಮಾತುಗಳ
ಪಾಲಿಸಲಾರೆ
ದೇಹದ ಅಗತ್ಯಗಳ
ಪೂರೈಸಲಾರೆ
ಇನ್ನೊಮ್ಮೆ ಬಂದಾಗ
ಕೇಳುವರು : ಯಾಕೆ,
ನಾನಿತ್ತ ಔಷಧಿಯ
ಬಳಸಲಿಲ್ಲವೆ-ಮಂಜು
ಕರಗಲಿಲ್ಲವೆ ಇನ್ನೂ ?
ಮಂಜು ಮಂಜಲ್ಲ
ಕಣ್ಣ ಕತ್ತಲೆಯೆ-ವೈದ್ಯರೆ!
ಕೃತಜ್ಞತೆ ನಿಮಗೆ
ಕತ್ತಲಲ್ಲೂ ನನಗೆ
ಕಾಣುವುದು ಏನೇನೊ
ಕಾಣದಿದ್ದರು ಸರಿಯೆ
ನನ್ನ ಪಾಡಿಗೆ
ಮನಸು ಹೇಳಿತು
ತನಗೆ ತಾನೇ : ಬೆಪ್ಪೆ !
ಮುಚ್ಚಿದಷ್ಟೇ ಬಾರಿ
ತೆರೆಯಲಾರದು ರಪ್ಪೆ !
ಅಂಧನೆ ? ರಹಂದನೆ ?
ಅದಮ್ಯವಾಗಿತ್ತು
ಅಂಧತ್ವದ ತವಕ !
ರಾತ್ರಿಯೂ ಅಂಥದೇ
ಆಮೇಲೆ ಹಕ್ಕಿಗಳು
ಆಮೇಲೆ ರಹಣರೂ
ನಾನೂ ಅರಿತಿದ್ದೆ
ಕಾರಣವ ತಿಳಿದವರು
ಬಹಳ ಮಾತಾಡುವರು
ಆಮೇಲೆ ಬೆಟ್ಟವನು
ಇಳಿದು ಹೋಗುವರು
ಕಣ್ಣುಗಳ ಕಳಕೊಂಡ
ಮಹಾಪಾಲ ತಾನೇ
ಜನರ ಮಾತಿನ ಚಖ್ಖು-
ಪಾಲ ನಾನೇ
ಪಾಲಿತನ ಆಗಮನ
ಯಾರು ? ಯಾರದು ಸದ್ದು ?
ಮೆಟ್ಟಿಲೇರುವುದು-
ಯಾರೆಂದು ಕೇಳಿದೆ
“ನಾನು, ಪಾಲಿತ”
“ಪಾಲಿತ ? ಯಾವ ಪಾಲಿತ ?”
“ನೀವು ಆಡಿಸಿದ, ಊಡಿಸಿದ”
“ಚುಲ್ಲಪಾಲನ ಮಗನೆ ?”
“ಅವನೇ”
“ಧ್ವನಿಯ ಗುರುತಾಗಿಲಿಲ್ಲ”
“ವರುಷಗಳೇ ಕಳೆದಿವೆ”
“ಯಾರು ತಿಳಿಸಿದರು ?”
“ಮರಳಿರುವ ರಹಣರು”
“ಈಗ…?”
“ಬನ್ನಿ ನನ್ನ ಜತೆ”
“ಬಹಳ ದಿನಗಳ ದಾರಿ- ನಾನೋ
ನಡೆಯಲಾರೆ ಬೇಗ…”
ಒಮ್ಮೆ ನಡೆದಿದ್ದ ದಾರಿಯೇ ಆದರೂ-
ಬೆಟ್ಟಗಳು, ಬಯಲುಗಳು
ಎಲ್ಲ ಕಡೆಯೂ ಮಂಜು
ಮಂಜಲ್ಲ
ಹೂವಿನ ಗಂಧ
ಹಕ್ಕಿಗಳ ಕಲರವ
ಇಷ್ಟು ದಿನ ತಿಳಿಯದ್ದು
ಈಗ ಒಮ್ಮೆಲೇ
ಅಲ್ಲಲ್ಲಿ ನಾವು
ವಿಶ್ರಾಂತಿ ಪಡೆದು
ನಡೆಯುತ್ತೇವೆ ಹೀಗೆ
ಶ್ರಾವತ್ಥಿ ಕಡೆಗೆ-
ಹೀಗಿರಲು-
ಏನು ಏನದು ಹಾಡು !
ಇಂಥ ಕಾಡಿನಲ್ಲೂ
ಯಾರು ಹಾಡಿರಬಹುದು
ಯಾರು ಕೇಳದಲ್ಲೂ !
ಪಾಲಿತನೂ ಕೇಳಿದ.
“ನೀವಿಲ್ಲೆ ಇರಿ, ನಾನು
ನೋಡಿ ಬರುವೆ” ಎಂದ
ಆಮೇಲೆ ಆ
ಹಾಡೂ ಸೊರಗಿ
ಪಾಲಿತನ ಕಾಲ
ಸಪ್ಪಳವೊ ಕರಗಿ
ಆವರಿಸುವುದು ನಿಧಾನ
ಕಾಡಿನ ಗಾಢ ಮೌನ.
ಪಾಲಿತನ ಹಾಡು
ಆ ಹಾಡಿನ ಮೂಲವ ಹುಡುಕಿ
ಹೊರಟವನೇ ನಾನು
ಕಾಡೇ ಹಾಡೇ
ಹಾಡಿನ ಅರ್ಥವೇನು ?
ರಾಗವೆ ಅನುರಾಗವೆ
ಮಾಗುವಂಥ ಮನವೆ
ಎಲ್ಲಾ ಎಲ್ಲಾ
ಅನಿಸುವ ಕಾನನವೆ
ಬೆಟ್ಟದಂಚಿಗೆ ನಿಂತು
ಬಾ ಎನ್ನುತ
ಸೂರ್ಯ ನೆತ್ತಿಗೆ ಬಂದ
ಹೊತ್ತೂ ಅಂಥ
ಅದರ ಮೋಡಿಗೆ ಬಿದ್ದು
ಈಗ ಬರುವೆನೆಂದು
ನಿದ್ದೆಯಲ್ಲಿ ಎದ್ದು
ನಡೆವಂತೆ ಇದ್ದು
ಹಳ್ಳ ಕರೆಗಳೂ
ಗುಡ್ಡ ದಿಬ್ಬಗಳೂ
ನಡೆಸಿದಂತೆ ನನ್ನ
ನಡೆಸುತ್ತಿದ್ದವಳೂ
ಋಷಿ ಕನ್ಯೆಯಲ್ಲ
ರಾಜಕುಮಾರಿಯಲ್ಲ
ಇನ್ನಾವ ಕತೆಯಲ್ಲೂ
ಅವಳು ಬರುವುದಿಲ್ಲ
ಗ್ರಾಮಾಂತರದ ಯುವತಿ
ಕಾಡ ಸೆರಗಿಗೆ
ಎಂದಿನಂತೆಯೆ ಅಂದೂ
ಕಟ್ಟಿಗೆಯ ಹೊರೆಗೆ
ಕೇಳುತಾಳೆ ನಕ್ಕು :
“ಓ ! ಹೊಂತಗಾರ ಭಿಕ್ಕು !
ಈ ದಾರಿಯಾಗಿ ಹೀಗೆ
ಹೊರಟುದಾವ ದಿಕ್ಕು ?”
“ತೊಟ್ಟುದೇನೊ ಸರಿ-ಈ
ವೇಷ ಇದು ತನಕ.
ಭಿಕ್ಕುವಾದೆ ನಿಜಕೂ
ನಿನ್ನ ಕಂಡ ಬಳಿಕ !”
ಮತ್ತು ಕಂಡೆ ನಾನವಳ
ನಗ್ನ ಪಾದಗಳ
ಕಂಡೆ ಕಾಲುಗಳ
ಮೀನ ಖಂಡಗಳ
ಇಷ್ಟೊಂದು ದೂರ
ಹುಡುಕಿ ಇವಳನ್ನೇ
ಶ್ರಾವತ್ಥಿ ಎಂದೋ ಕಳೆದು
ಖಂಡಾಂತರಗಳನ್ನೇ…
ಆಮೇಲೆಯೂ ಒಮ್ಮೊಮ್ಮೆ
ಬಡಿದೆಬ್ಬಿಸಿದಂತೆ
ಎಲ್ಲಿರುವೆ ? ಇಲ್ಲೇಕೆ
ಯಾರು ನನ್ನ ಮುಂದೆ ?
ಏಳಲೆ ? ಹೊರಡಲೆ ?
ಮಬ್ಬಿನಲಿ ಕರಗಿಬಿಡಲೆ ?
ಏಳು ಏಳೆನ್ನುತಿತ್ತು ಮನ
ಅಂಥ ಹೊತ್ತಿನಲ್ಲೆ
ಆ ಮುಂಜಾವದ ನಿದ್ದೆ
ಇನ್ನೊಮ್ಮೆಯೂ ಕವಿದು
ಆಗ ಕೇಳಿದ ಹಾಡು
ಈಗಲೂ ಕರೆದು
ಯಕ್ಷ ಪ್ರಶ್ನೆ
ಏಳಯ್ಯ ! ಯಾರು ನೀನಿಷ್ಟು ದೂರವು ಬಂದು
ಕುಳಿತಿರುವೆ ಹೀಗೆ-
ಇಷ್ಟು ಹೊತ್ತಿನಲಿ ಈ ಕಾಡಿನಲಿ
ಹಗಲ ಸೆಕೆಯಿಳಿದು ಸಂಜೆಯೂ
ಕರಗಿ ಹೋಗುವುದು
ಮರಮರಗಳಿಂದಲೂ
ಕತ್ತಲೆಯು ಕೆಳಗಿಳಿದು
ತುಂಬುವುದು-ಆಮೇಲೆ
ಮರವಿಲ ನೆಲವಿಲ್ಲ
ಮೇಲೆ ಆಕಾಶವೂ ಇಲ್ಲ.
ಇಷ್ಟಕೂ ಆ ಹಾಡ
ನೀನೂ ಕೇಳಿದವ
ಅತ್ತ ಹೋದವನೊಬ್ಬ
ಇತ್ತ ಕಾದವನೊಬ್ಬ
ದಾರಿ ಕವಲೊಡಯುವುದು
ಇಲ್ಲಿಯೇ-ನಿಜ,
ಕಣ್ಣಿರದ ನಿನಗೆ
ಹಗಲಿಲ್ಲ ಇರುಳಿಲ್ಲ
ದಾರಿಗಳ ಗುರುತೂ ಇಲ್ಲ-
ಆದ್ದರಿಂದಲೇ ಗಾನ-
ವದರ ಆಹ್ವಾನ
ನಿನಗೆ ನೀನೇ
ಎತ್ತಿಕೊ ಊರುಗೋಲು
ಮೆಲ್ಲನಿಡು ಹೆಜ್ಜೆ
ಒಂದಾದಮೇಲೊಂದು
ಎಲ್ಲ ದಿಕ್ಕುಗಳು ಒಂದೇ
ಕಾಲಿಟ್ಟ ಕಡೆ ಮುಂದೆ
ಎಲ್ಲ ಶ್ರಾವತ್ಥಿ? ಎಲ್ಲಿ ಚೇತವನ?
ಬಿದ್ದಲ್ಲಿ ಹಳ್ಳವೂ ಎದ್ದಲ್ಲಿ ಬೆಟ್ಟವೂ
ಎತ್ತ ನಡೆದರು ನೀನು
ಸುತ್ತ ನಡೆಯಲೆಬೇಕು
ಎಷ್ಟೊಂದ ಕಂಡೆ ನೀ!
ಮುಂದೆ ಹೋದಷ್ಟೆ
ಹಿಂದೆಯೂ ಸರಿದೆ
ಸರಿಯೆಂದ ಕೂಡಲೇ
ಕನಸು
ಯಾವುದಿದು ಯತಾವುದಿದು ಎಲಾ !
ಎನ್ನುವನು ಚಖ್ಖುಪಾಲ-
ಕಾಣದ ಕಡಲ ಮೊರೆಯೆ
ಸಾವಿನ ಕರೆಯೆ?
ಹುಡುಕಬೇಡ ಆದೇ
ಈ ಕಡೆಗೆ ಬರುತಿದೆ
ಕುದುರೆಯ ಹಿಂದೆ ಗಾಲಿಗಳು
ಗಾಲಿಗಳ ಹಿಂದೆ ಧೂಳೂ
ಮೊದಲು ಖುರಪುಟದ
ಸದ್ದು, ಆಮೇಲೆ ತೆರೆದ
ಯಾವುದೀ ಪಟ್ಟಣವು
ಯಾಕೆ ಇಷ್ಟೊಂದು ಜನವು ?
ಆಮೋಲೆ ಆ ಪಟ್ಟಣದ ಬೀದಿಯಲಿ
ನಡೆಯುವನು (ನಿಜಕೂ ಕನಸಿನಲಿ)
ಎಂದೋ ಎಲ್ಲವನೂ
ನೋಡಿದಂತನಿಸಿ ನೋಡುವನು
ಬೀದಿಯಲಿ ದೀಪಗಳು ಬೆಳಗಿ
ಆಕಾಶದಿ ನಕ್ಷತ್ರಗಳೂ ಮುಳುಗಿ
ಆಚೀಚೆ ಅಂಗಡಿ ಸಾಲು
ಸಾಲು ಸಾಲಿಗೆ ದೇಶವಿದೇಶಗಳ ಮಾಲು !
ದೇವಾಲಯಗಳ ಮಂತ್ರಘೋಷ
ಸಾಧು ಸಂತರ ವಿವಿಧ ವೇಷ
ನಿಧಾನ ಎತ್ತಿನ ಬಂಡಿ
ನಡೆದಷ್ಟೂ ಮುಗಿಯದ ಮಂಡಿ
ಯಾಕೆ ತಾನಿಲ್ಲಿ ಈ ಗಳಿಗೆ
ಹೊರಟುದಾದರೂ ಎಲ್ಲಿಗೆ ?
ಒಂದೂ ತಿಳಿಯದೆ ಅತ್ತಿಂದಿತ್ತ
ಆ ಬೀದಿಗಳಲ್ಲಿ ನಡೆಯುತ್ತ
ಅನಿಸುವುದು ಕಲವು ಸಲ
ಶ್ರಾವತ್ಥಿಯೂ ಹೀಗೆ ಇತ್ತಲ್ಲ?
ಅಥವ ಇದುವೇ ಶ್ರಾವತ್ಥಿ
ಅಥವ ಎಲ್ಲವನು ಮರೆತ ಸ್ಥಿತಿ ?
ತನ್ನ ಜತಯಿದ್ದವರು ಈಗೆಲ್ಲಿ ?
ಎಂದು ಹುಡುಕುತ್ತಾನೆ ಕೇರಿಗಳಲ್ಲಿ
ಬಿಡದೆ ಕೂಗುವರು ಯಾರು ಹೀಗೆ
ಪ್ರತಿಯೊಂದು ಬಾಗಿಲ ಬಳಿ ನಿಂತ ಹಾಗೆ-
ಸಾಗುತಿದ್ದರೆ ಚಖ್ಖುಪಾಲ ಇಂತು
ಪಾಪವೇ ಎದುರಾದಂತೆ ಬಂತು
ಇದುವರೆಗೆ ನೋಡಿರದಂಥ ರೂಪ
ಅವನ ಅತಿ ಸಮೀಪ
ಹೆಣ್ಣಲ್ಲ ಗಂಡಲ್ಲ, ಕೇವಲ ಹುಣ್ಣು
ಕೊಳೆತು ಕೆಟ್ಟಿದ್ದ ಒಂದು ಜತೆ ಕಣ್ಣು
ಅಧೋಲೋಕದಿಂದ ಬಂದಂತೆ ಇತ್ತು
ತನ್ನ ಮುಖಕ್ಕೇ ಎರಗುವಂತಿತ್ತು
ಕೆಟ್ಟ ಕನಸಿದರಿಂದ
ಎಚ್ಚೆರಾಗಲೆಬೇಕೆಂದ
ಕಣ್ಣ ಹಿಸುಕಿದರೂ-ಕನಸಲ್ಲ
ಹಿಸುಕಿದ್ದು ತನ್ನ ಕಣ್ಣುಗಳೆ ಅಲ್ಲ!
ಓಡುವನು ಚಖ್ಖುಪಾಲ
ಗೆಲ್ಲುವಂತೇ ಕಾಲ
ಓಡು! ಓಡಿದರು ಎತ್ತಕಡೆ
ಇದಕಿಲ್ಲ ನಿಲುಗಡೆ
ಮುಚ್ಚಿದ್ದವು ಬಾಗಿಲು ಕಿಟಿಕಿ
ಭದ್ರವಾಗಿದ್ದವು ಅಗಳಿ ಹಾಕಿ
ಇದು ತನಕ ಇದ್ದ ಸಂತೆ ಸಹ
ಒಮ್ಮೆಲೇ ಮಾಯವಾದಂತೆ ಅಹ !
ಬೀದಿ ದೀಪಗಳೂ ಆರಿಹೋಗಿ
ಬೀದಿ ಜನವೂ ಮಾಯವಾಗಿ
ಆದರೂ ಆರದೇ
ಆ ಕಣ್ಣುಗಳವನ ಬಿಡದೇ
ಭಯ ವಿಸ್ಮಯಗಳಿಂದ
ಹಿಂದು ಹಿಂದಕೆ ಅಲ್ಲಿಂದ
ಕಿತ್ತು ಸರಿವನು ಚಖ್ಖುಪಾಲ
ನೆಲ ಕಚ್ಚಿದ ತನ್ನ ಕಾಲ
ಕಲ್ಲೆಡವಿ ಬಿದ್ದನೇ
ವಿಸ್ಮೃತಿಯಳಿದನೇ
ಎಷ್ಟೊ ಮೆಟ್ಟಿಲ ಕೆಳಗೆ
ಗಂಗಾನದೀ ತಟಿಗೆ
ಅವರವರ ಶ್ರಾವತ್ಥಿ
ಯಕ್ಷಲೋಕದಲಿ ಯಕ್ಷರಾಜ
ಎಂದಿನಂತೇ ಕುಳಿತಿರು ಅವನ
ಮುಟ್ಟಿದರೆ ಹೂವಿನಂತಿದ್ದ ಸಿಂಹಾಸನ
ಕಠಿಣಗೊಂಡಿತು ಹಾಸುಗಲ್ಲಿನ ಹಾಗೇ
ಯಾಕೆ ಏನೆಂದು ನೋಡಿದರೆ ಮನದೊಳಗೆ
ಒಂದು ಯೋಜನ ಕೆಳಗೊಬ್ಬ ಮನುಷ್ಯ
ತನ್ನ ಭಕ್ತನ ಮಗ ಕೈಗಳರಡನು ಚಾಚಿ
ಬೀಳುತೇಳುತ ನಡೆವ ದೃಶ್ಯ
ಮಹಾಪಾಲನೇ ಚಖ್ಖುಪಾಲ ಅವಶ್ಯ
ಶ್ರಾವತ್ಥಿಗೆಂದು ಹೊರಟವನು ದಾರಿಯಲಿ
ಏಕಾಕಿ ಸುತ್ತುತಿದ್ದಾನೆ ತಾನು
ಬಂದ ದಾರಿಯಲೆ ಮರಳಿ ಮರಳಿ
ಒಬ್ಬ ಯಾತ್ರಿಕನಂತೆ ಹೋಗಿ ಅವನ ಬಳಿ
ಕರೆದೊಯ್ಯುವೆನು ಅವನ ಗುರಿಗೆ
ಹೀಗೆಂದು ಆ ಯಕ್ಷರಾಜನಲ್ಲಿಗೆ ತೆರಳಿ
ಹೇಳಿದನು ಚಖ್ಖುಪಾಲನಿಗೆ ಹೀಗೆ:
“ಹೊರಟಿರಲ್ಲವೊ ನೀವೂ ಶ್ರಾವತ್ಥಿ ನಗರಿಗೆ ?
ಬನ್ನಿ ನನ್ನ ಜತೆ, ಮುಟ್ಟಿಸುವೆನು
ಅತಿ ಶೀಘ್ರ ನಿಮ್ಮನು” ಎನಲು ಚಖ್ಖುಪಾಲ
ಆ ಸ್ಥಿತಿಯಲ್ಲೂ ಹೇಳುವನು-
“ಕಣ್ಣಿರದವನು ನಾನು !
ನಿಮಗೇಕೆ ತೊಂದರೆ ?
ಕೊರಡು ಕಟ್ಟಿದಂತಾಗುವುದು ನಿಮಗೆ
ನಿಮ್ಮ ಜತೆ ನಾನೂ ಸೇರಿದರೆ.”
ಎಂದರೂ ಬಿಡದೆ ಕೈಹಿಡಿದು ನಡೆಸಿದರೆ
ಚಖ್ಖುಪಾಲನಿಗೆ ನಿಜಕೂ ಅಚ್ಚರಿ-
ನಡೆದದು ನಡೆಯಲ್ಲ-ಅಂಥ ಯಾತ್ರೆಯಿದು!
ಮಾರ್ಗವೋ ಹೂವಿನ ಹಾಸಿಗೆಯೆ ಸರಿ!
ಅತಿ ಶೀಘ್ರ ಅವರು ಸೇರಲು ತಮ್ಮ ಗುರಿ,
ಕೇಳುವನು ಚಖ್ಖುಪಾಲ : “ಶ್ರಾವತ್ಥಿ ಬಹುದೂರ
ಹೇಗೆ ತಲುಪಿದೆವು ಇಷ್ಟು ಬೇಗ ?”
ಯಕ್ಷನದಕ್ಕೆ : “ಎಲೆ ಮಹಾತೇರ !
ನಿನಗೆ ಹೇಳುವುದೇನು ? ಅವರವರ
ಶ್ರಾವತ್ಥಿ ಅವರವರ ಮನಸಿನಲಿ.”
ಏನದರ ಅರ್ಥ ಎಂದು ಕೇಳಿದರೆ ಯಾರೂ
ಉತ್ತರಿಸಲಿಲ-ಅಲ್ಲಿ.
ದೂರು
ನಸುನಗುವನು ಚಖ್ಖುಪಾಲ
ಅಂತರಂಗದಲಿ
ಸ್ಮೃತಿ ವಿಸ್ಮೃತಿಗಳ ಹಾಗೂ
ಭೂತ ಭವಿಷ್ಯಗಳ
ನಡುವೆ ಕಳೆಯುವನು
ತನ್ನ ದೈನಂದಿನವ
ಆ ವಿಹಾರದಲಿ.
ಹೀಗಿರಲು ಒಂದು ದಿನ
ರಹಣರು ಹಲವು ಜನ
ಪರಾತಕೆನ ದರ್ಶನಕೆ
ಹೊರಟವರು ಅಷ್ಟೂ ಜನ
ತಂಗುವರು ಅಲ್ಲಿ.
ಅಂದು ಸಂಜೆಗೇ ಅಕಾಲವರ್‍ಷ
ಕಪ್ಪಿಟ್ಟು ಸುರಿಯುವುದು
ಇರುಳೆಲ್ಲ ಹೀಗೆಯೇ
ಮುಂಜಾನೆ ಯಾತ್ರಿಕರು
ಎದ್ದು ನೋಡಿದರೆ
ಅಷ್ಟು ಹೊತ್ತಿಗೇ ನಿತ್ಯವಿಧಿ
ಮುಗಿಸಿರುವ ಚಖ್ಖುಪಾಲ
ನಡೆಯುತಿರುವನು ತನ್ನ
ಜಗುಲಿಯ ಉದ್ದಗಲ
ಅವನ ಪಾದದ ಕೆಳಗೆ
ಸಾಯುತಿವೆ ನೂರಾರು
ಅಸಹಾಯಕ ಕೀಟಗಳು!
ಅವು ನಿನ್ನೆಯ ಮಳೆಯಿಂದ
ಆಶ್ರಯ ಹುಡುಕಿ ಬಂದವು!
ಕಂಡು ರಹಣರು
ರೇಗಿ ನುಡಿಯುವರು :
“ಕುರುಡ ! ಕಣ್ಣು ಕುರುಡೆಂದು
ಬುದ್ದಿಯೂ ಕುರುಡೆ ?
ನಿನ್ನ ಕಾಲಿನ ಕೆಳಗೆ
ಬಲಿಯಾದವೆಷ್ಟು ಜೀವಿಗಳು !
ಸುಮ್ಮನಿರಬಾರದೇ ಒಂದು ಕಡೆ!”
ಅಷ್ಟಕ್ಕೆ ತೃಪ್ತರಾಗದೆ ಅವರು
ಚೇತವನಕ್ಕೆ ಹೋಗಿ
ದೂರುವರು ಪರಾತಕೆನ ಬಳಿ
ಅದಕವನು ನಕ್ಕು
ಕೇಳುವನು ಅವರ :
“ಚಕ್ಕುಪಾಲ ರಹಂದ!
ಬೇಕುಬೇಕೆಂದೇ
ಕೊಲ್ಲುವನೆ ಜಂತುಗಳ ?
ಕಂಡಿರಲಾರ.”
ಆದ ಕೇಲಿ ರಹಣರು:
“ರಹಂದನಾಗಿದ್ದೂ ಆತ
ಅಂಧನಾದುದು ಯಾಕೆ?”
ಅದಕೆ ತಥಾಗತ
ಹೇಳುವನು ಈ
ಮುಂದಣ ಕಥೆಯ
ವಾರಣಾಸಿಯಲೊಬ್ಬ ವೈದ್ಯ
ಕಥೆಗೆ ಕಥೆಯುಂಟು, ಕೇಳುವುದು ರಹಣರೆ !
ವಾರಣಾಸಿಯಲೊಬ್ಬ ವೈದ್ಯ
ಒಂದು ದಿನ ಬೀದಿಯಲಿ ನಡೆಯುವನು ಹೀಗೆಯೇ
ರೋಗಿಗಳು ಯಾರೂ ಇಲ್ಲ ಸದ್ಯ
ಹೀಗಿರಲು ಎದುರುಗಡೆಯಿಂದ ಒಬ್ಬಾಕೆ
ಮಧ್ಯವಯಸ್ಸಿನ ಹೆಣ್ಣು
ತಡವರಿಸಿ ತಡವರಿಸಿ ಬರುತಿದಾಳೆ-ಆಗಲೇ
ಕುರುಡಾಗುತಿದ್ದ ಕಣ್ಣು
ನಿಲಿಸಿ ಕೇಳುವನು ವೈದ್ಯನವಳನ್ನು :
“ನಿನ್ನ ದೃಷ್ಟಿಯ ನಿನಗೆ ಮರಳಿ
ಕೊಡಿಸುವೆನು ; ಕೊಡಿಸಿದರೆ. ನೀನೀನು ನನಗೆ
ಪ್ರತಿಫಲವ ಕೂಡಬಲ್ಲಿ ?”
ಅದಕೆ ಹೇಳುವಳು : ವೈದ್ಯರೆ !
ನನ್ನ ಕಣ್ಣುಗಳ ಮರಳಿ ನನಗೆ
ಕೊಟ್ಟಿರಾದರೆ ನೀವು ಕೇಳಿದ್ದು ಕೊಡುವೆ
ಹೇಳಿ! ಯಾವುದು ಇಷ್ಟ ನಿಮಗೆ ? ”
“ಜೀತ ! ನನ್ನ ಜೀತದಾಳಾಗುವಿಯ ಆ-
ಜೀವಪರ್ಯಂತ ?”
“ಓಹೋ ! ಆಗುವೆನ್ನು, ಅದಕೇನು! ದೇವರೇ
ದೇವರಾಣೆಗೂ ಖಂಡಿತ.”
ಸರಿಯೆಂದು ವೈದ್ಯನವಳಿಗೆ
ಮೂಲಿಕೆ ಮದ್ದನೊಂದ
ಕೊಟ್ಟು ಆಮೇಲೆ ನನ್ನ
ಬಳಿಗೆ ಬಾರೆಂದ.
ವಾರದ ಮೇಲೆ ವಾರ ಕಳೆದರೂ
ಆಕೆ ಬರದಿರಲಾಗಿ
ವೈದ್ಯ ತಾನೇ ಭೀಟಿಯಾಗುವನು
ಅವಳ ಮನೆಗೆ ಹೋಗಿ
ಅವಳಿಗೋ ! ದೃಷ್ಟಿ ಸಂಪೂರ್ಣ
ಬಂದಿದ್ದರೂ ಕೂಡ
ಜೀತಕ್ಕೆ ಬೆದರಿ ನಟಿಸಿದಳು ಅವನೆದುರು
ಮೊದಲಿಗಿಂತಲೂ ಕುರುಡ
ಕಂಡು ಒಳಗೇ ಕುದಿದು ಏನೊಂದೂ
ತಿಲಿಯದವನಂತೆ
ವೈದ್ಯನವಳಿಗೆ ಹೇಳುವನು ನಯವಾಗಿ
“ಏನೂ ಮಾಡದಿರು ಚಿಂತೆ
ಚಿಕಿತ್ಸೆಯಾದರೆ ಮುಗಿದಿಲ್ಲ ಇನ್ನೂ
ಇದೋ ಈ ಹೊಸ ಮದ್ದನು ಹಚ್ಚು.
ಕಡಿಮೆಯಾಗುವುದು ಈ ಕೂಡಲೇ
ನಿನ್ನ ಕಣ್ಣನ ಪೂರ್ತಿ ಕಿಚ್ಚು”
ಅವಳೇನು ಕಾಣುವಳು ವೈದ್ಯನ ಮನವ ?
ಹಚ್ಚುವಳು ಹೇಳಿದಂತೆಯೆ ಅರೆದು
ಜೀರ್ಣವಾಗುವವು ಕಣ್ಣುಗಳು ಆ
ಕ್ಷಣದಿಂದ ಉರಿದು ಉರಿದು.
ಅಲೆಯುವಳು ಆಮೇಲೆ ಕೆಲವುದಿನ ಹೀಗೆ
ವಾರಣಾಸಿಯ ಬೀದಿಗಳಲಿ
ಕೊನೆಗೆ ಸ್ನಾನಘಟ್ಟದಲಿ ದಾರಿ-
ತಪ್ಪಿ ಗಂಗಾನದಿಯಲಿ
ಆದ್ದರಿಂದಲೆ ಚಖ್ಖುಪಾಲನೂ
ಕಣ್ಣುಗಳ ಕಳೆದುಕೊಂಡು
ಸ್ಮೃತಿ ವಿಸ್ಮೃತಿಗಳ ನಡುವೆ ಆಗಾಗ
ತನ್ನನೇ ಕಂಡುಕೊಂಡು!
*****