ಭಾಗ ೧
Bertolt Brecht, ಅಂತರಾಷ್ಟ್ರೀಯ ಖ್ಯಾತಿಯ ಜರ್ಮನ ಕವಿ, ನಾಟಕಕಾರ. ಇತನ ಮೂಲ ಹೆಸರು Eugen Berhold Freidrich. ೧೮೯೮ ಫೆಬ್ರುವರಿ ೧೦ರಂದು ಇಂದಿನ ಯುನೈಟೆಡ್ ಜರ್ಮನಿಯ Augsburgನಲ್ಲಿ ಮೇಲ ಮಧ್ಯಮವರ್ಗದಲ್ಲಿ ಜನಿಸಿದ ಈತನ ತಂದೆ ಕಾಗದ ಕಾರಖಾನೆಯೊಂದರ ನಿರ್ದೇಶಕರಾಗಿದ್ದರು. ತಂದೆ ಕ್ಯಾಥೋಲಿಕ್ ಮತ್ತು ತಾಯಿ ಪ್ರೊಟೆಸ್ಟಂಟ್ ಆಗಿದ್ದು, ಬ್ರೇಕ್ಟ ಮುಂದೆ ತಾಯಿಯ ಪ್ರೊಟೆಸ್ಟಂಟ್ ನಂಬಿಕೆಗಳಲ್ಲಿ ಹೆಚ್ಚು ಆಸಕ್ತನಾದ. ಕಾರಣ ಮಾರ್ಟಿನ್ ಲೂಥರನ ನ್ಯೂ ಟೆಸ್ಟಾಮೆಂಟನ್ ತತ್ವಗಳಿಂದ ಪ್ರಭಾವಿತನಾದ. ಮುಂದೆ ಆತನ ರಾಜಕೀಯ ಮೂಲಾಧಾರಗಳು ಕೂಡ ಪ್ರೊಟೆಸ್ಟಂಟ್ ಸಿದ್ಧಾಂತಗಳನ್ನೆ ಎತ್ತಿ ಹಿಡಿದವು. ಅಷ್ಟೇ ಅಲ್ಲದೇ ಬಾಲ್ಯದಲ್ಲಿ ಆಗ್ಸಬರ್ಗನ ವಾರ್ಷಿಕ ಉತ್ಸವದಲ್ಲಿ ಕಂಡ ಇತಿಹಾಸದ ಘಟನೆಗಳ ಪನೋರಮಾ ನಾಟಕ ವೀಕ್ಷಿಸಿದ ಆತ ಅದರಿಂದ ಬಹಳ ಉದ್ದಿಪಿಸಲ್ಪಟ್ಟಿದ್ದ.
ಅದು ಮೊದಲ ಮಹಾಯುದ್ದದ ಸಂದರ್ಭ, ಬ್ರೇಕ್ಟ ಮುನಿಚ್ ಯುನಿವರ್ಸಿಟಿಯಲ್ಲಿ ವೈದ್ಯಕೀಯ ಅಧ್ಯಯನದಲ್ಲಿ ತೊಡಗಿದಾಗಲೇ ಸೇನೆಯೊಂದರ ಮಿಲಿಟರಿ ಆಸ್ಪತ್ರೆಗೆ ಕಳಿಸಲ್ಪಟ್ಟ. ಅರೆಸತ್ತ ಗಾಯಗೊಂಡ ಸೈನಿಕರ ದೇಹಗಳ ಚಿಕಿತ್ಸೆ ಮಾಡುತ್ತ ಯಾವುದೋ ಅನುಭವಕ್ಕೆ ತನ್ನ ತೆರೆದುಕೊಳ್ಳುತ್ತ ಹೋಗಿ ಆ ದೆಸೆಯಲ್ಲಿಯೇ ಆತನ ವಿಡಂಬನಾತ್ಮಕ ಕವನ Legend of the Dead Soldier ರಚಿಸಿದ. ಕ್ರಮೇಣ ಈ ಚಳುವಳಿ ಕ್ರಾಂತಿಗಳ ಒಳಗೊಳ್ಳುತ್ತ ಹೋದ ಬ್ರೇಕ್ಟ ೧೯೨೧ರಲ್ಲಿ ತಾಯಿಯ ಮರಣದ ನಂತರ ಬರ್ಲಿನ್‌ಗೆ ಹೋದ. ಅಲ್ಲಿ ಅಭಿವ್ಯಕ್ತಿ ಚಳುವಳಿಯ ಬಹುಮುಖ್ಯ ವ್ಯಕ್ತಿತ್ವ Arnolt Bronven ನೊಂದಿಗೆ ಸಂಪರ್ಕಕ್ಕೆ ಬರುತ್ತಲೇ ಅವನೊಂದಿಗೆ ಸಹಯೋಗದಲ್ಲಿ ಹೊಸ ಮಾದರಿಯ ನಾಟಕ ಹಾಗೂ ಸಿನೇಮಾಗಳ ಮೂಲಕ ಸಾಮಾಜಿಕ ಬದಲಾವಣೆಗೆ ಹೊಸ ದೃಷ್ಟಿಕೋನದೊಂದಿಗೆ ಮುನ್ನುಡೆ ಇಟ್ಟ.
ಆತನ ಪ್ರಕಾರ ನಾಟಕಗಳು ಸಾಮಾಜಿಕ ಬದಲಾವಣೆಗೆ ಒಂದು ಸಾಧನ. ಅದಕ್ಕೆಂದೆ ಆತ Epic Theatre ಗಳ ಪ್ರಸ್ತುತತೆಯ ವಿಸ್ತೃತಗೊಳಿಸಿದ. ಹಳೆಯ ನಾಟಕ ಪರಂಪರೆ ಅದರ ಪ್ರಸ್ತುತಿ ಹಾಗೂ ಆತನ ಹೊಸ ಪರಿಕಲ್ಪನೆಯ ನಾಟಕದ ಕುರಿತು ಪ್ರೇಕ್ಷಕರ ಅನುಭವಗಳ ಆಧಾರದ ಮೇಲೆ ಹೀಗೆ ಹೇಳುತ್ತಾನೆ. ಸಾಂಪ್ರದಾಯಿಕ ಶೈಲಿಯ ನಾಟಕ ನೋಡಿಬಂದ ಪ್ರೇಕ್ಷಕನೊಬ್ಬ ಹೀಗೆನ್ನಬಹುದು “This human being’s suffering moves me because there is no way out of him. This is great art. It bears the mark of the inevitable. Im weeping with those who weep on the stage, laughing with thouse who laugh.” “ನಾಟಕದಲ್ಲಿಯ ಆ ಮನುಷ್ಯನ ನೋವುಗಳು ನನ್ನ ಬಹಳ ಕಾಡಿದವು. ಯಾಕೆಂದರೆ ಆತನಿಗೆ ಬೇರೆ ದಾರಿಗಳೇ ಇರಲಿಲ್ಲ… ಬದುಕಿನ ಅನಿವಾರ್ಯ ಸಂಗತಿಗಳು ಹೇಗೆಂಬುದ ಬಿಂಬಿಸಿದ ಇದೊಂದು ಅಪೂರ್ವ ನಾಟಕ. ಸ್ಟೇಜಿನ ಮೇಲಿನ ಆ ಪಾತ್ರಗಳು ಅಳುತ್ತಿರುವಾಗ ನಾನೂ ಅಳುತ್ತಿದ್ದೆ, ನಗುವಾಗ ನಾನು ನಗುತ್ತಿದ್ದೆ” ಇದು ಸಾಮಾನ್ಯ ನಾಟಕಗಳು ಪ್ರೇಕ್ಷಕನ ಮೇಲೆ ಉಂಟುಮಾಡುವ ಪರಿಣಾಮವೆಂದು ಹೇಳುತ್ತಾನೆ.
ಅದೇ ಎಪಿಕ್ ಥೇಟರ್‌ನ ನಾಟಕ ನೋಡಿದ ಪ್ರೇಕ್ಷಕನ ಪ್ರತಿಸ್ಪಂದನೆ ಹೀಗಿರುತ್ತದೆ, “This is most surprising, hardly credible. This will have to stop. This human being’s suffering moves me because there would have been a way out for him. Nothing here seems inevitable. Im laughing with those who weep on the stage, weeping with those who laugh”
“ಇದು ತುಂಬಾ ಆಶ್ಚರ್ಯಕರ ಮತ್ತು ನಂಬಲಾಗುತ್ತಲೇ ಇಲ್ಲ. ನಾಟಕದ ಆ ಮನುಷ್ಯನ ಬವಣೆ ನೋಡಿ ನಿಜಕ್ಕೂ ವಿಚಲಿತನಾದೆ. ಆದರವನಿಗೆ ಅದರಿಂದ ಹೊರಬರಬಹುದಿತ್ತು. ಈ ನಾಟಕವೊಂದು ಅದ್ಭುತ ಕಲೆ. ಇಲ್ಯಾವುದು ಅಸಾದ್ಯವೆನಿಸುವುದಿಲ್ಲ. ನಾಟಕದಲ್ಲಿಯ ಪಾತ್ರ ನಗುತ್ತಿರುವಾಗ ನಾನು ಅಳುತ್ತಿದ್ದೆ, ಅದೇ ಆ ಪಾತ್ರ ಅಳುತ್ತಿದ್ದಾಗ ನಾನು ನಗುತ್ತಿದ್ದೆ.”
ನಟ ಅಭಿವ್ಯಕ್ತಿಸುವ ಭಾವನೆಗಳು ರಸಗಳು ಪ್ರೇಕ್ಷಕನಲ್ಲಿ ಭಿನ್ನ ರಸಗಳ ಭಾವನೆಗಳನ್ನು ಉದ್ದಿಪಿಸುತ್ತವೆ. ಸಂಪೂರ್ಣ ವಿಭಿನ್ನ ಸಂವೇದನೆಗಳನ್ನು ಅಭಿವ್ಯಕ್ತಿಸುವ ನಟ ಮತ್ತು ಪ್ರೇಕ್ಷಕನ ನಡುವಿನ ಸಂವಹನ ಪ್ರತಿಪಾದಿಸಿದ ಹೊಸ ಅದ್ವಿತೀಯ ಶೈಲಿ ಇದು. ನಾಟಕ ನೋಡಿದ ಪ್ರೇಕ್ಷಕನ ಭಿನ್ನ ಅಭಿವ್ಯಕ್ತಿಯು ಎಪಿಕ್ ನಾಟಕಗಳಲ್ಲಿಯ ಅದ್ವಿತೀಯ ಪರಿಣಾಮಗಳ ತೋರಿಸಿಕೊಡುತ್ತದೆ. ಇದನ್ನು ಮೂಡಿಸಿದ ಕೀರ್ತಿ ಕೂಡ ಬ್ರೇಕ್ಟಗೆ ಸೇರುತ್ತದೆ.
ಎಪಿಕ್ ಥೆಟರ್ ಇದು ಮೊದಲ ಮಹಾಯುಧ್ಧದ ನಂತರ ಜರ್ಮನಿಯ ನಾಟಕ ರಂಗದಲ್ಲಿ ಮೂಡಿಬಂದ ಹೊಸ ಅಭಿವ್ಯಕ್ತಿಯ ಪ್ರಯೋಗ. ಇಲ್ಲಿ ನಾಟಕದ ಸ್ವರೂಪಕ್ಕಿಂತ ಅದರ ಮೂಲವಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಸತ್ಯದ ಪ್ರತಿಪಾದನೆಗಿಂತ ಭ್ರಮೆಯ ಉನ್ನತೀಕರಣಕ್ಕೆ ಆದ್ಯತೆ ಇದೆ. ವಿಸ್ತೃತತೆಗಿಂತ ಪ್ರಸ್ತುತತೆಗೆ ಮಹತ್ವ ಕೊಡುತ್ತದೆ. ಮತ್ತದರ ಮುಖ್ಯ ಉದ್ದೇಶ ಕೂಡಾ ನೈತಿಕತೆಯ ಎತ್ತಿ ಹಿಡಿಯುವುದು. ನಿರೂಪಕ, ಕೋರಸ್, ಸ್ವಗತ ಮುಂತಾದವು ಎಪಿಕ್ ನಾಟಕದ ಪರಿಕರಗಳು. ಕಾರಕಕಾರಣಗಳ ವಿಶ್ಲೇಷಣೆಗೆ ಗಮನನೀಡುವುದು. ಇವೆಲ್ಲವೂ ಎಪಿಕ್ ನಾಟಕದ ಗುಣಲಕ್ಷಣಗಳು. ಬ್ರೇಕ್ಟನ ನಾಟಕಗಳು ಸಮಾಜದಲ್ಲಿ ಸಾಮಾನ್ಯನೊಬ್ಬನ ಬದುಕು ಹೇಗೆ ಪಟ್ಟಬಧ್ರಹಿತಾಸಕ್ತಿಗಳ ಆಡಳಿತಾರೂಢ ಸರಕಾರದ ಕೈಯಡಿಯಲ್ಲಿ ಹೇಗೆ ಸುಲಿಗೆ ಶೋಷಣೆಗೆ ಒಳಗಾಗುತ್ತಾನೆ ಎಂಬುದನ್ನು ಮುಖ್ಯ ಸಂಗತಿಯನ್ನಾಗಿ ಪರಿಗಣಿಸಿದ್ದವು.
೧೯೨೬ರಲ್ಲಿ ಬ್ರೇಕ್ಟ ಬರ್ಲಿನ್‌ನಲ್ಲಿದ್ದಾಗ, ಮಾರ್ಕ್ಸಿಸಮ್ ವಿಚಾರಗಳಿಂದ ಪ್ರಭಾವಿತನಾದ. ಮಾರ್ಕ್ಸಿಸ್ಟರ ಸಮಾಜ ವಿಶ್ಲೇಷನೆಯೇ ವೈಜ್ಞಾನಿಕವಾಗಿ ಪರಿಗ್ರಹಿಸಬಹುದಾದ ಯೋಗ್ಯ ಸಮಾಜಿಕ ಬದುಕಿನ ತತ್ವಗಳೆಂದು ಪ್ರತಿಪಾದಿಸಿದ. ಹೀಗೆ ಬದುಕಿನ ಹಲವು ತಿರುವುಗಳ ಕಂಡ ಬ್ರೇಕ್ಟ ೧೯೨೯ರಲ್ಲಿ Helene Weigel ವಿವಾಹವಾದ. ಆದರೂ ಆತನಿಗೆ ಭಾಷಾಂತರ ಮತ್ತು ಪರಿಶೊಧಕ ಸಂಶೋಧನೆಗಳಿಗೆ ಸಹಕರಿಸುತ್ತಿದ್ದ ತನ್ನ ಸ್ನೇಹಿತೆಯರಾದ Elizabeth Hauptmann ಮತು Margarette Steffin ಸಂಬಂಧ ಹೊಂದಿದ್ದ. ಇದೇ ಸಮಯಕ್ಕೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿನ್ನೆಡೆ ಜೊತೆಯಲ್ಲಿಯೇ ಜರ್ಮನಿಯಲ್ಲಿ ನಾಝಿ ಸರಕಾರದ ಅಧಿಕಾರಕ್ಕೆ ಬಂದಿದ್ದು ಮಾರ್ಕ್ಸಿಸ್ಟ ಸಿದ್ಧಾಂತಗಳ ಬೆಂಬಲಿಸುತ್ತಿದ್ದ ಬುದ್ದಿಜೀವಿಗಳ ಮೇಲೆ ಗದಾಪ್ರಹಾರ ಪ್ರಾರಂಭವಾಯಿತು. ಹೀಗಾಗಿ ಬ್ರೇಕ್ಟ ಕೂಡಾ ತೊಂದರೆಗೆ ಒಳಗಾದ. ಜರ್ಮನಿಯ ಆ ಸಂದರ್ಭ ಸನ್ನಿವೇಷಗಳು ಬ್ರೇಕ್ಟನಂತಹ ಎಡ ಪಂಥೀಯರಿಗೆ ಮಾರಕವಾಗತೊಡಗಿದವು. ೧೯೩೩ರಲ್ಲಿ ಆತ ಜರ್‍ಮನ್ ಬಿಟ್ಟು ಹೊರಟ. ಅವನಂತೆ ಹಲವು ಬುದ್ದಿಜೀವಿಗಳು ಯುರೋಪಿನ ಹಲವು ರಾಷ್ಟ್ರಗಳಲ್ಲಿ ತಾತ್ಕಾಲಿಕ ವಾಸ್ತವ್ಯ ಕಂಡುಕೊಂಡರು. ೧೯೩೫ರಲ್ಲಿ ನಾಝಿ ಸರಕಾರ ಆತನ ಜರ್‍ಮನ್ ನಾಗರಿಕತ್ವವನ್ನು ರದ್ದುಗೊಳಿಸಿತು ಮಾತ್ರವಲ್ಲ ಆತನ ಹಲವು ಗ್ರಂಥಗಳ ಬೆಂಕಿಗೆ ಆಹುತಿ ನೀಡಿತು. ಅದನ್ನಾತ ವಿರೋಧಿಸಿ ತನ್ನ ಕವನ The Burning of the Booksನಲ್ಲಿ ಜರ್ಮನ್ ಸರಕಾರದ ವಿರುದ್ದ ಕಿಡಿ ಕಾರುತ್ತಾನೆ. ಅಮೆರಿಕಾದಲ್ಲಿ ಹಲವು ವರ್ಷಗಳು ನೆಲಸಿದ ಬ್ರೇಕ್ಟ ಪುನಃ ೧೯೪೮ರಲ್ಲಿ ಇಸ್ಟ ಬರ್ಲಿನ್‌ಗೆ ಪತ್ನಿ Helene Weigel ಯೊಂದಿಗೆ ಮರಳಿದ. ಆ ಸಮಯದಲ್ಲಿ ಪತ್ನಿ Helene Weigel ಆತನ Mother Courage ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಅಂತರಾಷ್ರ್ಟೀಯ ನಾಟಕೋತ್ಸವದಲ್ಲಿ ೧೯೫೪ರಲ್ಲಿ Mother Courage ಹಾಗೂ ೧೯೫೫ರಲ್ಲಿ The Caucasian Chalk Circle ಪ್ರದರ್ಶಿಸಿ ಅಂತರಾಷ್ಟ್ರೀಯ ಘನತೆ ಪ್ರಶಸ್ತಿಗಳಿಗೆ ಭಾಜನನಾದ.
ನಾಟಕವನ್ನೆ ಉಸಿರಾಡುತ್ತ ಹೊಸ ಪೀಳಿಗೆಯ ನಟರುಗಳನ್ನು ತಯಾರುಮಾಡುತ್ತ ಸಂತೃಪ್ತಿಯ ಬದುಕಿನಲ್ಲಿ ಇರುವಾಗಲೇ ಲಂಡನ್ ಉತ್ಸವಕ್ಕಾಗಿ ತನ್ನ ನಾಟಕದ ರಿಹರ್ಸಲ್ ಮಾಡುತ್ತಿರುವಾಗಲೇ ಆತ ೧೯೫೬ ಅಗಸ್ಟ ೧೪ರಂದು ಮೆದುಳು ರಕ್ತಸ್ರಾವಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ.
ಬ್ರೇಕ್ಟನ ಐದು ನಾಟಕಗಳಲ್ಲಿ ಒಂದಾದ The Caucasian Chalk Circle, ಎಪಿಕ್ ಥೇಟರನ ಸಂಪೂರ್ಣ ಇಂಪ್ಯಾಕ್ಟ ಮೂಡಿಸಿದ ಪರಿಪೂರ್ಣ ನಾಟಕ. ಅನಾಮಧೇಯನಿಂದ ರಚಿಸಲ್ಪಟ್ಟ ಚೈನಿಸ್ ನಾಟಕ The Circle of the Chalk ಇದರ ಮೂಲ ವಸ್ತುವಿನಲ್ಲೆ ಹೆಣೆಯಲ್ಪಟ್ಟ ನಾಟಕವಾದರೂ ಹೊಸ ಪ್ರಸ್ತುತತೆಯಿಂದ ಜನಪ್ರಿಯವಾಯಿತು.
*****