ಈ ಇವನು
ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು
ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ
ಬರೀ ಬೋಳುಮರ; ಕಾಂಡವೆಲ್ಲ ಪೊಟರೆ
ಮೇಲೊಂದು ಎರವಲು ವರ್ಣತೆರೆ.
ಆದರೇನಂತೆ-
ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು
ಸದಾ ಷೇಕ್ಸ್‍ಪಿಯರ್ ವರ್ಡ್ಸ್‌ವರ್ತ್ ಶೆಲ್ಲಿಯ ಸಿಳ್ಳೆಹಾಕಿ
ಸಮಯಕ್ಕೆ ಸರಕಿರಲೆಂದು ಕಷ್ಟಪಟ್ಟು ಕಲಿತ ಅವರಿವರ
ಅರ್ಧಂಬರ್ಧ ವಚನ
ಗತಿಬಿಟ್ಟು ಶ್ರುತಿಗೆಟ್ಟು ಹರಿದ ತಂತಿಯನ್ನೇ ಗಂಟುಹಾಕಿ
ಕೊರೆವ ವೀಣಾವಾದನ.
ಈ ನೆಲದ ವಾಸನೆಗೆ ಮೂಗು ತೆಗೆಯುತ್ತೇನೆಂದು
ಬಾಯಿ ತೆಗೆದು
ಗಡಿಯಾಚೆ ಗಡಂಗಿನಲ್ಲೇ ಕಿವಿಯಿಟ್ಟು ಹರುಕು-
ಮರುಕು ಮುಕ್ಕಿದ್ದಕ್ಕೆ ಧ್ವನಿವರ್ಧಕ ಸಾಧನ.
ದೇಶಭಾಷಾ ಸಾಹಿತ್ಯ ಕಲೆಗಳಿಗೆ ಮಾತ್ರ ಕೋಶಕೋಶವನ್ನೆಲ್ಲ
ಪಚಪಚನೆ ಅರೆಬರೆ ಅಗಿದು ಉಗುಳುವ ಈ ಇವನು
ಮಿಕಿಮಿಕಿ ನೋಡಿದ ಆಂಗ್ಲ-ಅಮೇರಿಕನ್ನರ ಚರ್ಮ ಹೊದೆದ ಮಿಕ.
ಒಟ್ಟಿನಲ್ಲಿ ಹೇಳಬೇಕೆ ?
ಇದೊಂದು ರೆಡಿಮೇಡ್ ರಬ್ಬರ್ ಹಕ್ಕಿ
ಕೆಂಬಕ್ಕಿ
*****