ನನ್ನ ಹೆಂಡತಿ
ನನ್ನನೀಗ ಕರೆಯುವುದು|
ಅದು ಐತಿ, ಅದು ಕುಂತತಿ
ಅದು ಪೇಪರ್ ಓದುತ್ತತಿ, ಇಲ್ಲಾ
ಟಿ.ವಿ ನೋಡ್ತುತಿ||
ಮದುವೆಯಾದ ಹೊಸದರಲಿ
ರೀ, ಎನ್ರೀ, ರೀ ಬರ್ರೀ, ರೀ ಹೌದಾರೀ
ಅದೂ ಒಂತರಾ ರೀ….
ಬರೀ ರೀ ಸಾಮ್ರಾಜ್ಯ|
ನಂತರ ಕ್ರಮೇಣ
ದಾಂಪತ್ಯ ಸವಿದು ಸವೆದಂತೆ
ಏನು? ಏಲ್ಲಿ? ಏಕೆ? ಅದು ಹಾಗೆ!
ಇದು ಹೀಗೆ, ಸಮಯೋಚಿತವಾಗೆ||
ಸಂಜೆ ಪಾರ್ಕಲಿ ಕಲಿತು
ಸ್ನೇಹಿತರ ಇದೇ ಕಥೆ ಕೇಳುವುದು|
ಹೆಂಡತಿಯರಿಗೆ ತಿಳಿಯದಹಾಗೆ
ಸಕ್ಕರೆ ಸಹಿತ ಬೈಟು ಟೀ
ಕುಡಿಯುವುದು, ಪೇಪರ್ ಓದುವುದು
ಹೀಗೆ ಜೀವನ ಸಾಗುತಿಹುದು||
ವಯಸ್ಸಿನಲ್ಲಿದ್ದಾಗ
ಅದೇನು ಪ್ರೀತಿ, ಅದೆಷ್ಟು ನಂಬಿಕೆ
ಅದೇನು ವಿಶ್ವಾಸ|
ಎರಡು ಮಕ್ಕಳಾಗಿ
ಅವರ ವಿದ್ಯಾಭ್ಯಾಸ
ಮುಗಿಯುವತನಕವಂತೂ
ಜೀವನದಲೇನೋ ಭಯ,
ಏನೋ ಎಂಥೋ
ಮುಂದೇನೆಂಬ ಯೋಚನೆ, ಆತಂಕ|
ನನ್ನ ಮೇಲದೆಷ್ಟು
ಕಾಳಜಿ, ಮುತುವರ್ಜಿ|
ರೀಟೈರ್ಡು ಆದೊಡನೆ
ಎಲ್ಲಾದರಲ್ಲೂ ಆಯ್ತು ಫಿಫ್‌ಟಿ
ಫಿಪ್‌ಟಿ ಪರ್‌ಸೆಂಟು||
ಇತ್ತೀಚೆಗೆ ನಾನು ಹೆಚ್ಚೇನು
ತಲೆಕೆಡಿಸಿ ಕೊಳ್ಳುವುದಿಲ್ಲ
ಏಕೆಂದರೆ ನನ್ನ ಕೈಲೂ
ಏನೂ ಆಗುವುದಿಲ್ಲ! |
ಒಂದೆಡೆ ಬಿ.ಪಿ, ಶ್ಯುಗರ್
ಮತ್ತೆ ಮಂಡಿ ನೋವು||
ಅವಳು ಹೇಗೆ ಕರೆದರು
ಏನೇ ಅಂದರು
ಏನೂ ಮಾಡಲಾಗದ ಪರಿಸ್ಥಿತಿ||
*****