ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು
ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು
ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ
ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ
ಗರತಿ ನಿನಗೇತಕೆ ಈ ದುಸ್ಥಿತಿ?
ಮೂಡಣದಿ ಸೂರ್ಯ ಮೂಡುವ ಮುನ್ನ ನೀ ಎದ್ದೆ
ಮನೆ ಮಲಗುವ ತನಕ ಬದುಕ ಸಾಗಿಸುತ ನೀ ಬಂದೆ
ಬಣ್ಣದ ಬದುಕಿನ ಜೊತೆ ಬವಣೆಗಳ ಸಹಿಸುತ
ಸಂಸಾರ ರಥ ಸಾಗಿಸುವ ಕಡೆಗೀಲು ನೀನಂತೆ
ಗರತಿ ನಿನಗೇತಕೆ ಈ ದುಸ್ಥಿತಿ?
ಮುಹೂರ್ತಗಳಿಗೆಲ್ಲ ಸುಮಂಗಲೆಯರೇ ಭೂಷಣ
ಮಹಿಳೆಯರಿಲ್ಲದೇ ಕಾರಣಗಳೆಲ್ಲ ಭಣ ಭಣ
ಪತಿ ಬದುಕಿದ್ದ ಮಹಿಳೆಯರಿಗಷ್ಟೇ ಆಮಂತ್ರಣ
ವಿಧವೆಯರಿಗೆ ಹಾಕಿರುವರಲ್ಲ ನಾನಾ ನಿಯಂತ್ರಣ
ಗರತಿ ನಿನಗೇತಕೆ ಈ ದುಸ್ಥಿತಿ?
ಮಂಗಳ ಕಾರ್ಯಗಳಿಗೆ ಸುಮಂಗಲಿಯರೆ ಮೀಸಲಂತೆ
ಮಾಂಗಲ್ಯ ಇಲ್ಲದ ಮಹಿಳೆಯರೆಲ್ಲ ಅಮಂಗಳವಂತೆ
ಪತಿ ಇಲ್ಲದಿರೆ ಆರತಿಯೂ ನೀ ಬೆಳಗ ಬಾರದಂತೆ
ಈ ಕಟ್ಟುಪಾಡುಗಳೆಲ್ಲ ನಿನ್ನ ಕೊರಳಿಗೆ ಮೀಸಲಂತೆ
ಗರತಿ ನಿನಗೇತಕೆ ಈ ದುಸ್ಥಿತಿ?
ಮಲ್ಲಿಗೆ ಮುಡಿಗಿಲ್ಲದಿರೆ ಕೋಮಲೆ ನೀನಲ್ಲವೇನು?
ಕುಂಕುಮವು ಹಣೆಗಿಲ್ಲದಿರೆ ಕರುಣೆಯು ಬಾರದೇನು?
ಮಾಂಗಲ್ಯವಿಲ್ಲ ಎಂದರೆ ಮಮತೆಯು ಇಲ್ಲವೇನು?
ಕೈ ಬಳೆಗಳಿಲ್ಲದಿರೆ ಕೈ ಹಿಡಿದು ನಡೆಸಲಾರಳೇನು?
ಕಾಲುಂಗುರಗಳಿಲ್ಲದಿರೆ ನಮ್ಮ ಕಾಯ ಲಾರಳೇನು?
ಸರಿ ಹೋಗಲಾರದೇ ಗರತಿ ನಿನ್ನಯ ಸ್ಥಿತಿ?
*****