(೧೨-೧-೧೮೬೩ ರಿಂದ ೪-೭-೧೯೦೨)
ನಾನು ಕಾಲೇಜಿನಲ್ಲಿ ಓದುವಾಗ ಆಲಿವರ್ ಗೋಲ್ಡ್‌ಸ್ಮಿತನ “ದಿ ಸಿಟಿಜನ್ ಆಫ್ ದಿ ವರ್ಲ್ಡ್’ ಪುಸ್ತಕವನ್ನು ಪರಿಚಯಿಸಿಕೊಂಡಾಗ ಆಗಲೇ ನನಗೆ ಅದು ದಿ ಸಿಟಿಜನ್ ಆಫ್ ದಿ ವರ್ಲ್ಡ್ ಬದಲು ದಿ ಸಿಟಿಜನ್ ಆಫ್ ದಿ ಯೂನಿವರ್ಸ್ ಆಗಿದ್ದರೆ!…… ಎನ್ನಿಸಿತ್ತು. ಶರಚ್ಚಂದ್ರ ಚಟರ್ಜಿಯವರ ಶೇಷಪ್ರಶ್ನೆಯಲ್ಲಿ ಕಮಲಳ ವಿಶ್ವಸಂಸ್ಕೃತಿ ಬರುವುದಾದರೆ ಭಾರತೀಯ ಸಂಸ್ಕೃತಿ ಹೋದರೇನಂತೆ ಎನ್ನುವ ಭಾವ ನನ್ನನ್ನು ಗಾಢವಾಗಿ ಕಲಕಿತ್ತು. ಉಪನಿಷತ್ತಿನ ವಿಶ್ವವ್ಯಾಪಕ ಶಕ್ತಿ ನನ್ನನ್ನು ತಟ್ಟಿ ಎಚ್ಚರಿಸುತ್ತಿತ್ತು. ಈಚೆಗಷ್ಟೇ ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯೊಳಗೆ ಮನಸ್ಸಿಟ್ಟು ಪ್ರವೇಶಿಸಿದ ನನಗೆ ಒಂದು ಸಾಲು ನನ್ನಲ್ಲಿ ವಿದ್ಯುತ್ ಕಂಪನವನ್ನುಂಟು ಮಾಡಿತು. ರಾಷ್ಟ್ರಕವಿ ಕುವೆಂಪು ಅವರು ಪದೇಪದೇ ಒತ್ತಿ ಒತ್ತಿ ಹೇಳುವ ಮನುಜ ಮತ, ವಿಶ್ವಪಥದ ದರ್ಶನಕ್ಕೆ ಆದು ನಾಂದಿ ಹಾಡಿತು.
ಆ ಸಾಲನ್ನು ಹಿಡಿದು ನಾನು ವಿದ್ಯಾರ್ಥಿ ಮಿತ್ರರೆಲ್ಲ, ವಕೀಲಿ ವೃಂದದಲ್ಲಿ ನನ್ನ ಸಹ ಜೀವಿಗಳೊಂದಿಗೆ ಬೆರೆತಿರುವಾಗ ಪ್ರಶ್ನೆ ಕೇಳುತ್ತಿದ್ದೆ : ನಿಮ್ಮ ದೇವರು ಯಾರು ? ನಿಮ್ಮ ದೇಶ ಯಾವುದು ? ಎಂದು. ಬಂದ ಉತ್ತರಗಳು ಅವರವರು ಯಾವ ಯಾವ ಮತಗಳಿಗೆ ಸೇರಿದ್ದರೋ ಆ ದೇವರುಗಳ ಹೆಸರನ್ನು ಹೇಳುತ್ತಾ ಅದು ಕಡೆಗೆ ರಾಘವೇಂದ್ರ, ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥನಿಂದ ಹಿಡಿದು ಗ್ರಾಮೀಣ ದೇವತೆಗಳಾದ ಮೆಳೆಯಮ್ಮ, ಮಾರಮ್ಮನವರಿಗೂ ಹೋಯ್ತು. ಇಮ್ಮ ದೇಶ ಯಾವುದು ? ಎಂಬ ಪ್ರಶ್ನೆಗೆ ಭಾರತ ಎಂದು ಹೇಳುತ್ತಿದ್ದರು. ನಾನು ಅವರಿಗೆ ನೋಡಿ ಸ್ವಾಮಿ ವಿವೇಕಾನಂದರು ಏನು ಹೇಳಿದ್ದಾರೆ:
Truth , my God (ಸತ್ಯವೇ ನನ್ನ ದೇವರು )
Universe, my country (ವಿಶ್ವವೇ ನನ್ನ ದೇಶ)
ಎಂದಾಗ ದಿಙ್ಮೂಢರಾಗುತ್ತಿದ್ದರು.
ಯಾವುದಾದರೂ ಜಾತಿ, ಕುಲ, ಗೋತ್ರ, ಬಣ್ಣ, ಭಾಷೆ, ದೇಶಕ್ಕೆ ಒಳಗಾಗಬೇಕಾಗಿರುವ ಮಾನವ ಸಮಾಜದ ಅನಿವಾರ್ಯತೆಯಲ್ಲಿ ವಿವೇಕಾನಂದರು ಜನಿಸಿದಾಗ ಅವರು ಕ್ಷತ್ರಿಯ ಕುಲದ ಹಣೆಪಟ್ಟಿಗೆ, ಹಿಂದೂ ಮತಕ್ಕೆ ಬಂಗಾಲಿ ಭಾಷೆಗೆ, ಭಾರತ ದೇಶಕ್ಕೆ ಒಳಗಾದರು. ಹುಟ್ಟುವ ಯಾವುದೇ ಮಗು ಅನಂತತ್ವವನ್ನು ಹೊತ್ತು ಬಂದಿದ್ದರೂ ಸಮಾಜದ ಈ ಸಂಕುಚಿತ ಆವರಣಕ್ಕೆ ಸಿಕ್ಕಿ ನರಳುವುದು ವಿಧಿಯುಕ್ತ ಎನ್ನುವಷ್ಟು ನಮ್ಮ ಸಮಾಜ ಕಲುಷಿತವಾಗಿದೆ. ಬಹಳಷ್ಟು ಜನ ಇದನ್ನ ಸರ್ವಸ್ವ ಎಂದು ಭ್ರಮಿಸಿ ತಮ್ಮ ತಮ್ಮ ಸಂಕುಚಿತ ಹೊಂಡಗಳಲ್ಲಿಯೇ ಉಳಿದು ಬಿಡುತ್ತಾರೆ. ಅದರಿಂದ ಬಿಡಿಸಿಕೊಳ್ಳಬೇಕೆಂಬ ಅಂತರಂಗದ ಕರೆ ಕೈ ಬೀಸಿ ಕರೆದರೂ ಸಮಾಜ ಭೈರವನ ಆರ್ಭಟಕ್ಕೆ ಬೆದರಿ ಬಲಿಯಾಗಿ, ಆತ್ಮವಂಚಕರಾಗಿ ಉಳಿದು ಬಿಡುತ್ತಾರೆ. ಈ ಆತ್ಮವಂಚನೆಯಿಂದ ಬಿಡುಗಡೆ ಪಡೆಯಲು ನಮ್ಮ ವಿಶ್ವವಿದ್ಯಾಲಯದ ಪದವಿಗಳು ಸಹ ಸಹಕಾರಿಯಾಗದೆ, ಆಗುವ ದಿಕ್ಕಿನಲ್ಲಿ ಸಾಗುವ ಸೂಚನೆಯೂ ಇಲ್ಲದಿರುವುದು ನಮ್ಮ ಭವಿಷ್ಯದ ಕರಾಳ ದಿನಗಳ ದಿಕ್ಸೂಚಿಯಾಗಿದೆ.
ಇಂಥ ವಿಷಮ ಪರಿಸ್ಥಿತಿಯಲ್ಲಿ ಸಂಕುಚಿತ ಹೊಂಡದಿಂದ ಹೊರಬಂದ ವಿಶ್ವವ್ಯಾಪಕ ದೃಷ್ಟಿಯುಳ್ಳ ವಿವೇಕಾನಂದರನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಸಹ ಹಿಂದೂಧರ್ಮ, ಹಿಂದೂ ದೇಶ ಎಂಬ ಸಂಕುಚಿತ ಹೊಂಡಗಳಿಂದ ಹೊರಬರಬೇಕಾದುದು ಅನಿವಾರ್ಯವಾಗುತ್ತದೆ. Doubtless, I do love India. But everyday my sight grows clearer. What is India or England or America to us? We are the servants of that God who by the ignorant is called man. He who pours water at the root, does he not water the whole tree?
There is one basis of well-being-social, political or spiritual-to know that i and my brother are one. This is true for all countries and all people. And westerners, let me say, will realize it more quickly than orientals, who have almost exhausted themselves in formulating the idea and producing a few cases of individual realizations.
-Vivekananda, Complete works, Vol 8, p 349-50
ಯಾರ ಮನಸ್ಸಿನ ಎತ್ತರವನ್ನು ಅರಿಯಲು ಹಿಮಾಲಯದೆತ್ತರ ಸಾಲದೋ, ಯಾರ ಮಾನವೀಯ ಹೃದಯದಾಳವನ್ನು ಅರಿಯಲು ಸಾಗರದಾಳ ಅಲ್ಪವಾಗುತ್ತದೋ, ಯಾರ ಹೃದಯ ವೈಶಾಲ್ಯತೆಯನ್ನರಿಯಲು ಈ ವಿಶ್ವ ವೈಶಾಲ್ಯತೆ ಸಾಲದಾಗುತ್ತದೋ ಅಂತಹ ವಿವೇಕಾನಂದರ ವಿಚಾರವನ್ನು ಮಾನವ ಜನಾಂಗಕ್ಕೆ ತಿಳಿಯಪಡಿಸುವ ಬದಲು ಅವರ ಭಾವಚಿತ್ರಗಳನ್ನಷ್ಟೆ ಪ್ರದರ್ಶಿಸಿ, ಅವರಿಗೆ ಸಂಕುಚಿತ ಹಣೆಪಟ್ಟಿ ಕಟ್ಟಿ ಹಿಂದೂ ಸಂನ್ಯಾಸಿ ಎಂದು ಕರೆದು ಸ್ವಾರ್ಥ ಸಾಧಿಸಿಕೊಳ್ಳುತ್ತಿರುವ ಪಟ್ಟಭದ್ರ ಹಿತಾಸಕ್ತ ಶಕ್ತಿಗಳು ಸಮಾಜದಲ್ಲಿ ಇನ್ನೂ ತಮ್ಮ ನೀಚ ಉಸಿರಾಟದೊಳಗೆ ಅವಿತುಕೊಂಡಿವೆ. ಮಾನವ ಹೃದಯವನ್ನು ಹೊಂದಿ ಮಾನವ ಕಲ್ಯಾಣಕ್ಕಾಗಿ ಅತ್ಯಂತ ಕಳಕಳಿಯಿಂದ ಹೋರಾಡಿದ ಜಗತ್ತಿನ ದಾರ್ಶನಿಕ ಮಹಾಮಹಿಮರನ್ನು ಅವರ ವಿಶ್ವವ್ಯಾಪಕ ದೃಷ್ಟಿಯಿಂದ ವಂಚಿಸಿ ತನ್ನ ಸಂಕುಚಿತ ವಲಯಗಳಲ್ಲಿ ಬಂಧಿಸುವ ಹುನ್ನಾರಿನಲ್ಲಿ ಸಮಾಜ ವಿಜಯಿಯಾಗುತ್ತಾ ಬಂದಿದೆ. ಅಂತಹ ಹುನ್ನಾರಿಗೆ ವಿವೇಕಾನಂದರನ್ನು ಬಲಿ ತೆಗೆದುಕೊಂಡಿರುವುದು ಮಾನವ ಕುಲದ ದುರಂತ.
ಧಾರ್ಮಿಕತೆಯ ಅಂತರಾಳಕ್ಕಿಳಿದು, ಯೋಗದ ಆಂತಃಶಕ್ತಿಯ ಮೇಲೆ ವೈಜ್ಞಾನಿಕ ಹೊಳಪಿನಿಂದ ವಾಸ್ತವ ನೆಲೆಗಟ್ಟನ್ನು ನಿರ್ಮಿಸಿ ಮತಗಳ ಎಲ್ಲೆಯನ್ನು ಇಲ್ಲಗೈದವರು ಸ್ವಾಮಿ ವಿವೇಕಾನಂದರು:
“ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು.” (ವಿವೇಕಾನಂದರ ಕೃತಿ ಶ್ರೇಣಿ, ಸಂಪುಟ ೭-ಪುಟ ೨೪೫) ಎಂದು ಅನಂತತೆಯ ಅಂತರಂಗವನ್ನು ಅರಿತು ಅದರಲ್ಲಿ ಒಂದಾಗಿ ಬೆರತವರು ಗ್ರಂಥಗಳ, ಮತ ಧರ್ಮಗಳ ಸೀಮಿತ ಶಕ್ತಿಯನ್ನು ಮೀರಿದ ಮಾನವ ನೆಲೆಗಟ್ಟನ್ನು ನಿರ್ಮಿಸಿದವರು.
ಇಂತಹ ಮಾನವತೆಯ ನೆಲೆಗಟ್ಟಿನ ಔನ್ನತ್ಯದಲ್ಲಿ ನಿಂತು ನಿರ್ವಿಕಾರ ಭಾವನೆಯಿಂದ ನೋಡಿದ ವಿವೇಕಾನಂದರ ಕಣ್ಣಿಗೆ ಮತ ಧರ್ಮಗಳು ವಿಶ್ವದಾದ್ಯಂತ ತಮ್ಮ ತಮ್ಮ ದೇವರ ಹೆಸರಿನಲ್ಲಿ ಮಾನವರ ರಕ್ತವನ್ನು ಹೀರುತ್ತಾ ಮೋಸವಂಚನೆಗಳಿಂದ ಮಾಡುತ್ತಿರುವ ಜನರ ಶೋಷಣೆ ಇತ್ಯಾದಿ ಎದ್ದು ಕಾಣುತ್ತಿದ್ದವು.
“ಬೈರಾಗಿಗಳು, ಸನ್ಯಾಸಿಗಳು, ಒಂದು ಪಂಗಡದ ಬ್ರಾಹ್ಮಣರು ಈ ದೇಶವನ್ನು ಹಾಳುಮಾಡುವರು. ಕಳ್ಳತನ, ಮೋಸ, ಇವುಗಳನ್ನೇ ಯಾವಾಗಲೂ ಆಲೋಚಿಸುತ್ತಾ ಆ ಜನರು ಧರ್ಮಬೋಧಕರಂತೆ ನಟಿಸುವರು. ಇತರ ಜನರಿಂದ ದಾನ ಸ್ವೀಕರಿಸುವರು. ತಕ್ಷಣವೇ ನಮ್ಮನ್ನು ಮುಟ್ಟಬೇಡಿ ಎಂದು ಕಿರುಚುವರು. ಗುಡಿಯ ಒಳಗೆ ಕುಡಿತ, ನೃತ್ಯ, ಸಂಗೀತಗಳು! ಸುಮಾರು ಹತ್ತು ಇಪ್ಪತ್ತು ಲಕ್ಷ ಸಾಧು ಸಂತರು ಮತ್ತು ಅನೇಕ ಕೋಟಿ ಬ್ರಾಹ್ಮಣರು ಬಡವರ ರಕ್ತವನ್ನು ಹೀರುತ್ತಿರುವರು. ಅವರನ್ನು ಮೇಲೆತ್ತುವುದಕ್ಕೆ ಸ್ವಲ್ಪವೂ ಶ್ರಮಪಡುವುದಿಲ್ಲ. ಇದು ಒಂದು ದೇಶವೋ ನರಕದ ಬೀಡೋ? ಇಲ್ಲಿರುವುದು ಧರ್ಮವೋ ಅಥವಾ ಪಿಶಾಚಿಯ ನೃತ್ಯವೋ? (ವಿವೇಕಾನಂದರ ಕೃತಿಶ್ರೇಣಿ-. ಸಂ.೬ ಪುಟ ೩೭೧ ಮತ್ತು ೧೩೨)
“ಪ್ರಪಂಚದ ಮತ್ತಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ. ಹಾಗೆ ಪ್ರಪಂಚದ ಯಾವ ಧರ್ಮವೂ ದೀನದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ, ಅಲ್ಲಿರುವ ಸಂಪ್ರದಾಯ ಶರಣರದು, ಪುರೋಹಿತರದು, ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ಬಗೆಯ ಕ್ರೂರ ಸಾಧನಗಳನ್ನು ಸೃಷ್ಟಿಸುವ ಠಕ್ಕರದು.” (ವಿವೇಕಾನಂದರ ಕೃತಿಶ್ರೇಣಿ. ಸಂ.೬ ಪುಟ ೮೯)
“…the Term Hindu is strictly employed in the religious sense. All those who follow the rules of caste system rigidly are called Hindus. So the religion which advocated the caste system is known as Hinduism.. The real name of Hinduism is Brahminism …… This religion does not admit the equality of human beings, but it admits of discrimination between one human being and another… Brahminism lauds inequality, which is inhuman. Inequality persists as long as man wants to have a slave. Ultimately he will himself end up as a slave… Brahminism gives all civil liberties to the first 3 vamas. The 4th is denied all rights and privileges and has no opportunity `to awake to life and freedom’. Brahminism treats non-Brahmins as if they are not human beings at all and this attitude helps only the Brahmins, for it places them above all others. Therefore, it is Brahminism which every self- respecting man abhors… (K.S.Bhagavan: “The Meaning of Hinduism, Caravan, July-first-1986)
ಮಹಮವಮದೀಯರು ಇನ್ನೂ ಹಿಂದುಳಿದಿರುವರು. ಸ್ವಮತಾಭಿಲಾಷೆ ಹೆಚ್ಚು ಅವರಲ್ಲಿ. ಅವರ ಪಲ್ಲವಿಯೇ ದೇವನೊಬ್ಬನೇ ಅಲ್ಲ; ಅವರ ದೂತನೆ ಮಹಮ್ಮದ ಎಂಬುದು. ಇದರಾಚೆ ಕೆಟ್ಟದ್ದು ಮಾತ್ರವಲ್ಲ, ತಕ್ಷಣ ಅದನ್ನು ನಾಶಮಾಡಬೇಕೆಂದು ಅವರು ಭಾವಿಸುವರು, ಸ್ತ್ರೀ ಪುರುಷರು ಯಾರಾದರಾಗಲೀ, ಯಾರು ತಮ್ಮಂತೆ ನಂಬುವುದಿಲ್ಲವೋ ಅವರನ್ನೆಲ್ಲಾ ಈ ಕ್ಷಣವೇ ಕೊಲ್ಲಬೇಕು.
ಈ ಧರ್ಮಕ್ಕೆ ಸೇರದೆ ಇರುವುದನ್ನೆಲ್ಲಾ ಧ್ವಂಸಮಾಡಬೇಕು. ಈ ಧರ್ಮವನ್ನಲ್ಲದೆ ಬೇರೆ ಧರ್ಮವನ್ನು ಬೋಧಿಸುವ ಗ್ರಂಥಗಳನ್ನೆಲ್ಲ ದಹಿಸಬೇಕು. ಪೆಸಿಫಿಕ್ ಸಾಗರದಿಂದ ಅಟ್ಲಾಂಟಿಕ್ ಸಾಗರದವರೆಗೆ ೫೦೦ ವರ್ಷಗಳ ಕಾಲ ರಕ್ತದ ಕಾಲುವೆ ಹರಿಸಿದರು. ಒಂದು ಕೈಯಲ್ಲಿ ಕುರಾನ್, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದೇ ನಡೆದರು. ಇದೇ ಇಸ್ಲಾಂ ಮತ. ಅನ್ಯಮತಕ್ಕೆ ಸೇರಿದ ಎಲ್ಲ ಬಗೆಯ ಆಚಾರ, ಆಕಾರ, ವಿಗ್ರಹ, ಪೂಜೆ, ಪಾಪಮಯವೆಂದು ಭಾವಿಸುವ ಮಹಮ್ಮದೀಯರು ಕಾಬಾದಲ್ಲಿರುವ ತನ್ನ ಮಸೀದಿಗೆ ಬಂದಾಗ ಅದನ್ನು ಪಾಪವೆಂದು ಪರಿಗಣಿಸುವುದಿಲ್ಲ. ಅಲ್ಲಿಗೆ ಅವನು ಯಾತ್ರೆ ಹೋದಾಗ ಮಸೀದಿಯ ಗೋಡೆಯ ಮೇಲೆ ಇರುವ ಕಲ್ಲನ್ನು ಚುಂಬಿಸಬೇಕು. ನೀವು ಕುರಾವನ್ನು ಓದಿದರೆ, ಬಹಳ ಪ್ರಖ್ಯಾತವಾದ ಸತ್ಯವಾಣಿಗಳು ಮೂಢನಂಬಿಕೆಯೊಂದಿಗೆ ಬೆರೆತಿರುವುದು ಕಾಣುತ್ತದೆ. ನಿಸಸಂಶವಾಗಿಯೂ ಮಹಮ್ಮದನು ಪಳಗಿದ ಯೋಗಿಯಾಗಿರಲಿಲ್ಲ. ಆದಕಾರಣವೆ ತಾನು ಮಾಡುತ್ತಿರುವುದಕ್ಕೆ ಕಾರಣ ಗೊತ್ತಿರಲಿಲ್ಲ. ಮಹಮ್ಮದನು ಪ್ರಪಂಚಕ್ಕೆ ಮಾಡಿದ ಒಳ್ಳೆಯದನ್ನು ಆಲೋಚಿಸಿ ಮತ್ತು ಮಾತಾಂಧತೆಯಿಂದ ಆದ ಮಹಾನಷ್ಟವನ್ನು ಕುರಿತು ಆಲೋಚಿಸಿ! ಆತನ ಬೋಧನೆಯ ಪರಿಣಾಮವಾಗಿ ಲಕ್ಷಾಂತರ ಜನರು ಕೊಲ್ಲಲ್ಪಟ್ಟರು. ಸಾವಿರಾರು ತಾಯಂದಿರಿಗೆ ಮಕ್ಕಳ ವಿಯೋಗವಾಯಿತು. ಶಿಶುಗಳು ತಬ್ಬಲಿಗಳಾದರು. ದೇಶವೇ ಸರ್ವನಾಶವಾಯಿತು. (ವಿ. ಕೃತಿ ಶ್ರೇಣಿ ೨-೩೦೫, ೩-೨೪೬, ೧-೨೫೦, ೫-೫೪೪)
“ಕ್ರೈಸ್ತರಿಗೆ ದೇವರು ಯಾವಾಗಲೂ ಏನನ್ನಾದರೂ ಕೊಡಬೇಕು. ಸರ್ವೇಶ್ವರನದುರಿಗೆ ಅವರು ಭಿಕ್ಷುಕರಂತೆ ಬರುವರು. ಈಗಿನ ಕಾಲದಲ್ಲಿ ಧರ್ಮ ಬರಿಯ ಹುಡುಗಾಟವಾಗಿದೆ, ಷೋಕಿಯಾಗಿದೆ. ಯಾವ ಚರ್ಚೂ ಜನರನ್ನು ಉದ್ಧಾರಮಾಡಲಿಲ್ಲ. ಚರ್ಚಿನ ಹೆಂಗಸರ ಮತಭ್ರಾಂತಿ ಹೇಳತೀರದು. ಅವರು ಅಲ್ಲಿ ಪಾದ್ರಿಯ ಕೈಕೆಳಗೆ ಇರುವರು. ಅವರು ಮತ್ತು ಪಾದ್ರಿಗಳು ಒಟ್ಟಿಗೆ ಸೇರಿ ಪ್ರಪಂಚವನ್ನು ನರಕಸದೃಶವನ್ನಾಗಿ ಮಾಡುವರು. ಧರ್ಮವನ್ನೆಲ್ಲಾ ಹಾಳುಮಾಡುವರು. (ವಿ.ಕೃತಿ ಶ್ರೇಣಿ. ೪-೩೧೫, ೪-೩೮೯, ೮-೨೭೧)
ದಿನನಿತ್ಯ ಇಂತಹ ಬರ್ಬರ ಕೃತ್ಯಗಳಿಂದ ಮೋಸ ಹೋಗುತ್ತಿರುವ, ಮತೀಯ ಅಂಧರ ಕುಯುಕ್ತಿಗೆ ಬಲಿಯಾಗುತ್ತಿರುವ ಜನಸಾಮಾನ್ಯರಿಗೆ
“ಎಲ್ಲ ಮೂಢ ನಂಬಿಕೆಗಳನ್ನೂ ಧ್ವಂಸಮಾಡಿ; ಗುರುಗಳಾಗಲಿ, ಧರ್ಮಗ್ರಂಥಗಳಾಗಲೀ, ದೇವರುಗಳಾಗಲೀ ಇಲ್ಲ. ಈ ಎಲ್ಲವೂ ನೆಲೆ ಇಲ್ಲದವು. ದೇವಸ್ಥಾನಗಳನ್ನು, ಚರ್ಚು ಮಸೀದಿಗಳನ್ನು, ಪುರೋಹಿತರನ್ನು, ದೇವತೆಗಳನ್ನು, ಅವತಾರ ಪುರುಷರನ್ನು, ಪ್ರವಾದಿಗಳನ್ನು ಧ್ವಂಸಮಾಡಿ. ದೇವರನ್ನೂ ಧ್ವಂಸಮಾಡಿ. ನಾನೆ ಪರಮ ಪುರುಷೋತ್ತಮ. ತತ್ವಜ್ಞಾನಿಗಳೆ, ಎದ್ದುನಿಲ್ಲಿ. ಭಯಬೇಡ. ದೇವರನ್ನು ಕುರಿತ, ಮೂಢನಂಬಿಕೆಗಳನ್ನು ಕುರಿತ ಮಾತು ಬೇಡ. ಸತ್ಯಕ್ಕೇ ಜಯ. ಇದು ನಿಜ. ನಾನು ಅನಂತ. ಎಲ್ಲಾ ಧಾರ್ಮಿಕ ನಂಬಿಕೆಗಳು ಹುರುಳಿಲ್ಲದ ಕಲ್ಪನೆಗಳು.” (Complete Works, Vol. 1-502) ಎಂದು ವಿವೇಕಾನಂದರು ಎಲ್ಲರ ಎದೆಯಲ್ಲಿ ಹುದುಗಿರುವ ವಿಶ್ವವ್ಯಾಪಕ ಶಕ್ತಿಯನ್ನು ಜಾಗೃತಗೊಳಿಸುವಂತೆ ಪ್ರತಿಯೊಬ್ಬ ವ್ಯಕ್ತಿಗೂ ಕರೆಯಿತ್ತಿದ್ದಾರೆ.
ಪುರೋಹಿತಶಾಹಿ ತನ್ನ ಕುಟಿಲ ಕುತಂತ್ರಗಳಿಂದ ಜನಸಮೂಹವನ್ನು ತನ್ನ ಸ್ವಾರ್ಥಕ್ಯಾಗಿ ಬಳಸಿಕೊಳ್ಳಲು ಹೂಡಿರುವ ಹುನ್ನಾರುಗಳಲ್ಲಿ, ಸೃಷ್ಟಿಸಿರುವ ಸುಳ್ಳುಗಳ ಸರಮಾಲೆಯಲ್ಲಿ ಸ್ವರ್ಗ-ನರಕಗಳು ಪ್ರಬಲವಾದವುಗಳು. ಮಾನವಮತಿಯನ್ನು ಈ ಅವೈಜ್ಞಾನಿಕವೂ ವೈಚಾರಿಕವೂ ಆದ ಸ್ವರ್ಗ-ನರಕಗಳು ಪ್ರತಿಕ್ಷಣವೂ ನಿರ್ವೀರ್ಯಗೊಳಿಸುತ್ತಾ ತನ್ಮೂಲಕ ಅವನ ವಿಶ್ವವ್ಯಾಪಕ ಶಕ್ತಿಯನ್ನು ಹೀರಿ ಹಿಂಗಿಸುತ್ತಿವೆ. ಈ ಸ್ವರ್ಗನರಕಗಳ ಮೂಲ ನೆಲೆ ಎಲ್ಲಿದೆ ಎಂಬುದನ್ನು ವಿವೇಕಾನಂದರು ಸಮರ್ಥವಾಗಿ ಸಾರಿದ್ದಾರೆ.
“ಸ್ವರ್ಗವೆಂಬುದು ನಮ್ಮ ಕಾಮನೆಗಳಿಂದ ಉದಿಸಿದ ಒಂದು ಮೂಢನಂಬಿಕೆ ಅಷ್ಟೆ. ಹಲವು ಬಗೆಯ ಸ್ವರ್ಗದ ಆದರ್ಶಗಳಲ್ಲೆಲ್ಲಾ ಮನೋದೌರ್ಬಲ್ಯವಿದೆ. ಸ್ವರ್ಗ, ನರಕ, ಅವತಾರ, ಇವೆಲ್ಲಾ ಭ್ರಾಂತಿ. ಬಾಹ್ಯ ಸ್ವರ್ಗ ಅಥವಾ ಸತ್ಯಯುಗವಿರುವುದು ಮನುಷ್ಯನ ಭ್ರಾಂತಿಯಲ್ಲಿ. ಕೆಲಸಕ್ಕೆ ಬಾರದ ಕಟ್ಟು ಕಥೆಗಳನ್ನು ನಂಬಿ ಚರ್ಚು, ಗುಡಿ, ಮಸೀದಿ ಇವನ್ನು ಕಟ್ಟುತ್ತಿರುವಿರಿ. ನರಕಲೋಕದ ಭಾವನೆ ಕೂಡ ನಾವು ಹುಟ್ಟು ದಂಗೆಕೋರರು ಎಂಬ ಅದ್ಭುತ ಸತ್ಯವನ್ನು ಸಾರುವುದು.” (ವಿ. ಕೃತಿ ಶ್ರೇಣಿ. ೮-೪೭, ೮-೨೯೯, ೮-೨೬೬, ೭-೮೬, ೩-೩೧೦, ೯-೨೧)
ಇಂತಹ ವಿಕಲ್ಪಗಳಿಗೆ ಬಲಿಯಾಗಿರುವ ಜನರ ಮನಸ್ಸು ಇನ್ನೊಬ್ಬರ ಆಶ್ರಯದಲ್ಲಿ ಅಡಿಯಾಳಾಗಿ ಬೀಳುವ ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಅಸಹಾಯಕ ಪರಿಸ್ಥಿತಿಯ ಲಾಭಕ್ಕಾಗಿ ಅದನ್ನು ಇನ್ನಷ್ಟು ಉದ್ದೀಪನಗೊಳಿಸುತ್ತಾ ತನ್ನ ಸ್ವಾರ್ಥವನ್ನು ಸಮರ್ಥವಾಗಿ ಸಾಧಿಸಿಕೊಳ್ಳುತ್ತಿರುವ ಪುರೋಹಿತಶಾಹಿ ಇಡೀ ಮಾನವ ಕುಲದ ಅಶಾಂತಿಗೆ ಕಾರಣವಾಗಿದೆ. ಮಾನವನ ವೈಜ್ಞಾನಿಕ ಪ್ರಗತಿಯ ಪಥವನ್ನು ಈ ಅವೈಜ್ಞಾನಿಕ ಸ್ವಾರ್ಥ ಮನಸ್ಸಿನವರು ಜನರನ್ನು ಮತೀಯ ಬಲೆಯಲ್ಲಿ ಬಿಗಿದು ಪ್ರಗತಿಗೆ ಬದಲು ಅಪಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಜನರನ್ನು ಸಂಕುಚಿತ ವಲಯಗಳಲ್ಲಿ ಕವುಚಿ ಅದೇ ಸರ್ವಸ್ವ ಎನ್ನುವ ಭ್ರಮೆಗೆ ಒಳಗಾಗಲು ಕಾರಣರಾಗಿದ್ದಾರೆ. ಪ್ರತಿಯೊಬ್ಬನೂ ತನ್ನ ಮತ ಧರ್ಮಗಳೇ ಶ್ರೇಷ್ಠ ಎನ್ನುವ ಭ್ರಮೆಗೆ, ವಿಕಲ್ಪಕ್ಕೆ ಗುರಿಯಾಗಿದ್ದಾನೆ.
“ತಾನು ಹುಟ್ಟಿದ ಧರ್ಮವಲ್ಲದೆ ಬೇರಾವ ಧರ್ಮವೂ ಸತ್ಯವಲ್ಲ ಎಂಬ ಭಾವನೆ ಈ ೧೯ನೇ ಶತಮಾನದ ಅಂತ್ಯಭಾಗದಲ್ಲಿ ಇನ್ನೂ ಇರುವುದು ನಮ್ಮ ದುರ್ಬಲತೆಗೆ ಸಾಕ್ಷಿ.” (ವಿ ಕೃತಿ ಶ್ರೇಣಿ. ೩-೮೬)
ವಿವೇಕಾನಂದರ ವಾಣಿ ಎಷ್ಟು ಸತ್ಯ!
ಮತ ಧರ್ಮದ ಹೆಸರಿನಲ್ಲಿ ಮೇಲೆ ಮೇಲೆ ಸೌಹಾರ್ದದ ಮಾತನಾಡುತ್ತ ತಮ್ಮ ತಮ್ಮ ಅಂತರಂಗದಲ್ಲಿ ಕತ್ತಿ ಮಸೆಯುತ್ತಿರುವ ಸಂಘ ಸಂಸ್ಥೆಗಳಲ್ಲಿ ಪ್ರಮುಖವಾದವು ಜಮಾ-ಅತೆ- ಇಸ್ಲಾಂ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳು. ರಾಜಕೀಯವಾಗಿ ಮುಸ್ಲಿಂಲೀಗ್ ಮತ್ತು ಭಾರತೀಯ ಜನತಾ ಪಕ್ಷಗಳು (ಜನಸಂಘ) ಇವುಗಳ ಬೆನ್ನೆಲುಬಾಗಿವೆ. ಇವು ತಮ್ಮ ಧರ್ಮಾಧತೆಯಿಂದಾಗಿ ಮುಗ್ಧ ಜನರ ಕೊರಳಿನೊಂದಿಗೆ ಚೆಲ್ಲಾಟವಾಡುತ್ತಾ ಹರಿಸಿರುವ, ಹರಿಸುತ್ತಿರುವ ರಕ್ತದ ಕೋಡಿಯಿಂದ ಭಾರತದ ಮಣ್ಣು ಕೆಸರಾಗಿದೆ. ವಿಶ್ವಹಿಂದೂ ಪರಿಷತ್, ಆರ್. ಎಸ್. ಎಸ್., ಬಿ.ಜೆ.ಪಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇತ್ಯಾದಿ ಒಂದು ಕಡೆ ; ಜಮಾ ಅತೆ ಇಸ್ಲಾಂ ಹಿಂದ್, ಜಮಿಯ ತುಲ್ ಉಲೆಮಾ, ಮುಸ್ಲಿಂಲೀಗ್, ಮುಸ್ಲಿಂ ಮಜ್ಲಿಸ್ ಇತ್ಯಾದಿ ಇನ್ನೊಂದು ಕಡೆ. ಈ ಎರಡರ ಹೃದಯದಾಳದಲ್ಲಿ ತನ್ನ ಕಾವನ್ನೂ ಕಾಯ್ದುಕೊಂಡು ಹುದುಗಿರುವ ಮತೀಯ ದ್ವೇಷದ ಲಾವಾರಸ – ಯಾವಕ್ಷಣದಲ್ಲಾದರೂ ತನ್ನ ಕೆನ್ನಾಲಗೆಯನ್ನು ಚಾಚಿ ಇಡೀ ಮಾನವ ಕುಲವನ್ನು ನುಂಗಿ ನೊಣೆಯಲು ಸದಾ ಸಿದ್ಧವಾಗಿದೆ. ಈ ಎರಡೂ ಬಣಗಳ ಮತೀಯ ಅಂಧತ್ವಕ್ಕೆ ಸೂರ್ಯನ ಪ್ರಖರ ಬೆಳಕಿನಂಥ ಜ್ಞಾನ ಇತ್ತ ವಿವೇಕಾನಂದರನ್ನು ಇಬ್ಬರೂ ಅರ್ಥಮಾಡಿಕೊಳ್ಳಲಾಗದೆ ಅವರ ವಿಶ್ವ ಭ್ರಾತೃತ್ವಕ್ಕೆ ಮಸಿಯನ್ನು ಬಳಿಯುತ್ತಿದ್ದಾರೆ.
“ಮಾನವ ವರ್ಗಕ್ಕೆ ಭಿನ್ನ ಧರ್ಮಗಳು ಏಕವಾದ ಒಂದೇ ಧರ್ಮದ ಅನಂತ ರೂಪಗಳೆಂಬುದನ್ನು ಕಲಿಸಬೇಕು. ಇದರಿಂದ ಪ್ರತಿಯೊಬ್ಬನೂ ತನಗೆ ಯಾವುದು ಉತ್ತಮ ಮಾರ್ಗವೋ ಅದನ್ನು ಆರಿಸಿಕೊಳ್ಳಬಹುದು. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಎರಡು ಧರ್ಮಗಳೂ ಮಿಲನವಾಗಬೇಕು. ವೇದಾಂತದ ಮಿದುಳು, ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಮನಕ್ಕೆ ಹಾದಿ. ನನ್ನ ಬಗೆಗಣ್ಣಿಗೆ ಇಂದಿನ ಗೊಂದಲ ಮತ್ತು ತಿಕ್ಕಾಟದಿಂದ ವೇದಾಂತದ ಮಿದುಳು, ಮತ್ತು ಇಸ್ಲಾಮಿನ ದೇಹದಿಂದ ಕೂಡಿದ ತೇಜೋಮಯವಾದ, ಅಜೇಯವಾದ ಮುಂದಿನ ನಿಷ್ಕಂಳಕ ಭಾರತದ ಉದಯ ಕಾಣುವುದು.” (ವಿ. ಕೃತಿ.ಶ್ರೇಣಿ. ೭-೨೪೫)
ಮಾನವ ಜನಾಂಗಕ್ಕೆ ಹಿತವಾದ ವಿವೇಕಾನಂದರ ಪಥವನ್ನು ತಮ್ಮ ಸ್ವಾರ್ಥ ಸಾಧನೆಗಾಗಿ, ಪಾಪದ ಗಳಿಕೆಗಾಗಿ ಇಬ್ಬರೂ ಝಾಡಿಸಿ ಒದ್ದು ಎದೆಯ ತುಂಬ ಮತೀಯ ಮದ್ದನ್ನು ತುಂಬಿಕೊಂಡು ರಕ್ತದ ಕೋಡಿ ಹರಿಸಲು ಸದಾ ಸಿದ್ಧರಾಗಿದ್ದಾರೆ. ಈ ಮತೀಯ ದುಷ್ಟರ ಬಗ್ಗೆ ಜನತೆ ಎಷ್ಟು ಬೇಗ ಎಚ್ಚರಗೊಂಡರೆ ಅಷ್ಟೂ ಒಳ್ಳೆಯದು.
ವಿವೇಕಾನಂದರು ಹೀಗೆ ಮತೀಯ ಹೊಂಡಗಳಲ್ಲಿ ಹೊರಳಿ ನರಳುತ್ತಾ ಜಗತ್ತನ್ನು ಕತ್ತಲ ಕೂಪಕ್ಕೆ ತಳ್ಳುತ್ತಿರುವವರ ಬಗ್ಗೆ ಸದಾ ಎಚ್ಚರಕೊಡುತ್ತಾ ವಿಶ್ವಧರ್ಮದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ವಿಶ್ವಧರ್ಮ ಪ್ರಕೃತಿದತ್ತವಾಗಿ ಚರಾಚರಗಳಲ್ಲೆಲ್ಲಾ ಹುದುಗಿರುವುದನ್ನು ಅರಿಯುವ ಬದಲು ಅದನ್ನು ಮರೆಯುವ, ಮರೆತು ತಮ್ಮ ಸ್ವಾರ್ಥದಲ್ಲಿ ಮೆರೆಯುವ ಮನಸ್ಸುಗಳನ್ನು ಕುರಿತು ಎಚ್ಚರಿಸಿದ್ದಾರೆ. ಈ ವಿಶ್ವವ್ಯಾಪಕ ಬೆಳವಣಿಗೆಗೆ ಪುರೋಹಿತಶಾಹಿ ಸದಾ ತನ್ನ ಅಡ್ಡಗಾಲನ್ನು ಹಾಕಿಕೊಂಡು ಅವನತಿಗೆ ಕಾರಣವಾಗುತ್ತಿದೆ.
“ವಿಶ್ವಧರ್ಮ ಕೂಡ ಆಗಲೇ ಇದೆ. ಹಲವು ಧರ್ಮಗಳನ್ನು ಪ್ರಚಾರ ಮಾಡುವುದು ತಮ್ಮ ಕರ್ತವ್ಯವೆಂದು ಭಾವಿಸುವ ಪಾದ್ರಿ ಮುಂತಾದವರು ಕೆಲವುಕಾಲ ಮೌನವಾಗಿದ್ದರೆ ಆಗ ವಿಶ್ವಧರ್ಮವಿರುವುದು ನಿಮಗೆ ಗೋಚರವಾಗುವುದು.” (ವಿ. ಕೃ. ಶ್ರೇಣಿ, ೩-೨೪೩)
ಮಾನವತೆಯ ಏಳಿಗೆಯ ದೃಷ್ಟಿಯಿಂದ ವಿವೇಕಾನಂದರ ವಿಶ್ವಮಾನವ ದೃಷ್ಟಿ ಎಷ್ಟೊಂದು ಅರ್ಥಪೂರ್ಣ.
ಮಣ್ಣಿನ ಗುಣವನ್ನರಿಯದೆ, ಜನಸಾಮಾನ್ಯರ, ತುಳಿತಕ್ಕೆ ಒಳಗಾದವರ ಹೃದಯವನ್ನು ಹಿಡಿದು ಮಿಡಿಯದಿದ್ದರೆ ಮಾನವನ ಅಂತಃಕರಣದ ಒಳಹೋಗಲು ಹೇಗೆ ಸಾಧ್ಯ? ಬರಿಯ ಪಾಂಡಿತ್ಯದಿಂದ ಗದ್ದೆ ಬೆಳೆಯುವುದಿಲ್ಲ ಎನ್ನುವ ಸತ್ಯವನ್ನು ಅರಿತವರು ವಿವೇಕಾನಂದರು. ಸದಾ ತಮ್ಮ ಬೆವರ ಹನಿಯನ್ನು ಬಸಿಯುತ್ತಾ ಭಾರತದ ಉಸಿರಿಗೆ ಕಾರಣರಾಗಿದ್ದ ದೀನರಲ್ಲಿ ಅತಿ ದೀನನಾಗಬೇಕೆಂಬುದೇ ಅವರ ಜೀವನದ ಪಲ್ಲವಿಯಾಗಿತ್ತು.
“ಝಾಡಮಾಲಿಗಳನ್ನು ಮತ್ತು ಹೊಲೆಯರನ್ನು ಈಗಿರುವ ಸ್ಥಿತಿಗೆ ಯಾರು ತಂದರು? ನಮ್ಮ ನಡತೆಯ ನಿರ್ದಯತೆಯೇ ಕಾರಣ. ಜೊತೆಗೆ ಅದ್ಭುತ ಅದ್ವೈತವನ್ನು ಬೇರೆ ಬೋಧಿಸುವುದು! ಇದು ಗಾಯಕ್ಕೆ ಉಪ್ಪು ನೀರನ್ನು ಹಾಕಿದಂತಲ್ಲವೆ? ಇಡೀ ದೇಶವೆಲ್ಲಾ ಕೇವಲ ಮುಟ್ಟಬೇಡ ಎಂಬ ಮಡಿವಂತರ ಕ್ರಂದನ ಅಟಾಟೋಪದಿಂದ ತುಂಬಿಹೋಗಿದೆ.” (ವಿ. ಕೃ. ಶ್ರೇಣಿ, ೪-೨೦೨)
ಬಹುಶಃ ಆಷಾಡಭೂತಿ ಪುರೋಹಿತರ ವಿರುದ್ಧ ಬಂಡೆದ್ದ ಮೊದಲ ಬಂಡಾಯದ ಧ್ವನಿ ಎಂದರೆ ವಿವೇಕಾನಂದರೆ. ಅವರ ಹೃದಯ ಅಷ್ಟು ಪವಿತ್ರವಾಗಿತ್ತು, ವಿಶಾಲವಾಗಿತ್ತು. ಮಣ್ಣಿನ ವಾಸನೆಗೆ ಹತ್ತಿರವಾಗಿತ್ತು. ಪಾವಿತ್ರ್ಯವಿಲ್ಲದ, ವೈಶಾಲ್ಯವಿರದ ಹೃದಯದಿಂದ ಅನಂತದ ಅರಿವು ಆಗಲು ಹೇಗೆ ಸಾಧ್ಯ? ಜೊತೆಗೆ ದೀನ ದಲಿತರನ್ನ ದೈನ್ಯತೆಯಿಂದ ಕಂಡು, ನಲಿದು ಉಂಡು, ಒಲಿದು ಅಪ್ಪಿ ಒಪ್ಪಿ ಆಲಂಗಿಸಿದವರು.
“ಒಮ್ಮೆ ನಾನು ಆಗ್ರಾದಿಂದ ಪೂನಾಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೆ. ನನ್ನಲ್ಲಿ ಒಂದು ಬಿಡಿಗಾಸೂ ಇರಲಿಲ್ಲ. ಬೃಂದಾದನಕ್ಕೆ ಇನ್ನೂ ಒಂದೆರಡು ಮೈಲಿ ದೂರವಿತ್ತು. ಹಾದಿಯ ಪಕ್ಕದಲ್ಲಿ ಒಬ್ಬ ಮನುಷ್ಯ ಗುಡಿಗುಡಿ ಸೇದುತ್ತ ಕುಳಿತಿದ್ದ. ಆ ತಕ್ಷಣ ನನಗೂ ಸೇದಬೇಕೆಂಬ ಆಸೆಯಾಯಿತು. ನಾನು ಆ ಮನುಷ್ಯನಿಗೆ ನಿನ್ನ ಚಿಲುಮೆಯಲ್ಲಿ ಒಮ್ಮೆ ಸೇದಲು ನನಗೆ ಅವಕಾಶ ಕೊಡುವೆಯಾ? ಎಂದೆ. ಆ ಮನುಷ್ಯ ಅದನ್ನು ನನಗೆ ಕೊಡಲು ತುಂಬಾ ಹಿಂಜರಿಯುತ್ತಾ ನಾನು ಜಲಗಾರ ಎಂದ. ಇನ್ನು ನನ್ನಲ್ಲಿ ಹಿಂದೂ ಸಂಸ್ಕಾರದ ಪ್ರಭಾವವಿತ್ತು. ನಾನು ತಕ್ಷಣ ಹಿಂದೆ ಸರಿದು ಸೇದದೆ ಮುಂದೆ ಹೊರಟೆ. ಕೊಂಚ ದೂರ ಹೋಗುವಷ್ಟರಲ್ಲಿಯೇ ನನಗೆ ನೆನಪಿಗೆ ಬಂತು. ನಾನೊಬ್ಬ ಸಂನ್ಯಾಸಿ, ಜಾತಿ, ಮತ, ಸಂಸಾರ, ಗೌರವ ಎಲ್ಲವನ್ನೂ ತ್ಯಜಿಸಿದವನು. ಆದರೂ ಆ ಮನುಷ್ಯ ಗುಡಿಸುವ ಜಾಡಮಾಲಿ ಎಂದ ಕೂಡಲೆ ಹಿಂದಕ್ಕೆ ಸರಿದೆ. ಅವನು ಮುಟ್ಟಿದ ಗುಡಿಗುಡಿಯನ್ನು ಸೇದದೆ ಹೊರಟು ಬಂದೆ ಎಂಬುದು ನೆನಪಿಗೆ ಬಂದಿತು. ಈ ಯೋಚನೆ ನನ್ನ ಮನಸ್ಸನ್ನು ಕುಬ್ಜಗೊಳಿಸಿತು. ನಾನಾಗಲೇ ಅರ್ಧ ಮೈಲಿ ದೂರ ಬಂದಿದ್ದೆ. ಪುನಃ ನಾನು ಹಿಂತಿರುಗಿ ಆ ಜಲಗಾರನಿದ್ದಲ್ಲಿಗೆ ಬಂದೆ. ಅವನಿನ್ನೂ ಅಲ್ಲಿಯೆ ಕುಳಿತಿದ್ದ. ನಾನು ತಕ್ಷಣ ಅವನಿಗೆ ನನ್ನ ಪ್ರಿಯ ಗೆಳೆಯ, ದಯವಿಟ್ಟು ನನಗೊಂದು ಗುಡುಗುಡಿಯನ್ನು ಸಿದ್ಧಪಡಿಸು ಎಂದೆ. ಅವನು ಏನೇನು ಅಡ್ಡಿಗಳನ್ನು ಹೇಳಿದರೂ ಕೇಳದೆ ಅದನ್ನು ಕೊಟ್ಟೇ ತೀರಬೇಕೆಂದು ಹಠಹಿಡಿದೆ. ಆತ ನನಗೆ ಚಿಲುಮೆಯನ್ನು ಸಿದ್ಧಪಡಿಸಬೇಕಾಗಿ ಬಂತು. ನಂತರ ನಾನು ಸಂತೋಷದಿಂದ ಆ ಚಿಲುಮೆಯನ್ನು ಸೇದಿ ಬೃದಾವನಕ್ಕೆ ಹೊರಟೆ.” (ವಿ. ಕೃ. ಶ್ರೇಣಿ – ೧೦-೩೪೩)
ಹೀಗೆ ಎಲ್ಲೂ ಆತ್ಮವಂಚನೆ ಮಾಡಿಕೊಳ್ಳದೆ ನೇರ ನಡೆದ, ನುಡಿದ ತನ್ಮೂಲಕ ಮಣ್ಣಿಗೆ ಹತ್ತಿರವಾಗುತ್ತಾ ಹೋದವರು. ಮಣ್ಣನ್ನು, ನೀರನ್ನು, ಗಾಳಿಯನ್ನು, ಬೆಳಕನ್ನು, ಆಕಾಶವನ್ನು ಅರಿತು ಅದರ ಅಂತರಂಗದಲ್ಲಿ ಬೆರೆತು ಒಂದಾದಾಗ ಅನೇಕವೆಲ್ಲ ಏಕವಾಗಿ ವಿಶ್ವ ವೈಶಾಲ್ಯತೆ ಮೂಡುತ್ತದೆ. ವ್ಯಪ್ಟಿ ಸಮಷ್ಟಿಯ ಒಂದು ಅಂಶ ಎನ್ನುವ ಅರಿವು ಮೂಡಿದಾಗ ಎಲ್ಲ ವಿಕಲ್ಪಗಳೂ ಮಾಯವಾಗಿ ತಾನೆ ಎಲ್ಲ ಎನ್ನುವ ಸತ್ಯ ಗೋಚರಿಸುತ್ತದೆ.
“ಪ್ರಪಂಚದಲ್ಲಿರುವ ದೇವರಿಗೆಲ್ಲಾ ಗೋಳಿಡಿ. ನಾನೂ ಅನೇಕ ವರ್ಷ ಗೋಳಿಟ್ಟೆ. ನನಗೆ ಸಹಾಯ ಕೊನೆಗೆ ದೊರಕಿತು. ಆದರೆ ಆ ಸಹಾಯ ಬಂದುದು ನನ್ನಿಂದಲೇ. ಭ್ರಾಂತಿಯಿಂದ ನಾನು ಏನನ್ನು ಮಾಡಿದ್ದೆನೋ ಅದನ್ನು ಬಿಡಬೇಕಾಯಿತು. ಅದೊಂದೇ ದಾರಿ. ನನ್ನ ಸುತ್ತಲೂ ಬೀಸಿಕೊಂಡಿರುವ ಬಲೆಯನ್ನು ನಾನೇ ಕತ್ತರಿಸಬೇಕಾಯಿತು. ಇದನ್ನು ಮಾಡುವುದಕ್ಕೆ ಶಕ್ತಿ ನನ್ನಲ್ಲಿಯೇ ಇರುವುದು.” (ವಿ. ಕೃ .ಶ್ರೇಣಿ – ೩-೨೪೮)
ಹೀಗೆ ಪ್ರತಿ ಮನುಷ್ಯನಲ್ಲೂ ಇರುವ ವಿಶ್ವ ವ್ಯಾಪಕ ಶಕ್ತಿಯ ಅರಿವನ್ನು ತಮ್ಮ ಮೂಲಕ ಅರಿವು ಮಾಡಿಕೊಟ್ಟವರು. ತಮ್ಮಂತೆ ಎಲ್ಲರೂ ಎಲ್ಲ ಮತಧರ್ಮಗಳ ಸೀಮಿತ ಎಲ್ಲೆಯನ್ನೂ ಮೀರಿ ಮುನ್ನಡೆಯಬೇಕೆಂಬ ಹಂಬಲ ಹೊತ್ತವರು. ತಮ್ಮಲ್ಲಿಯೇ ಹುದುಗಿರುವ ಆ ಅನಂತ ಶಕ್ತಿಯ ಆವಿರ್ಭಾವಕ್ಕಾಗಿ ಅನವರತ ತೊಡಗಿಸಿಕೊಂಡು ಅನಂತವನ್ನು ಒಳಗೊಂಡವರು. ಅವರ ಹೃದಯ ಸದಾ ತೆರೆದ ಬಾಗಿಲು.
“ಹಿಂದೆ ಇದ್ದ ಧರ್ಮಗಳನ್ನೆಲ್ಲಾ ನಾನು ಸ್ವೀಕರಿಸುತ್ತೇನೆ. ನಾನು ಮಹಮ್ಮದೀಯರ ಮಸೀದಿಗೆ ಹೋಗುತ್ತೇನೆ, ಕ್ರೈಸ್ತರ ಚರ್ಚಿನಲ್ಲಿ ಶಿಲುಬೆಯ ಎದುರಿಗೆ ಬಾಗುತ್ತೇನೆ, ಬೌದ್ಧರ ವಿಹಾರದಲ್ಲಿ ಬುದ್ಧನಲ್ಲಿ ಮತ್ತು ಅವನ ಧರ್ಮದಲ್ಲಿ ಶರಣಾಗುತ್ತೇನೆ. ಹಿಂದೂಗಳೊಂದಿಗೆ ಕಾಡಿಗೆ ಹೋಗಿ ಎಲ್ಲರಲ್ಲೂ ಬೆಳಗುತ್ತಿರುವ ಆ ಪರಂಜ್ಯೋತಿಯ ದರ್ಶನಕ್ಕಾಗಿ ಧ್ಯಾನಮಾಡುವರೊಂದಿಗೆ ನಾನೂ ಧ್ಯಾನಮಗ್ನನಾಗುತ್ತೇನೆ. ನಾನು ಇವನ್ನೆಲ್ಲಾ ಮಾಡುವುದು ಮಾತ್ರವಲ್ಲ, ಭವಿಷ್ಯದಲ್ಲಿ ಏನೇನು ಬರುವುದೋ ಅದನ್ನೆಲ್ಲ ಸ್ವೀಕರಿಸುವುದಕ್ಕೆ ನನ್ನ ಹೃದಯವನ್ನು ತೆರೆದಿಡುವೆನು. ಭಗವಂತನ ಗ್ರಂಥ ಅಂತ್ಯವಾಯಿತೇನು? ಅಥವಾ ನಿರಂತರ ದರ್ಶನ ಇನ್ನೂ ಆಗುತ್ತಿದೆಯೋ? ಪ್ರಪಂಚದ ಆಧ್ಯಾತ್ಮಿಕ ದರ್ಶನಗಳು ಒಂದು ಅಮೋಘ ಶಾಸ್ತ್ರ. ಬೈಬಲ್ಲು, ವೇದ, ಕುರಾನ್ ಮತ್ತು ಇತರ ಧರ್ಮಶಾಸ್ತ್ರಗಳೆಲ್ಲ ಕೆಲವು ಪುಟಗಳು ಮಾತ್ರ; ವ್ಯಕ್ತವಾಗಲು ಇನ್ನೂ ಅನಂತ ಪುಟಗಳಿವೆ. ಅವನ್ನೆಲ್ಲಾ ಸ್ವೀಕರಿಸಲು ನಾನು ಸಿದ್ಧನಾಗಿರುವೆನು. ಅನಂತ ಭವಿಷ್ಯಕ್ಕೆ ಬಾಗಿಲನ್ನು ತೆರೆದಿಡುವೆನು, ಹಿಂದೆ ಆಗಿರುವುದನ್ನೆಲ್ಲಾ ಸ್ವೀಕರಿಸುವೆನು, ಈಗಿರುವುದನ್ನು ಅನುಭವಿಸುವೆನು, ಭವಿಷ್ಯದಲ್ಲಿ ಬರುವುದನ್ನೆಲ್ಲಾ ಸ್ವೀಕರಿಸುವುದಕ್ಕೆ ಹೃದಯದ ಪ್ರತಿಯೊಂದು ದ್ವಾರವನ್ನೂ ತೆರೆದಿಡುವೆನು. ಹಿಂದಿನ ಮಹಾತ್ಮರಿಗೆಲ್ಲಾ ವಂದನೆ. ಈಗಿರುವ ಮಹಾತ್ಮರಿಗೆಲ್ಲಾ ವಂದನೆ. ಮುಂದೆ ಬರಲಿರುವ ಮಹಾತ್ಮರಿಗೆಲ್ಲಾ ವಂದನೆ.” (ವಿ. ಕೃ. ಶ್ರೇಣಿ ೧೦-೪೬೩)
ವಿವೇಕಾನಂದರ ಈ ವಿಶ್ವ ವೈಶಾಲ್ಯತೆಯ ಎದುರು ನಾವು ಮೌನದಿಂದ ಧ್ಯಾನಸ್ಥರಾಗಬೇಕಾಗುತ್ತದೆ. ತನ್ಮೂಲಕ ನಮ್ಮ ಸಂಕುಚಿತ ಮತೀಯ ಮನಸ್ಸುಗಳನ್ನು ಪರಿಶುದ್ಧಗೊಳಿಸಿಕೊಂಡು ವಿಶಾಲ ವಿಶ್ವದೊಂದಿಗೆ ಹರಿಯಬಿಡಬೇಕಾಗುತ್ತದೆ. ಆಗ ಮಾತ್ರ ನಮಗೆ ವಿವೇಕಾನಂದರ ವಿಶ್ವಮಾನವ ಹೃದಯದ ಅರಿವು ಆಗಲು ಸಾಧ್ಯವಾಗುತ್ತದೆ. ಅಲ್ಲಿಯ ತನಕ ಸಂಕುಚಿತ ದೃಷ್ಟಿಯ ದುನಸ್ಸುಗಳು ವಿವೇಕಾನಂದರ ವಿಶ್ವಮಾನವ ಹೃದಯವನ್ನು ಕಂಡುಕೊಳ್ಳದೆ ಅವರನ್ನು ಹಿಂದೂ ಸಂನ್ಯಾಸಿ ಎನ್ನುವ ಮತೀಯ ಹೊಂಡಕ್ಕೆ ಸೀಮಿತಗೊಳಿಸಿ ಗೊಂದಲಕ್ಕೆ ಆಸ್ಪದ ಕೊಟ್ಟು ಅದಕ್ಕೆ ಕಾರಣರಾಗಬೇಕಾಗುತ್ತದೆ. ಆಂತಹ ಅನಿಷ್ಟಕಾಲ ಆದಷ್ಟು ಬೇಗ ಇಲ್ಲವಾಗಲಿ.
ವಿಶ್ವಮಾನವ ವಿವೇಕಾನಂದರನ್ನು ಹಿಂದೂ ಎಂದು ಕರೆಯುವುದು ಅವರಿಗಷ್ಟೇ ಅಲ್ಲ, ಅದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ.
*****