ಸಾಮಾನ್ಯವಾಗಿ ಎಲ್ಲರೂ ತಿಂಡಿ ತಿಂದ ಮೇಲೆ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಒಂದು ರೂಢಿಯಾಗಿಯೇ ಮಾರ್ಪಟ್ಟಿದೆ. ಕೆಲವರಂತೂ ತಿಂಡಿ ತಿನ್ನುತ್ತಲೇ ಟೀಯನ್ನೋ ಕಾಫಿಯನ್ನೋ ಕುಡಿಯುತ್ತಲೇ ತಿಂದು ಮುಗಿಸುತ್ತಾರೆ. ಈ ರೂಢಿಯಿಂದಾಗಿ ಆರೋಗ್ಯದ ಮೇಲೆ ಅನೇಕ ವ್ಯತೀರೀಕ ಪರಿಣಾಮವುಂಟಾಗುತ್ತದೆ, ಎಂದು ಸಂಶೋಧಕರು ಹೇಳುತ್ತಾರೆ.
ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಶೇ. ೫೦ ರಷ್ಟು ಜನಕ್ಕೆ ಈ ರಕ್ತಹೀನತೆ ಕಂಡು ಬಂದಿದೆ. ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಕಬ್ಬಿಣದ ಅಂಶ ಇದ್ದರೂ ಜೀರ್ಣನಾಳ (ಕರುಳುಗಳು) ಈ ಕಬ್ಬಿಣದ ಅಂಶವನ್ನು ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ. ಈ ಹೀರಿಕೊಳ್ಳುವಲ್ಲಿ ಅಡ್ಡಿಪಡಿಸುವ ಅಂಶವೇ ನಾವು ಕಾಫಿ ಟೀಗಳನ್ನು ತಿಂಡಿಯ ನಂತರ ನಡುವೆ ಕುಡಿಯುತ್ತ ಹೋಗುವುದರಿಂದ ಆಗುತ್ತದೆ. ಈ ಟೀ ಕಾಫಿಯಲ್ಲಿರುವ ‘ಟ್ಯಾನಿನ್’ ಎಂಬ ಪದಾರ್ಥವು ಕಬ್ಬಿಣಾಂಶದ ಹೀರುವಿಕೆಯನ್ನು ತಡೆಗಟ್ಟುತ್ತದೆ. ದಕ್ಷಿಣ ಭಾರತೀಯರು ಸೇವಿಸುವ ಯಾವುದೇ ತಿಂಡಿಯಿಂದ ಕರಳು ೦.೪ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ರಕ್ತಹೀನತೆಯನ್ನು ಪ್ರತಿಬಂಧಿಸಲು ಪ್ರತಿಯೊಬ್ಬರಿಗೆ ನಿತ್ಯ ಒಂದು ಮಿ.ಗ್ರಾಂ. ಕಬ್ಬಿಣಾಂಶದ ಅಗತ್ಯವಿದೆ. ಈ ಲೆಕ್ಕಾಚಾರದಂತೆ ನಮಗೆ ನಮ್ಮ ನಿತ್ಯದ ತಿಂಡಿಯಿಂದಲೇ ಸಾಕಷ್ಟು ಕಬ್ಬಿಣಾಂಶದ ದೊರಕುತ್ತದೆ. ಕಾಫಿ, ಟೀಯಲ್ಲಿ ಇರುವ ‘ಟ್ಯಾನಿನ್’ ಎಂಬ ಪದಾರ್ಥ ಕಬ್ಬಿಣಾಂಶದ ಹೀರುವಿಕೆಗೆ ತೊಡರುಗಾಲು ಹಾಕುತ್ತದೆ. ಹೀಗಾಗಿ ತಿಂಡಿ ತಿಂದ ತಕ್ಷಣ ಕಾಫಿ ಕುಡಿದರೆ ಕರಳು ಕೇವಲ ೦.೨ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಲು ಶಕ್ಯವಾಗುತ್ತದೆ. ಟೀ ಕುಡಿದರೆ ಕಬ್ಬಿಣಾಂಶದ ಹೀರುವಿಕೆಯ ಪ್ರಮಾಣ ೦.೧ ಮಿ.ಗ್ರಾಂ ಗೆ ಇಳಿಯುತ್ತದೆ. ಏಕೆಂದರೆ ಟೀಯಲ್ಲಿ ಕಾಫಿಯಲ್ಲಿರುವುದಕ್ಕಿಂತ ಹೆಚ್ಚು ಟ್ಯಾನಿನ್ ಇರುತ್ತದೆ.
ವೈಜ್ಞಾನಿಕ ವಾಸ್ತವತೆ ಹೀಗಿರುವಾಗ ತಿಂಡಿತಿಂದ ತಕ್ಷಣ, ನಡುನಡುವೆ ಕಾಫಿ, ಟೀ ಕುಡಿಯುವುದು ಒಳ್ಳೆಯದಲ್ಲ. ಹಾಗೆಂದ ಮಾತ್ರಕ್ಕೆ ತಿಂಡಿಯನ್ನೇನು ಬಿಡುವ ಅಗತ್ಯವಿಲ್ಲ. ಅದೇ ವಿಜ್ಞಾನಿಗಳು ಹೇಳುವ ಪ್ರಕಾರ ತಿಂಡಿ ತಿಂದ ಮೇಲೆ ಕಾಫಿ, ಟೀ ಕುಡಿಯದಿದ್ದರೆ ಸಮಾಧಾನವೆ ಇರುವುದಿಲ್ಲ ಎನ್ನುವವರಿಗೆ ಒಂದು ಮಾರ್ಗೋಪಾಯ ಹೇಳಿದ್ದಾರೆ. ಅಂದರೆ ತಿಂಡಿ ತಿಂದ ಅರ್ಧಗಂಟೆಯ ನಂತರ ಕಾಫಿ ಟೀ ಕುಡಿದರೆ ಕರುಳುಗಳ ಮೇಲೆ ‘ಟ್ಯಾನಿನ್’ ಪ್ರಭಾವ ಬೀರಲಾರದು; ಎಂದು ಹೇಳಿದ್ದಾರೆ. ಇದೇ ವಿಜ್ಞಾನಿಗಳು ಕಬ್ಬಿಣದ ಅಂಶವನ್ನು ವೃದ್ದಿಸುವ ‘ಸಿ’ ಜೀವಸತ್ವವುಳ್ಳ ಮೋಸುಂಬೆ, ನಿಂಬೆ, ಇತರ ಪೇಯಗಳನ್ನು ತಿಂಡಿ ತಿಂದ ನಂತರ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ, ವರ್ಧಿಸುತ್ತದೆ, ಎಂಬುವುದನ್ನು ಕಂಡು ಹಿಡಿದಿದ್ದಾರೆ.
*****