ಅರೆ ನಿದ್ದ ಅರೆ ಅರಿವು,
ಮಂಪರು ದಾರಿ ಹಿಡಿದು
ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ;
ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ
ಜನ ತಿಕ್ಕಲು ಕುಣಿತ;
ಏನೇನೊ ನೋಡಿ ಏನೇನೊ ಹಾಡುವ
ಕನಸ ಕೈಗಾರಿಕಾಶಾಲೆ;
ಕಂಡದ್ದ ಕಲೆಸಿ ಕಾಣದ್ದ ಕಣ್ಣಿಗೆ ತೆರೆವ
ಚಂಡಸೃಷ್ಟಿಯ ಲೀಲೆ.
ನೋಡುತ್ತ ಹೋದೆ.
‘ಹುಗಿದ ಹಳ ಬಾವಿಯೊಳ’ ತಾಳ ಬೇತಾಳ,
ಅರಿಯಬಾರದು ಹೊರಗೆ ಹೂವ ತಳದಾಳ.
ಆಕಾರವೇನೊ ಇದೆ ಆಕೃತಿಯೆ ನಷ್ಟ,
ಜರುಗುತಿದೆ ಏನೇನೊ ತಿಳಿಯುವದೆ ಕಷ್ಟ.
ಹರಿದ ಮೈ ಮುರಿದ ತಲೆ ಬುಡವಿರದ ಬೆಟ್ಟ,
ಹುತ್ತಗಳ ಕರಿಗಣ್ಣು ಕಬಳಿಸಿವೆ ಗುಟ್ಟ.
ಚುಕ್ಕಿಗಳ ಧಿಕ್ಕರಿಸಿ ಇರುಳೊಡೆದ ಕಾಡು,
ತೇಗಿ ಕೂಗುತ್ತಿತ್ತು ಬೆಚ್ಚಿಸುವ ಹಾಡು.
ಆಚೆ ಕಡೆ ಮುದಿ ಆಲ, ಕೆದರುತಲೆ ಕಂಬ,
ಈಚೆ ಈ ಭಾರಿ ಮನೆ, ಮೂಗಿರದ ಜಂಬ.
ಹಿಂದೆ ಎಂದೋ ಕಡಲ ಮೇಲೆಲ್ಲ ನಡೆದು
ಬಿರುಗಾಳಿ ಬಡಿದೋ
ದಾಳಿಯಲಿ ಸಿಡಿದೋ
ತಳ ಸೇರಿ ಎಲ್ಲೆಲ್ಲು ಬಿದ್ದಿರುವ ಹಡಗುಗಳ
ಅವಶೇಷ ಶೈಲಿಯಲಿ ತಂತಿ ಮನೆ ಕಂಬ.
ಹಣ ಚಿಗುರಿ ಹರಿದಿತ್ತು ನದಿಯಂತೆ ಧೂಪ,
ಮಾನವರ ಮೈಯಲ್ಲಿ ಮೃಗದ ಆಲಾಪ.
ಮೈಯಿರದ ಹಕ್ಕಿ ಹಸಿವಿನಲಿ ಸೊಕ್ಕಿ
ಹಿಗ್ಗಿ ಹಾಕುತ್ತಿತ್ತು ಕಿವಿತುಂಬ ಶಾಪ.
ತುಟಿ ಮೂಡಿ ಬಂಡೆಗಳು ಕುಡಿದಂತೆ ಕಳ್ಳು,
ಕೊಂಬೆಯಲಿ ಮುಖವರಳಿ ಹಾಕಿದವು ಸಿಳ್ಳು.
ಮೃಗಗಳಿಗೆ ಒಂದೊಂದು ಅಂಗಕ್ಕು ಒಡವೆ
ಸತ್ಯ ಸುಳ್ಳಿಗೆ ನಡೆದು ಪ್ರತಿಗಳಿಗೆ ಮದುವೆ.
ವಿಶ್ವರೂಪಕ್ಕೆ ಕಂಗಾಲಾದೆ ಪಾರ್ಥ.
ಚೀರಿ ಕಣ್ತೆರೆದೆ.
ಮತ್ತೆ ಪರಿಚಿತ ಗಾಳಿ ನೀರು ಮಣ್ಣಿಗೆ ಮರಳಿ
ಹಾಯೆನಿಸಿ ಉಸಿರಾಡಿದೆ.
*****