ಅಣ್ಣ ಬಾರೊ ಬಸವಣ್ಣ ಬಾರೊ
ಈ ಜನರ ಕಣ್ಣ ತೆರೆಯೋ
ಬಣ್ಣ ಬಾಳು ಬರಿ ಹಾಳು ಹಾಳು
ಈ ಕಣ್ಣ ಪೊರೆಯ ಹರಿಯೋ || ೧ ||
ಕೊಳೆತು ನಿಂತು ನೀರಾದ ಭೇದ
ನೂರಾರು ತಳೆದ ಜನರ
ಕೆರಳಿ ಗದ್ದರಿಸಿ ತಿಳಿಸಿ ಉದ್ಧರಿಸಿ
ಕಾಯ್ದೆ ಅಂದು ಅವರ || ೨ ||
ಬ್ರಾಹ್ಮಣಾಗಿ ನೀ ಹುಟ್ಟಿ ಬಂದರೂ
ಕುಲದ ಜಡತೆ ನೋಡಿ
ಬ್ರಹ್ಮವನ್ನೆ ಮರೆತಂಥ ಬ್ರಾಹ್ಮಣರ
ಬಣ್ಣ ಬಯಲು ಮಾಡಿ || ೩ ||
ಕಟ್ಟು ಕಥೆಯ ಹೆಣೆಹೆಣೆದು ಸುಳ್ಳೆ
ತಾವ್ ಹೂಟ್ಟೆ ಹೊರೆಯುವವರ
ತಟ್ಟಿ ಬೈದು ಈ ರಟ್ಟೆ ಮುರಿದು
ದುಡಿಯೆಂದು ಪೇಳ್ದ ಧೀರ || ೪ ||
ಸಂಗಮೇಶ್ವರನ ಸಂಗದಲ್ಲಿ
ಲಿಂಗಾಂಗ ಪರಿಯನರಿತು
ಲಿಂಗಧರಿಸಿ ನಿಸ್ಸಂಗಿಯಾದೆ ನೀ
ಭಂಗ ಭವವ ಮರೆತು || ೫ ||
ಮನುಜರೆಲ್ಲ ಒಂದೆಂದು ಸಾರಿ
ಮನುಕುಲವ ಬೆಳಗ ಬಂದೆ
ಹೊಲಸುಗೈವ ಹೊಲೆಯರನು ಹಳಿದೆ
ಕುಲ ಜನಿಸಿದ್ದಲ್ಲವೆಂದೆ || ೬ ||
ಹುಲ್ಲು ದೇವರು ಕಲ್ಲು ದೇವರೆಂದೆಂದು
ಬೇಧವಿರಲು
ಎಲ ದೇವರೂ ಒಂದೆ ತಾನೆ
ಈಶ್ವರನು ಒಡೆಯನಿರಲು ||೭||
ಅಲ್ಲಿ ಇಹನು ಇಲ್ಲಿಹನು ದೇವ
ವಿಶ್ವವನು ತುಂಬಿದವನು
ಇಲ್ಲಿ ಮನದಿ ಇಹನೆಂದು ತನುವಿನಲಿ
ಲಿಂಗ ಮೆರೆಸಿದವನು (ಮಹಲಿಂಗ ಮೆರೆಸಿದವನು) || ೮ ||
ಕಾಮ ಸುಟ್ಟು ಬೂದಿಯನೆ ಧರಿಸಿ
ಕಾಮಾರಿಯಾದ ಶಿವನ
ನೇಮ ನಡೆಸಲ್ಕೆ ಬೂದಿ ತಳೆದೆ
ವಿಭೂತಿ ಎಂದೆ ಅದನ || ೯ ||
ಇಬ್ಬರ್‌ಹೆಂಡಿರೂ ಎರಡು ಕಣ್ಣಿನೊಲು
ಇರಲು ಗಂಗ ನೀಲಾ
ಬಳಸಿ ಬ್ರಹ್ಮಚಾರ್ಯದೆ ಉಂಡು
ಉಪವಾಸಿ ಬಹ್ಮಶೀಲಾ || ೧೦ ||
ಮುಳ್ಳ ಮಕುಟವದು ಮಂತ್ರಿಪದವಿ
ಬಿಜ್ಜಳನ ನೆರಳಿನಲ್ಲಿ
ಹೂವಿನಂತೆ ಕೈಗೊಂಡೆ ಕಂಡೆ
ಪರತತ್ವ ಇಹದಲಿಲ್ಲಿ || ೧೧ ||
ಹಣದ ಕಣಜವೇ ನಿನ್ನದಾಗಿರಲು
ಜನರ ಸೇವೆಗಾಯ್ತು
ಹಣದ ಭಂಡಾರ ಭಕುತಿ ಭಂಡಾರ
ನಿನ್ನ ಕೈಯಲಾಯ್ತು || ೧೨ ||
ಶಿವನ ದೂತನೇ ಬಂದು ಭುವಿಯ
ಕೈಲಾಸವಾಗಿ ಮಾಡೆ
ಶರಣ ಸಂಕುಳಿಯು ಮೂಲೆ
ಮೂಲೆಯಿಂದಿಲ್ಲಿ ಬಂದು ಕೂಡೆ || ೧೩ ||
ಕರ್ಮ ಮಾಡುವುದೇ ಧರ್ಮವೆಂದೆ
ಕಾಯಕವೆ ಶಿವನ ಕಾರ್ಯ
ತಿಳಿದು ಏಳೆ ಜನ ಮೊಳಗೆ ಎಲ್ಲಿಡೆಗೆ
ಮಹಾಮನೆಯ ತೂರ್ಯ || ೧೪ ||
ತಿಳಿವು ಲಿಂಗ ಮನ ಒಳವು ಲಿಂಗ
ತನು ಮಾಳ್ಪ ಕೆಲಸ ಲಿಂಗ
ಶಾಂತಿ ಶಿವನು ಸಮಬುದ್ಧಿ ಶಿವನು
ಸಹಬಾಳ್ವೆ ಶಿವನ ಸಂಗ || ೧೫ ||
ಜನಮನವು ತೊಳೆದು ತಿಳಿಯಾಯ್ತು ತನುವು
ಕೃತಿಯಲ್ಲಿ ಒಂದೆ ಆಯ್ತು
ಮಾಡಿದ್ದ ಮಡಿಯು ಆಡಿದ್ದ ವಚನ
ಮಹಪೂರ ರಚನೆಗಾಯ್ತು || ೧೬ ||
ಎಲ್ಲ ಜಾತಿಗಳ ಕೂಡಿಸಿಟ್ಟು
ಆದರ್ಶ ಕುಲವ ಮಾಡಿ
ಅನುಭವದ ಕಡೆತ ಅನುಭಾವವಾಗಿ
ಕಲ್ಯಾಣ ನಗರ ನೋಡಿ || ೧೭ ||
ಅಕ್ಕ ಬರಲು ಕಕ್ಕಯ್ಯ ಬಂದ
ಅಲ್ಲಮನು ಒಲಿದು ಬಂದ
ಮಾಚಿದೇವ ಬೌಡಯ್ಯ ಮತ್ತೆ
ಹರಳಯ್ಯರೆಲ್ಲರಿಂದ || ೧೮ ||
ಬೊಮ್ಮಿದೇವನಾ ಚಿಕ್ಕ ದೇವ
ಮಧುವರಸ ಕಿನ್ನರಯ್ಯ
ಮಾರಿದೇವ ಮುಂತಾದ ಮಹಿಮರು
ಎಲ್ಲ ನೆರೆದರಯ್ಯ || ೧೯ ||
ವಚನ ಹಾಡಿದರು ಮಥನ ಮಾಡಿದರು
ಮನದಿ ಶಿವನ ಕಂಡು
ಹೆಣ್ಣು ಮಕ್ಕಳೂ ಸಭೆಯ ಬೆಳಗಿದರು
ಅತ್ಮ ಸಿರಿಯನುಂಡು || ೨೦ ||
ಬೆಳಕು ಹಬ್ಬಿಸಲು ಹೆಣಗುವಂಥ
ದೀಪಕ್ಕೆ ಕಪ್ಪು ಮುಚ್ಚಿ
ಕತ್ತಲಾಯ್ತು ಸಿರಿ ಎತ್ತ ಹೋಯ್ತು
ಬರಿ ಬಯಲ ಭಾವನೆಚ್ಚಿ || ೨೧ ||
ಕಲ್ಯಾಣ ಉರಿದು ಇಲ್ಲಾಣವಾಯ್ತು
ಮತ ಬೇಧ ತೀವ್ರವಾಗಿ
ಕೂಡಲದಿ ನೀನು ಕೂಡಿದೆಯೊ ಶಿವನ
ಹಣ್ಣಾಗಿ ಕೊನೆಗೆ ಮಾಗಿ || ೨೨ ||
ಎಂಟು ನೂರು ವರ್ಷಗಳು ಕಳೆದರು
ಗಂಟಾಗಲಿಲ್ಲ ಬಾಳು
ನಿನ್ನ ಬೋಧ ಬರಿ ಬೂದಿಯಾಗಿ
ಮೈ ಬಳಿಯಲಾಯ್ತು ಧೂಳು || ೨೩ ||
ಮೇಲ್ಮೆ ಸಾಧಿಸುತ ಬಂದ ಪುರೋಹಿತ
ವರ್ಗಗಳ ಒಡೆವ ನೀತಿ
ಹೊಡೆದಾಟಕೊಂದು ನೆಪವಾಗಿ ಲಿಂಗ
ಜನಿವಾರ ಭೇದ ರೀತಿ || ೨೪ ||
ನಿನ್ನ ತತ್ವ ಕೃತಿಗಳನೆ ಮರೆತ
ಬರಿ ಬಾಯಿ ಮಾತಿನಲ್ಲಿ
ಬಣ್ಣಗೆಟ್ಟ ಈ ಜನರನೆತ್ತು ಬಾ
ಜನ್ಮವೆತ್ತಿ ಇಲ್ಲಿ (ನರ ಜನ್ಮವೆತ್ತಿ ಇಲ್ಲಿ) || ೨೫ ||
*****