ಬಾನು ಚುಕ್ಕಿಗಣ್ಣಿಂದ
ಭೂಮಿಗೆ ಕಣ್ಣು ಹೊಡೆಯುತ್ತದೆ,
ಮುಗಿಲ ಮಿದುಗೈಯಿಂದ
ಗಿರಿಮೊಲೆ ಸವರುತ್ತದೆ,
ಹಸಿರ ಪತ್ತಲ ನೇಯ್ದು ಮಳೆಸೂಜಿಯಿಂದ
ನಲ್ಲೆಗೆ ಪ್ರೀತಿಯ ವಸ್ತ್ರ
ಮೆಲ್ಲಗೆ ಹೊಚ್ಚುತ್ತದೆ.
ಕೆರಳಿತೊ ಕೋಪ್,
ಕೆಟ್ಟ ಬಿಸಿಲಾಗಿ ಉರಿದು
ಅರಳಿತೊ ಪ್ರೀತಿ
ಬೆಳದಿಂಗಳಾಗಿ ಸುರಿದು
ಸೂರ್‍ಯನ ಪಂಜು ಹಿದಿದು
ಚಂದ್ರನ ಟಾರ್‍ಚು ತೆರೆದು
ಹಗಲಿರುಳೂ ನಲ್ಲೆಯ ಮೈ ಕಾಯುತ್ತದೆ.
ಅಪ್ಪ ಅಮ್ಮಂದಿರ ಆಟ
ಮಕ್ಕಳಿಗೂ ತಟ್ಟಿ
ನಡೆದಿದೆ ನಾಟಕ ಇಲ್ಲೂ
ವರ್ಷ ಇಡೀ ಬಿಟ್ಟಿ.
*****