ನೆನಪಿನ ಕಾಡು ಸುತ್ತಲೂ ಹಬ್ಬಿ
ಎತ್ತಲೂ ಸುತ್ತ ರಾಗಗಳು
ವರ್ತಮಾನಕ್ಕೆ ಚಿತ್ರದ ಹಂಗೆ?
ಅವೆಲ್ಲ ಬರಿಯ ಹೃದ್ರೋಗಗಳು
ಸತ್ತ ನಾಗಗಳು – ಪಟ್ಟೆನಾರುಗಳು
ಛಲಕ್ಕೆ ಬಿದ್ದ ಸರ್‍ಪಧ್ವಜನ
ವಿಕಾರ ರೂಪಿನ ಊರುಗಳು
ನಾಳೆ ಇವತ್ತಿಗೆ ಕೊಡುವ ಈ ಅರ್ಥ
ಇವತ್ತು ನಿನ್ನಗೆ ಕೊಟ್ಟಿದ್ದರ್ಂತೇ ವ್ಯರ್ಥವ ?
ಎಂದು ಕಳಕಳಿಸಿ
ಸತ್ತವರ ಕರೆದು
ವರ್ಷಕ್ಕೊಮ್ಮೆಯಾದರೂ ಒಟ್ಟು ನಿಲ್ಲುತ್ತೇನೆ
ರೀತಿ ಬದಲಾದರೂ – ಅಯ್ಯ, ಪ್ರೀತಿಗೆ ವ್ಯವಸ್ಥೆಯೆ ? –
ವಿನ್ಯಾಸಕ್ಕೆ ತಕ್ಕ ನೆರಳು ಬೆರಸಿ
ಅನ್ಯಾಯವಿಲ್ಲ ಎಂದುಕೊಂಡರೂ
ಮನಮನೆಯೊಳಗುರಿವ ಹಗಲು
ಒಂದೇ ಎಂದುಕೊಳ್ಳುತ್ತೇನೆ
*****