ಬಿನ್ನಾಣಗಿತ್ತಿ ಈ ಮೋಡಗಾತಿ
ಚಂದ್ರನ ಮರೆಮಾಡಿ
ಎನ್ನ ಮನಸನು ಕದಡಿದಳು ||
ದಿನವು ದಿನವು ನೋಡಿ ನಲಿದಂಥ
ಮನವು ಒಂದು ಕ್ಷಣವು
ನೋಡದೆ ನಿಲ್ಲದು ನಿಲ್ಲದೆ ಸಾಗದು ||ಬಿ||
ಏಕೆ ಇಂದು ಹೀಗಾಯ್ತೋ
ನಾ ಕಾಣೆ ಸವತಿ ಕಾಟ
ಕರ್ಮ, ಬಂದಲೇ ಮಾಟಗಾತಿ ||ಬಿ||
ಮುಸ್ಸಂಜೆ ಹೊತ್ತು ಆರು ಮೂವತ್ತು
ಆಗಿತ್ತು ಬೆಳದಿಂಗಳ ಚಲ್ಲಿದ
ಒಲಿದನವನ ಮರೆಯೊದುಂಟೆ ||ಬಿ||
ನಮ್ಮಿಬ್ಬರ ನೋಟ ಒಂದು
ಎದೆಯಾಳದ ಮಾತು ಒಂದು
ಮೌನದ ಬವಣೆ ನೂರೆಂಟು ||ಬಿ||
ಯಾರದೋ ದೃಷ್ಟಿ ತಗುಲಿತೋ
ಪ್ರೀತಿಯ ಕನಸಿದು ಒಡೆಯಿತು
ಬಾಳೆಲ್ಲಾ ಬರಿದಾದ ಮರುಭೂಮಿ ||ಬಿ||
ಕಪ್ಪು ಬಿಳುಪು ನೀಲ ಕೆಂಪು
ಬಣ್ಣ ಒಡನಾಟ ಚೆಲ್ಲಾಟ
ಎಂತು ಕೇಳುವುದೇ ನನ್ನ ಗೀತೆ ||ಬಿ||
ಕಳಿಸಿರುವೆ ಪ್ರೇಮ ಸಂದೇಶ
ತಿಳಿಯುವುದೇ ನನ್ನದೆ ಅಳಲು
ಹಸಿರಾಗಿಹ ಪ್ರೇಮದ ಹೊನಲು ||ಬಿ||
ಇರುಳು ಹಗಲು ಕಳೆದು
ಬಿನ್ನಾಣಗಿತ್ತಿಯ ತೊರೆದು
ಒಲಿದ ಗೂಡಿಗೆ ಬಂದು ಸೇರೆನ್ನಾ
ಜೊತೆಯಾಗಿ ಹಾಡುವ ಬಾಳಗೀತೆ ||ಬಿ||
*****