ಬೆಂಗಳೂರಲ್ಲಿ ಬಸ್ಸು ಹತ್ತಿದರೆ
ಊರು ಸೇರುವುದೇ ಒಂದು ಬದುಕು.
ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು
ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ.
ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು
ಹಾಡು ಹರಿದು ಚಿಂದಿಯಾಗಿ ಚೀರುತ್ತವೆ.
ಸಾಯಬೇಕೆನ್ನುವ ಸೇಡಿನಲ್ಲಿ
ಕಣ್ಣುಮುಚ್ಚಾಲೆಯಾಡುವ ರೊಚ್ಚಿನಲ್ಲಿ
ನೆತ್ತರು ಬರೆದ ಬರಹ ಓದಲಾರದೆ
ಕಣ್ಣು ಮುಚ್ಚುತ್ತೇನೆ.
ಇದ್ದಕ್ಕಿದ್ದಂತೆ ಬ್ರೇಕು ಬುಸುಗುಟ್ಟಿದಾಗ
ಥಟ್ಟನೆ ಕಣ್ತೆರೆದು ಪಕ್ಕಕ್ಕೆ ನೋಡುತ್ತೇನೆ-
ಅಲ್ಲಿ ಜೊತೆಗೆ ಬರಲಾಗದೆ ಹಿಂದಕ್ಕೆ ಓಡುವ ಹೊಲಗಳು
ಹೊಲಗಳಲ್ಲಿ ಹಿಂದೆ ಮುಂದೆ ನೋಡದೆ ಎದ್ದ ಹುತ್ತಗಳು!
ಹೊಲದಲ್ಲಿ ಬೆಳೆದ ಈ ಹುತ್ತಗಳಲ್ಲಿ
ಹೂವು ಅರಳಬಾರದೆ ಎಂದುಕೊಳ್ಳುತ್ತೇನೆ
ಆದರೆ ಹಾವು ಬುಸ್ಸೆನ್ನುತ್ತದೆ.
ನಿತ್ಯ ಅದೇ ಗೋಳು ಅದೇ ಬಾಳು
ಫ್ಯೂಡಲ್ ಲಾರಿಗಳು ಕ್ಯಾಪಿಟಲ್ ಕಾರುಗಳು
ಹಿಗ್ಗಾಮುಗ್ಗ ನುಗ್ಗುವ ಕನಸುಗಳು
ನುಚ್ಚುನೂರಾದ ಬಿಡಿಭಾಗಗಳು
ಛಂದಸ್ಸಿನಲ್ಲಿ ಛಿದ್ರವಾದ ಮಾತ್ರೆ ಗಣಗಳು
ಗೊಣಗುತ್ತವೆ; ಒಣಗುತ್ತವೆ ನೂರಾರು ಬಣ್ಣಗಳು.
ಆಗ ನೀರಿಗೆ ಬಿದ್ದ ಸುಣ್ಣವಾಗುತ್ತೇನೆ-
ಹೇಳಿ ಬಂಧುಗಳೇ
ಮತ್ತೆ ಬರಬೇಕೆ ಇಲ್ಲಿಗೆ?
ತಿನ್ನುವ ತುತ್ತು ಅನ್ನಕ್ಕೂ ಕನ್ನ ಹಾಕುವ
ಬಾಳಿನ ಬಗ್ಗೆ ಕನಸುತ್ತ;
ಸಾವಿನ ಲೆಕ್ಕ ಬರೆಯುವ ಬುಕ್ಕಿನಲ್ಲಿ
ಬೆಳ್ಳಿ ಚುಕ್ಕಿಗಳನ್ನು ಬಿಡಿಸುತ್ತ;
ಸೃಷ್ಟಿಬೀಜದ ಬಸುರಿ ಹೊಲಗಳಲ್ಲಿ
ಲಯದ ಭಯ ಬುಸುಗುಡುವ ಹುತ್ತ ಕಾಣುತ್ತ-
ಹೇಳಿ ಬಂಧುಗಳೇ ಹೇಳಿ
ಮತ್ತೆ ಬರಬೇಕೆ ಇಲ್ಲಿಗೆ?
ಬಿಟ್ಟರೂ ಬಿಡದ ಈ ನನ್ನ ಸೂಜಿ-ಗಲ್ಲಿಗೆ!
*****