ಸಿಕ್ಕೀತು ಹೇಗೆ ಕರ್ಣನಿಗೆ
ಈ ನಾಡ ಸಿಂಹಾಸನ!
ಹೆತ್ತ ತಾಯಿಯೆ ತೇಲಿಬಿಟ್ಟಳು-
ನೀರ ಮೇಲಿನ ಪಯಣ.
ಮೀನುಗಳು ಮುತ್ತಿಟ್ಟವು
ಮೊಸಳೆಗಳು ಮುಟ್ಟವು
ಅಲೆಯ ಮೇಲಿನ ಬಾಳು
ಆಸೆಗಳು ಹುಟ್ಟವು.
ಒಬ್ಬನಿಗೆ ಹೃದಯಕಳಶ
ಇನ್ನೊಬ್ಬನಿಗೆ ಮೈಯ ಕವಚ
ಕರ್ಣಕುಂಡಲಕ್ಕೂ ಬಿತ್ತು ದಾನದ ಕತ್ತಿ
ಮಾರಿಕೊಳ್ಳದ ಮನಸು
ಕನ್ನಡದ ಕರ್ಣಕನಸು
ಬತ್ತಿಹೋಗದ ಒರತ ಜೀವಶಕ್ತಿ.
ಕಣ್ಣಪಟ್ಟಿಯ ಕುರುಕ್ಷೇತ್ರದಲ್ಲಿ
ಕರ್ಣ ರಥವ ಹತ್ತಿದ;
ವರ್ಣ ಪಥವ ಮೀರಿ ಮಿಂಚಿ
ಕೃಷ್ಣಗೀತೆ ಕೇಳಿ ಸಟೆದ
ಪಾರ್ಥನಿಗೆ ದಕ್ಕಿದ.
ಭಾರತದ ಭೂಪಟದಲ್ಲಿ ನಮ್ಮ ನಾಡ ಕರ್ಣ
ಯಾರು ಕೃಷ್ಣ ಯಾರು ಪಾರ್ಥ
ಕರ್ಣರಥಕೆ ಕೆಂಪು ಕೆಸರು
ಎದ್ದು ನಿಂತ ಸ್ವಾರ್ಥ!
*****