ನನ್ನ ಆತ್ಮವನ್ನೊಮ್ಮೆ ಕಾಣಬೇಕೆಂದು ಬಯಸಿ
ಎದೆಯೊಳಗೆ ಇಣುಕಿದೆ; ಅಲ್ಲಿ, ಅದು-
ಕೊಳದ ದಂಡೆಯಲಿ ವಿಹರಿಸುವ ಬದಲು
ಚಂಡಮಾರುತದೊಡನೆ ಹೋರಾಡುತ್ತಿತ್ತು.
ನದಿಯ ನೀರಲ್ಲಿ ಮೀಯುವ ಬದಲು
ಕಂಬನಿಯ ಕಡಲಲ್ಲಿ ಕೈತೊಳೆಯುತ್ತಿತ್ತು.
ತಂಗಾಳಿಯ ಅಲೆಗಳಲಿ ಆನಂದಿಸುವ ಬದಲು
ನಿಟ್ಟುಸಿರ ಕಾಡಲ್ಲಿ ಹುಡುಕುತ್ತಿತ್ತು.
ಬನದ ಹಸಿರಲ್ಲಿ ಹೂವಾಗುವ ಬದಲು
ಬರದ ಬೇಗೆಯಲಿ ಬೇಯುತ್ತಿತ್ತು.
ನಲಿವ ನವಿಲಾಗಿ ಕುಣಿಯುವ ಬದಲು
ನೋವ ಮರುದನಿಯಾಗಿ ಮಿಡಿಯುತ್ತಿತ್ತು.
ಮುಂಜಾವಿನ ಮಧುರಗೀತೆಯಾಗುವ ಬದಲು
ಸಂಜೆ ಹಾಡಾಗಿ ಉರಿಯುತಿತ್ತು
ಬೆಳದಿಂಗಳ ಸೊಬಗನ್ನು ಸವಿಯುವ ಬದಲು
ಇರುಳ ಕರುಳಾಗಿ ಕುದಿಯುತ್ತಿತ್ತು.
ಭಾವದ ರೆಕ್ಕೆಗಳ ಬಾನಗಲಕ್ಕೆ ಹರಡಿದ್ದರೂ
ಭೂಮಿಯಲಿ ಕಾಲೂರಿ ಕನಸ ಕಟ್ಟಿತ್ತು.
*****