ಏಕೆ? ಹೆಂಡತಿ..
ನಾ ಅಂದುಕೊಂಡ ಹಾಗೆ
ಒಳ್ಳೆಯವಳಲ್ಲವೆಂದು ಕೊರಗುವೆ|
ಏಕೆ? ಅನ್ಯರಿಗವಳ ಹೋಲಿಸಿ ಕ್ಷಣಕ್ಷಣಕೊಮ್ಮೆ
ಒಳಗೊಳಗೆ ಅಸಮಧಾನಿಯಾಗುವೆ||
ಗುಣಗಳು ಒಮ್ಮೆಲೆ ಬದಲಾಗುವುದಿಲ್ಲ
ಸ್ವಭಾವಗಳು ಸುಮ್ಮನೆ ಸರಿಯಾಗುವುದಿಲ್ಲ|
ಕಾಲ ಬೇಕು, ಕಾಯಬೇಕು
ನೀ ತಿಳಿದಿರುವುದೇ ಸರಿಯಂದೇನಲ್ಲಾ||
ಐದು ಬೆರಳು ಒಂದೇ ಸಮವಿಲ್ಲ
ಹಾಗೆಯೇ ಎಲ್ಲರಲ್ಲಿ ಎಲ್ಲಾ
ಗುಣಗಳಿರುವುದು ಸಾಧ್ಯವಿಲ್ಲಾ|
ಎಲ್ಲಿ ಹೋಲಿಕೆಯೋ ಅಲ್ಲಿ ಸ್ಪರ್ಧೆ
ಅಸಮಧಾನವು ಹುಟ್ಟಿಸುವುದು||
ನೀನು ಎಷ್ಟು ಸರಿಯೆಂದು
ನಿನ್ನ ತಪ್ಪೆಷ್ಟೆಂದು ಅವಳಿಗೇಗೊತ್ತು|
ನಿನ್ನ ಹಾಗೆ ಅವಳು ಯೋಚಿಸಿದರೆ
ಸಂಸಾರ ನಡೆಯುವುದೆಂತು?|
ಇಲ್ಲದುದ ಬಯಸಿ ಎದುರಿಗಿರುವ
ಸಮಯ, ಸುಖವನು ಮರೆಯದಿರು||
ಹೆಣ್ಣು, ಹೊನ್ನು, ಮಣ್ಣು ಎಲ್ಲಾ
ಪೂರ್ವ ಜನ್ಮದ ಪುಣ್ಯದ ಫಲವು|
ಪಾಲಿಗೆ ಬಂದದ್ದು ಪಂಚಾಮೃತವೆಂಬ
ಸತ್ಯ ತಿಳಿದು ಸಮಾಧಾನಿಯಾಗಿರುವುದೇ ಲೇಸು||
*****