ನಡುರಾತ್ರಿ ದೆವ್ವಗಳು
ಬಾಗಿಲನ್ನು ಬಡಿದವು,
ಯಾರೋ ಎಂದು ತೆರೆದೆ.
ಕಾಲಮೇಲೆ ಬಿದ್ದು
ಮುಳುಮುಳನೆ ಅತ್ತವು,
ಪಾಪ! ಒಳಕ್ಕೆ ಕರೆದೆ.
ದೀನಮುಖ ಮಾಡಿ
ಕೈ ಹಿಡಿದು ಬೇಡಿದವು
ಜೊತೆಹೋಗಲೊಪ್ಪಿದೆ.
ಅವು
ಇಟ್ಟ ಬೀದಿಗಳಲ್ಲಿ
ಬೀಗಿ ನಡೆದೆ,
ತೆರೆದ ಹಳ್ಳಗಳನ್ನು
ಕೂಗಿ ಜಿಗಿದೆ.
ಕೊಟ್ಟ ತೀರ್ಥ ಕುಡಿದೆ
ಬಿಟ್ಟ ಹೆಣ್ಣನ್ನು ಮಿಡಿದೆ,
ಆಕಾಶಕ್ಕೆ ಮುಖ ಮಾಡಿ
ಸೂರ್ಯನಿಗೇ ಉಗಿದೆ,
ನೆಗೆದೆ.
ದೆವ್ವಗಳು ಕಲಿಸಿದ್ದೆಲ್ಲ
ಬಲು ವಿಚಿತ್ರ.
ನಾಲ್ಕರಲ್ಲಿ ಎಂಟು ಕಳೆಯಬಹುದು,
ದಶಕದ ನೆರವಿಲ್ಲದೆ.
ಹೆಜ್ಜೆ ಊರದೆ ನೆಲಕ್ಕೆ ನಡೆಯಬಹುದು
ಭಾರದ ಅರಿವಿಲ್ಲದೆ.
ಬೆಟ್ಟವನ್ನೇ ಬಗೆದು
ಗಾಳಿಯನ್ನೇ ಸಿಗಿದು
ಹೊಳೆಯಲ್ಲೂ ಮುಳುಗಬಹುದು,
ಕೂದಲೇ ನೆನೆಯದೆ.
ಆದರೆ ಒಂದು ವಿಷಯ :
ನೊಂದ ಜೀವಕ್ಕೆ ಮರುಗಿ
ಕಂಬನಿಯೊಂದ ಹಾಕಲು,
ತನ್ನ ಬೆವರೇ ಹರಿಸಿ
ತಿನ್ನುವ ಅನ್ನ ಬೇಯಿಸಲು,
ತರ್ಕ ಬಿಟ್ಟು ದೇವಾಲಯಕ್ಕೆ
ಸುತ್ತೊಂದನ್ನು ಹಾಕಲು
ಆಗುವುದೇ ಇಲ್ಲ.
ಬಲು ಎಚಿತ್ರ ಎಂದರೆ
ಒಳಗಡೆ ಮಗು ಚೀರಿತೆನ್ನಿ,
ಕತ್ತು ಹಿಸುಕಿ ಕೊಂದಲ್ಲದೆ
ನಿದ್ದೆ ಬರುವುದಿಲ್ಲ!
*****