ಕಿವಿಗಡಚಿಕ್ಕುವಂತೆ
ತಮಟೆಯ ಸದ್ದು
ಹಾಯುತ್ತಿದ್ದಾರೆ ಕೂಂಡ
ಎಲ್ಲರೂ…
ದೊಡ್ಡಮ್ಮ-ಅಂತರಗಟ್ಟಮ್ಮ
ಅಕ್ಕ-ತಂಗಿಯರು
ಮೊದಲಾಗುವರು
ಉಳಿದವರು ದೇವಿಯನು
ಹಿಂಬಾಲಿಸುವರು
ಕಾಲು ಸುಡದೇ?
ಇಲ್ಲ ಎನ್ನುವರು!
ಅಗೋ ಲಕುಮಿ
ನನ್ನ ನೆರೆ ಮನೆಯವಳು
ಹಾಯುತ್ತಿದ್ದಾಳೆ ಕೊಂಡ…
ಗಂಡ ಕುಡಿಯುವನು
ನಿತ್ಯ ಹೊಡಯುವನು
ಮೈತುಂಬಾ ಸಾಲ
ಮನೆ ತುಂಬಾ ಮಕ್ಕಳು
ಹಸಿವು-ನೋವು
ಮಿಗಿಲಾಗಿ ಸವತಿಯ ಕಾಟ
ಹರಕೆ ಹೊತ್ತಿಹಳು
ಅರಿಶಿನದ ಬಟ್ಟೆ
ಬೇವಿನ ಸಿಂಗಾರ
ಇಷ್ಟಗಲ ಕುಂಕುಮ
ಹೊರೆಯಷ್ಟು ಹೂವು
ದೇವಿಯಂತೆಯೇ
ಕಂಗೊಳಿಸುತ್ತಿರುವಳು
ಒಮ್ಮೆ, ಮತ್ತೊಮ್ಮೆ
ಮಗದೊಮ್ಮೆ
ಹಾಯುವಳು ಕೊಂಡ
ನೋಡುವನವಳ ಗಂಡ
ದೂರದಿಂದಲೇ ಮಂಕಾಗಿ.
*****