ನವಿಲುಗರಿ – ೨

ನವಿಲುಗರಿ – ೨

ಗೂಳಿ ಗುಟುಕು ಹಾಕುವುದು ಬಳಿಯಲ್ಲಿದ್ದ ಸರ್ಕಾರಿ ಶಾಲೆಯ ಪಾಳುಬಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತದೆ. ರಾಜಯ್ಯ ಈ ಶಾಲೆಗೆ ಹೆಡ್‌ಮಾಸ್ತರರಾಗಿ ಬಂದಮೇಲೆ ಶಾಲೆ ಒಂದಿಷ್ಟು ಒಪ್ಪವಾಗಿ ಸುಣ್ಣಬಣ್ಣ ಕಂಡಿದೆ. ಗೋಡೆಗಳ ಮೇಲೆ ಹಿರಿಯ ಕವಿ, ಸಾಹಿತಿಗಳ ನುಡಿಮುತ್ತುಗಳು ಅನಾವರಣಗೂಂಡಿವೆ. ಕಂಬಳಗಳ ಮೇಲೆ ಜ್ಞಾನಪೀಠಿಗಳ ಚಿತ್ರಗಳ ಅಲಂಕಾರ ಕಂಡಿತ್ತಲ್ಲದೆ ಶಾಲೆಯ ಸುತ್ತ ಮಕ್ಕಳಿಂದಲೇ ಹೂಗಿಡಗಳನ್ನು ನೆಡೆಸಿ ಪುಟ್ಟ ಉದ್ಯಾನವನ್ನು, ಆಟದ ಮೈದಾನವೆಂದು ಕರೆಯುತ್ತಿದ್ದ ಕಲ್ಲುಮುಳ್ಳು ಬಳ್ಳಾರಿ ಜಾಲಿಯಿಂದಾವೃತವಾದ ಗೂಂಡಾರಣ್ಯದ ಪ್ರತಿರೂಪದಂತಿರುವ ಕೊಚ್ಚೆಗುಂಡಿಗಳ ಹುಳಹುಪುಡಿಗಳ ಆವಾಸಸ್ಥಾನವೆನಿಸಿದ್ದ ಪಾಳುಭೂಮಿ ಈಗ ಮಕ್ಕಳ, ಮಾಸ್ತರರ ಪರಿಶ್ರಮದಿಂದಾಗಿ ನಿಜವಾದ ಆಟದ ಮೈದಾನವಾಗಿ ಮಕ್ಕಳ ಆಟೋಟಗಳಿಗೆ ಮುಡಿಪಾಗಿದ್ದರ ‘ಕ್ರಡಿಟ್’ ಸಹ ರಾಜಯ್ಯನವರಿಗೇ ಸಲ್ಲಬೇಕು. ಈ ಸುವಿಶಾಲವಾದ ಭೂಮಿಯನ್ನು ಹೇಗಾದರೂ ತನ್ನದಾಗಿಸಿಕೊಂಡು ಅಲ್ಲೊಂದು ಫ್ಯಾಕ್ಟರಿ ಹಾಕಬೇಕೆಂದು ಕೊಂಡಿದ್ದ ಉಗ್ರಪ್ಪ, ಶಾಲೆಯನ್ನೇ ಬೇರೆಡೆಗೆಲ್ಲಾದರು ಸ್ಥಳಾಂತರಿಸುವ ಹುನ್ನಾರವನ್ನರಿಯದ ರಾಜಯ್ಯ ತಮ್ಮ ಕರ್ತವ್ಯವೆಂದು ಮಾಡಿದ ಕಾರ್ಯ ತನ್ನ ಪಾಲಿನ ಸೋಲೆಂದೇ ಭಾವಿಸಿದ್ದ ಉಗ್ರಪ್ಪನ ಅಭಿಮಾನಕ್ಕೆ ಬಿದ್ದ ಪಟ್ಟೇ ಅದು. ತಂದ ಭರಮಪ್ಪ ಮಾಗಿದ ಜೀವವಾದ್ದರಿಂದ ಉಗ್ರಪ್ಪನ ಅಭಿಮಾನವು ಆಕ್ರೋಶಕ್ಕೆಡೆಕೊಡುವ ಮೊದಲೆ ತಡೆದು ತಿಳಿಹೇಳಿದ್ದರು. ‘ಮಕ್ಕಳಿಗೆ ಶಾಲೆ ಕಟ್ಟಿಸುವಷ್ಟು ಶ್ರೀಮಂತಿಕೆ ನಮಗಿದೆ. ಅದು ಧರ್ಮದ ಕಾರ್‍ಯ… ವಿದ್ಯಾದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಂತದ್ದರಲ್ಲಿ ನಾವು ಸರ್ಕಾರದ ಶಾಲಾ ಭೂಮಿಯನ್ನು ಕಬಳಿಸುವುದು ಹೇಯತನ. ನಮ್ಮ ಚಿನ್ನು ಕಾಲೇಜಿಗೆ ಓದಲು ಬೇರೆ ಕಡೆ ಏಕೆ ಹೋಗಬೇಕು ನಾವೇ ಕಾಲೇಜು ಕಟ್ಟಿಸಬಹುದಿತ್ತು. ಅದು ಹಳ್ಳಿ ಹೈಕಳಿಗೂ ಶ್ಯಾನೆ ಉಪಯೋಗವಾಗೋದು ಉಪಕಾರ ಮಾಡಿದ ಕೀರ್ತಿ ನಮ್ಮದಾಗೋದು. ನಿಮಗೆಲ್ಲಾ ಹೆಂಗಾರ ಮಾಡಿ ದುಡ್ಡು ಮಾಡೋದು ಗೂತ್ತು. ಅದನ್ನ ಸಿಟಿನಲ್ಲಿ ಸೈಟು ಪ್ಲಾಟುಗಳಿಗೆ ಸುರಿಯೋದು ಗೂತ್ತು. ಮಿಕ್ಕಂತೆ ರಾಜಕಾರಣಿಗಳ ಮೇಲೆ ಜಾಕ್‌ಪಾಟ್‌ ಕಟ್ಟೋದು. ಗೆದ್ದವರನ್ನು ಗುಲಾಮರನ್ನಾಗಿ ಮಾಡಿಕೊಂಡು ಹಣಾನ ಡಬ್ಲಿಂಗ್‌ ಮಾಡೋದೂ ಗೊತ್ತು. ಹಳೆಕಾಲದವರ ಮಾತು ನಿಮಗೆ ಹಿಡಿಸೋದಿಲ್ಲ. ಆದರೆ ಒಂದು ಮಾತು ಹೇಳ್ತೀನಿ ಕೇಳು ಹಾಲು ಕುಡಿದ ಮಕ್ಕಳು ಬದುಕೋದೇ ಕಷ್ಟ, ಇನ್ನು ವಿಷಕುಡಿದಾವು ಬದುಕ್ಯಾವೆ? ಕೆಟ್ಟ ದುಡಿಮೆನಾ ಸತ್ಕಾರ್ಯಕ್ಕಾಗಿ ಬಳಸಿ ಪ್ರಾಯಃಶ್ಚಿತ್ತನಾರು ಮಾಡಿಕೊಳ್ರಯ್ಯಾ’ ತಾತ ಭರಮಪ್ಪ ಆಗಾಗ ಹೇಳುವ ಹಿತವಚನಗಳು ಗೋಡಗೆ ಬಡಿವ ಮೂಳೆಯಂತೆ ಮಕ್ಕಳಿಬ್ಬರ ತಲೆಯನ್ನು ಕೂರೆಯದಿದ್ದರೆ ಅವರ ಅಕ್ರಮಗಳೆಷ್ಟು ಮೇರೆ ಮೀರುತ್ತಿದ್ದವೋ. ಭರಮಪ್ಪ ಆಗಾಗ ಇಂತಹ ಬ್ರೇಕ್‌ಗಳನ್ನು ಹಾಕಿ ಹಳ್ಳಿಯ ಶಾಂತಿ ಕದಡದಂತಿರಲು ಕಾರಣೀಭೂತರಾಗಿದ್ದಾರೆ. ಶಾಂತಿ ಕದಡಲೆಂದೇ ಸಂಪಿಗೆಹಳ್ಳಿಯಲ್ಲಿ ಜನ್ಮ ತಳೆದು ಬಂದಂತಿರುವ ಭರಮಪ್ಪನ ಮಕ್ಕಳಲ್ಲಿ ಇನ್ನೂ ಪಾಳೆಗಾರಿಕೆಯ ಮಾತುಗತ್ತು ಮಾಸಿಲ್ಲವಾದ್ದರಿಂದ ಅಶಾಂತಿಯ ವಾತಾವರಣ ಆಗೀಗ ಆವಿರ್ಭವಿಸಿದರೂ ಭರಮಪ್ಪನವರ ಮಧ್ಯಸ್ಥಿಕೆಯಿಂದಾಗಿ ಹಚ್ಚಿನ ಅವಘಡಗಳು ತಪ್ಪಿವೆ. ಭರಮಪ್ಪನ ಗೂಳಿಗೂ ಅವರ ಮಕ್ಕಳಿಗೂ ಅಂತಹ ವ್ಯತ್ಯಾಸವೇನಿಲ್ಲ ಅಂಬೋದು ಜನಾಭಿಪ್ರಾಯ. ಅದನ್ನು ನಿಜಮಾಡುವಂತಹ ಸಣ್ಣಪುಟ್ಟ ಘಟನೆಗಳೂ ಆಗೊಮ್ಮೆ ಈಗೊಮ್ಮೆ ಸಂಭವಿಸುತ್ತವೆಂಬುದೂ ಸುಳ್ಳಲ್ಲ.

ಗೂಳಿ ಬಸವ ಶಾಲೆಯ ಬಳಿ ಹೋಗುವಾಗ ಗೋಣೆತ್ತಿ ಹೊಸದಾಗಿ ನೋಡುವ ಪರಿ ಶಾಲೆಯತ್ತ ನೋಡಿತು. ಹುಲುಸಾದ ಬಣ್ಣದ ಹೂಗಿಡಗಳ ಉದ್ಯಾನವನ ಕಂಡಿತು. ಅದೇನು ಉಮೇದು ಬಂತೋ ಅತ್ತ ನುಗ್ಗಿ ತಡಿಕೆ ಗೇಟನ್ನು ಗುದ್ದಿ ಮುರಿದು ಒಳನುಗ್ಗಿತು. ಅದರ ರಭಸದ ಉಸಿರಾಟ ಗುಟರಿಗೆ ಶಾಲೆಯಲ್ಲಿ ಪಾಠಮಾಡುತ್ತಿದ್ದ ಮಾಸ್ತರರು ಒಮ್ಮೆಲೆ ಪಾಠ ನಿಲ್ಲಿಸಿದರು. ಮಕ್ಕಳೂ ಅವಕ್ಕಾದರು. ಬಸವ ಹೂಗಿಡಗಳನ್ನು ತುಳಿದು ಹಾಕುತ್ತ ಬಾಯಿಗೆ ಸಿಕ್ಕಿದ್ದನ್ನು ಕಚ್ಚಿ ಎಳೆದು ಅಗಿಯುತ್ತಾ ಸಾಗುವ ಆರ್ಭಟವನ್ನು ನೋಡಿದರೆ ಕ್ಷಣಾರ್ಧದಲ್ಲೇ ಉದ್ಯಾನ ಸ್ಮಶಾನದಂತಾಗುವುದನ್ನು ತಪ್ಪಿಸಲು ದೇವರಿಗೂ ಅಸಾಧ್ಯವೆನ್ನುವಂತಹ ವಾತಾವರಣ ಅಲ್ಲಿದ್ದವರ ಹೃದಯಸ್ತಂಭನವನ್ನು ಏರುಪೇರುಗೊಳಿಸಿತು. ಮಕ್ಕಳು ಬಸವನನ್ನು ಹೆದರಿಸುವವರಂತೆ ಕೂಗಾಡಿದರಾದರೂ ಬಸವನ ಧಾಳಿ ನಿಲ್ಲಲಿಲ್ಲ. ಅದನ್ನು ಹೊಡೆದು ಓಡಿಸುವ ಮಾತಂತೂ ದೂರವೇ ಉಳಿಯಿತು. ರಾಜಯ್ಯ ಚೇತರಿಸಿಕೊಂಡವರೇ ತಮ್ಮಲ್ಲಿದ್ದ ಊರುಗೋಲು ಹಿಡಿದು ಈಚೆ ಬಂದರು. ‘ಹೇಯ್ ಹೊಯ್’ ಎಂದು ಗದರಿಸುತ್ತಾ ಅಂಜುತ್ತಲೇ ಬಸವನ ಬಳಿ ಸಾರಿ ಊರುಗೋಲು ಬೀಸಿ ಎರಡೇಟು ಕೊಟ್ಟರು. ಅದು ಅವರನ್ನೆತ್ತಿ ಎಸೆದು ತುಳಿದೇಬಿಡುತ್ತದೆಂದು ಇಡೀ ಶಾಲೆಯೇ ಜೀವ ಬಿಗಿಹಿಡಿದು ಕಂಪಿಸುತ್ತಿರುವಾಗಲೇ ಬಸವ ಬೇಲಿ ಹಾರಿ ಆಚೆ ನಡೆದುಹೋಯಿತು. ಎಲ್ಲರೂ ಒಮ್ಮಲೇ ಬಿಟ್ಟ ನಿಟ್ಟುಸಿರಿನಿಂದಾಗಿ ಇಡೀ ವಾತಾವರಣ ಬೆಚ್ಚಗಾಯಿತು. ರಾಜಯ್ಯನೂ ಊರುಗೋಲ ಆಸರೆಯಲ್ಲಿ ನಿಂತು ಎದೆಯ ಏರಿಳಿತವನ್ನು ಹತೋಟಿಗೆ ತಂದುಕೊಂಡರು. ಹಾಳಾದ ಉದ್ಯಾನವನ್ನು ನೋಡಿ ಕಣ್ಣೀರಾದರು. ‘ಎಂಥ ಕೆಲ್ಸ ಮಾಡಿದ್ರಿ ಸಾ. ಪಾಳೇಗಾರರ ಬಸವನಿಗೆ ಹೊಡೆಯೋದು ಅಂದ್ರೇನು? ವಿಷಯ ತಿಳಿದ್ರೆ ನಿಮ್ಮನ್ನ ಸುಮ್ನೆ ಬಿಡ್ತಾರ ಅವರು?’ ಶರಣಪ್ಪ ಮಾಸ್ತರ ಪೇಚಾಡಿದ. ‘ಹೌದ್ರಿ ಸರಾ. ಇದು ಭಾಳ ಕೆಟ್ಟ ಅನ್ನಿಸ್ತದ… ಬೆಂಕಿತಾವ ಎಂಥ ಸರಸಾರಿಯಪ್ಪಾ’ ಗಾಬರಿಗೊಂಡಿದ್ದರು ಲಕ್ಕಪ್ಪ ಮಾಸ್ತರ ‘ತಿಂದ್ರೆ ತಿಂದ್ಕಂಡು ಹೋಗದ್ರಿ, ಅದನ್ನಾಕೆ ಬಡಿಯೋಕೋದ್ರಿ ನೀವು?’ ಲೀಲಾ ಮಾಸ್ತರಿಣಿ ಸ್ವಲುಪ ಜೋರೇ ಆಕ್ಷೇಪಣೆ ತೆಗೆದಳು. ಎಲ್ಲರೂ ತನ್ನನ್ನು ಮೆಚ್ಚಿಕೊಳ್ಳದಿದ್ದರೆ ಬೇಡ ಚುಚ್ಚಿಮಾತನಾಡುತ್ತಿರುವರೇ ಎಂದು ರಾಜಯ್ಯ ಚಕಿತರಾದರು. ತಾನು ತಪ್ಪು ಮಾಡಿದೆ ಎಂದವರಿಗೆ ಅನ್ನಿಸಲೇಯಿಲ್ಲ. ಅಷ್ಟರಲ್ಲಿ ಕುದುರೆ ಸಾರೋಟು ದೂರದಲ್ಲಿ ಕಂಡಿತು. ‘ಯಾರೋ ಪಾಳೇಗಾರರಿಗೆ ಸುದ್ದಿ ಮುಟ್ಟಿಸ್ಯಾರಂತ ಕಾಣದೆ. ಇತ್ಲಾಗೇ ಬರ್‍ತಾ ಇರೋ ಹಂಗದೆ. ರಾಜಯ್ಯ ಎಂಥ ಕೆಲಸ ಮಾಡಿಬಿಟ್ರಪ್ಪಾ’ ಅಲ್ಲಿದ್ದ ಹಳ್ಳಿಗರು ಪಕ್ಕದ ಹೊಲಗಳವರೂ ಕಳವಳಗೊಂಡರು. ಕುದುರೆ ಗೊರಸಿನ ಶಬ್ದ ನೆರೆದವರ ಎದೆಯನ್ನು ಡವಗುಟ್ಟಿಸಿತು. ಸಾರೋಟು ಬಂದು ಶಾಲೆಯ ಬಳಿ ವಿರಮಿಸಿತು. ಉಗ್ರಪ್ಪ ಮತ್ತು ಮೈಲಾರಿ ಕೆಳಗಿಳಿದು ನಡೆದು ಬರುತ್ತಿದ್ದರೆ ಗಿರ್‍ಕಿ ಚಡಾವು ಮಾಡುವ ಶಬ್ದಕ್ಕೆ ಹಲವರ ಉಸಿರಾಟ ಏರುಪೇರಾದವು. ಮಕ್ಕಳಂತೂ ಬೆಕ್ಕನ್ನು ಕಂಡ ಇಲಿಯಂತಾದರು. ‘ಯಾವ ಚೋದಿಮಗಾರೀ ನಮ್ಮ ಗೂಳಿ ಮ್ಯಾಲೆ ಕೈ ಮಾಡಿದೋನು?’ ಮೈಲಾರಿ ಅಬ್ಬರಿಸಿದ. ಯಾರೂ ಉಸುರೆತ್ತಲಿಲ್ಲ. ರಾಜಯ್ಯನಿಗೆ ಇದೆಲ್ಲಿಯ ಉಸಾಬರಿ ಎನ್ನಿಸಿದರೂ ಘಟನೆ ಜರುಗಿಹೋಗಿದೆ ಅದರ ಪೂರಾ ಜವಾಬ್ದಾರಿ ತನ್ನದೆ. ಬೇರೆಯವರು ಜವಾಬ್ದಾರಿ ಹೊರುವುದಿರಲಿ ತಾವೆಂದೂ ಮಾತನ್ನೇ ಆಡದ ಹುಟ್ಟಾ ಮೂಗರಂತಾದ ಅವರ ಸ್ಥಿತಿಯನ್ನು ನೋಡಿಯೇ ನೊಂದುಹೋದ ರಾಜಯ್ಯ ಮುಂದೆ ಬಂದರು ‘ನಾನೇ ಸ್ವಾಮಿ, ಅದೇನಾಯಿತೆಂದರೆ…’ ಮುಂದೆ ಹೇಳುವವರಿದ್ದು ಅದನ್ನು ಕೇಳುವಷ್ಟು ವ್ಯವಧಾನ ಮೈಲಾರಿಗಿರಬೇಕಲ್ಲ. ರಪ್ಪನೆ ರಾಜಯ್ಯನ ಕೆನ್ನೆಗೊಂದು ಬಾರಿಸಿದ. ಆ ಬಿರುಸಿಗೆ ರಾಜಯ್ಯರ ಕಣ್ಣುಗಳು ಕತ್ತಲೆಗೂಡಿದವು ಅನೇಕರು ಬೆಚ್ಚಿಬಿದ್ದರು.

‘ಯಾರ ಮನೆ ಗೂಳಿ ಅಂತ ಗೊತ್ತಿಲ್ವೇನೋ ಹೈವಾನ್? ಸಾಕ್ಷಾತ್ ದೇವರೇ ನಮ್ಮ ಗೂಳಿ ಮೈ ಮುಟ್ಟೋಕೆ ಹೆದರಿ ತತ್ತಿ ಹಾಕೋವಾಗ ನೀಯಾವನ್ಲೆ ಬಡಿಯೋಕೆ? ಎಷ್ಟಲೆ ಮಗ್ನೆ ಕೊಬ್ಬು ನಿನಗೆ?’ ಉಗ್ರಪ್ಪನೂ ಗುಡುಗಿದ.

‘ಸ್ವಾಮಿ, ನಿಮ್ಮ ಬಸವ ನಮ್ಮ ಮಕ್ಕಳು ಹಾಕಿದ ಗಿಡಗಂಟೆನೆಲ್ಲಾ ತಿಂದು ಹೇಗೆ ಹಾಳು ಮಾಡಿದೆ ಸ್ವಲ್ಪ ನೋಡಿ ಸ್ವಾಮಿ’ ಹನಿಗಣ್ಣಾದರು ರಾಜಯ್ಯ.

‘ಮೂಕ ಪ್ರಾಣಿ ಕಣ್ಲಾ ಅದು, ಅದು ಗಿಡಗಂಟೆ ಸೊಪ್ಪನ್ನೇ ತಿಂದು ಬದುಕೋದು. ನಿನ್ನಂಗೆ ಅನ್ನ ಸಾಂಬಾರ್ ತಿನ್ನು ಅಂತಿಯೇನು. ಮುದುಕಾಗಿದಿ ಅಷ್ಟು ಬುದ್ದಿ ಬ್ಯಾಡ ನಿನ್ಗೆ. ಇವತ್ತು ನೀನ್ ಹೊಡ್ದೆ ನಾಳೆ ಇನ್ನೊಬ್ಬ ಹೊಡಿತಾನೆ. ಕೈ ಎತ್ತೋ ಕೈನೇ ಕತ್ತರಿಸಿಬಿಟ್ರೆ?’ ಸಾರೋಟಿನಲ್ಲಿದ್ದ ಕುಡಗೋಲು ಕೈಗೆತ್ತಿಕೊಂಡ ಮೈಲಾರಿ. ರಾಜಯ್ಯನವರ ತೊಳ್ಳೆಗಳು ನಡುಗಿದವು. ‘ಅದೆಲ್ಲಾ ಯಾಕ್ಲ ಮೈಲಾರಿ, ಮತ್ತೆ ಕೋರ್ಟು ಪಿರ್‍ಯಾದು ಅಂತ’ ಉಗ್ರಪ್ಪನ ಸಿಟ್ಟು ಒಂದಿಂಚು ಇಳಿದಿತ್ತು. ರಾಜಯ್ಯನಂತಹ ಬಡಪಾಯಿ ಮೇಲೆಂತಹ ಪರಾಕ್ರಮವೆಂಬ ಔದಾರ್ಯ ಬೇರೆ.

‘ಹಂಗಂತ ಬಿಟ್ಟರೆ ಸದರವಾಗಿ ಹೋಗ್ತಿವಣ್ಣ ನಾವು. ನಮ್ಮ ಬಸವನಿಗೆ ಏಟು ಹಾಕ್ದೋನ್ಗೆ ಎಂಥ ಶಿಕ್ಷೆ ಅಂಥಾ ಮಂದಿಗೆ ಅರಿವಾಗೋದು ಬ್ಯಾಡ್ವಾ?’ ಮುನಿಸು ತೋರಿದ ಮೈಲಾರಿ.

‘ನಿನ್ನ ಮಾತು ನಿಜವೆ’ ಉಗ್ರಪ್ಪ ಹಂಗಂದು ಹುಬ್ಬೇರಿಸಿದಾಗ ಕ್ಷಣ ಬೀಸುವ ಗಾಳಿ ನಿಂತಂತಾಯಿತು. ನಿಂತವರು ನಿಂತಲ್ಲೆ ಕೂತವರು ಕೂತಲ್ಲೇ ಬೆವರೊಡೆದರು.

‘ಸ್ಯೆ ಮತ್ತೆ ಸೀಮೆಸುಣ್ಣ ಹಿಡ್ಕೊಂಡು ಬರೆಯೋ ಕೈನೇ ತಾನೆ ಏಟು ಹಾಕಿದ್ದು ಆದನ್ನೆ ತೆಗೆದುಬಿಡ್ಲಾ’ ಮೈಲಾರಿ ಮುಂದಡಿಯಿಟ್ಟ.

‘ಅಯ್ಯಯ್ಯೋ, ಮಕ್ಕಳೊಂದಿಗೆ ಹಂಗೆ ಮಾಡ್ಬೇಡಿ ಸ್ವಾಮಿ. ಬಲಗೈ ಇಲ್ಲದ ಮೇಲೆ ಕೆಲಸ ಉಳಿದಿತಾ’ ರಾಜಯ್ಯನ ಕಪಾಳದ ಮೇಲೆ ಕಣ್ಣೀರಿಳಿದವು.

‘ಬೇರೆ ಏನಾದ್ರೂ ಶಿಕ್ಷೆ ಕೊಡಿ ಸ್ವಾಮಿ’ ರಾಜಯ್ಯ ಉಗ್ರಪ್ಪನ ಕಾಲು ಹಿಡಿದ.

‘ಮರಕ್ಕೆ ಕಟ್ಟಿಸಿ ಹುಣಿಸೆಬರ್‍ಲನಾಗೆ ಬಿಗಿಸ್ಲಾ? ಕೆಂಜಿಗದ ಗೂಡ್ನಾಗೆ ಕೈ ಇಕ್ಕುಸ್ಲಾ? ಕಾದ ಕಬ್ಬಿಣ ತಗೊಂಡು ಬರೆ ಎಳಿಸ್ಲಾ ಅದೇ ಬಸವನ ಪಾದನಾ ನಿನ್ನ ಅಂಗೈ ಮೇಲೆ ಮಡಗಿಸ್ಲಾ ಏನ್ ಮಾಡ್ಲಿ ಹೇಳ್ಳಾ ಮೇಸ್ಟ್ರೇ?’ ವ್ಯಗ್ರನಾದ ಉಗ್ರಪ್ಪ ಕಾಲು ಬಳಿ ಕೂತಿದ್ದ ರಾಜಯ್ಯನನ್ನು ಮೇಲೆ ಏಳಿಸಿ ದುರುದುರು ನೋಡಿದ.

‘ಇದೆಲ್ಲಾ ನಿನ್ನ ಕೈಲಿ ತಡೆಯೋಕೆ ಆಗೋದಿಲ್ಲ. ಪ್ರಾಣ ಹೋಗಿಬಿಟ್ರೆ ಮತ್ತೊಂದು ಕೊಲೆ ಕೇಸು ಫೈಲಾಯ್ತದೆ. ಪೊಲೀಸಿನೋರು ರೊಕ್ಕ ಮಾಡಿಕ್ಯಂತಾರೆ. ಪ್ರಾಣಕ್ಕಿಂತ ಹೆಚ್ಚು ಯಾವ್ದು? ಮಾನ ಅಲ್ವಾ…ಹಾಂ. ಅದನ್ನೇ ತೆದ್ದುಬಿಟ್ರೆ ಹೆಂಗೆ?’ ಗಹಗಹಿಸಿದ ಹಳೆಕಾಲದ ಸಿನಿಮಾ ವಿಲನ್‌ನಂತೆ.

‘ಯಾತರ ಮಾತು ಅಂತ ಆಡ್ತೀಯಣ್ಣ, ಈ ಮೇಷ್ಟ್ರೇನು ಹೆಣ್ಣು ಹೆಂಗ್ಸೆ! ಮಾನ ತೆಗೆಯೋಕೆ?’ ಪುಸಕ್ಕನೆ ನಕ್ಕ ಮೈಲಾರಿ.

‘ಹೆಂಗಸಿಗಷ್ಟೇ ಅಲ್ಲಲೆ ಗಂಡಸಿಗೂ ಮಾನ ಅಂಬೋದು ಇರ್ತದೆ. ಅಂಥ ಸೂಕ್ಷ್ಮಗಳೆಲ್ಲಾ ನಿನಗೆ ಅರ್ಥ ಆಗಾಕಿಲ್ಲ ಬಿಡು, ಮಾನ ತೆಗೆಯೋದು ಅಂದ್ರೆ ಬಟ್ಟೆನೇ ಬಿಚ್ಚಬೇಕೆ? ರೇಪೇ ಮಾಡಬೇಕೆ? ಎಲ್ಲರೆದುರು ತಲೆ ತಗ್ಗಿಸೋ ಹಂಗೆ ಅಪಮಾನ ಮಾಡಿದ್ರೂ ಇಂಥೋರು ಇದ್ದೂ ಸತ್ತ ಹಂಗೆ ಆಗ್ತಾರ್‍ಲಾ’.

‘ಹೌದೇಳು, ಇದ್ರಾಗೆ ಅಪಾಯನೂ ಕಮ್ಮಿ… ಹಂಗಾರೆ ಏನು ಮಾಡು ಅಂತಿ?’ ತಲೆದೂಗಿದ ಮೈಲಾರಿ ತನ್ನಣ್ಣನ ಜಾಣ್ಮಗೆ. ‘ಈ ಕುದುರೆ ಬಿಚ್ಚಿ ಹಿಂದಕ್ಕೆ ಕಟ್ಟು ಆಜ್ಞಾಪಿಸಿದ ಉಗ್ರಪ್ಪ ‘ಯಾವನಾನ ಬರ್ರಲೆ. ಕುದುರೆ ಬಿಚ್ಚಿ ಹಿಂದಕ್ಕೆ ಕಟ್ಟಿರಿ’ ಮೈಲಾರಿ ಮೇಷ್ಟ್ರುಗಳತ್ತ ದಿಟ್ಟಿಸಿದ. ಡ್ರಿಲ್ ಟೀಚರ್ ಹನುಮಂತ ಮುಂದೆ ಬಂದು ಆ ಕೆಲಸ ಮಾಡಿದ. ‘ಮುಂದೇನಣ್ಣಾ?’ ಪಿಳಿಪಿಳಿಸಿದ ಮೈಲಾರಿ ‘ನಡಿ ಸಾರೋಟು ಹತ್ಕೊಳ್ಳೋಣ’ ಎನ್ನುತ್ತ ಸಾರೋಟು ಹತ್ತಿ ಕುಳಿತ ಅಣ್ಣನನ್ನು ಮೈಲಾರಿಯು ಅನುಸರಿಸಿದ. ನೆರೆದವರೆಲ್ಲಾ ಬಿಟ್ಟಬಾಯಿ ಬಿಟ್ಟಂತೆ ಸ್ತಬ್ಧ ಸ್ಥಿತಿ.

‘ಅಲೆ ರಾಜಯ್ಯ, ಸಾರೋಟನ್ನ ಎಳ್ಕೊಂಡು ನಮ್ಮ ಮನೆ ತನಕ ಬಿಡು. ಬೀದಿ ಜನ ಎಲ್ಲಾ ನೋಡ್ಲಿ. ನಮ್ಮ ಬಸವನ ಮೈ ಮುಟ್ಟಿದೋರ ಮಾನ ಮಣ್ಣುಪಾಲು ಅಂಬೋದು ಅರಿವಾಗ್ಲಿ… ಏನಂತಿ ಮೈಲಾರಿ?’

‘ಈ ಮುದಕಪ್ಪನ ಕೈಲಿ ಆದೀತೇನಣ್ಣಾ ನೀನಂತೂ’ ಬೇಸರಿಸಿದ ಮೈಲಾರಿ.

‘ಅದಕ್ಕೆ ಮತ್ತೆ ಶಿಕ್ಷೆ ಪನಿಶ್ಮೆಂಟು ಅನ್ನೋದು ಕಣ್ಲಾ… ಮಕಾ ಏನ್ಲಾ ಮೇಷ್ಟ್ರೇ ನೋಡ್ತಿ. ಬಲಗೈ ಬೇಕಾದ್ರೆ ಈ ಸೇವೆ ಮಾಡು ನಿನ್ನ ತಪ್ಪನ್ನ ಮಾಘ ಮಾಡಿಬಿಡ್ತೀನಿ’ ಕೊನೆಯ ಮಾತೆಂಬಂತೆ ಗುಡುಗಿದಾಗ ರಾಜಯ್ಯ ಬೇರೆ ದಾರಿ ಕಾಣದೆ ಸಾರೋಟನ್ನು ಎಳೆದುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದ. ಮಧ್ಯಾಹ್ನದ ಬಿಸಿಲು ಮುಖಕ್ಕೆ ರಾಚುತ್ತಿದೆ ಸಾರೋಟು ಅದರ ಮೇಲಿರುವವರ ಭಾರ ಎರಡನ್ನೂ ಎಳೆದು ಅಭ್ಯಾಸವಿಲ್ಲದ ನಿವೃತ್ತಿಯ ಅಂಚಿಗೆ ಬಂದಿದ್ದ ಮಾಸ್ತರರಿಗೆ ತಮ್ಮಲ್ಲಿನ ಶಕ್ತಿಯ ಬಗ್ಗೆ ಎಲ್ಲಿಯ ವಿಶ್ವಾಸ? ಏದುಸಿರು ಬಿಕ್ಕುಗಳು ಜೊತೆಗೂಡಿ ಬಂದವು. ಬೀದಿಯ ಜನ ನಿಂತು ನೋಡುತ್ತಿದ್ದಾರೆಂಬ ಎದೆಗುದಿಗೆ ಮಾಸ್ತರರು ಗುಬ್ಬಚ್ಚಿಯಂತಾದರು. ನೋಡುವವರಲ್ಲಿ ನಾನಾ ತರಹ ಜನ ಕೆಲವರು ನೊಂದು ಒಳ ಸರಿದರು ಹಲವರು ನಿಂತು ನೋಡಿ ಮೋಜು ಪಡೆದರು. ಈವಯ್ಯ ದೊಡ್ಡೋರ ಸವಾಸ ಯಾಕೆ ಮಾಡೇಕು? ಅವರು ಕಣ್ಣಿಟ್ಟೋರು ಕಲಾಸ್, ಅಂಥೋರ್‍ನ ತಡವಿಕ್ಯಂಡ್ರೆ ಹಿಂಗೇ ಆಗೋದು. ಮಾಸ್ತರರನ್ನೇ ದೂರಿದರು. ಕೆಲವರು ಮಾಸ್ತರರು ನಿತ್ರಾಣವಾದ್ದನ್ನು ಕಂಡು ನೆರವಿಗೆ ಬರುವ ಧೈರ್ಯ ತೋರಿ ಸಾರೋಟು ಬಳಿ ನಡೆದವರು, ಅದರ ಮೇಲೆ ಕೂತವರ ಕಣ್ಣುಗಳು ಕೆಂಡದುಂಡೆಗಳಂತೆ ಕಂಡಾಗ ಸಾವನ್ನು ಕಂಡವರಂತೆ ಹಿಮ್ಮೆಟ್ಟಿದರು. ಯಾರ ನೆರವೂ ಮಾಸ್ತರರಿಗೆ ಸಿಗಲಿಲ್ಲ. ನೆರವಾಗುವ ದಯೆಯಿದ್ದರೂ ದಮ್ಮಿಲ್ಲದವರೇ ಹೆಚ್ಚು. ಮಾಸ್ತರರ ಹೀನಸ್ಥಿತಿ ನೋಡಲಾಗದ ಹೆಣ್ಣುಮಕ್ಕಳು ಕಣ್ಣಲ್ಲಿ ನೀರುತುಂಬಿಕೊಂಡು ಸಿಂಬಳ ಸೀಟಿ ಸೆರಗಲ್ಲಿ ಮೂಗು ಒರೆಸಿಕೊಳ್ಳುತ್ತಾ ಸಂತಾಪ ಸೂಚಿಸಿದವು. ಯಾವುದೋ ದಿಬ್ಬಣ ನೋಡಿದವರಂತೆ ಕಿಲಕಿಲನೆ ಕೇಕೆ ಹಾಕಿ ಹಿಂಬಾಲಿಸುವ ಮಕ್ಕಳ ಮರಿಕೂಸುಕುನ್ನಿಗಳನ್ನು ಗದರಿ ಬೆನ್ನಿಗೆ ಗುದ್ದಿ ದರದರನೆ ಎಳೆದೊಯ್ದು ಕದವಿಕ್ಕಿಕೊಂಡರು; ನೋಡುವುದೂ ಮಹಾ ಪಾಪವೆಂಬಂತೆ. ಪ್ರಶ್ನಿಸುವವರಿಲ್ಲ ಮಾಸ್ತರರ ಪರವಹಿಸಿ ಉಸಿರೆತ್ತುವವರೂ ಇಡೀ ಹಳ್ಳಿಯಲ್ಲೇ ಕಂಡು ಬರದಿದ್ದಾಗ ಈ ಹಳ್ಳಿನಾಗೆ ಗಂಡ್ಸು ಮಕ್ಳು ಅಂಬೋರೇ ಹುಟ್ಟಿಲ್ವಾ? ಅನುಮಾನದಿಂದ ಹೊಸದಾಗೆ ಲಗ್ನವಾದೋರು ತಮ್ಮ ಗಂಡಂದಿರತ್ತ ಇಣುಕಿದರು. ಹಾದಿಯಾಗೆ ಹೋಗೋ ಮಾರಿಯಾ ಮನೆಯಾಗೆ ಬಿಟ್ಕೊಳ್ಳೋ ಹುಚ್ಚುತನವಾದ್ರೂ ಯಾರಿಗಿದ್ದಾತು?

ಎಂದಿನಂತೆ ರಂಗ ದೊಡ್ಡ ಗರಡಿ ಮನೆಯಲ್ಲಿ ಸಾಮು ತೆಗೆಯುತ್ತಿದ್ದ. ಅವನ ಕೇರಿ ಹುಡುಗರು ಬಂದು ರಾಜಯ್ಯ ಮೇಷ್ಟ್ರಿಗಾದ ಶಾಸ್ತಿಯನ್ನು ಹೇಳಿ, ‘ಮೇಷ್ಟ್ರನ್ನ ನೀನೇ ಕಾಪಾಡ್ಬೇಕು ಕಣೋ. ಸಾರೋಟು ಎಳಿಲಾರ್ದೆ ಈಗ್ಲೋ ಆಗ್ಲೋ ಬಿದ್ದೊಂಗಗವರೆ’ ಎಂದು ಅಲವತ್ತುಕೊಂಡರು. ಮರದ ಗದೆ ತಿರುಗುವುದನ್ನು ನಿಲ್ಲಿಸಿದ ರಂಗನಿಗೆ ಹೊರಗಾಗುತ್ತಿದ್ದ ಸದ್ದು ಕೇಳಿ ಬಟ್ಟೆ ತೊಟ್ಟು ಈಚೆ ಬಂದ. ಬಾಗಿಲಲ್ಲೇ ಉಸ್ತಾದ್ ಚಮನ್‌ಸಾಬ್ ಕುಂತಿದ್ದ. ಸಾರೋಟಿನ ಮೇಲೆ ಉಗ್ರಪ್ಪ ಮೈಲಾರಿ ಮದುವಣಿಗರಂತೆ ಕೂತಿದ್ದಾರೆ ಸಾರೋಟಿನ ಹಿಂದೆ ಕುದುರೆ, ಕುದುರೆ ಜಾಗದಲ್ಲಿ ರಾಜಯ್ಯ! ಬೀದಿಯಲ್ಲಿ ಮನೆ ಅಂಗಳದಲ್ಲಿ ನೋಡುತ್ತಾ ನಿಂತವರ ಮಧ್ಯೆ ನಡೆಯುತ್ತಿರುವ ಈ ಅಮಾನುಷ ಕಾರ್ಯ ಮೆರವಣಿಗೆ ರೂಪ ಪಡೆದಿತ್ತು. ಶಿಷ್ಯ ರಂಗ ಹೊರಟ ಸ್ಪೀಡ್ ನೋಡಿಯೇ ಕಳವಳಿಸಿದ ಚಮನ್ ಸಾಬ್ ಬ್ರೇಕ್ ಹಾಕಿದ. ‘ನಿಲ್ಲಲೇ ಹೈವಾನ್, ದೊಡ್ಡೋರ ಸಾವಾಸ ದುಡ್ಡು ಕೂಡ ದೂರ ಇಡು ಅಂದವರೆ. ಅಂತದ್ರಾಗೆ ಅಂಥೋರ ಎದುರು ಹಾಕ್ಕೊಂತಾರೇನ್ಲಾ?’ ತಡೆತಡೆದು ಬಂದ ಮಾತಲ್ಲಿ ನೋವಿತ್ತು.

‘ನಂಗೆ ನೀವೂ ಮೇಷ್ಟ್ರೆ, ಅವರೂ ಮೇಷ್ಟ್ರ್‍ಏ ಉಸ್ತಾದ್. ಗುರುಗಳ ಗೌರವನಾ ಕಾಪಾಡೋದು ಶಿಷ್ಯರ ಕರ್‍ಥವ್ಯ ಅಲ್ವಾ?’ ಮರುಪ್ರಶ್ನಿಸಿ ದಿಟ್ಟಿಸಿದ ರಂಗ.

‘ದುಷ್ಟರ ಕಂಡ್ರೆ ದೂರ ಇರು ಅಂದೋರೆ ಹಿರೀರು… ದುಡುಕಬೇಡ್ಲಾ. ಏನೇ ಮಾಡು, ನೀನೂ ಉಳ್ಕಾಬೇಕು ನಿನ್ನನ್ನ ನಂಬ್ದೋರೂ ಉಳ್ಕೊಬೇಕು. ಸರಿ, ಈಗೇನ್ಮಾಡ್ತೀಯಾ?’ ಕಾಳಜಿಯಿಂದ ರಂಗನ ಮುಖ ನೋಡಿದರು ಚಮನ್ ಸಾಬ್.

‘ನಾನ್ ಯಾವುದನ್ನೂ ಯೋಚ್ನೆ ಮಾಡಿ ಮಾಡೋದಿಲ್ಲ… ಮುಂದಿಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ ಉಸ್ತಾದ್. ಬಂದದ್ದನ್ನ ಫೇಸ್ ಮಾಡ್ತೀನಿ’ ಬರುತ್ತಿರುವ ಸಾರೋಟಿನತ್ತ ಎದುರಾಗಿ ನಡೆದ. ನೆರೆದವರಿಗೆ ಕುತೂಹಲ. ಚಮನ್ ಮತ್ತು ಗರಡಿ ಹುಡುಗರಿಗೆ ಆತಂಕ, ಉಗ್ರಪ್ಪ ಮೈಲಾರಿಯಂತಹ ಭಾರಿ ಕುಳದ ಮೇಲೆ ಬಡಿದಾಡುತ್ತಾನಾ? ಬಡಿದಾಡಿ ಬದುಕ್ಯಾನ! ಹಂಗಾರೆ ಇಂವಾ ಏನ್ ಮಾಡೋನಿದ್ದಾನು!? ರಂಗ ಬರುವುದನ್ನು ನೋಡಿ ಬೆವರು ಮುದ್ದೆಯಾಗಿದ್ದ ರಾಜಯ್ಯ ದೀನರಾಗಿ ಅವನತ್ತ ನೋಡಿದರು. ರಂಗ ಬಳಿ ಬಂದವನೆ ಅವರೊಂದಿಗೆ ತಾನೂ ಸಾರೋಟು ಎಳೆಯಲು ಕೈ ಹಾಕಿದ. ‘ಬೇಡ, ನೀನು ಹೋಗು ಕಂದಾ… ನನ್ನ ಪಾಡು ನನ್ಗೆ’ ತೊದಲ್ನುಡಿದರು ರಾಜಯ್ಯ. ‘ಇವನ್ಯಾವನಣ್ಣ? ಶಿವಪೂಜಿನಾಗ್ಳ ಕರಡಿ?’… ಮೈಲಾರಿ ಅಂಗಾರಾದ.

ಪಾಪ ಪಾಟಹೇಳಿಕೊಟ್ಟ ಗುರುಕಾಣಿಕೆ ತೀರಿಸ್ತಾನೇನೋ ಬಿಡ್ಲಾ… ಇವನ್ಗೂ ರವಷ್ಟು ಕೊಬ್ಬದೆ. ನನ್ನ ಎದುರ್‍ನಾಗೆ ಎದೆಸೆಟೆಸಿ ನಡೆಯೋನಿದ್ದರೆ ಈ ಹಳ್ಳಿನಾಗೆ ಈ ಬಡ್ಡಿಮಗ ಒಬ್ಬನೆ. ಸಾರೋಟು ಎಳಿತಾನೆ ಅಂದ್ರೆ ನಂಗಂತೂ ಶ್ಯಾನೆ ಖುಷಿಯೇ’ ಉಗ್ರಪ್ಪ ಪಿಸುಗಿ ನಂತರ ಅಟ್ಟಹಾಸದ ನಗೆ ನಕ್ಕ. ರಂಗನಿಗೆ ಮೈಲಾರಿ ಅಡ್ಡಿಪಡಿಸಲಿಲ್ಲ. ‘ಸುಮ್ನೆ ನೀವು ಹಂಗ್‌ಹಿಡ್ಕಳಿ’ ಮೇಷ್ಟ್ರೆ. ನಾನೆಲ್ಲಾ ಎದುರು ಹಾಕ್ಕೊಂಡವ್ನೆ. ಬಡವಾ ನೀ ಮಡಗಿದಂಗಿರು ಅನ್ನೋ ಹಂಗೆ ಇರೋದು ಬಿಟ್ಟು ಊರು ಉಸಾಬರಿ ಯಾಕೆ ಬೇಕಿತ್ತು ಈ ಹುಡುಗ್ಗೆ. ಹರೇದ ಹುಡುಗೀರು ನೊಂದುಕೊಂಡರೆ, ಅವರ ಅಮ್ಮ ಅಕ್ಕಂದಿರು ಮುಂದೇನು ಕಾದಿದೆಯೋ ಎಂಬಂತೆ ಲೊಚಗುಟ್ಟಿದರು. ಗಂಡಸು ಮಂದಿ ಮಾತ್ರ ಅವನ ಎದೆಗಾರಿಕೆ ಕಂಡು ಒಳಗೇ ಉರ್‍ಕೊಂಡ್ರು. ವಯಸ್ಸಾದ ಮುದುಕರು ‘ಭಲಾ ನಮ್ಮಪ್ಪ’ ಎಂದು ಹೊಗೆಸೊಪ್ಪು ತೀಡಿ ಗಪ್ಪನೆ ಬಾಯಿಗೆ ಎಸೆದುಕೊಂಡು ಸವೆದು ಮುಪ್ಪಾದ ನರನಾಡಿಗಳಲ್ಲಿ ಕಸುವು ತುಂಬಿಕೊಳ್ಳುವ ಉಮೇದು ತೋರಿದರು.

ಸಾರೋಟು ಭರಮಪ್ಪನವರ ಬಂಗಲೆಯತ್ತ ಹೊಳ್ಳಿದಾಗ ವಿಷಯವಾಗಲೇ ಅರಿತಿದ್ದ ತಾತ ಭರಮಪ್ಪ ಚಿನ್ನಮ್ಮ ಕೆಂಚಮ್ಮ ಚಿನ್ನು ಉಪ್ಪರಿಗೆ ಏರಿ ನೋಡಿದರು. ಯಾರಿಗೂ ಅಂತಹ ಸಡಗರವಾಗಲಿಲ್ಲ. ಆದರೆ ಅರಿಯದ ಚಿನ್ನು ಚಪ್ಪಾಳೆ ತಟ್ಟಿ ಕುಣಿದಳು. ‘ತಾತ, ಮೇಷ್ಟ್ರು ಸಾರೋಟು ಎಳೀತಿದಾರೆ ಅಂತ ಅಂದ್ನಲ್ಲ ನಿಂಗ…? ಇವನ್ಯಾರೋ ಇನ್ನೊಬ್ಬನೂ ಎಳಿತಾ ಅವ್ನಲ್ಲ! ಇಬ್ಬರೂ ನಮ್ಮ ಬಸವನಿಗೆ ಹೊಡದವರಾ? ಈ ಅಹಂಕಾರಿಗಳಿಗೆ ಹಿಂಗ್ ಆಗ್ಬೇಕು’ ಮುನಿಸು ತೋರಿದಳು ಚಿನ್ನು.

‘ಚಿನ್ನು, ನೀನ್ ಸಣ್ಣಾಕಿ, ನಿನ್ಗೇನು ತಿಳಿದು ಮಗಾ, ಅಹಂಕಾರಿಗಳು ಅವರಲ್ಲ… ನಿಮ್ಮಪ್ಪ ಚಿಕ್ಕಪ್ಪ ಅಹಂಕಾರಿಗಳು. ಯಾರಿಗಾದ್ರೂ ಅಪಮಾನ ಮಾಡದಿದ್ದರೆ ಯಾರ ಮೇಲಾದ್ರು ಕೈ ಮಾಡದಿದ್ದರೆ ಇವಕ್ಕೆ ತಿಂದ ಅನ್ನ ಮೈಗತ್ತಲ್ಲವ್ವ’ ತಿಳಿಹೇಳುತ್ತಾ ನೊಂದು ನಿಟ್ಟುಸಿರಾದರು. ಕೆಳಗಡೆ ಮನೆ ಆಳುಗಳು ಸಾರೋಟು ಹತ್ತಿರವಾದಂತೆ ಕೇಕೆ ಹಾಕಿ ಕುಣಿದು ಸಂಭ್ರಮಿಸುವುದನ್ನು ಕಂಡು, ‘ಖಬರದಾರ್… ಸುಮ್ಗೆ ನಿಂದರ್ರಲೆ ಕತ್ತೆಗಳಾ’ ಎಂದು ಅಬ್ಬರಿಸಿದರು. ಆಳುಗಳು ಕ್ಷಣ ತಬ್ಬಿಬ್ಬಾಗಿ ತೆಪ್ಪಗಾದರು. ಭರಮಪ್ಪ ಕೆಳಗಿಳಿದು ಅಂಗಳಕ್ಕೆ ಬಂದು ಮೆಟ್ಟಿಲುಗಳ ಮೇಲೆ ನಿಂತಾಗ ಚಿನ್ನಮ್ಮ ಕೆಂಚಮ್ಮ ಚಿನ್ನು ಹಿಂಬಾಲಿಸಿ ಬಂದರು. ಅಪ್ಪನ ಮುಖದಲ್ಲಿ ಉಲ್ಲಾಸ ಕಾಣದೆ ಮುಂಗಸಿಯ ಮುಖದಂತೆ ಕಂಡಾಗ ‘ಈವಯ್ಯ ಯಾವಾಗ್ಲೂ ಹಿಂಗೆ, ಮನೆಗೆ ಮಾರಿ ಪರರಿಗೆ ಉಪಕಾರಿ’ ಎಂದು ಮೈಲಾರಿ ಅಣ್ಣನೊಡನೆ ಹೇಳಿಕೊಂಡು ಮುನಿದ.

ಬಳಲಿದ್ದ ಮೇಷ್ಟ್ರಿಗೆ ‘ನೀವು ಕಳಚ್ಕಳಿ’ ಅಂದ ರಂಗ. ಮೆಷ್ಟ್ರು ಸಾರೋಟು ಬಿಟ್ಟು ದೂರ ನಿಂತು ಕೈ ಮುಗಿದರು. ರಂಗ ಸಾರೋಟು ಮೇಲೆ ವಿರಾಜಮಾನರಾಗಿದ್ದ ಉಗ್ರಪ್ಪ ಮೈಲಾರಿ ಇಳಿಯುವ ಮೊದಲೆ ಮೇಲೆತ್ತಿ ಕೈಬಿಟ್ಟುಬಿಟ್ಟ. ಮೇಲೆದ್ದ ಸಾರೋಟು ಹಿಂಭಾರವಾಗಿ ಹಿಂಬದಿಗೆ ಉರುಳಿದಾಗ ಅಣ್ಣ ತಮ್ಮಂದಿರೂ ದೊಪದೊಪನೆ ನೆಲಕ್ಕುರುಳಿದರು.

‘ಅರೆ, ನೀವು ಇನ್ನೂ ಇಳಿದೆ ಇರಲಿಲ್ಲೇನು!…. ಸಾರಿ’ ಅಂತ ನಕ್ಕ ರಂಗ. ಧೂಳು ಜಾಡಿಸಿಕೊಂಡು ಮೇಲೆದ್ದ ಸೋದರರು ತಾವೆಣಿಸದ ಅಪಮಾನ ಮನೆಯವರೆಲ್ಲರ ಸಮಕ್ಷಮ ನಡೆದಾಗ ವ್ಯಗ್ರರಾದರು.

‘ಎಷ್ಟಲೆ ಪೊಗರು ನಿನ್ಗೆ ಲೋಫರ್… ಇಕ್ಕರಲೆ ಇವನಿಗೆ ಮುಕಮೂತಿ ಏಕಾಗಂಗೆ’ ಆಳುಗಳಿಗೆ ಆಜ್ಞಾಪಿಸಿದರು. ಅವರು ಬಿದ್ದಿದ್ದನ್ನು ಬಿದ್ದು ಎಗರಾಡುತ್ತಿರುವುದನ್ನು ನೋಡಿ ಮನೆಯವರೆಲ್ಲಾ ನಕ್ಕಾಗಲಂತೂ ಇದುವರೆಗಿನ ಅವರ ಸಂತಸ ಸಂಭ್ರಮವೆಲ್ಲಾ ಮಣ್ಣುಗೂಡಿತ್ತು. ಆಳುಗಳು ಚಿರತೆಗಳಂತೆ ರಂಗನ ಮೇಲೆಗರಿ ಕಾದಾಟಕ್ಕಿಳಿದರು.

‘ಬಿಡಬ್ಯಾಡ್ರಿ… ಇವನ್ನ ಹೆಣ ಎತ್ತಿ’ ಮೈಲಾರಿ ಸಿಡಿದ. ‘ಇದೆಲ್ಲಾ ಏನ್ರಲೆ?’ ಎನ್ನುವಂತೆ ಭರಮಪ್ಪ ಕೆಂಗಣ್ಣು ಮಾಡಿದಾಗ ಸೋದರರು ಬೇರತ್ತ ಮುಖ ಮಾಡಿದರು. ರ್‍ಅಂಗ ಒಬ್ಬ ಎಳಸು ಹುಡುಗ. ಐದಾರು ಧಡಿಯರು ಅವನನ್ನು ಸುತ್ತುವರೆದು ಕಾದಾಟಕ್ಕಿಳಿದಾಗ ಹಾದಿಯಲ್ಲಿ ಹೋಗಿ ಬರುವವರು ಅವಕ್ಕಾಗಿ ನಿಂತು ನೋಡಿದರು. ‘ದೇವರೆ ಈ ಹುಡುಗ ಉಳಿದಾನೆ’ ಎಂದು ಚಡಪಡಿಸಿದರು ರಾಜಯ್ಯ. ಅವರ ಕೈಲಾದದ್ದಿಷ್ಟೆ ’ದೇವರೇ… ಈ ಬಡಪಾಯಿನಾ ಕಾಪಾಡು ತಂದೆ’ ಮಾರುತಿ ಸ್ತೋತ್ರ ಪಠಿಸಿದರು. ಬರಬರುತ್ತಾ ರಂಗನ ಕೈ ಮೇಲಾಗಿ ಒಬ್ಬೊಬ್ಬನೆ ಏಟು ತಿಂದು ನೆಲಕ್ಕುರುಳಿ ತಿರುಗಿ ತಿಣುಕುತ್ತಾ ಎದ್ದು ಬರುವಾಗ ‘ಭಲಾ… ಮೆಚ್ದೆ’ ಉದ್ಗಾರ ತೆಗೆದರು ಮೀಸೆ ತೀಡುತ್ತಾ ಭರಮಪ್ಪ. ‘ಒಳ್ಳೆ ಚಿರತೆ ಇದ್ದಂಗವ್ನೆ ಕಣೋ ಉಗ್ರ’ ಅಂದಾಗಲಂತೂ ಸೋದರರ ಮೈ ಪಾದರಸ, ‘ನಿಜ ಕಣ್ ತಾತ, ಸಖತ್ತಾಗಿ ಫೈಟ್ ಮಾಡ್ತಾನೆ, ಫೈಟ್ ಅಂದ್ರೆ ನಂಗಿಷ್ಟ’ ಚಿನ್ನು ಚಪ್ಪಾಳೆ ತಟ್ಟುವಾಗ ಅವಳ ಕೈಗಳನ್ನು ಗಪ್ಪನೆ ಹಿಡಿದ ಉಗ್ರಪ್ಪ ‘ಸುಮ್ಗೆ ನಿಲ್ಲು’ ಎಂಬಂತೆ ದಿಟ್ಟಿಸಿದ. ರಂಗನಿಂದ ಏಟು ತಿಂದ ಆಳುಗಳು ದೀಪಕ್ಕೆ ಸಿಕ್ಕ ಹುಳಗಳಂತೆ ತುಪತುಪ ನೆಲಕ್ಕೆ ಬಿದ್ದಾಗ ಮೈಲಾರಿ ಕೊತಕೊತನೆ ಕುದಿದ. ರಂಗ ಕೈಗೆ ಹತ್ತಿದ ಧೂಳನ್ನು ಕೊಡವಿಕೊಂಡು ಅಲ್ಲಿಂದ ಹೊರಡಲು ಸಿದ್ದನಾದಾಗ ಸುಂದೇನು ಕಾದಿದೆಯೋ ಎಂಬ ಗಾಬರಿ ರಾಜಯ್ಯನವರಿಗಷ್ಟೆ ಅಲ್ಲ ನೆರೆದವರಿಗೂ ಆಯಿತು.

‘ಸಾರಿ ತಾತ ಇದರಲ್ಲಿ ನಂದೇನು ತಪ್ಪಿಲ್ಲ. ಇವರಾಗಿ ಮೈಮೇಲೆ ಬಿದ್ದರು ಸೆಲ್ಫ್ ಪ್ರೊಟಕ್ಶನ್ ಮಾಡ್ಕೊಂಡೆ ನಿಮ್ಮವರಿಗೆ ಹೊಡ್ದೆ ಅಂತ ಬೇಜಾರು ಮಾಡ್ಕೊಬೇಡಿ… ಬರ್ತಿನಿ’ ರಂಗ ನಯವಾಗಿ ಮಾತನಾಡಿ ನಮಸ್ಕರಿಸಿ ಹೊರಟಾಗ ಭರಮಪ್ಪನವರಿಗೆ ಎನು ಹೇಳಬೇಕೋ ತಿಳಿಯಲಿಲ್ಲ. ಆದರೆ ಮೈಲಾರಿ ಕೆರಳಿಬಿಟ್ಟ, ‘ನಿಲ್ಲಲೆ, ನಿನ್ ತಾಕತ್ತೇನೋ ನೋಡೇಬಿಡ್ತೀನಿ ಮಗ್ನೆ’ ದುಡುದುಡು ಮೆಟ್ಟಿಲಿಳಿಯುವ ಮೈಲಾರಿಯನ್ನು ಭರಮಪ್ಪನೇ ತಡೆದರು. ‘ಈಗ ಆಗಿದ್ದು ಸಾಕು ನಿಂತ್ಕೊಳೋ’ ಗದರಿಸಿ ನಿಲ್ಲಿಸಿದರು ‘ನೀನ್ ಹೋಗಯ್ಯ’ ಎಂಬಂತೆ ರಂಗನಿಗೆ ಸನ್ನೆ ಮಾಡಿದ ಭರಮಪ್ಪನವರ ನೋಟ ನೆರೆದ ಜನರತ್ತ ತಿರುಗಿದಾಗ ಜನ ದಿಕ್ಕೆಟ್ಟು ಓಡಿದರು.

‘ಅಪ್ಪಾ, ನಿಮ್ಮ ಈ ಬುದ್ಧಿನೇ ನಮಗೆ ಹಿಡಿಸೋದಿಲ್ ನೋಡು’ ಕುಪಿತನಾದ ಉಗ್ರಪ್ಪ. ‘ನಿಮ್ಮಗಳ ಯಾವ ಬುದ್ಧಿನೂ ನನ್ಗೆ ಹಿಡಿಸೋದಿಲ್ಲವಲ್ಲರಲೆ. ಮುದುಕರತ್ರಾ ಸಾರೋಟು ಎಳೆಸ್ತಿರಾ? ಅದು ಗುರುಗಳ ಹತ್ತಿರ ಬೇಕೂಪರಾ, ಆ ಮುದ್ಕ ಬಿದ್ದು ಸತ್ತರೆ ಏನ್ ಮಾಡ್ತೀರಾ?’ ಭರಮಪ್ಪ ಖಿನ್ನರಾದರು.

‘ಭೂಮಿಗೆ ಭಾರ ಕೂಳಿಗೆ ದಂಡ ಸತ್ತರೆ ಏನಾಗ್ತದೆ ಬಿಡು’

‘ಏನಾಗ್ತಿದೆ? ನಿಮ್ಮ ಕೈಗೆ ಕೋಳಾ ಬೀಳ್ತದೆ. ಕಾನೂನು ಇನ್ನೂ ಸತ್ತಿಲ್ಲ’

‘ಏನ್ ನಾವ್ ಕಾಣಲಿಲ್ಲದ ಕಾನೂನು ಕಟ್ಲೆನಾ? ದುಡ್ಡಿರೋರ ಮುಂದೆ ಕಾನೂನು ಕತ್ತೆ ಇದ್ದಂಗೆ. ಜಾಡಿಸೋದು ಬಡಪಾಯಿಗಳ್ನ ಬಲವಂತರನ್ನಲ್ಲ’

‘ಇದೆಲ್ಲಾ ದಾದಾಗಿರಿ ಭಾಳದಿನ ನಡೆಯೋದಿಲ್ಲ ಕಣಲೆ, ಈಗ ನೋಡಿದಿರಲ್ಲ ನಿಮ್ಮ ಬಲ ಹೆಂಗೆ ಮಣ್ಣು ಮುಕ್ಕಿತು ಅಂಬೋದ್ನ’ ಲೇವಡಿ ಮಾಡಿದರು ಭರಮಪ್ಪ.

‘ನನ್ನನ್ನ ನೀವು ತಡಿದೆ ಹೋಗಿದ್ದಿದ್ದರೆ ರಂಗನ ಹೆಣ ಬಿದ್ದಿರೋದು’ ಹಲ್ಲು ಮಸೆದ ಮೈಲಾರಿ.

‘ದಡ್ಡ, ಯಾರ ಹೆಣ ಬೀಳೋದೋ ಕಂಡೋರು ಯಾರು? ಇನ್ನ ಆ ಹುಡುಗನ್ನ ತಡವಿ ನೀನೂ ಏಟು ತಿಂದು ಬಿಟ್ಟಿದ್ದರೆ ಈ ಮನೆ ಈಟು ತೊಲ ಮೀಸೆ ಹೊತ್ಕಂಡು ಓಡಾಡೋಕಾಗ್ದೆ ನಾನೇ ದೇಶಾಂತರ ಹೋಗಬೇಕಿತ್ತಷ್ಟೆ. ಅದಕ್ಕೆ ತಡ್ಡೆ ಕಣ್ಲಾ’

‘ನನ್ನ ಶಕ್ತಿ ಬಗ್ಗೆ ನಂಬಿಕೆ ಇಲ್ವಾ ಹಂಗಾರೆ?’ ತೋಳು ಮೈಮುರಿದ ಮೈಲಾರಿ.

‘ಇದೆ ಕಣಾ, ಹಂಗೆನೇ ನ್ಯಾಯ ಗೆಲ್ತದೆ ಅನ್ನೋದರ ಬಗ್ಗೆನೂ ನಂಬಿಕೆ ಅದೆ. ಯಾವುದೂ ಅತಿ ಆಗಬಾರ್‍ದು ಕಣ್ರಲಾ… ಹೋಗಿ ಹೋಗಿ ಆದ್ದಾತು. ಇನ್ನು ಮುಂದೆ ಹಿಂಗ್ ಆಗಬಾರ್‍ದು. ಊರಿಗೇ ನ್ಯಾಯ ಹೇಳೋರಾಗಿ ನಾವು ತೆಪ್ಪು ಮಾಡಬಾರ್‍ದು’ ಭರಮಪ್ಪ ಉಪ್ಪರಿಗೆ ಮೆಟ್ಟಿಲುಗಳನ್ನೇರಿ ಹೋದರು ಮೊದಲಿನ ಗತ್ತಿರಲಿಲ್ಲ.

‘ಮಖ ಏನ್ ನೋಡ್ತಿರ್‍ರೆ… ನಡೀರೆ ಒಳ್ಗೆ’ ತಟ್ಟನ ಒದರಿದ ಉಗ್ರಪ್ಪನ ಗಂಟಲಿನ ಭರ್ಜರಿ ಸೌಂಡ್ಗೆ ಬೆಚ್ಚಿಬಿದ್ದ ಹೆಂಗಸರು ಕಿಚನ್ ಕಡೆ ಕಂಬಿಕಿತ್ತರು. ಯಾಕೋ ಅಣ್ಣ ತಮ್ಮಂದಿರೇ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳಲೂ ಹೇಸಿದವರಂತಾಗಿ ತಮ್ಮ ಕೋಣೆಗಳತ್ತ ನಡೆದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಲಾಬಿ ಹೂ
Next post ಕೊಂಡ ಹಾಯುವಳು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…