ಪ್ರೀತಿಯ ಪಳಿಯುಳಿಕೆಯ ಮೇಲೆ
ಸಣ್ಣ ಜೋಪಡಿ ಕಟ್ಟಿ
ಸುತ್ತ ಗುಲಾಬಿ ಗಿಡ ನೆಟ್ಟಿದ್ದೇನೆ.
ಎದೆಗನ್ನಡಿ ದೇವದಾರು ಚೌಕಟ್ಟಿಗೆ
ಅವುಚಿಕೊಂಡಿದೆ..
ತಿಂಗಳ ಬೆಳಕಿಗೆ ಬರದಿರಲಿ
ಬೆಂಕಿಯುಗುಳುವ ಖಯಾಲಿ.
ಮಾತು ಕತೆ ಸತ್ತ ದಿನಗಳಲ್ಲೂ
ದೇಹವೇ ದಾಸ್ತಾನಿನ ಕೋಣೆಯಾಗಿ
ಇಂಚಿಂಚೂ ಕರಗಿದರೂ ಒಳಸರಕುಗಳು
ಕೊಂಚವೂ ಬೇಸರಿಸದೇ
ಅರಳಿಸುತ್ತಲೇ ಇದ್ದೇನೆ ಗುಲಾಬಿ ಹೂ..
ಮಟ್ಟಸಗೊಂಡ ನೆಲದಂಚಿಗೆ
ಬರಬಾರದು ಎಂದೂ ಇಳಿಜಾರಿನ ಭೀತಿ.
ನನಸಾಗದ ಕನಸುಗಳ ಕಟ್ಟಿಕೊಳ್ಳುತ್ತಲೇ
ನನ್ನೊಳಗಿನ ಬೆಂಕಿಗೆ
ಮುಖಾಮುಖಿಯಾಗುತ್ತಲೇ
ಹುಡುಕಾಡುತ್ತ ತಡಕಾಡುತ್ತ
ಹೋಗಬಲ್ಲೆ ಚಿಮ್ಮುವ ಬೆಳಕಿನ
ನಕ್ಷತ್ರಗಳ ಗೂಡಿಗೆ
ಹಿಡಿದು ತರಬಲ್ಲೆ ತಾರಕೆಗಳ ಗುಚ್ಛವನ್ನೆ
ಚೈತ್ರದ ಚಿಗುರೊಡೆದು ಬರುವ ದಿನಗಳಿವು
ಕೊನೆ ಬರಬಾರದು ಹಾಡು ಹಸೆಗೆ
ಕುಳಿತುಣ್ಣುವ ಹಬ್ಬ ಹೋಳಿಗೆಗೆ.
ಹಬ್ಬಕ್ಕೆಂದೆ ತಂದ ಗುಲಾಬಿ ಹೂಗಳಿಗೆ.
*****