ಆ ಮನೆಯ ಅಂಗಳದ ಮರವೊಂದರ ಟೊಂಗೆಯಲ್ಲಿ ಜೀನುಹುಳುಗಳು ಗೂಡು ಕಟ್ಟಿದ್ದವು. ಮನೆಯ ಯಜಮಾನನಿಗೆ ಗೂಡೆಂದರೆ ಅಭಿಮಾನ, ಪ್ರೀತಿ, ಅವನು ಅದನ್ನು ಕಾಳಜಿಯಿಂದ ರಕ್ಷಿಸುತ್ತಿದ್ದ. ಗೂಡು ಕಟ್ಟಿದ ಜೇನುಹುಳುಗಳೂ ಅಷ್ಟೆ. ಒಮ್ಮೆಯೂ ಅಪಾಯಕಾರಿಯಾಗಿ ವರ್ತಿಸುತ್ತಿರಲಿಲ್ಲ. ಒಂದು ಗೂಡಾದ ನಂತರ ಮತ್ತೊಂದು ಗೂಡನ್ನು ಜೇನುಹುಳುಗಳು ಅಲ್ಲಿ ಕಟ್ಟುತ್ತಲೇ ಇದ್ದವು. ಮೆನಯ ಸದಸ್ಯರಿಗೆಲ್ಲ ಮಧುರಜೇನು ಸಿಗುತ್ತಿತ್ತು. ಯಜಮಾನ ಅದನ್ನು ಸುತ್ತಮುತ್ತಲಿನ ಜನಕ್ಕೂ ಹಂಚುತ್ತಿದ್ದ. ಜೇನು ಸವಿದ ಅವನ ಮನಸ್ಸು ಜೇನುಹುಳುಗಳ ಬಗ್ಗೆ ಕೃತಜ್ಞವಾಗಿತ್ತು.
ಅವನ ಮನೆಯ ಒಳಗೂ-ಹೊರಗೂ ಹಾರಾಡಿಕೊಳ್ಳುವ ನೊಣಗಳಿಗೆ ಯಜಮಾನನ ಮೇಲೆ ವಿಪರೀತ ಸಿಟ್ಟು. ಅವನು ತಮ್ಮನ್ನು ದ್ವೇಷಿಸುತ್ತಾನೆ ಮತ್ತು ಧಿಕ್ಕರಿಸುತ್ತಾನೆ ಎಂದು ಆ ನೊಣಗಳು ಆರೋಪಿಸುತ್ತಿದ್ದವು. ಅತ್ತಿತ್ತ ಹಾರಾಡಿದರೆ, ಒಂದು ಕಡೆಗೆ ಕುಳಿತರೆ ಯಜಮಾನನ ಕಣ್ಣು ಕೆಂಪಾಗಿ ನೊಣಗಳ ಮೇಲೆ ದಾಳಿ ಮಾಡುತ್ತಿದ್ದವು. ಮನೆಯಲ್ಲಿದ್ದ ಹೆಂಗಸರೂ ಅಷ್ಟೆ “ಈ ಹಾಳಾದ ನೊಣ” ಎಂದು ಒಟಗುಡುತ್ತ, ನೀರಲ್ಲಿ ವಿಷ ಹಾಕಿ ನೊಣಗಳನ್ನು ಕೊಲ್ಲುತ್ತಿದ್ದರು. ಅಥವಾ ಮನೆಯೊಳಗೆ ಪ್ರವೇಶಿದಂತೆ ಯತ್ನಿಸುತ್ತಿದ್ದರು.
ಅವರದು ಪಕ್ಷಪಾತ ಬುದ್ಧಿ ಎಂದು ನೊಣಗಳು ಹತಾಶೆಯಿಂದ ಹೇಳಿಕೊಳ್ಳುತ್ತಿದ್ದವು.. ಜೇನುಹುಳಗಳಿಗೆ ಗೌರವ ಕೊಡುವ ಅವರು ತಮ್ಮನ್ನು ಕಂಡರೆ ಅಪಾಯ ಎದುರಾದಂತೆ ವರ್ತಿಸುವರೆಂದು ತಹತಹಿಸುತ್ತಿದ್ದವು. ಈ ಮನುಷ್ಯರು ತಮ್ಮನ್ನು ದ್ವೇಷಿಸಲು ಜೇನುಹುಳಗಳೇ ಕಾರಣವೆಂದು ಮತ್ಸರದಿಂದ ತಳಮಳಿಸುತ್ತಿದ್ದವು.
ಅಸೂಯೆ ವರ್ಧಿಸಿದಂತೆ ನೊಣಗಳು ಯಜಮಾನನ ಮೇಲೆ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದ್ದವು. ಯಜಮಾನನೂ ಛಲದಿಂದ ನೊಣಗಳೊಂದಿಗೆ ಹೋರಾಡುತ್ತಿದ್ದ. ಅವನ ಆಕ್ರೋಶದ ದಾಳಿಗೆ ಸಿಕ್ಕು ಕೆಲವು ನೊಣಗಳು ಸತ್ತು ನೆಲಕುರುಳುತ್ತಿದ್ದವು. ಹೆಂಗಸರು ಅವನ್ನೆಲ್ಲ ಗುಡಿಸಿ ತಿಪ್ಪೆಗೆಸೆಯುತ್ತಿದ್ದರು. ಸತ್ತ ನೊಣಗಳನ್ನು, ಇರುವೆಗಳು ಮುತ್ತಿಕೊಂಡು ಎಳೆದೊಯ್ಯುವಾಗ ಉಳಿದ ನೊಣಗಳು ದುಃಖದಿಂದ ಒದ್ದಾಡುತ್ತಿದ್ದವು.
ಒಮ್ಮೆ ಯಜಮಾನ ಆರಾಮಾಗಿ ಕುಳಿತಾಗ ನೊಣಗಳು ಗುಂಪಾಗಿ ಬಂದು ನೇರವಾಗಿ ಕೇಳಿದವು – “ಸ್ವಾಮಿ, ಯಜಮಾನರೆ ಜೇನುಹುಳಗಳಿಗೆ ತೋರಿಸುವ ಪ್ರೀತಿ ನಮಗೇಕಿಲ್ಲ?”
“ಜೇನು ಹುಳುಗಳು ನಿಮ್ಮಂತೆ ಅಪಾಯಕಾರಿಯಲ್ಲ ಅದಕ್ಕೆ” ನಿರ್ವಿಕಾರನಾಗಿ ಹೇಳಿದ.
“ಅವು ಮನುಷ್ಯನನ್ನು ಕಚ್ಚಿ ಕೊಲ್ಲುತ್ತವೆ.”
“ಹೌದು… ಮನುಷ್ಯನು ತೊಂದರೆ ಕೊಟ್ಟಾಗ ಮಾತ್ರ.”
“ನಮ್ಮಿಂದ ನಿಮಗೇನು ಕಷ್ಟ?”
“ನಿಮಗೆ ಅನ್ನ ಯಾವುದು ಹೊಲಸು ಯಾವುದು ವ್ಯತ್ಯಾಸವೇ ಗೊತ್ತಿಲ್ಲ. ಜೇನುಹುಳುಗಳು ಸತತವಾಗಿ ದುಡಿದು, ಎಲ್ಲರಿಗೂ ಸಿಹಿಯಾದ ಜೇನು ಹನಿ ನೀಡಿ ಉಪಕಾರ ಮಾಡುತ್ತವೆ. ಅವುಗಳದು ನಿಸ್ಪೃಹ ಬದುಕು. ನಿಮ್ಮದು ಸ್ವಾರ್ಥದ ಕೊಳಕು. ಎಂಜಲಿನ ದಾಹಕ್ಕೆ ಮನುಷ್ಯರನ್ನು ಬಲಿ ತಗೊಂತೀರಿ ನೀವು” ಗುಂಪಾಗಿ ಕುಳಿತಿದ್ದ ನೊಣಗಳ ಮೇಲೆ ಬಲವಾಗಿ ಕೈ ಬೀಸಿದ ಯಜಮಾನ.
ರೆಕ್ಕೆ ಬಿಚ್ಚಿದ ನೊಣಗಳು ಬಚ್ಚಲ ಮೋರಿಯತ್ತ ಹಾರಿ ನಾಚಿಕೆಯಿಲ್ಲದಂತೆ ಹೊಲಸು ನೆಕ್ಕತೊಡಗಿದವು.
*****
This story was nice and good and you’re right
ನೊಣಗಳಿಗಿಂತ ಜೆನು ಹುಳುಗಳು ಉತ್ತಮ