ಹರವು ಹೆಚ್ಚಲು ಮುಗಿಲ ನೆಲದಲಿ
ಬೆಳಕು ಚಿಮ್ಮಿತು
ಕೊಸರು ಕರಗಲು ಹಸೆಯು ಹರಡಲು
ಎದೆಯ ಬನದಲಿ ತನ್ನಿಂತಾನೇ
ಚೆಲುವು ಮೂಡಿತು.
ಯುಗವು ಕಳೆಯಲು ಯುಗವು ಮರಳಲು
ಜಗದ ನಿಯಮ ಸಹಜವಾಗಲು
ವಿಳಂಬಿ ವಿಳಂಬವೆನ್ನದೇ
ದಾಪುಗಾಲು ಹಾಕಿ ಬರುತಿರೆ
ಹೇಮಲಂಬಿ ಹಳೆಯ ಬಿಂಬಿ
ದೂರ ಸರಿಯಿತು.
ಕೆಂದಳಿರಿಗೂ ಮೀಗಿ ಕೆಂದೂಳು
ಹುಡಿಯೆದ್ದು
ಜಗವು ಸುಗ್ಗಿಯ ಸೊಬಗ ಹೊದೆದು
ರಸದೌತಣ ಇಳೆಯ ಮನೆಯೊಳೆದ್ದು
ತೇಲುತೇಲುತ
ಕನಸ ಹೆಣೆಯುವ ಕಾಲ ಬಂದಿತು.
ಹೂಬಿಸಿಲು ನೃತ್ಯಗೈಯಲು
ಮಾಮರದ ಸೆರಗ ಹಿಡಿಯಲು
ದುಂಬಿ ನುಡಿಯಲು,
ಕುಕಿಲ ಉಲಿಯಲು
ರೈತ ಬವಣೆಯು ಮುಗಿದು ಹೋಗಲು
ಸುಗ್ಗಿ ಸಂಭ್ರಮ ಮುಷ್ಟಿ ಹಿಡಿದು
ಸೃಷ್ಟಿ ಮೆರೆಯಿತು.
ಬೇವು ಬೆಲ್ಲ ನೋವು ನಲಿವು
ಮೆರಗು ಚೆಲ್ಲಿತು.
ಹೊಸ ಭರವಸೆಯ ಬೆಳಕ ಸೂಡಿ.
ಎದೆಗೂ ಎದೆಗೂ ಅರಿವು ಹರಡಿ
ವೈರುಧ್ಯ ತೊರೆದು ಜ್ಞಾನ ಮೂಡಿ
ಏಕತೆಯ ಗಾನ ಹೊರಟಿತು.
ಶಿಶಿರ ಋತುವು ಬೇಲಿದಾಟಲು
ವಸಂತ ಗಾನದ ಮಧುರ ಮೈತ್ರಿಯು
ಚೈತ್ರ ಸೊಬಗು ಬಲೆಯ ಬೀಸಲು
ಬಿರಿದ ಮೊಗ್ಗಿನ ಘಮವು ಪಸರಿಸೆ
ಹಾರೋ ಹೆಜ್ಜೆಗೂ ಗೆಜ್ಜೆ ಕಟ್ಟಿತು.
ಜಗವ ಹರಸಲು,
ರಮೆಯ ರಮಿಸಲು
ಬವಣೆ ಭಾವ ಕಳೆದು ಹೋಗಲು
ತಳಿರುತೋರಣ ಮುತ್ತಿನಾರತಿ
ಸುಮದರಾಶಿಯ ಹೊತ್ತು ತಂದಿತು
ವಿಳಂಬವೆನ್ನದೇವಿಳಂಬಿಯೊಡನೆ
ಇಳೆಗೆ ಹಬ್ಬವು ಹಬ್ಬಿತು.
*****