ಅಧ್ಯಾಯ ೧೬ ವೃದ್ದಾಪ್ಯ ಶಾಪವೇ?
ಭಾನುವಾರ ರಜಾ ಆದ್ದರಿಂದ ನಿಧಾನವಾಗಿ ಎದ್ದು ಪತ್ರಿಕೆಯತ್ತ ಕಣ್ಣಾಡಿಸುತ್ತ ಇದ್ದವಳಿಗೆ ‘ಅಸಹಾಯಕರಿಗೊಂದು ಆಸರೆ ವೃದ್ಧಾಶ್ರಮಗಳು’ ಎಂಬ ಲೇಖನ ಗಮನ ಸೆಳೆಯಿತು. ವೃದ್ದಾಪ್ಯ ಶಾಪವೇ ಎಂಬ ಅನುಮಾನ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಾಡತೊಡಗಿದೆ. ವೃದ್ದರಿಗೆ ಅಸಹಾಯಕತೆಯೇ ಶಾಪವಾದರೆ ಅವರನ್ನು ನೋಡಿಕೊಳ್ಳುವ ಸಮಸ್ಯೆಯಿಂದಾಗಿ ಮಕ್ಕಳಿಗೆ ವೃದ್ದರೇ ಶಾಪವಾಗುತ್ತಿದ್ದಾರೆ. ಹಿಂದೆಲ್ಲ ಒಟ್ಟು ಕುಟುಂಬಗಳಿದ್ದವು. ಅಜ್ಜ-ಅಜ್ಜಂದಿರು ಅಂಥ ಕುಟುಂಬಗಳಿಗೆ ಭೂಷಣವಾಗಿರುತ್ತಿದ್ದರು. ಅವರೆಂದೂ ಹೊರೆ ಎನ್ನಿಸುತ್ತಿರಲಿಲ್ಲ. ಪುಟ್ಟ ಮಕ್ಕಳನ್ನು ಆಡಿಸಿಕೊಂಡು, ಕಿರಿಯರಿಗೆ ಮಾರ್ಗದರ್ಶನ ಮಾಡುತ್ತ ತುಂಬು ಸಂಸಾರದಲ್ಲಿ ತಮ್ಮ ಕೊನೆಗಾಲವನ್ನು ಆನಂದವಾಗಿ ಕಳೆಯುತ್ತಿದ್ದರು. ಇಂಥ ವೃದ್ದರ ಬಗ್ಗೆ ಕಿರಿಯರು ಕೂಡ ಪ್ರೀತಿ, ವಿಶ್ವಾಸ ತೋರಿಸುತ್ತಾ ವಯಸ್ಸು ಶಾಪ ಎಂಬ ಕಲ್ಪನೆ ಕೂಡ ಮೂಡಿಸದಂತೆ ನೋಡಿಕೊಳ್ಳುತ್ತಿದ್ದರು.
ಆದರೆ ದಿನಗಳು ಬದಲಾಗುತ್ತಿವೆ. ಅಂದಿನ ಒಟ್ಟು ಕುಟುಂಬಗಳು ಒಡೆದುಹೋಗಿ, ಪುಟ್ಟ ಪುಟ್ಟ ಸಂಸಾರಗಳಾಗಿ ರೂಪುಗೊಂಡಿವೆ. ಗಂಡ-ಹೆಂಡತಿ ಇಬ್ಬರೇ, ಕೆಲಸಕ್ಕೆ ಹೋಗುವ ದಂಪತಿಗಳಿಗಂತೂ ಈ ವಯಸ್ಸಾದ ತಂದೆ-ತಾಯಿಯರು ಬಹು ಭಾರವಾಗಿ ತೋರುತ್ತಾರೆ. ಅದರಲ್ಲೂ ಶಕ್ತಿ ಕಳೆದುಕೊಂಡ, ಆರೋಗ್ಯ ಕಳೆದುಕೊಂಡ ಅಸಹಾಯಕರಾಗಿರುವ ಈ ವೃದರಂತೂ ಹೊರಲಾರದ ಹೊರೆಯಾಗಿ, ಈ ಹೊರೆಯನ್ನು ಎತ್ತಲಾದರೂ ಸಾಗಹಾಕುವ ಕಠಿಣ ಹೃದಯಿಗಳಾಗುತ್ತಿದ್ದಾರೆ. ಚುಚ್ಚುವ ಮನಸ್ಸಾಕ್ಷಿಗೂ ಅಂಜದೆ ಹೆತ್ತವರನ್ನು ನೋಡಿಕೊಳ್ಳಲೇಬೇಕಾದ ಜವಾಬ್ದಾರಿಯನ್ನು ಮರೆತು ಈ ಮಕ್ಕಳು ವೃದ್ದಾಶ್ರಮ ಹುಡುಕುತ್ತಿದ್ದಾರೆ. ಅಲ್ಲಿಗೆ ಅವರನ್ನು ಸೇರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಹೆತ್ತ ಮಕ್ಕಳಿದ್ದು, ಬಂಧು-ಬಳಗದವರಿದ್ದೂ ಈ ವೃದ್ದರು ಅನಾಥರಂತೆ ಬಾಳಬೇಕಾದ ಪರಿಸ್ಥಿತಿಗೆ ಲೇಖಕಿ ಅನುಕಂಪ ತೋರಿಸಿರುವುದನ್ನು ಓದಿದ ರಿತು ಛೇ ಜನರೋ, ಮನುಷ್ಯತ್ವ ಮರೆತ ಜನ ಪಶುಗಳಿಗಿಂತ ಕಡೆಯಾಗುತ್ತಿದ್ದಾರೆ ಎಂದುಕೊಂಡಳು.
ನಿನ್ನೆ ಬಂದು ಸೇರಿದ ನಾಗಮ್ಮನ ನೆನಪಾಯಿತು. ಲಕ್ವ ಹೊಡೆದು ಒಂದು ಪಾರ್ಶ್ವದ ಸ್ವಾಧೀನ ಕಳೆದುಕೊಂಡಿದ್ದ ಈಕೆಯನ್ನು ಆತನ ಅಳಿಯ ಬಂದು, ‘ನಮ್ಮ ಮನೆಗೆ’ ಸೇರಿಸಲು ಬಂದಿದ್ದ. ನಾಗಮ್ಮನ ನೋವು ತುಂಬಿದ ಮೊಗ ನೋಡಿ ರಿತುವಿನ ಮನಸ್ಸು ಚುರ್ರೆಂದಿತು. ನಾಗಮ್ಮನ ಬಗ್ಗೆ ವಿಚಾರಿಸಿ ವಿವರ ಪಡೆದಾಗ ಆಕೆಯ ಬಗ್ಗೆ ಅಯ್ಯೋ ಎನಿಸಿತು.
ಎರಡು ಹೆಣ್ಣುಮಕ್ಕಳು ನಾಗಮ್ಮನಿಗೆ, ಕಷ್ಟಪಟ್ಟು ಮಕ್ಕಳನ್ನು ಸಾಕಿ ಯೋಗ್ಯರಿಗೆ ಮದುವೆ ಮಾಡಿಕೊಟ್ಟಿದ್ದಳು. ಹಿರಿಯ ಮಗಳ ಬಳಿ ಇದ್ದು, ಅವಳ ಮಕ್ಕಳನ್ನು ಸಾಕಿ, ದೊಡ್ಡವರನ್ನಾಗಿ ಮಾಡಿ, ಚಿಕ್ಕ ಮಗಳು ಬಸುರಿ ಎಂದಾಗ ಅಲ್ಲಿಗೆ ಬಂದು ಮಗಳ ಬಾಣಂತನ ಮಾಡಿ, ಮಗು ದೊಡ್ಡದಾಗುವ ತನಕ ಇದ್ದಳು. ಇದ್ದಕ್ಕಿದ್ದಂತೆ ಲಕ್ವ ಹೊಡೆದಾಗ ಕಂಗೆಟ್ಟಳು. ಮಗಳು-ಅಳಿಯ ಹೊರಗಡೆ ಕೆಲಸಕ್ಕೆ ಹೋಗುವವರು. ನಾಗಮ್ಮನನ್ನು ನೋಡಿಕೊಳ್ಳುವವರಿಲ್ಲದೆ ಇಲ್ಲಿಗೆ ಸೇರಿಸಲು ಕರೆತಂದಿದ್ದರು. ಆ ಅಳಿಯನನ್ನು ಕಂಡ ರಿತುವಿಗೆ ಕೋಪವುಕ್ಕಿ ಬಂದಿತ್ತು.
“ಅಲ್ಲಯ್ಯ, ನಿನ್ನ ಹೆಂಡತಿಯ ಬಸಿರು, ಬಾಣಂತನ ನೋಡಿಕೊಂಡು, ಮಗುವನ್ನು ಬೆಳೆಸುವ ತನಕ ಅತ್ತೆ ಬೇಕಾಗಿತ್ತು. ಈಗ ಅವಳು ಬೇಡದವಳಾದಳೇ? ನಿನಗೆ ಈ ರೋಗ ಬಂದಿದ್ದರೆ ನಿನ್ನ ಅತ್ತೆ ನಿನ್ನನ್ನು ಕೈಬಿಡುತ್ತಿದ್ದಳೇ?” ಎಂದು ಕೇಳಿದರೆ ತಲೆತಗ್ಗಿಸಿಬಿಟ್ಟಿದ್ದ.
ಯಾಕೆ ಈ ಜನ ಹಿರಿಯರನ್ನು ನೋಡಿಕೊಳ್ಳುವ ಬದ್ಧತೆಗೆ ಎರವಾಗುತ್ತಿದ್ದಾರೆ? ಈ ರೀತಿ ಜಾರಿಕೊಳ್ಳುವ ಇಂಥ ಹೆತ್ತವರಿಂದ ಇವರ ಮಕ್ಕಳು ಏನನ್ನು ಕಲಿಯಲು ಸಾಧ್ಯ? ಈ ಮಕ್ಕಳಿಂದ ತಾನೇ ಏನನ್ನಾದರೂ ನಿರೀಕ್ಷಿಸಲು ಸಾಧ್ಯವೇ? ಮುಂದಿನ ತಲೆಮಾರಿನವರು ಸುಲಭವಾಗಿ ಇದೇ ಮಾರ್ಗ ಅನುಸರಿಸಲು ದಾರಿ ಮಾಡಿಕೊಟ್ಟಂತೆ ಆಗಲಿಲ್ಲವೇ? ಹೆತ್ತ ಮಕ್ಕಳು ಹೆತ್ತವರಿಗೆ ಎಂದೂ ಭಾರವಾಗುವುದಿಲ್ಲ. ಆದರೆ ಹೆತ್ತವರೇಕೆ ಮಕ್ಕಳಿಗೆ ಭಾರವಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರವೇ ಸಿಗದಂತಾಗಿದೆ.
“ಇಲ್ಲೇ ಬಿಟ್ಟು ಹೋಗುವ ತೀರ್ಮಾನ ಬದಲಾಯಿಸಲಾರೆಯಾ?” ಎಂದು ಕೊನೆಯದಾಗಿ ಕೇಳಿದಳು ರಿತು.
“ಇಲ್ಲ ಮೇಡಮ್, ಮಲಗಿದ್ದ ಕಡೆನೇ ಎಲ್ಲಾ ಮಾಡಿಕೊಂಡು ಬಿಡುತ್ತಾರೆ. ಅದನ್ನೆಲ್ಲ ಯಾರು ಕ್ಲೀನ್ ಮಾಡೋರು ಹೇಳಿ? ಆಳಿಟ್ಟುಕೊಳ್ಳುವಷ್ಟು ನಾವು ಶ್ರೀಮಂತರಲ್ಲ. ನಾವು ಬೆಳಗ್ಗೆ ಹೋದ್ರೆ ರಾತ್ರಿನೇ ಬರೋದು, ಮಾಡಿಟ್ಟ ಅಡುಗೆ ಕೂಡ ಹಾಕ್ಕೊಂಡು ತಿನ್ನೋ ಶಕ್ತಿ ಇಲ್ಲ ಇವರಿಗೆ, ನಾವೇನು ಮಾಡಬೇಕು ಹೇಳಿ? ಇಲ್ಲಾದರೆ ಅವರನ್ನು ನೋಡಿಕೊಳ್ಳೋಕೆ ಜನ ಇರ್ತಾರೆ. ಅವರ ವಯಸ್ಸಿನವರೇ ಸಂಗಾತಿಗಳಾಗಿ ಸಿಗ್ತಾರೆ. ಒಂಟಿಯಾಗಿ ಇಡೀ ದಿನ ಮೂಲೆಯಲ್ಲಿ ಮಲಗಿರುವ ಬದಲು ಇಲ್ಲಿ ಎಲ್ಲರೊಂದಿಗೆ ಬೆರೆತು ಚಟುವಟಿಕೆಯಿಂದ ಇರ್ತಾರೆ. ನನ್ನ ಹೆಂಡತಿಗೂ ಇಲ್ಲಿ ಬಿಡೋಕೆ ಇಷ್ಟ ಇಲ್ಲ. ಆದರೆ ಏನು ಮಾಡೋದು ಹೇಳಿ?” ತನ್ನ ಅಸಹಾಯಕತೆ ತೋಡಿಕೊಂಡ.
ಸುಮ್ಮನೆ ಕುಳಿತಿದ್ದ ನಾಗಮ್ಮ ಬಾಯಿಬಿಟ್ಟರು. ಅವರಿಗೇನೂ ಅನ್ನಬೇಡಿ. ನನ್ನ ಹಣೆಬರಹ ಇದು. ಎಲ್ಲರಿದ್ದೂ ಒಂಟಿಯಾಗಿ ಬಾಳಬೇಕು ಅನ್ನೋ ವಿಧಿ ನಿಯಮನ ತಪ್ಪಿಸುವವರು ಯಾರು? ನಾನು ಸಂತೋಷವಾಗಿಯೇ ಸೇರಿಕೊಳ್ಳೋಕೆ ಬಂದಿದೀನಿ. ನನಿಂದ ಅವರಿಗೆ ತೊಂದರೆ ಆಗುವುದು ಬೇಡ” ದೀನಳಾಗಿ ಹೇಳಿದಳು. ಮಕ್ಕಳ-ಮೊಮ್ಮಕ್ಕಳ ಪ್ರೇಮಪಾಶ ಸೆಳೆಯುತ್ತಿದ್ದರೂ ಪರಿಸ್ಥಿತಿಯ ಕೈಗೊಂಬೆಯಾಗಿ ವಾಸ್ತವಕ್ಕೆ ಬೆಲೆ ನೀಡಿದ್ದಳು.
ಮಗನ ಜತೆ ಜಗಳ ಮಾಡಿಕೊಂಡು ಬಂದಿದ್ದ ಗಂಗಮ್ಮ “ಯಾಕ್ರವ್ವ ಅವರಿಗೆ ಬುದ್ದಿ ಹೇಳ್ತೀರಾ, ಬುಟ್ಟುಬಿಡಿ. ನಾವು ಅವರಿಗೆ ಬ್ಯಾಡವಾದ ಮ್ಯಾಕೆ ಅಲ್ಯಾಕೆ ಇದ್ದು ನರಳಬೇಕು ? ಇಲ್ಲಿ ನೆಮ್ಮದಿಯಾಗಿ ಇದ್ದುಬಿಡುವ” ರೋಷದಿಂದ ನುಡಿದಳು.
“ಹಾಗಲ್ಲ ಗಂಗಮ್ಮ ಎಲ್ಲರೂ ಹೀಗೆ ಆಗಿಬಿಟ್ಟರೆ ಈ ಸಂಬಂಧಗಳಿಗೆ ಬೆಲೆ ಎಲ್ಲಿರುತ್ತೆ?” ದುಗುಡದಿಂದ ಹೇಳಿದಳು.
ಇಲ್ಲಿರುವ ಎಲ್ಲರ ಅಭಿಪ್ರಾಯದಂತೆ ತಮ್ಮ ಮನೆಗಳಿಗಿಂತ ಈ ಆಶ್ರಮವೇ ನೆಮ್ಮದಿಯ ತಾಣವಾಗಿದೆ. ಇಲ್ಲಿರುವ ನೆಮ್ಮದಿ, ಶಾಂತಿ ತಮ್ಮ ಮಕ್ಕಳ ಮನೆಗಳಲ್ಲಿ ಕಾಣಸಿಗದು. ಅವರು ಕೊಡುವ ಊಟ-ತಿಂಡಿಯೂ ಬಿಸಿಬಿಸಿಯಾಗಿ ತಿನ್ನುವ ಯೋಗ ನಮಗಿದೆ. ತಮ್ಮ ಮನೆಯ ಮಕ್ಕಳಿಗೆ ತಮ್ಮಿಂದ ಏನೂ ಸಹಾಯವಾಗದು. ವೃಥಾ ಹೊರೆ. ಅವರಿಂದ ನಿಕೃಷ್ಟವಾಗಿ ಕಾಣಿಸಿಕೊಳ್ಳುತ್ತ ಕೀಳಾಗಿ. ಸರಿಹೋಗದು. ಹೊತ್ತುಹೊತ್ತಿಗೆ ಬದುಕುವ ಬದಲು ಈ ವರದಾನದಂತಿರುವ ಆಶ್ರಮದಲ್ಲಿ ಬಾಳುವುದೇ ಮೇಲು. ಮಕ್ಕಳ ಸೆಳೆತ ಕಾಡಿದರೂ ಅದು ಅತಿಯಾಗಿ ಬಾಧಿಸದಂತೆ ಬದಲಾಗುತ್ತಿದ್ದೇವೆ. ಅಸಹಾಯಕರಿಗೆ ವರದಾನವಾಗಿದೆ ಈ ವೃದ್ದಾಶ್ರಮ ಎನ್ನುವ ಅವರ ಮಾತುಗಳೂ ನಿಜವಾಗುತ್ತಿವೆ ಎನಿಸಿತು.
ಯಾರೆಷ್ಟೇ ಬೇಡವೆಂದರೂ ಇಂಥ ಆಶ್ರಮಗಳ ಕಲ್ಪನೆ ನಮ್ಮ ದೇಶಕ್ಕಲ್ಲ. ಇದು ಪರದೇಶದ ಕಾಣಿಕೆ ಎಂದರೂ ಇತ್ತೀಚಿನ ದಿನಗಳಲ್ಲಿ ವೃದ್ದಾಶ್ರಮಗಳ ಅನಿವಾರ್ಯತೆ ಎತ್ತಿ ತೋರಿಸುತ್ತಿದೆ. ಬೇಡದ ಸಂಸಾರದಲ್ಲಿ ಮುಳ್ಳಾಗಿ ಬಾಳುವುದಕ್ಕಿಂತ, ಮಕ್ಕಳ ಅನಾದರ, ತಿರಸ್ಕಾರ ಸಹಿಸಿ, ಹಂಗಿನ ಅರಮನೆಯಲ್ಲಿ ಇರುವುದಕ್ಕಿಂತ, ಹೆತ್ತ ಕರುಳನ್ನು ಗಟ್ಟಿ ಮಾಡಿಕೊಂಡು, ವಾತ್ಸಲ್ಯ ಪಾಶವನ್ನು ಕತ್ತರಿಸಿಕೊಂಡು, ಒಂಟಿಯಾಗಿ, ಅನಾಥರಂತೆ ಇದ್ದರೂ ಪರವಾಗಿಲ್ಲ ಎಂಬ ಭಾವನೆ ಹಿರಿಯ ಜೀವಗಳಲ್ಲಿ ಬಲಗೊಳ್ಳುತ್ತಿದೆ. ನೆಮ್ಮದಿ ನೀಡುವ ಇಂಥ ಆಶ್ರಮಗಳೇ ಅವರ ಸ್ವಂತ ಮನೆಗಳಾಗುತ್ತಿವೆ.
ಕಾಲ ಬದಲಾದಂತೆ ಮನುಷ್ಯನೂ ಬದಲಾಗುತ್ತಿದ್ದಾನೆ. ತನ್ನವರೇ ತಮ್ಮನ್ನು ನೋಡಿಕೊಳ್ಳಬೇಕು, ತಾನು-ತನ್ನವರು ಎಂಬ ಸ್ವಾರ್ಥ ಇರಬೇಕು ಎಂಬುದು ಮರೆಯಾಗಿ ‘ವಿಶ್ವಮಾನವ’ ಎಂಬ ಕವಿವಾಣಿಯ ಕಲ್ಪನೆ ಇಲ್ಲಿ ಸಾಕಾರವಾಗುತ್ತಿದೆ ಎನಿಸಿತು ರಿತುವಿಗೆ.
ಏಕೋ ಮನೆಯಲ್ಲಿ ಕೂರದಾದಳು, ಮಿಂಚುವಿನ ಸೆಳೆತ ಹೆಚ್ಚಾಗಿ ಮಿಂಚು ನನ್ನ ಬರುವಿಕೆಗಾಗಿ ಕಾಯುತ್ತಿರುತ್ತದೆ. ಹೋದ ವಾರ ತಾನು ಹೋಗದೆ, ಇಡೀ ದಿನ ಅತ್ತು ಅತ್ತೂ ಮಲಗಿದ್ದನ್ನು ಸೋಮವಾರ ಹೇಳಿದಾಗ ಪಶ್ಚಾತ್ತಾಪ ಪಟ್ಟಿದ್ದಳು. ಈ ವಾರವೂ ಹಾಗಾಗುವುದು ಬೇಡವೆಂದೇ ಅಮ್ಮ-ಅಪ್ಪನಿಗೆ ಹೇಳಿ ಆಶ್ರಮಕ್ಕೆ ಬಂದಳು.
ಸುಬ್ಬಮ್ಮ ಮಿಂಚುವನ್ನು ಎತ್ತಿಕೊಂಡು ಆಡಿಸುತ್ತಿದ್ದರು. ಗೇಟಿನತ್ತಲೇ ನೋಡುತ್ತಿರುವ ಮಿಂಚುವಿಗೆ ಏನೇನೋ ಹೇಳಿ ಆ ಕಡೆ ನೋಡುವುದನ್ನು ಮರೆಸುವ ಯತ್ನ ನಡೆಸಿದ್ದರು. ಗಾಡಿ ನಿಂತ ಶಬ್ದವಾದೊಡನೆ ಮಿಂಚು ಕೇಕೆ ಹಾಕಿ ನಗುತ್ತಾ ಗೇಟಿನತ್ತ ಕೈ ತೋರಿಸಿತು.
“ಥೂ ಕಳ್ಳಿ, ಅದೆಂಗೆ ಪತ್ತೆಹಚ್ಚುತ್ತಾಳೊ ರಿತಮ್ಮನದ್ದೆ ಗಾಡಿ ಸದ್ದು ಅಂತ. ಬಾಳ ಕಲ್ತುಬಿಟ್ಟಿದ್ದಾಳೆ ಚಿನಾಲಿ” ಎಂದು ಮುದ್ದುಗರೆದರು.
“ಮಿಂಚು, ಮಿಂಚುಳ್ಳಿ” ಎಂದು ಹಾರಿ ಬಂದವಳೇ ಮಿಂಚುವನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತನಿರಿಸಿದ ರಿತು.
“ಏನು ಸುಬ್ಬಮ್ಮನೋರೆ, ಇವತ್ತು ಇವಳ ಚಾರ್ಜು ನಿಮ್ಮದಾ? ಈ ತುಂಟಿನಾ ಹಿಡಿಯೋದೆ ಕಷ್ಟವಾಗಿದೆ ಅಲ್ವಾ?” ಎಂದು ತನ್ನೆದೆಗೆ ಅಪ್ಪಿಕೊಂಡು ಮಿಂಚುವಿನ ತಲೆ ಸವರುತ್ತಿದ್ದದ್ದನ್ನೇ ನೋಡುತ್ತಿದ್ದ ಸುಬ್ಬಮ್ಮ “ರಿತಮ್ಮ, ನಿಮ್ಮ ಹೃದಯ ಶಾನೆ ದೊಡ್ಡದು. ಅವ್ವನ ಪ್ರೀತಿನೆಲ್ಲ ಈ ಮಗೀಗೇ ಧಾರೆ ಎರೀತಾ ಇದ್ದಿರಲ್ಲ. ನಿಮ್ಮನ್ನು ಹೆತ್ತ ಹೊಟ್ಟೆ ತಣ್ಣಗಿರಲಿ” ಮನಸ್ಸು ತುಂಬಿ ಹರಸಿದಳು.
“ಸುಬ್ಬಮ್ಮನೋರೇ, ನೀವೇನು ಕಡಿಮೆನಾ? ಸ್ವಂತ ಮೊಮ್ಮಗಳ ಥರ ನೋಡ್ಕೊತಿದೀರಾ, ಮಿಂಚುಗಂತೂ ಎಲ್ಲರಿಗಿಂತ ನಿಮ್ಮ ಮೇಲೆ ಪ್ರೀತಿ ಜಾಸ್ತಿ. ನೀವೊಬ್ಬರು ಇದ್ದುಬಿಟ್ಟರೆ ಆಯ್ತು ಈ ತುಂಟಿಗೆ, ಮತ್ಯಾರೂ ಬೇಡ, ಅಲ್ವಾ ಮುದ್ದು.”
ಸುಬ್ಬಮ್ಮ ಈ ಆಶ್ರಮಕ್ಕೆ ಸೇರಿ ನಾಲ್ಕು ವರ್ಷಗಳಾಗಿವೆ. ಒಂದು ಕಾಲದಲ್ಲಿ ಚೆನ್ನಾಗಿ ಬಾಳಿ, ಬದುಕಿದ ಜೀವ. ಮಹಿಳಾ ಸಮಾಜವನ್ನು ಸ್ಥಾಪಿಸಿ, ಅದರ ಅಧ್ಯಕ್ಷೆಯಾಗಿದ್ದು, ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಎಲ್ಲಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ ಮಹಿಳೆ, ಅನಕ್ಷರಸ್ಥರಿಗೆ ಅಕ್ಷರ ಕಲಿಸುತ್ತಿದ್ದ ಅಕ್ಷರ ಪ್ರೇಮಿ, ಕಸೂತಿ, ಹೊಲಿಗೆ ಮಹಿಳೆಯರಿಗೆ ಕಲಿಸಿ ಅವರನ್ನು ಸ್ವಾವಲಂಬಿಗಳಾಗುವಲ್ಲಿ ನೆರವಾಗುತಿದಾರೆ. ನಗರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಕೌನ್ಸಿಲರ್ ಕೂಡ ಆಗಿದ್ದವರು.
ಪತಿ ತೀರಿಕೊಂಡ ಮೇಲೆ ಮನೆಯಲ್ಲಿ ಮಕ್ಕಳದೇ ಆಧಿಪತ್ಯವಾಗಿ ಇವರನ್ನು ಅಸಡ್ಡೆ ಮಾಡಿ ನೋಯಿಸಿದಾಗ, ಮರುಮಾತನಾಡದೆ ತನ್ನದೆನ್ನುವ ಒಂದಿಷ್ಟು ಇಡುಗಂಟನ್ನು ಹಿಡಿದು ಈ ಆಶ್ರಮಕ್ಕೆ ಬಂದುಬಿಟ್ಟಿದ್ದರು. ಮಕ್ಕಳು ಬಂದು ಎಷ್ಟು ಕರೆದರೂ ಬೆಲೆ ಸಿಕ್ಕದ ಕಡೆ ಇರಬಾರದೆಂಬ ತೀರ್ಮಾನದೊಂದಿಗೆ ಅವರೊಂದಿಗೆ ಹೋಗದೆ ಉಳಿದು ತನ್ನ ಕಾರ್ಯಕ್ಷೇತ್ರವನ್ನು ಇಲ್ಲಿಯೂ ಮುಂದುವರಿಸುತ್ತಿರುವ ಚೈತನ್ಯಪೂರ್ಣವಾದ ಹೆಂಗಸು. ಇಲ್ಲಿರುವವರೆಲ್ಲ ನನ್ನವರೇ, ಇವರೇ ನನ್ನ ಬಂಧುಗಳು. ನನ್ನ ಮನೆಯವರಿಂದ ದೂರವಾಗಿದ್ದೇನೆ ಎಂಬ ನೋವು ಕಾಡದಷ್ಟು ಸ್ಥಿತಪ್ರಜ್ಞಳಾಗಿಬಿಟ್ಟಿದ್ದೇನೆ ಎನ್ನುವ ಸುಬ್ಬಮ್ಮ ಒಂದು ನಿಮಿಷ ಕೂಡ ಕೂರದ, ಚಟುವಟಿಕೆಯ ಹೆಂಗಸು. ಸದಾ ಏನಾದರೊಂದು ಕೆಲಸ ಹುಡುಕಿಕೊಂಡು ಮಾಡುತ್ತಲೇ ಇರುವಾಕೆ. ತೋಟದ ಕೆಲಸದಿಂದ ಹಿಡಿದು ಅಡುಗೆ ಮನೆಗೂ ನುಗ್ಗಿ ತನಗೆ ತೋಚಿದ ಕೆಲಸ ಮಾಡಿ, ರಿತು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ಆಕೆಗೂ ಸಹಾಯ ಹಸ್ತ ನೀಡುವ ಸುಬ್ಬಮ್ಮನೆಂದರೆ, ರಿತುವಿಗೆ ಬಹಳ ಇಷ್ಟ. ಈಗಂತೂ ಮಿಂಚುವನ್ನು ಸ್ವತಃ ಮೊಮಗುವಿನಂತೆ ನೋಡಿಕೊಂಡು, ವಾತ್ಸಲ್ಯದ ಮಮತೆ ಹರಿಸುವ ಸುಬ್ಬಮ್ಮನ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಿದೆ.
ಮಿಂಚುವಿನೊಂದಿಗೆ ಮಾತನಾಡುತ್ತ ತೋಟದೊಳಗೆ ನುಗ್ಗಿದರೆ ಶಾರದಮ್ಮ ಮರಕ್ಕೊರಗಿ ಚಿಂತಾಕ್ರಾಂತರಾಗಿ ಕುಳಿತುಬಿಟ್ಟಿದ್ದಾರೆ.
“ಏನು ಶಾರದಮ್ಮ ತಿಂಡಿ ತಿಂದ್ರಾ?” ಮಾತನಾಡಿಸಿದಳು.
“ಹೂಂ, ಈಗತಾನೇ ಬಿಸಿಬಿಸಿ ಉಪ್ಪಿಟ್ಟು ತಿಂದು ಬಂದೆ. ಇವತ್ತೆ ಬಂದುಬಿಟ್ರಾ?” ನಗಲೆತ್ನಿಸುತ್ತಾ ಹೇಳಿದರು.
“ಈ ತುಂಟಿ ನನ್ನ ಭಾನುವಾರವೂ ಕರೆಸಿಕೊಳ್ಳುತ್ತಾ ಇದ್ದಾಳೆ. ಅದೇನು, ಎಲ್ಲರೂ ಟೀವಿ ನೋಡ್ತಾ ಇದ್ರೆ ನೀವು ಮಾತ್ರ ಇಲ್ಲಿ ಬಂದು ಕುಳಿತಿದ್ದೀರಾ? ಮತ್ತೆ ಶುರುವಾಯ್ತಾ ಯೋಚನೆ?” ಮೆಲ್ಲನೆ ಗದರಿದಳು.
ಗಳಗಳನೇ ಅತ್ತುಬಿಟ್ಟ ಶಾರದಮ್ಮ, ಇವತ್ತು ನನ್ನ ಮಗಳು ಸತ್ತುಹೋದ ದಿನ, ಇವತ್ತೂ ಅವಳನ್ನ ನೆನೆಸಿಕೊಳ್ಳದೆ ಹೇಗಿರಲಿ? ಪಾಪಿ, ಗಂಡ ಅನಿಸಿಕೊಂಡವನಿಗೆ ಆ ನೆನಪಾದ್ರೂ ಇದೆಯಾ?” ಬಿಕ್ಕಳಿಸಿದರು.
“ಸಮಾಧಾನ ಮಾಡಿಕೊಳ್ಳಿ ಶಾರದಮ್ಮ ಎಲ್ಲಾ ನಮ್ಮ ಕೈಯಲ್ಲಿ ಇದೆಯಾ ? ನಮ್ಮ ಹೃದಯನ ಕಲ್ಲು ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಬದುಕೋದೇ ಸಾಧ್ಯ ಇಲ್ಲ.”
“ನಾನು ಬದುಕಿ ಏನಾಗಬೇಕಾಗಿದೆ? ಯಾರಿಗೋಸ್ಕರ ನಾನು ಬದುಕಿರಬೇಕು ಹೇಳಿ? ೫೦ ಎಕರೆ ಜಮೀನು ಇರೋವವರನ್ನು ಮದುವೆಯಾದ, ಮುದ್ದಾದ ಮಗಳು ಇದ್ದಳು. ಹತ್ತಿರದ ಸಂಬಂಧಿಗೆ ಕೊಟ್ರೆ ಮಗಳು ನನ್ನತ್ರನೇ ಇರುತ್ತಾಳೆ ಅಂತ ಗಂಡ ಬೇಡ ಬೇಡ ಅಂದರೂ ನನ್ನ ತಮ್ಮನ ಮಗಂಗೆ ಕೊಟ್ಟು ಮದ್ವೆ ಮಾಡ್ದೆ, ಪಾಪಿ ಅಳಿಯ ಆಸ್ತಿನೆಲ್ಲ ತನ್ನ ಹೆಸರಿಗೆ ಬರೆದುಕೊಡ್ಲಿ ಅಂತ ಚಿತ್ರಹಿಂಸೆ ಕೊಟ್ಟು ಮಗಳು ಕಣ್ಣೀರಲ್ಲಿ ಕೈತೊಳೆಯೇ ಹಾಗೆ ಮಾಡ್ದ. ಆ ನರಕ ಸಹಿಸಲಾರದೆ ನನ್ನ ಮಗಳು ಕೊರಗಿ ಕೊರಗಿ, ಹೆರಿಗೇಲಿ ಸತ್ತು ಹೋದಳು. ಮಗುವೂ ಉಳಿಯಲಿಲ್ಲ. ಮಗಳು ಸತ್ತ ದುಃಖ ತಡೀಲಾರದೆ ನನ್ನ ಗಂಡನೂ ನನ್ನ ಕೈಬಿಟ್ಟು ಹೋದ್ರು. ಪಾಪಿ ಮುಂಡೆ ಗಂಡ ಅಳಿಯ ಅನ್ನಿಸಿಕೊಂಡವನು ಮೋಸ ಮಾಡಿ ಆಸ್ತಿನೆಲ್ಲ ಕಿತ್ಕೊಂಡು ಬೀದಿಗೆ ತಳ್ಳಿಬಿಟ್ಟ ಹೇಗೆ ಬದುಕಿದ್ದೆ ನಾನು. ಈಗ ಹೇಗೆ ಬದುಕುತ್ತಾ ಇದ್ದೇನೆ….. ಆ ದೇವ್ರು ನನ್ನಂಥಳಿಗೆ ಬೇಗ ಸಾವು ಕೊಟ್ಟುಬಿಡಬೇಕು.”
“ಹಾಗೆಲ್ಲ ಮಾತನಾಡಬಾರದು ಶಾರದಮ್ಮ ಸಾವು ಆದಾಗಿಯೇ ಬರೋವರೆಗೂ ನಾವು ಕಾಯಲೇಬೇಕು. ನೀವು ಚಿಂತೆ ಮಾಡಿಯೇ ಆರೋಗ್ಯ ಕೆಡಿಸಿಕೊಳ್ಳುತ್ತ ಇದ್ದೀರಾ? ಜೀವನದಲ್ಲಿ ಏನು ಬಂದ್ರೂ ಅದನ್ನ ಎದುರಿಸುವ ಸ್ಥೈರ್‍ಯ ಬೆಳೆಸಿಕೊಳ್ಳಬೇಕು. ಈ ಮಿಂಚು ನೋಡಿ, ಹುಟ್ಟಿದ ಕೂಡಲೇ ಬೀದಿಗೆ ಬಿತ್ತು. ಅಪ್ಪ-ಅಮ್ಮ ಯಾರು ಅಂತ ಗೊತ್ತಿಲ್ದೆ ಬೆಳೆಯುತ್ತೆ. ಮುಂದಿನ ಅದರ ಭವಿಷ್ಯ ನೆನೆಸಿಕೊಂಡ್ರೆ ಭಯವಾಗುತ್ತೆ. ಎಲ್ಲರ ಬದುಕಿನಲ್ಲೂ ಏನಾದರೂ ಒಂದು ನೋವು ಇದ್ದೇ ಇರುತ್ತೆ. ಅವುಗಳನ್ನು ಗೆದ್ದಾಗಲೇ ನಾವು ಮನುಷ್ಯರಾಗಿ ಬಾಳಲು ಸಾಧ್ಯ. ನಾಳೆಯಿಂದ ಹೀಗೆಲ್ಲ ಚಿಂತೆ ಮಾಡ್ತಾ ಕೂರಬಾರದು. ಏಳಿ ಮೇಲೆ, ಎಲ್ಲರ ಜತೆ ಸೇರಿದ್ರೆ ನೆನಪುಗಳು ಕಾಡುವುದಿಲ್ಲ. ಬನ್ನಿ, ಒಳಗೆ ಹೋಗೋಣ” ಎಂದು ಶಾರದಮ್ಮನನ್ನು ಬಲವಂತವಾಗಿ ಒಳಗೆ ಕರೆದೊಯ್ದಳು ರಿತು. ಇಲ್ಲಿರುವವರದೆಲ್ಲವೂ ಒಂದೊಂದು ಕಥೆ. ಸಮಾನ ದುಃಖಗಳು. ಆದರೆ ಅವರವರೇ ಸಮಾಧಾನಗೊಂಡು ನೋವೇ ಇಲ್ಲದವರಂತೆ ಸಂತೋಷಪಡುತ್ತ ಇರುತ್ತಾರೆ. ಆದರೆ, ಶಾರದಮ್ಮ ಮಾತ್ರ ತನ್ನ ನೋವಿನಿಂದ ಹೊರಬಂದಿರಲೇ ಇಲ್ಲ.
ಸದಾ ಮಗಳ ನೆನಪು, ಮೋಸ ಮಾಡಿದ ಅಳಿಯನ ಮೇಲೆ ಆಕ್ರೋಶ, ಗಂಡನ ಸಾವನ್ನು ನೆನೆಸಿಕೊಂಡು ಅಳುವುದು, ಸದಾ ಮಂಕಾಗಿ ಕೂರುವುದು, ಒಂದು ವರ್ಷವಾಗಿದ್ದರೂ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲಾಗಿರಲೇ ಇಲ್ಲ ಶಾರದಮ್ಮನಿಗೆ, ಯಾರೊಂದಿಗೂ ಬೆರೆಯಲಾರದೆ ಒಂಟಿತನವನ್ನೇ ಸಂಗಾತಿ ಮಾಡಿಕೊಂಡು ಕೊರಗುವ ಶಾರದಮ್ಮನನ್ನು ಈ ಪ್ರಪಂಚಕ್ಕೆ ತರಲು ರಿತು ಕಷ್ಟಪಡುತ್ತಿದ್ದಳು. ನಿಧಾನವಾಗಿ ಗೆಲುವು ಸಾಧಿಸಬಲ್ಲೆನೆಂಬ ಭರವಸೆ ಕೂಡ ಹುಟ್ಟಿತ್ತು. ಮಧ್ಯಾಹ್ನದವರೆಗೂ ಇದ್ದ ರಿತು ಊಟಕ್ಕೆ ಮನೆಗೆ ಹೊರಟಳು. ವಾರದಲ್ಲಿ ಒಂದು ದಿನವಾದರೂ ತಂದೆ-ತಾಯಿಯೊಂದಿಗೆ ಊಟ ಮಾಡಿ ಕಾಲ ಕಳೆಯುವ ಪ್ರವೃತ್ತಿಯನ್ನು ಎಷ್ಟೇ ಕಷ್ಟವಾದರೂ ಬೆಳೆಸಿಕೊಂಡಿದ್ದಳು.
*****