ಬಿಳಿಮಲ್ಲಿಗೆಯ ಕಂಪು ಕೊಳೆತು
ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ
ತುರುಕಿ ಬಲವಂತ
ಮುಚ್ಚಿ ಹೊರತೋರದಂತೆ
ಅದುಮಿ ಇಟ್ಟು ಬಿಟ್ಟರೆ.
ಕೊಳೆಯದಂತಿಡಬೇಕು,
ಕೆಡದಂತಿರಬೇಕು.
ಮಲ್ಲಿಗೆ ಅರಳುವುದು
ಎಲರ ಅಲೆಯೊಳಗೆ ತೇಲಿ
ಪರಿಮಳ ಸಾಲೆಯಾಗಿ
ಪರಮಲೋಕವನ್ನೇ ಕಣ್ಣಲ್ಲಿ ಮೆರೆಸುವುದು
ಗೊತ್ತಲ್ಲ ನಿನಗೆ,
ಪ್ರೇಮದ ಕಣ್ಣು ತೆರೆದು ಕೊಂಡಷ್ಟು
ಮುದಗೊಳ್ಳುತ್ತದೆ ಮಲ್ಲಿಗೆ ಮನಸ್ಸು
ಎಷ್ಟೆಲ್ಲಾ ಜೀವಗಳ ಸೆಳೆವ ಯೋಗ
ಹೂದಾನಿಯಲ್ಲಿ ಬಿರಿದ ಮೊಗ್ಗು,
ಬಯಲ ಕೊನೆಯಲ್ಲಿ ಅರಳಿದ ಹೂ
ಇಬ್ಬನಿಯಿಂದಲೇ ಒದ್ದೆಯಾಗುತ್ತವೆ
ಮುಂಜಾನೆಯ ಹತ್ತಿ ಬಿಳುಪಿನ
ಹೊಸ ಭಾಷ್ಯ
ಉಕ್ಕಿ ಪಲ್ಲವಿಸುತ್ತವೆ
ಗಿಡ ಬಳ್ಳಿ ಚಿಗುರು ಹೂ ಹಣ್ಣು
ಕಪ್ಪುಮಣ್ಣಿನ ಸಾರ ಬೇರು
ಕಾಂಡದಲ್ಲೆಲ್ಲಾ ಕಸುವುಕ್ಕಿಸಿ
ಗರಿಗೆದರುತ್ತದೆ ಬಯಕೆ
ಕಾಮದ ತೋರಬೆರಳಿಗೆ
ಮಲ್ಲಿಗೆ ಹಾರ ಪ್ರೇಮದುಂಗುರ ತೊಡುಗೆ
ಘಮ್ ಘಮಲು…
ಮಲ್ಲಿಗೆಯ ಮೈದೊಗಲ ಮಾಯೆ
ದಾಹದ ನಾಲಿಗೆಗಳ ತೆರೆದುಬಿಡುವುದು
ಮುತ್ತುವ ದುಂಬಿಗಳ ಮೆಚ್ಚು ನೆಚ್ಚು
ಕಕ್ಕುವ ಹಿಕ್ಕೆಯಾಗಲುಬಹುದು
ಮಲ್ಲಿಗೆ ನುಣುಪುತನ
ಮಿದುತನ ವಿಷಮ ಬಾಹುಗಳಲ್ಲಿ
ಬಂಧಿಯಾಗಿ ಪುಡಿಗಟ್ಟಿ ಹೋಗದಂತಿರಬೇಕು
ಗೊತ್ತು ಮಾಡಿಕೊಳ್ಳಬೇಕು
ಕಿರು ನಾರೇ ಆದರೂ ಸಾಕು
ಹೆಣಿಗೆಯಲ್ಲಿ ಹೊದ್ದ ಗಡಸು ಬಂಧ
ಮಲ್ಲಿಗೆ ಮುದುರಿಕೊಂಡರೂ,
ಕಮರಿಹೋದರೂ
ಕಳೆದುಕೊಳ್ಳದಂತೆ ಪರಿಮಳದ ಸ್ನಿಗ್ಧ ಆನಂದ
ಸದಾ ಕಾಯುವುದು ಹೆಣ್ಣಹೆರಳಿಗೆ
ಮಾಲೆಯಾಗಿ
ಇಲ್ಲ ಗುಡಿಯ ಗಣಪನ
ಕೊರಳ ಹಾರವಾಗಿ.
*****