ಎಲ್ಲಿ ಮಾಯವಾಗುವಿರಿ ಓ ಚುಕ್ಕಿ ಚಂದ್ರಮರೆ!
ಹಗಲೆಲ್ಲಾ
ನೀವು ಅಷ್ಟೊಂದು ಜನ… ಒಟ್ಟಿಗೆ.
ರಾತ್ರಿ ಅಷ್ಟೊಂದು ಮೆರೆಯುವಿರಿ
ಮೀಯಿಸಿ
ಜಗವನ್ನೆಲ್ಲಾ ತನಿ ತನಿ ಹಾಲ ಬೆಳಕಿನಲಿ.
ಓಹ್! ಅನುಭವಿಸಬಹುದದನು ಧಾರಾಳವಾಗಿ
ವಿವರಿಸಲಾಗದು
ಆ ಅಲೌಕಿಕ ಪ್ರಭಾವಳಿ.
ಸಂಜೆ ಮಂದ, ಮಂದವಾಗಿ
ರಾತ್ರಿ ಏರಿದಂತೆ ಗಾಢವಾಗಿ
ಸಂಮೋಹಿಸಿ ಕೆಡವಿ ಬಿಡುವಿರಿ.
ನಡೆ ಸಾಗಿದಂತೆ ರಾತ್ರಿ ಸರಿಯುತ್ತ
ಮಂಕಾಗುತ್ತ ಸಾಗುವಿರಿ
ಉಳಿಸಿ ತೆರಳುವಿರಿ ತುಸುವೆ ಉಷೆಯಲ್ಲಿ
ಆ ದಿವ್ಯ ಸೊಬಗಿನ ಅಚ್ಚ.
ದಿನಕರನು ಬರುವನು
ತೆರೆಗೆ ಸರಿಸುವನು ನಿಮ್ಮನು
ಬೆಳಗುವನು ಬರುತ್ತ, ಹೋಗುತ್ತ ಸೌಮ್ಯನಾಗಿ
ನಡುವೆ ಪ್ರಖರನಾಗಿ.
ಯುಗ ಯುಗಗಳಲಿ ಬೆಳಗುತ್ತ ಬಂದಿರುವಿರಿ ಹೀಗೆ ನಿಚ್ಚಳ
ಇರಬೇಕು ಹಾಗೇ ಈ ಬೆಳಕು ಬಾಳಿನಲಿ ನಿರಂತರ
ಇಲ್ಲದಿರೆ ಏನಿರುತ್ತೆ ಈ ಜಗದಲಿ?
ಬರೀ ಕತ್ತಲೆ… ಕತ್ತಲೆ.
*****