ಒಳ್ಳೆ
ಉಗಾದಿ ಹೊಂಗೆ ಮರದ್ಹಂಗೆ
ತಬ್ಬೊ ಹಂಗಿದ್ದೆ…
ನೋಡಿದ ಯಾರಿಗೂ
ಇನ್ನೊಂದ್ಸಾರಿ
ನೋಡೋ ಅಂಗಿದ್ದೆ
ಹೇಳೋದೇನು
ನಿನ್ನನ್ನೋಡಿದ ಮಾನವ್ರೆಲ್ಲಾ
ಅಬ್ಬಬ್ಬಾ! ಏನು ಚೆಲುವು; ಎಂತಾ ಸಿರಿಗೊಂಬೆ
ಕೆಟ್ಟ ಕಣ್ಣಿಲಿ ನೋಡಿದ್ರೆ
ಸಿಡಿಯಂಗೈದಳನ್ತಿದ್ರು.
ಏನಿಲ್ಲ ಅಂದ್ರು
ಕೊನೆಗೆ
ನಿನ್ನ ಕಯ್ಯಾರ
ಒಂದು ಲೋಟ ನೀರನ್ನಾದ್ರು ಕುಡಿಬೇಕು
ಅನ್ಸೋ ಅಂಗಿದ್ದೆ.
ನಿನ್ನ ಗಮನ ಸೆಳ್ಯೋಕೆ
ಒಂದು ಸೊಲ್ಲು ನುಡಿಸೋಕೆ
ತಮ್ಮ ತಮ್ಮಲ್ಲೆ ಪಂದ್ಯ ಕಟ್ಕೊತಿದ್ರು
ಏನೇನೋ ಮಾಡ್ತಿದ್ರು
ನಮ್ಮ ಊರ ಹುಡುಗರು.
ನೀನು
ಸುಮ್ನೆ ಅಂಗೆ ನೋಡಿದ್ರು
ಉಪ್ಚಾರಕೆಂದೆ ಆಡಿದ್ರು
ಸ್ವರ್ಗ ಸಿಕ್ಕಂಗಾಡ್ತಿದ್ರು.
ಏನ್ ತಿಂದು ಮಾಡಿದ್ರು
ಒಂದ್ಸಾರಿನಾದ್ರು ನೀನು
ಕಣ್ಣಿಗೆ ಬೀಳದಿದ್ರೆ
ಆವೊತ್ತೆಲ್ಲಾ…
ಏನೋ ಕಳಕಂಡಂಗೆ… ಒಳಗೊಳಗೆ
ನೀನು
‘ಸ್ವಾಮಿ’ ಹುಟ್ಟಾಕಿಂತ ಮುಂಚೆ
ಮನೆ ಕೆಲ್ಸ ಎಲ್ಲಾ ಮುಗ್ಸಿ
ನಿತ್ಯದಂತೆ ಹೋಲಕೆ ಹೊರಟು ನಿಂತರೆ…
ಎದ್ದ ಕೂಡ್ಲೆ
ನಿನ್ನ ಕಂಡು
ಖುಷಿಗೊಂಡ ಹಕ್ಕಿ ಪಕ್ಷಿ
ಉದಯರಾಗ ಹಾಡ್ತಿದ್ವು.
ಆತುರ ತಡೆಯದ ಆ ‘ಸೂರ್‍ಜ’
ನಿನ್ನ ನೋಡಾಕೆ
ಮರ ಮಂಡಿ ತೆರೆ ಸರ್‍ಸಿ
ಇಣಕ್ ಹಾಕಿದ್ದ.
ನಿನ್ನ ಹುಚ್ಚು ತುಂಬಿಕೊಂಡ
ಹಾದಿಬದಿ ಗಿಡ ಮರ
ಒಮ್ಮೆಗೆ ಎಚ್ಚೆತ್ತು…
ನಿಂತಲ್ಲೆ ಮುಲು ಮುಲುಗುಟ್ತಿದ್ವು.
ನಮ್ಮನ್ನಾರು ಕೇಳ್ತಾರಕ್ಕ
ನಿನ್ನ ತಲ್ಯಾಗಾದ್ರು ಇದ್ರೆ ಒಂದು ಸಾರ್ಥಕ
ನನ್ನ ಎತ್ಗೊ ನನ್ನ ಎತ್ಗೊ
ಬಾರೆ… ನಮ್ಮಕ್ಕ ಎಂದು
ಬಾಯ್ಬಿಟ್ ಕರಿತಿದ್ವು
ಬಣ್ಣ ಬಣ್ಣದ ಬಳ್ಳಿ ಬೇಲಿ ಹೂವು.
ಒಂದೊಂದು
ಒಂದೊಂದು ರೀತಿ
ಸವಿ ಸವಿ ಗಂಧ ಸೂಸಿ
ಪೈಪೋಟಿ ನಡೆಸ್ತಿದ್ವು.
ಹೋಗ್ಗ! ಆ ಮಣ್ಣಿಗೂ ಏನು ಮೋಹ
ನಾನ್ ಬೇರೆ ಕಾಣೆ
ಇಬ್ಬನಿ ಬಿದ್ದು ತಣ್ಣಗಾಗಿದ್ರು
ನಿನ್ನ ಪಾದ ಸೋಕಿದ ಕೂಡ್ಲೆ
ಮೆತ್ಗಂಬುಡ್ತಿತ್ತು.
*****