ಸೌರಶಕ್ತಿ : ಬಳಕೆಯಲ್ಲಿನ ತಿಳುವಳಿಕೆ

ಸೌರಶಕ್ತಿ : ಬಳಕೆಯಲ್ಲಿನ ತಿಳುವಳಿಕೆ

ಭೂಮಿಯ ಮೇಲೆ ಬೀಳುವ ಒಂದು ದಿನದ ಸೌರಶಕ್ತಿ ಸಾವಿರಾರು ವರ್‍ಷಗಳವರೆಗೆ ವಿಶ್ವದಲ್ಲಿರುವ ಎಲ್ಲಾ ಇಂಧನಗಳನ್ನು ದಹಿಸಿ ಪಡೆಯುವ ಶಕ್ತಿಯಷ್ಟು. ಇಂಥ ಪ್ರಚಂಡ ಶಕ್ತಿ ಸದಾ ಉಚಿತವಾಗಿ ನಮಗೆ ಲಭ್ಯವಾಗುತ್ತಿದ್ದರೂ, ಅದನ್ನು ನಮ್ಮ ಆಧುನಿಕ ತಂತ್ರಜ್ಞಾನದಲ್ಲಿ ಹಿನ್ನೆಯಲ್ಲಿ ಉಪಯೋಗಿಸುವ ಪರಿಪಾಠ ನಮ್ಮಲ್ಲಿ ಸಮಗ್ರವಾಗಿ ಬೆಳೆದುಬಂದಿಲ್ಲ. ಕಾರಣ ಆ ಬಗೆಗಿನ ಸರಿಯಾದ ತಿಳುವಳಿಕೆ, ಪರಿಕರಗಳ ಜೋಡಣೆಯಲ್ಲಿರುವ ಪರಿಜ್ಞಾನ ಕುರಿತಂತೆ ಸಾರ್‍ವತ್ರಿಕವಾಗಿ ತಿಳಿಸುವ ಅಗತ್ಯವಿದೆ. ಇದರಿಂದ ಪರಿಸರ ಮಾಲಿನ್ಯವಿಲ್ಲದ ಆರೋಗ್ಯವಂತಾದ ಮಾನವ ಉಪಯೋಗಿ ವಿಶ್ವವಾಗಿ ಪರಿವರ್‍ತಿಸಲು ಸಾಧ್ಯವಿದೆ.

ಸೂರ್‍ಯ ಸೌರಮಂಡಲದ ಕೇಂದ್ರ ಬಿಂದು. ದೈತ್ಯಾಕಾರದ ಬೆಂಕಿಯ ಗೋಳ. ಅದರ ವ್ಯಾಸ ಸುಮಾರು ೮೬೬,೦೦೦ ಮೈಲುಗಳು. ಸೂರ್‍ಯನಿಗೂ ಭೂಮಿಗೂ ಇರುವ ದೂರ ೯ ಕೋಟಿ ೩೦ ಲಕ್ಷ ಮೈಲುಗಳು. ಸೂರ್‍ಯನ ಶರೀರದಿಂದ ನಿರಂತರವಾಗಿ ಶಕ್ತಿಯು ಎಲ್ಲ ದಿಕ್ಕುಗಳಲ್ಲಿಯೂ ಹೊರಹೊಮ್ಮುತ್ತಿರುತ್ತದೆ. ಇದರಲ್ಲಿ ಅಲ್ಪಭಾಗವು ಮಾತ್ರ ಭೂಮಿ ಮತ್ತಿತರ ಗ್ರಹಗಳ ಮೇಲೆ ಬೀಳುತ್ತದೆ. ಭೂಮಿಯ ಮೇಲೆ ಬೀಳುವ ಶಕ್ತಿಯ ಬಹುಭಾಗವನ್ನು ಭೂಮಿಯ ಅಂತರಿಕ್ಷವು ಹೀರಿಬಿಡುತ್ತದೆ. ಹಸಿರು ಸಸ್ಯಗಳು ಒಟ್ಟು ಸೌರ ಶಕ್ತಿಯ ಶೇಕಡಾ ೦.೨ ರಷ್ಟು ಮಾತ್ರ ಉಪಯೋಗಿಸಿಕೊಂಡು ಆಹಾರ ತಯಾರಿಸಿಕೊಳ್ಳುತ್ತವೆ.

ಪ್ರತಿ ನಿಮಿಷ ಭೂಮಿಯ ಪ್ರತಿ ಚದರ ಸೆಂ.ಮೀ. ಹೊರಮೈ ಮೇಲೆ ೨ ಕೆಲೋರಿಯಷ್ಟು ಶಾಖ ಬೀಳುತ್ತಿದೆ. ಭೂಮಿಗೆ ಒಂದು ದಿನದಲ್ಲಿ ಸಿಗುವ ಸೌರಶಕ್ತಿ ಸಾವಿರಾರು ವರ್‍ಷಗಳವರೆಗೆ ಪ್ರಪಂಚದಲ್ಲಿರುವ ಎಲ್ಲ ಇಂಧನಗಳನ್ನು ಉರಿಸಿ ಪಡೆಯುವ ಶಕ್ತಿಯಷ್ಟು! ಇಂಥ ಪ್ರಚಂಡಶಕ್ತಿ ಸದಾ ಉಚಿವಾಗಿ ಹರಿಯುತ್ತಿದ್ದರೂ ಇದನ್ನು ಪೂರ್‍ಣವಾಗಿ ಉಪಯೋಗಿಸುವ ವಿಧಾನಗಳನ್ನು ಇದೂವರೆಗೆ ರಚಿಸಿಲ್ಲ.

ಭೂಮಿಯ ಮೇಲಿರುವ ಎಲ್ಲ ಬಗೆಯ ಶಕ್ತಿಗಳೂ ಒಂದಲ್ಲ ಒಂದು ರೀತಿಯಲ್ಲಿ ಸೌರಶಕ್ತಿಯಿಂದಲೇ ಹುಟ್ಟಿದುವು. ನಮಗೆಲ್ಲ ಗೊತ್ತಿರುವಂತೆ ಗಿಡಮರಗಳ ಹಸಿರು ಬಣ್ಣಕ್ಕೆ ‘ಕ್ಲೋರೋಫಿಲ್’ ಎಂಬ ರಾಸಾಯನಿಕ ವಸ್ತುವೇ ಕಾರಣ. ಸೂರ್‍ಯನ ಬೆಳಕು ಎಲೆಗಳ ಮೇಲೆ ಬಿದ್ದಾಗ ಕ್ಲೋರೋಫಿಲ್ ಇಂಗಾಲದ ಡೈ ಆಕ್ಸೈಡ್‌ನ್ನು ವಾತಾವರಣದಿಂದ ಎಳೆದುಕೊಂಡು ಇಂಗಾಲ ಮತ್ತು ಆಮ್ಲಜನಕಗಳಾಗಿ ವಿಭಜಿಸುತ್ತದೆ. ಇಂಗಾಲವನ್ನು ಶೇಖರಿಸಿಟ್ಟುಕೊಂಡು ಆಮ್ಲಜನಕವನ್ನು ಬಿಟ್ಟುಬಿಡುತ್ತವೆ. ಬೇರಿನ ಮುಖಾಂತರ ಬರುವ ನೀರು ಆಮ್ಲಜನಕದೊಡನೆ ಕೂಡಿ ಶರ್‍ಕರ ಪಿಷ್ಠ (ಕಾರ್‍ಬೋಹೈಡ್ರೇಟ್) ಎಂಬ ಆಹಾರ ವಸ್ತುವಾಗುತ್ತದೆ. ಸೂರ್‍ಯನ ಶಾಖದ ಸಹಾಯದಿಂದ ಶರ್‍ಕರಪಿಷ್ಠವನ್ನು ತಯಾರಿಸುವ ಈ ವಿಧಾನಕ್ಕೆ ದ್ಯುತಿಸಂಶ್ಲೇಷಣ (ಫೋಟೋಸಿಂಥೆಸಿಸ್) ಎಂದು ಕರೆಯುತ್ತೇವೆ. ಹೀಗೆ ದ್ಯುತಿಸಂಶ್ಲೇಷಣೆಯಿಂದ ಎರಡು ಉಪಯೋಗಗಳಿವೆ. ಒಂದು – ಮಾನವನು ಜೀವಿಸುವುದಕ್ಕೆ ಅತಿ ಮುಖ್ಯವಾದ ಆಮ್ಲಜನಕದ ಬಿಡುಗಡೆ. ಎರಡು – ಗಿಡಮರಗಳ ಬೆಳವಣಿಗೆಗೆ ಅನುಕೂಲವಾದ ಶರ್‍ಕರಪಿಷ್ಠದ ತಯಾರಿಕೆ. ನಾವು ಮರಗಳನ್ನು ಕಡಿದು ಉರಿಸಿದಾಗ ಸೂರ್‍ಯನ ಶಾಖದಿಂದ ಉತ್ಪತ್ತಿಯಾಗಿದ್ದ ಇಂಗಾಲವು ಆಮ್ಲಜನಕದ ಜತೆಯಲ್ಲಿ ಸೇರಿ ಉರಿದು ಶಾಖವನ್ನು ಉತ್ಪತ್ತಿಮಾಡುತ್ತದೆ. ಕಟ್ಟಿಗೆ ಮಾತ್ರವಲ್ಲ ಕಾಗದ, ಬಟ್ಟೆ ಮುಂತಾದ ಎಲ್ಲ ದಹ್ಯ ವಸ್ತುಗಳೂ ನೇರವಾಗಿ ಅಥವಾ ಪ್ರಕಾರಂತವಾಗಿ ದ್ಯುತಿಸಂಶ್ಲೇಷಣೆಯಿಂದಲೇ ಉಂಟಾದ ವಸ್ತುಗಳು.

ಲಕ್ಷಾಂತರ ವರ್‍ಷಗಳ ಹಿಂದೆ ಈ ಜಗತ್ತಿನಲ್ಲಿ ಮನುಷ್ಯನ ಅಥವಾ ಪ್ರಾಣಿಗಳ ವಿಕಾಸವಾಗುವುದಕ್ಕೆ ಮುಂಚೆ ಭೂಮಿಯ ಮೇಲಿನ ಜವುಗು ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳು ಬೆಳೆದಿದ್ದವು. ಕಾಲ ಸರಿದಂತೆ ಈ ಕಾಡುಗಳ ಗಿಡಮರಗಳು ಒಣಗಿ ಭೂಗತವಾದವು. ಇವುಗಳ ಮೇಲೆ ನೂರಾರು ಅಡಿಗಳವರೆಗೆ ಮಣ್ಣು ಶೇಖರವಾಯಿತು. ಲಕ್ಷಾಂತರ ವರ್‍ಷಗಳ ಅತಿಯಾದ ಕಾವು ಮತ್ತು ಒತ್ತಡಕ್ಕೆ ಒಳಗಾದ ಈ ಗಿಡಮರಗಳು ಪೆಟ್ರೋಲಿಯಂ ಮತ್ತು ಕಲ್ಲಿದ್ದಲುಗಳಾಗಿ ಮಾರ್‍ಪಟ್ಟ ವಿಷಯ ಎಲ್ಲರಿಗೂ ತಿಳಿದಿದೆ. ಹೀಗೆ ನಾವು ಕಟ್ಟಿಗೆ, ಕಲ್ಲಿದ್ದಲು, ಪೆಟ್ರೋಲ್ ಮುಂತಾದ ಫಾಸಿಲ್ ಇಂಧನಗಳನ್ನು ಉರಿಸಿದಾಗ ಲಕ್ಷಾಂತರ ವರ್‍ಷಗಳ ಹಿಂದೆ ಕೂಡಿಟ್ಟ ಸೌರಶಕ್ತಿಯನ್ನು ಬಿಡುಗಡೆ ಮಾಡುತ್ತೇವೆ ಅಷ್ಟೇ.

ಹೀಗೆ ವಿಶ್ವದಲ್ಲಿರುವ ಎಲ್ಲ ವಸ್ತುಗಳ ಪೈಕಿ ನಮಗೆ ಸೂರ್‍ಯನೇ ಅತ್ಯಂತ ಪ್ರಮುಖ ಮತ್ತು ಉಪಯುಕ್ತನಾದವನು. ಭೂಮಂಡಲದಲ್ಲಿರುವ ಸಕಲ ಜೀವರಾಶಿಗಳಿಗೆ ಸೂರ್‍ಯನೇ ಮೂಲಾಧಾರನು. ಹೀಗಾಗಿ ಸೂರ್‍ಯನಿಗೆ ಅನ್ನದಾತ, ದೇವ ಜಗದಾಧಾರ ಎಂದು ಕರೆಯಬಹುದು.

ಸೌರಶಕ್ತಿಯ ಬಳಕೆ ಮನುಷ್ಯನಿಗೆ ಹೊಸದೇನಲ್ಲ! ಅನಾಧಿಕಾಲದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತಲೇ ಬಂದಿದ್ದಾನೆ. ಬಿಸಿಲಿನಲ್ಲಿ ಬಟ್ಟೆ, ಆಹಾರಧಾನ್ಯ ಇತ್ಯಾದಿಗಳು ಒಣಗಿಸುವಲ್ಲಿಂದ ಹಿಡಿದು ಸೌರಶಕ್ತಿಯ ಬಳಕೆ ಪ್ರಾರಂಭವಾಗಿದೆ. ಆರ್‍ಕಿಮಿಡೀಸ್ ದೊಡ್ಡದೊಡ್ಡ ಕನ್ನಡಿಗಳನ್ನು ಉಪಯೋಗಿಸಿ ಸಮುದ್ರದ ಮೇಲೆ ತೇಲಿಬರುತ್ತಿದ್ದ ವೈರಿಗಳ ಹಡಗುಗಳ ಮೇಲೆ ಸೂರ್‍ಯಕಿರಣಗಳನ್ನು ಕೇಂದ್ರೀಕರಿಸಿ ಸುಟ್ಟೆನೆಂಬ ಕಥೆ ಪ್ರಚಲಿತದಲ್ಲಿದೆ.

ಸೂರ್‍ಯನನ್ನು ಅನೇಕ ವಿಧಗಳಲ್ಲಿ ಬಳಸಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಸೌರ ಶಕ್ತಿಯನ್ನು ಕುರಿತಾದ ಆಧುನಿಕ ಸಂಶೋಧನೆ ಪ್ರಾರಂಭವಾದದ್ದು ೧೯೩೦ರ ದಶಕದಲ್ಲಿ. ಅಂದಿನಿಂದ ನಡೆದು ಬಂದ ಸಂಶೋಧನೆಗಳ ಫಲವಾಗಿ ಇಂದು ಸೌರಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ಬಳಸಿಕೊಳ್ಳಬಹುದಾದಂತಹ ತಂತ್ರಜ್ಞಾನ ಬೆಳೆದಿದೆ. ಕಡಿಮೆ ಖರ್‍ಚಿನಲ್ಲಿ ಸುಲಭವಾಗಿ ರಚಿಸಬಹುದಾದ ಅನೇಕ ಸೌರಯಂತ್ರಗಳನ್ನು ವಿಜ್ಞಾನಿಗಳು ರೂಪಿಸಿದ್ದಾರೆ. ಅವುಗಳಲ್ಲಿನ ಕೆಲವನ್ನು ಕುರಿತು ಮಾತ್ರ ಇಲ್ಲಿ ಬರೆಯಲಾಗಿದೆ.

ಸೌರ ಜಲ ತಪ್ತಕಗಳು

ಸೌರಶಕ್ತಿಯನ್ನು ಉಪಯೋಗಿಸಿಕೊಂಡು ನೀರನ್ನು ಕಾಯಿಸುವ ಸಾಧನಗಳಿಗೆ ಸೌರಜಲ ತಪ್ತಕ (ಸೋಲಾರ್‍ ವಾಟರ್‍ ಹೀಟರ್‍ಸ್)ಗಳೆನ್ನುವರು. ಮನೆಬಳಕೆಗೆ ಅಗತ್ಯವಿರುವ ಬಿಸಿನೀರನ್ನು ಪಡೆಯಲು ಇವು ಇಂದು ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಸೌರ ಒಲೆಗಳು

ಅಡುಗೆ ಮಾಡಲು ನಮ್ಮ ದೇಶದಲ್ಲಿ ಬಹಳಷ್ಟು ಕಟ್ಟಿಗೆ, ಸಗಣಿ, ಬೆರಣಿ ಮತ್ತು ಇನ್ನಿತರೆ ತ್ಯಾಜ್ಯ ವಸ್ತುಗಳು, ಇಂಧನ ಮೂಲಗಳು ಉಪಯೋಗವಾಗುತ್ತಿವೆ. ಇವುಗಳನ್ನು ಉಳಿಸಲು ಯಾವುದೇ ಖರ್‍ಚಿಲ್ಲದೇ ಸೌರ ಒಲೆ (ಸೋಲಾರ್‍ ಓವೆನ್) ಬಳಸಬಹುದು.

ಫಸಲು ಒಣಗಿಸುವ ಸೌರ ವ್ಯವಸ್ಥೆ

ಭತ್ತ ಮುಂತಾದ ಬೆಳೆಗಳನ್ನು ಒಣಗಿಸಲು ಜಗತ್ತಿನಾದ್ಯಂತ ರೈತರು ಸೂರ್‍ಯನ ಶಾಖವನ್ನು ಉಪಯೋಗಿಸುತ್ತಾರೆ. ಕಷ್ಟಪಟ್ಟು ಬೆಳೆದ ಫಸಲನ್ನು ಹಾದಿ-ಬೀದಿ-ಬಯಲಲ್ಲಿ ಹರಡುವುದರಿಂದ ನಷ್ಟವಾಗಬಹುದು. ಇದನ್ನು ತಪ್ಪಿಸಲು ಫಸಲು ಒಣಗಿಸುವ ವ್ಯವಸ್ಥೆ (ಸೋಲಾರ್‍ ಕ್ರಾಪ್ ಡ್ರೈಯರ್‍) ಯನ್ನು ಸುಲಭವಾಗಿ ಹೆಚ್ಚು ಖರ್‍ಚಿಲ್ಲದೇ ಮಾಡಿಕೊಳ್ಳಬಹುದು.

ಫಸಲು ಒಣಗಿಸುವ ಸೌರ ವ್ಯವಸ್ಥೆಯ ಒಂದು ಮಾದರಿಯು ಉಷ್ಣ ಸಂಗ್ರಾಹಕ, ಫಸಲಿನ ಪೆಟ್ಟಿಗೆ ಮತ್ತು ಬಿರುಗಾಳಿ ಕೊಳವೆ ಎಂಬ ಮೂರು ಭಾಗಗಳನ್ನು ಹೊಂದಿದೆ. ಹೆಚ್ಚು ಉಷ್ಣ ಹೀರಿಕೊಳ್ಳುವ ಸಲುವಾಗಿ ಸಂಗ್ರಾಹಕದ ಒಳ ಮೈಗೆ ಕಪ್ಪು ಬಣ್ಣ ಬಳೆದಿರುತ್ತಾರೆ. ಇದನ್ನು ಪಾರದರ್‍ಶಕ ಆವರಣದಿಂದ ಮುಚ್ಚಿರುತ್ತಾರೆ. ಇದು ಸೂರ್‍ಯಕಿರಣ ಒಳಪ್ರವೇಶಿಸುವಂತೆ ಮಾಡುತ್ತದೆ. ಆದರೆ ಹೊರಹೋಗದಂತೆ ತಡೆಯುತ್ತದೆ. ಬಿಸಿಯಾದ ಗಾಳಿ ಫಸಲಿನ ಪೆಟ್ಟಿಗೆಯಲ್ಲಿರುವ ರಂಧ್ರಗಳ ಮೂಲಕ ಮೇಲೇರಿ ಒಣಗಿಸುತ್ತದೆ. ಫಸಲಿನ ಪೆಟ್ಟಿಗೆಯಿಂದ ಹೊರಬಂದ ಬಿಸಿಗಾಳಿ ಕೊಳವೆಯ ಮೂಲಕ ಹೊರ ಹೋಗುತ್ತದೆ.

ಸೌರಭಟ್ಟಿ ಯಂತ್ರ

ಸೌರಶಕ್ತಿಯನ್ನು ಉಪಯೋಗಿಸಿ ನೀರನ್ನು ಭಟ್ಟಿಗೊಳಿಸಿ ಕುಡಿಯಲು (ಸೋಲಾರ್‍ ಸ್ಟಿಲ್ಲ) ಉಪಯೋಗಿಸಬಹುದು. ನಮ್ಮ ದೇಶದ ಗುಜರಾತಿನ ಭಾವಾನಗರದಲ್ಲಿ ೩೨೨ ಚ.ಮೀ. ವಿಸ್ತೀರ್‍ಣದ ಒಂದು ಭಟ್ಟಿಯಂತ್ರ ಸ್ಥಾಪಿಸಲಾಗಿದೆ. ಇದು ದಿನಂಪ್ರತಿ ೩೯೦ ಲೀಟರ್‌ಗಳಷ್ಟು ಭಟ್ಟಿ ಇಳಿಸಿದ ನೀರನ್ನು ಒದಗಿಸುತ್ತದೆ.

ಸೌರ ವಾಯು ತಪ್ತಕಗಳು

ಇದು ಸೌರಶಕ್ತಿಯಿಂದ ಗಾಳಿಯನ್ನು ಕಾಯಿಸುವ ವ್ಯವಸ್ಥೆ. ತಂಪು ದೇಶಗಳಲ್ಲಿ ಚಳಿಗಾಲದ ದಿನಗಳಲ್ಲಿ ಮನೆಗಳನ್ನು ಬೆಚ್ಚಗಿಡಲು ಸೌರಶಾಖದ ಈ ನವೀನ ಮಾದರಿಯನ್ನು (ಸೋಲಾರ್‍ ಏರ್‍ ಹೀಟರ್‍ಸ್) ಉಪಯೋಗಿಸಬಹುದು. ಉಷ್ಣತೆ ತುಂಬಾ ಕಡಿಮೆ ಇರುವ ದೇಶಗಳಲ್ಲಿ ಮನೆಗಳನ್ನು ಬೆಚ್ಚಗಿಡುವ ಸಲುವಾಗಿ ಅಧಿಕ ಇಂಧನ ಬಳಕೆಯಾಗುತ್ತಿದೆ.

ಸೌರ ಕುಲುಮೆಗಳು

ಸೂರ್‍ಯನ ಕಿರಣಗಳನ್ನು ಒಗ್ಗೂಡಿಸಿ ಅಧಿಕ ಉಷ್ಣತೆಯನ್ನು ಉಂಟುಮಾಡುವ ವ್ಯವಸ್ಥೆಯೇ ಸೌರಕುಲುಮೆ. (ಸೋಲಾರ್‍ ಫರ್‍ನೇಸ್) ಭೂತಗನ್ನಡಿಯೊಂದನ್ನು ಹಿಡಿದು ಸೂರ್‍ಯನ ಕಿರಣಗಳನ್ನು ಕಾಗದದ ಚೂರಿನ ಮೇಲೆ ಕೇಂದ್ರೀಕರಿಸಿದರೆ ಸ್ವಲ್ಪ ಹೊತ್ತಿನಲ್ಲಿಯೇ ಕಾಗದ ಉರಿಯುತ್ತದೆ. ಇದೇ ತತ್ವದ ಆಧಾರದ ಮೇಲೆ ಸೌರಕುಲುಮೆಗಳು ಕೆಲಸ ಮಾಡುತ್ತವೆ.

ಸೌರ ವಿದ್ಯುತ್ ಕೋಶಗಳು

ಸೌರ ವಿದ್ಯುತ್ ಕೋಶಗಳನ್ನು ಉಪಯೋಗಿಸಿ ವಿದ್ಯುತ್ತನ್ನು ಉತ್ಪಾದಿಸಬಹುದು. ಸಿಲಿಕಾನ್ ಧಾತುವಿನಿಂದ ಸೌರ ವಿದ್ಯುತ್ ಕೋಶ ತಯಾರಿಸಬಹುದು. ಸಿಲಿಕಾನನ್ನು ಮೊದಲು ಕರಗಿಸಿ ಒಂದು ವಿಶಿಷ್ಟ ವಿಧಾನದಿಂದ ಶುದ್ಧ ಸಿಲಿಕಾನಿನ ಹರಳು ಬೆಳೆಯುವಂತೆ ಮಾಡಲಾಗುತ್ತದೆ. ಹೀಗೆ ಬೆಳೆದ ೫ ರಿಂದ ೮ ಸೆಂ. ಮೀ. ವ್ಯಾಸದ ಉರುಳಿಯಾಕಾರದ ಸಿಲಿಕಾನಿಂದ ೦.೪ ಮಿ.ಮೀ ದಪ್ಪವಿರುವ ಬಿಲ್ಲೆಗಳನ್ನು ಕತ್ತರಿಸಿಕೊಳ್ಳಲಾಗುತ್ತದೆ. ಇಷ್ಟು ತೆಳುವಾದ ಬಿಲ್ಲೆಯ ಒಂದೆಡೆ ಬೋರಾನ್ ಮತ್ತೊಂದೆಡೆ ರಂಜಕದ ಲೇಪನ ಮಾಡಲಾಗುತ್ತದೆ. ರಂಜಕದ ಲೇಪನವಿರುವ ಮುಖಕ್ಕೆ ಲೋಹವೊಂದನ್ನು ಅಂಟಿಸಿ ವಿದ್ಯುತ್ ಕೋಶವನ್ನು ತಯಾರಿಸುತ್ತಾರೆ. ಹೀಗೆ ತಯಾರಿಸಿದ ಒಂದು ಸಿಲಿಕಾನ್ ವಿದ್ಯುತ್ ಕೋಶವು ೦.೫ ವೋಲ್ಟ್ ನಷ್ಟು ವಿದ್ಯುತ್ ಉತ್ಪಾದಿಸುತ್ತದೆ. ಆದರೆ ಇಲ್ಲಿಯ ಒಂದು ತೊಡಕೆಂದರೆ ಸೌರ ವಿದ್ಯುತ್ ಕೋಶದ ತಯಾರಿಕೆಗೆ ಅತ್ಯಂತ ಶುದ್ಧವಾದ ಸಿಲಿಕಾನ್ ಬೇಕು. ಇದು ತುಂಬಾ ದುಬಾರಿ.

ಸೌರಶಕ್ತಿಯನ್ನು ಉಪಯೋಗಿಸಿಕೊಂಡು ನಡೆಯಬಲ್ಲ ಗಡಿಯಾರ, ಕ್ಯಾಲ್‌ಕ್ಯುಲೇಟರ್‍ ನಿಮಗೆಲ್ಲ ಗೊತ್ತಿದೆ. ಸೌರಶಕ್ತಿಯಿಂದ ಚಲಿಸಬಲ್ಲ ದ್ವಿಚಕ್ರವಾಹನ ಮತ್ತು ಕಾರುಗಳನ್ನು ಈಗ ತಯಾರಿಸಲಾಗುತ್ತಿದ್ದು ಇವು ಪ್ರಯೋಗದ ಹಂತಲದಲ್ಲಿವೆ.

ಸೌರಶಕ್ತಿಯನ್ನು ಜಲಜನಕ, ಆಮ್ಲಜನಕ, ಕಾರ್‍ಬನ್ ಡೈ ಆಕ್ಸೈಡ್, ಕಾರ್‍ಬನ್ ಮೋನಾಕ್ಸೈಡ್ ಮುಂತಾದ ಅನಿಲಗಳನ್ನು ಬಿಡುಗಡೆ ಮಾಡಲೂ ಉಪಯೋಗಿಸಬಹುದೆಂಬುದು ಪ್ರಯೋಗಗಳಿಂದ ದೃಢಪಟ್ಟಿದೆ.

ಪೆಟ್ರೋಲಿಯಂ ಉತ್ಪನ್ನ, ನೈಸರ್‍ಗಿಕ ಅನಿಲಗಳು, ಕಲ್ಲಿದ್ದಲು, ಕಟ್ಟಿಗೆ ಮುಂತಾದವುಗಳು ಇಂದಿನ ಬಹುಮಟ್ಟಿನ ಉರುವಲು ಅವಶ್ಯಕತೆಯನ್ನು ಪೂರೈಸುತ್ತಿವೆ. ಆದರೆ ಇವು ದಿನದಿನವೂ ದುಬಾರಿಯೂ, ಬಳಸಿದಂಥೆ ಕಡಿಮೆಯೂ ಆಗುತ್ತವೆ. ಜನಸಂಖ್ಯೆಯಲ್ಲಿ ತೀವ್ರತರದ ಹೆಚ್ಚಳದಿಂದ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದೆ. ಇದು ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇಂಗಾಲ, ನೈಟ್ರೋಜನ್, ಗಂಧಕ ಮೊದಲಾದವುಗಳಿಂದ ಪರಿಸರ ಮಲಿನವಾಗುತ್ತಿದೆ. ಈ ದಿಸೆಯಲ್ಲಿ ಮಾಲಿನ್ಯ ರಹಿತ, ಧಾರಾಳವಾಗಿ ಸಿಗುವ ಅಪಾಯಕಾರಿಯಲ್ಲದ ಶಕ್ತಿಯೊಂದೇ ಅಂದರೆ ಸೌರಶಕ್ತಿ.

ಸೂರ್‍ಯನನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುವುದರ ಮುಂಚೆ ಅನೇಕ ಅಡೆತಡೆಗಳನ್ನು ಗೆಲ್ಲಬೇಕಾಗಿದೆ. ಒಮ್ಮೆ ಅದನ್ನು ಗೆದ್ದರೆ ಸರಬರಾಜು ತೆರವಾಗಲಾರದಷ್ಟು ಅಪರಿಮಿತವಾಗಿದೆ. ಆರೋಗ್ಯದ ಅಪಾಯಗಳು, ಪರಿಸರ ಮಾಲಿನ್ಯ ಇವುಗಳಾವುವೂ ಇರುವುದಿಲ್ಲ. ಸೌರಶಕ್ತಿಯು ಭವಿಷ್ಯಕ್ಕೆ ಒಂದು ಸವಾಲಾಗಿರುವುದೇನೋ ಆಶ್ಚರ್‍ಯವಲ್ಲ! ಮುಂದೊಂದು ದಿನ ಅದು ಇತರ ಎಲ್ಲ ಉರುವಲುಗಳನ್ನು ಸ್ಥಾನಪಲ್ಲಟಗೊಳಿಸಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನೆ
Next post ಸೂರ್‍ಯ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…