ಈ ಸಂಜೆ ಕಂತುವ ಸೂರ್‍ಯ
ಯಾಕೋ ಮಂಕಾಗಿ
ಅವನ ಬಣ್ಣವೆ ಜಿಗುಟಾಗಿ…
ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ
ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ
ಗೂಡಿಗೆ ಮರಳುತ್ತಿದ್ದವು.
ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ
ಒರಲಿ ಉರುಳಾಡಿ ಶಬ್ಧಗಳೇ
ಸರಿದು ಹೋಗಿ ಎಲ್ಲೆಲ್ಲೂ ಮೌನ
ಓಣಿ ಎರೆದು ಮಲಗಿಸಿ ಕಂದನಂತೆ
ತೆಪ್ಪಗೆ ಮಲಗಿತ್ತು ಮಂಕಾದ ಸೂರ್ಯ
ಬೇರೆ ನಾಡಿಗೆ ಬೆಳಕು ಮಾರಾಟ ಮಾಡಲು.
ಹೋದ.
ಮರದಲ್ಲಿ ಅರಳದ ಹೂವಿನ
ಮೊಗ್ಗುಗಳಿಗೆ ಮೌನದ ಕತ್ತಲು
ಕಚುಗುಳಿ ಇಟ್ಟು ಅನುರಣಿಸಿದಾಗ
ಕೈ ಕಾಲು ಮಡಚಿ ಮಲಗಿದ ಕತ್ತಲೆ
ಕೋಣೆ ತುಂಬಾ ಕಂತಿದ ಸೂರ್ಯ
ಹಳದಿ ಬಣ್ಣ, ಕಣ್ಣು ಮುಚ್ಚಾಲೆಯಾಟದಲಿ
ಗೆದ್ದವರು ಯಾರೋ ಸೋತವರ ಯಾರೋ
ಸಣ್ಣ ಬೀಜಗಳ ಮರ ಮಾಡುವ ಸೂರ್ಯ
ಮತ್ತೆ ರಾಜಾರೋಷವಾಗಿ ಉದಯಿಸಿದ.
ಹೊಸ ಪಲ್ಲಕ್ಕಿ ಸಾಗಿದ ಮಾರ್ಗ ಗುಂಟ
ಮತ್ತೆ ಗೌಜುಗದ್ದಲ, ಒಬ್ಬರ ಮೇಲೊಂದು
ಮಗದೊಂದು ಪಾದದ ಗುರುತುಗಳು
ಸಾಗಿ ತೇಲಿ ಹೋದ. ಇರುವೆಗಳ ಸಾಲು.
ದಾರಿ ಬದಿಯ ಗಿಡ ಟೊಂಗೆಗಳಿಂದ ಇಣುಕಿದ
ಸೂರ್ಯ ಸೂಸಿ ರಾಗ ಧ್ವನಿಗಳು ಚೈತನ್ಯಗಳು
ಕಂತುವ ಸೂರ್ಯ ಹುಟ್ಟುವ ಸೂರ್ಯ
ನಮ್ಮ ನಿಮ್ಮಲ್ಲಿ ಏನು ಮಜಾ ಹುಟ್ಟಿಸಿದ್ದಾನೆ.
ವಿಸ್ಮಯ ರಂಗುಗಳಿಗೆ ಬೆಪ್ಪಾದ ಜನಪದ
ಬದುಕು ಕವಿತೆಗಳಲ್ಲಿ ಅವನನ್ನು ಹಣಿದಿದ್ದೇ
ಹಣೆದಿದ್ದು ಮತ್ತೆ ಎಲ್ಲಾ ಜೀವದ
ಉಸಿರಾದುದಕ್ಕೆ ಚಿಗುರಿ ಚಿಮ್ಮಿದಕ್ಕೆ
ಪೂರ್ಣ ಅರಳಿದ ಹೂ, ಕಳಿತ ಹಣ್ಣು
ಮಾಗಿದ ಎಲೆ ಸೋಗೆಯ ಮನೆ, ಆಳದ
ಬೇರು ಎಲ್ಲವೂ ಅವನಾಗಿದ್ದು ವಿಸ್ಮಯ ತಾಯ್ಗಂಡ.
*****