ಅದು ಮದುವೆ ಮನೆ. ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು. ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು. ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು. ಊಟದ ರುಚಿಯನ್ನು ಪ್ರೀತಿಯಿಂದ ಸವಿಯತೊಡಗಿದ್ದರು ಜನ. ಬಡಿಸುವವರು ಲವಲವಿಕೆಯಿಂದ ಊಟದೆಲೆಯ ಕಡೆಗೆ ಗಮನ ಹರಿಸಿದ್ದರು.
ಊಟಕ್ಕೆ ಬಡಿಸುವವರಲ್ಲಿ ಒಬ್ಬ ಕೆಲವರ ಹತ್ತಿರಕ್ಕೆ ಬಂದು ಅತಿಯಾದ ಕಾಳಜಿ ವ್ಯಕ್ತಪಡಿಸಿ “ಹೊಟ್ಟೆ ತುಂಬಾ ಊಟ ಮಾಡಿರಿ, ನಾಚಿಕೆ ಮಾಡಿಕೊಳ್ಳಬೇಡಿರಿ” ಎನ್ನುವನು. “ಈ ವಯಸ್ಸಿನಲ್ಲಿ ಉಣ್ಣದಿದ್ದರೆ ಹೇಗೆ… ಇನ್ನಷ್ಟು ತಗೋರಿ” ಎಂದು ಬಡಿಸುವನು. “ನಿಮ್ಮ ಪಾಲಿನದು ಹಾಕಿದೆ… ಇದು ನನ್ನ ಪಾಲಿನದು. ಮದುವೆ ಊಟ ಇದು ಹೊಟ್ಟೆ ಬಿರಿವಂತೆ ಉಣ್ಣಬೇಕು” ಎಂದು ಅವರು ಅಡ್ಡಾಗಿಟ್ಟ ಕೈಕೊಸರಾಡಿ ಎಲೆಗೆ ಪದಾರ್ಥ ಹಾಕುವನು. “ನನ್ನ ಒತ್ತಾಯಕ್ಕಾದರೂ ಇಷ್ಟು ನೀಡಿಸಿಕೊಳ್ಳಬೇಕು”, “ನಾನು ಪ್ರೀತಿಯಿಂದ ಬಡಿಸುತ್ತೇನೆ ತಗೊಳ್ಳಿರಿ”. “ಇದು ನಿಮ್ಮನೆ ಅಂತ ತಿಳ್ಕೊಳ್ಳಿರಿ” ಇಂಥವೇ ಮಾತುಗಳಿಂದ ಜಬರದಸ್ತಾಗಿ ಸಾಲುಗಳ ನಡುವೆ ಓಡಾಡುತ್ತಿದ್ದ.
ಊಟ ಮಾಡುವವರು ಬೇಡ… ಬೇಡ… ಸಾಕು… ಸಾಕು… ಎಂದು ಎಲೆಯನ್ನು ಪಕ್ಕಕ್ಕೆ ಎತ್ತಿಕೊಂಡರು. ಅದರ ಮೇಲೆ ಅಡ್ಡ ಬಿದ್ದರೂ ಅವನು ಹಟ ಮಾಡಿ ನೀಡುತ್ತಿದ್ದ. ಯಾರಾದರೂ ಹೊಟ್ಟೆ ಹಿಡಿದಷ್ಟು ತಿಂದಾರು. ಅವನು ಒತ್ತಾಯ ಮಾಡಿ ನೀಡಿದ್ದೆಲ್ಲ ಎಂಜಲಾಗಿ ಎಲೆ ತುಂಬಿದ್ದನ್ನು ಕಂಡು ಒಬ್ಬ “ಬೇಡ ಅಂದ್ರೂ ಜುಲಾಮಿ ಮಾಡಿ ಇಷ್ಟು ಅನ್ನ ಆಹಾರ ಕೆಡಿಸುತ್ತಿದ್ದಾನಲ್ಲ ಈ ಮನುಷ್ಯ!” ಎಂದು ವಿಷಾದದಿಂದ ಪೇಚಾಡಿಕೊಂಡ. ಅವನ ಪಕ್ಕದಲ್ಲಿದ್ದವನು ತಟ್ಟನೆ ಉದ್ಗರಿಸಿದ “ಹಾಳು ಮಾಡದೆ ಏನು ಮಾಡಿಯಾನು? ಅದು ಅವನ ಸ್ವಂತದ್ದಲ್ಲ!”
*****