ಏನಿದೀ ಜಿಗಿದಾಟ
ಕಿವಿಹರಿವ ಕೂಗಾಟ
ಇದುವರೆಗು ಕೇಳರಿಯದೀ ಆರ್ಭಟ?
ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ
ಇವನಾಡುವಾಟ!
ಅವರಿವರ ನಾಲಗೆಯ ಕಿತ್ತು
ತಲೆಯೊಳು ನೆಟ್ಟು
ಬೆಳೆಸಿಹನು ಇವನೊಂದು ಭಾರಿ ಮಂಡೆ.
ರಮಣ ಅರವಿಂದ ನುಡಿಯುವರು ಬುರುಡೆಯೊಳಿಂದ
ಅವರು ಹೊರಜಿಗಿಯೆ ಇದು ಖಾಲಿಹಂಡೆ!
ಯಾರದೋ ಗದ್ದೆಯಲಿ ನಿನ್ನ ದನ ಮೇಯಿಸುವುದಿನ್ನು ಸಾಕು;
ಕಂಡಕಂಡವರೆಲ್ಲ ತುಡುಗುದನ ಎಂದೊಯ್ದು
ದೊಡ್ಡಿಗಟ್ಟುವ ರಂಪ ಏಕೆ ಬೇಕು?
ಇರುವೆರಡು ಪುಡಿಕಾಸ
ನಾಲ್ಕು ಅಡಿ ನೆಲಕೊಳಲು ಹಾಕು,
ಆದ ಕೈಬಿಟ್ಟು
ನೆರೆಬೇಲಿ ತರಿದು
ನಾ ಸುರಭಿಕುಲಸ್ವಾಮಿಯೆನುವುದು ಬರಿ ಧಿಮಾಕು.
ಈಗೀಗ ನಡುಹರೆಯ,
ಮರ್ಮಸ್ಥಾನವ ಮೆಟ್ಟಿ ನಡೆದು ಬರುತಿದ್ದಾನೆ ನರ್ಮಸಚಿವ;
ಉತ್ಥಾನಪಾದರೆದೆ ಮೇಲೆಯೇ
ನಗುನಗುತ
ತುತ್ತುಗೊಳೆ ನಿಲುವಂಥ ಅಗ್ನಿಪಾದ.
ಸಪ್ತಸಾಗರದಡಿಯ ಪಾತಾಳದೊಡಲಲ್ಲಿ
ಅಬ್ಬರಿಸಿ ಒರಲುತಿರೆ ತೋಳ ಕರಡಿ, ಹೊರಗೆ
ಹಣೆಯ ಮಣೆಯಲಿ ಪರಮಹಂಸ ಪಾದದ ರಜವ
ಮೆರೆಸುವನು ‘ವೈರಾಗ್ಯ ಷಟ್ಕ’ ಹಾಡಿ.
ಅರಿವು ವರಿಸುವ ಮುಂಚೆ
ಗುರುಮಹಾರಾಜ ಪೀಠದ ಬಯಕೆ ಎದೆಯೊಳುರಿಯೆ,
ಕುಣಿದಾಡಿ ಬೊಬ್ಬಿಡಲು ಬಯಕೆ ಮುತ್ತಿದ ಜೀವ
ಮೌನದಲಿ ನಿಂತರಿವೆಗೆಣೆಯೆ?
ನಿನ್ನ ಪ್ರಾಣಕೆ ಪರಿಧಿಯೊಡ್ಡಿ ಸುತ್ತುತಲಿರಲು
ಈ ಮಣ್ಣ ನೂರು ಬಣ್ಣ,
ಅದ ಜಿಗಿದ ಮೇಲೆನ್ನು
‘ನನ್ನ ಸಾಧನೆಯ ಗುರಿ ಬ್ರಹ್ಮ, ಅದೆ ಅತ್ಮಕನ್ನ.’
ಸುಗ್ಗಿ ಬರೆ ಬೀಗಿ ಮಾಗಿಗೆ ಕೊರಗಿ ಬಳಲುವನು
ಈ ಪರಮಹಂಸ!
ಪಾಮರರು ಬನ್ನಿರೋ, ಅಡಿಯೊಳಿಡಿ ಹಣೆಯ
ಇವ ಅರವಿಂದರಂಶ!
ಎಲ್ಲೊ ಹುಟ್ಟಿದ ಗಿಡವನಿದರ ನಿಜಭೂಮಿಯೊಳು
ನೆಡಬಾರದೇನೊ ಭಗವಂತ?
ಬಿಸಿಲ ಹಣ್ಣಾಗದೆ ರಸತುಂಬಿ ಕಳಿವಂತೆ ಕೃಪೆಮಾಡೊ,
ಬದುಕಲೀ ಭ್ರಾಂತ.
*****