ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ
ಫಲ ಸುರಿಸಲು ಬಯಸಿ,
ಮೊಳಕೆ ಒಡೆಯುತಿರುವಾಗಲೆ ಯಾವುದೊ
ನಂಜು ಗಾಳಿ ಬೀಸಿ,
ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ
ಎಲೆಯುದುರಿವೆ ಕೆಳಗೆ;
ಪ್ರಾಯದ ಗಿಡ ಆಯ ತಪ್ಪಿದಂತಿದೆ
ಈ ರೂಪವೆ ಇದಕೆ?
ಮೂಳೆಗೈಯಾಗಿ ಮುಗಿಲಿಗೆ ಚಾಚಿದ
ಬರದ ಭಿಕ್ಷಹಸ್ತ.
ಸತ್ತ ಸಿರಿಯನ್ನು ಎತ್ತಲು ನಿಲುಕದೆ
ಅಳುತಲಿರುವ ತ್ರಸ್ತ;
ಕಾಣುವ ಕಣ್ಣಿನ ಶಾಪ,
ಬಾಳಿನ ಹಾಳಿಗೆ ರೂಪ,
ಬೋಳು ಬಯಲಲ್ಲಿ, ಬೆಂಕಿ ಬಿಸಿಲಲ್ಲಿ
ಸ್ತಬ್ಧವಾದಂತೆ ಮಾರಿಗುಡಿಯಲ್ಲಿ
ಹೊಗೆಯಾಗೇಳುವ ಧೂಪ;
ಗಾಳಿಮೈಯ ಸೀಳುತ ನಿಂತಿರುವ
ಒರೆಗಳಚಿದ ಬಾಳು,
ಗತಿಸಿದ ಬದುಕಿಗೆ ತಪಿಸುತಿರುವ ಈ
ಮರದ ರೋಗಿಬಾಳು.
* * *
ಟೊಂಗೆಯೊಡೆದ ದಿನದಿಂದಲು ಗಿಡಕೆ
ಪಡೆಯಬೇಕು ಎಂಬುದೊಂದೆ ಬಯಕೆ
ತಿಳಿಯದಂತೆ ತಳದಿಂದಲೆ ಬೆಳೆದು
ಮೈಯೆಲ್ಲಾ ಹಸಿರ ವಸ್ತ್ರ ತಳೆದು,
ತುಳುಕಬೇಕು ಮೈ ತುಂಬಾ ಹಣ್ಣು
ತಣಿಯುವಂತೆ ಬೆಳೆಸಿದವನ ಕಣ್ಣು;
ಬಯಲಲೆಲ್ಲ ತನ್ನ ಕುಲವ ನಿಲಿಸಿ
ಬಾಳಬೇಕು ಎಂದು ಬೇರನಿಳಿಸಿ,
ಮಂತ್ರ ಜಲವ ಸಿಡಿಸಿದಂತೆ ಈ ಗಿಡ
ಭರ ಭರ ಬೆಳೆದಾಯಿತು ಪುಟ್ಟ ಮರ.
* * *
ರಸವತಿಯಾದರು ತನ್ನೊಡಲು
ಗುರಿಯೋ ತಳಕಾಣದ ಕಡಲು.
ಫಲ ಬಿಡದಿದ್ದರೆ ಏನಿದ್ದೇನು
ಮುಗಿಯಿತೆ ಬರಿ ಸುಖಪಡಲು?
ಕರಿಮುಗಿಲಿನ ಸಂತತ ರಸಧಾರೆಗು
ಮೊಗ್ಗನು ತಳೆಯದು ಮಡಿಲು :
ಗಂಗೆಗನಸ ಕಟ್ಟಿದ ಹೊಳೆ ಇಂಗಿದೆ
ಸುಡುಹೆಂಚಾಗಿದೆ ಒಡಲು ;
ಇಡಿ ಜಗ ಫಲವತಿಯಾದರು ನಿಯಮಕೆ
ಹೊರತಾಗಿದೆ ಈ ಗಿಡ,
ಎಷ್ಟೆ ನುಡಿಸಿದರು ಸುಸ್ವರ ಬರದಿದೆ
ಒಡೆದ ಮಡಕೆ ಈ ಘಟ.
ಗುಡಿಯನು ಬೆಳಗಲು ಬಯಸಿದ ಸೊಡರು
ಉರಿಯುತ್ತಿದೆ ಚಿತೆ ಸುಡಲು;
ಚಾಮರವಾಗುವ ಕನಸ ಕಂಡ ಗಿಡ
ಆಯಿತೆ ಕಸಗುಡಿಸುವ ಬರಲು?
*****