ಆಗಿನಿಂದಲು ಇವನು ಹೀಗೆಯೇ ರೋಗಿಯೇ,
ಮಾತಲ್ಲಿ ಮಾತ್ರ ಧನ್ವಂತರೀ ಶೈಲಿಯೇ;
ಇಷ್ಟು ದಿನ ಹುಚ್ಚೆದ್ದು ಊದಿರುವ ರಾಗದಲಿ
ಶೋಕ ವ್ಯಭಿಚಾರಿ, ಸ್ಥಾಯಿಯು ಮಾತ್ರ ಟೀಕೆಯೇ.
ಟೀಕೆ ಪರರಿಗೆ, ಆತ್ಮಾರ್ಚನೆಗೆ ನುಡಿಕೇದಗೆ!
ಇವನ ಬೊಜ್ಜು ಪಟಾಕಿ ಸಿಡಿತಕ್ಕೆ ಜಯಕಾರ
ಚಟಪಟಿಸಿ ಅಲೆಯುತಿದೆ ಚಿನಕುರುಳಿ ಮಂದೆ
ಹಿಂದೆ ಮುಂದೆ.
ಕೂದಲಿಗು ಹೆಚ್ಚು ಕನಸಿನ ಗಣಿತ ತಲೆಯಲ್ಲಿ;
ಮೈಯಲ್ಲಿ ಮರೆಸಿರುವ ಅಂಗಿ ಭಂಗಿಗಳೆಲ್ಲ
ತೀರ ಹೊಸಹೊಸದು, ಇಂಗ್ಲಿಷ್ ಪಿಕ್ಚರಲ್ಲಿ
ಕಾಮುವೋ ಭೀಮುವೋ ಬರೆದ ಪುಸ್ತಕದಲ್ಲಿ
ಮೊನ್ನೆ ನೋಡಿದ್ದು.
ಹಾಗಂತಲೇ ಇವನು ಮೂಲಂಗಿ ತಿಂದೂ
ಫರಂಗಿ ತೇಗಿದ್ದು;
ಬಾಳೆಮರ ಲಿಲಿಹೂವು ಬಿಟ್ಟಿತೆಂದದ್ದು;
ನ್ಯೂಯಾರ್ಕಿನಲ್ಲಿ ಮಳೆ ಬಿತ್ತೆಂದು ಶೇಷಾದ್ರಿ-
ಪುರದಲ್ಲಿ ಕೊಡೆಬಿಚ್ಚಿ ಉಳಿದವರ ನಕ್ಕಿದ್ದು.
ಈಗ-
ಬೇರೊಂದು ಹೊಸರಾಗ ಹಾಡುತ್ತಿದ್ದಾನೆ,
ಗುದ್ದಿ ಸುದ್ದಿಗೆ ಜಿಗಿದು, ಚುಟುಕು ಬೆಳಗುವ ರೋಗ
ನರಳುತ್ತಿದ್ದಾನೆ;
ಶಂಖ ಜಾಗಟೆ ಹಿಡಿದು
ನಾಮ ಬಳಿದು
ನಡಿಗೆಯಲಿ ಆಗೀಗ ಲಾಗ ಎಳೆದು
ಬಸ್ಸು ರಿಕ್ಷಾ ಕಾರು ಇಡಿಕಿರಿದ ರಸ್ತೆಯಲಿ
ನಟ್ಟ ನಡುವೆ ನಿಂತು ಕೂಗುತ್ತಿದ್ದಾನೆ.
ಸುತ್ತಲೂ ಮುಕ್ಕಿರಿವ ಜನಮಂದೆ ಕಂಡು
ಮಂಗ ಕುಣಿಸುವ ಕೊಂಗ ಪೂರ ದಂಗಾಗಿ
ಬೆಪ್ಪು ನೋಡಿದ್ದಾನೆ!
ನಿಂತೆಬಿಟ್ಟಿರ! ಅಯ್ಯೋ, ಕೂರಿ ಇವರೆ
ಗೊತ್ತೆ ಏನಾಯ್ತಂತ ಶನಿವಾರ ಬೆಳಗಾಗ?
ಸರ್ಕಲ್ಲ ಹೋಟಲಲಿ ಗುಂಪಲ್ಲಿ ಕಂಡ.
ಎದ್ದವನೆ ಬಳಿ ಬಂದು
“ಹಲೊ ಭಟ್ಟ ಹೊಲಿಸಯ್ಯ ಹೊಸ ಮೆಟ್ಚ” ಎಂದ!
“ಹೇಗಿದೆ ಪ್ರಾಸಗಳ ಗೇಲಿ ಕಂದ?
‘ಅನುಭವದ ಲಯ ಮುರಿದು ಅನುಭಾವಕೇರುವುದೆ
ಎಲ್ಲ ಸಾಹಿತ್ಯಗಳ ಪರಮೋಚ್ಚ ಗುರಿ.’
ಇದು ಖುದ್ದು ನನ್ನದೆ ಮಾತು ಈಗಷ್ಟೆ ಸ್ಫುರಿಸಿದ್ದು”
ಎಂದವನೆ ತನ್ನ ಎರಡೂ ಕೈಗಳನ್ನ
ಪ್ಯಾಂಟಿನೆಡಬಲದ ಎರಡೂ ಜೇಬಲ್ಲಿಟ್ಟು
ತಾಳ ಬಡಿಯುತ್ತ ಎರಡೂ ಕಾಲಿನಿಂದ
ಪ್ರಾಸಶೈಲಿಯಲೆ ಆತ್ಮಾಭಿನಯ ನೀಡಿದ.
ಹುಬ್ಬ ಕೊಂಕಿಸಿ
ಮುಖಕ್ಕೆ ಕೊಂಚ ನಗು ತರಿಸಿ
‘ಕೆಲಬಲದ ಮನ್ನೆಯರ’ ಗತ್ತಿಂದ ನೋಡಿದ.
ಇದ್ದಕ್ಕಿದ್ದಂತೆ ಎದ್ದಿತೊ ಭಾರಿ ಉದ್ಘೋಷ,
ಪತಿಪಾದ ಸೇವೆಯಲ್ಲಿ ಮೈಯ ಸಲ್ಲಿಸಲೆಂದು
ತವಕದಲ್ಲಿ ಕಾದ ಸತಿಭಾವದಾವೇಶ.
ಉಬ್ಬಿ ಚಿನಕುರುಳಿಗಳು ಬಿರುದ ಸಿಡಿಸಿದರಯ್ಯ ಮೆಚ್ಚುಗಣ್ಣಾಗಿ
ನಡೆದ ವಿಷವದನ ಹೊಗಳಲೂ ಬರದ ದಡ್ದರನ್ನು
ಕಾವ್ಯಶೈಲಿಯಲಿ ಚುಚ್ಚುತ್ತ
ಚಿನಕುರುಳಿಗಳ ತಲೆಯ ಸವರುತ್ತ!
*****