ಅವರು ಕೋಟ್ಯಾಧೀಶ ಮನುಷ್ಯ. ಹತ್ತಾರು ಬಿಸಿನೆಸ್ಸುಗಳಿಂದ ಭಾರಿ ವರ್ಚಸ್ಸು ಗಳಿಸಿದ್ದರು. ದುಡ್ಡು ಅವರಲ್ಲಿ ಕೊಳೆಯಾಗಿ ಬಿದ್ದಿದೆಯೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಆ ವ್ಯಕ್ತಿಯದು ತುಂಬು ಸಂಸಾರ. ನಾಲ್ಕು ಜನ ಗಂಡು ಮಕ್ಕಳು. ನಾಲ್ಕು ಜನ ಹೆಣ್ಣನು ಮಕ್ಕಳು. ಗಂಡು ಮಕ್ಕಳಿಗೆ ಮತ್ತು ನಾಲ್ಕು ಜನ ಅಳಿಯಂದಿರೂ ಒಂದೊಂದು ಬಿಸಿನೆಸ್ಸಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆ ವ್ಯಕ್ತಿಯನ್ನು ಮೊದಲ್ಗೊಂಡು ಪ್ರತಿಯೊಬ್ಬರು ಬೇರೆ ಬೇರೆ ರಾಜಕೀಯ ಪಕ್ಷದಲ್ಲಿದ್ದರು. ಚುನಾವಣಾ ಸಮಯದಲ್ಲಿ ತಮ್ಮ ತಮ್ಮ ಪಕ್ಷಗಳಿಗೆ ಅಭ್ಯರ್ಥಿಗಳಿಗೆ ಅವರು ಸಹಾಯ ಮಾಡುತ್ತಿದ್ದರು. ಆದರೆ ಅವರೆಂದೂ ರಾಜಕೀಯ ಅಧಿಕಾರಕ್ಕಾಗಿ ಹಾತೊರೆಯಲಿಲ್ಲ. ಇದನ್ನು ಗಮನಿಸುತ್ತ ಬಂದಿದ್ದ ಪತ್ರಕರ್ತನೊಬ್ಬ ಕೋಟ್ಯಾಧೀಶರನ್ನು ಸಂದರ್ಶಿಸಿದ.
“ನೀವು ಬಹಳ ದಿನಗಳಿಂದಲೂ ಈ ರಾಜಕೀಯ ಪಕ್ಷದಲ್ಲಿದ್ದೀರಿ. ಯಾಕೆ ಎಂ.ಎಲ್.ಎ ಅಥವಾ ಎಂ.ಪಿ. ಆಗುವ ಮನಸ್ಸು ಮಾಡಿಲ್ಲ?” ಕುತೂಹಲದಿಂದ ಕೇಳಿದ ಪತ್ರಕರ್ತ.
“ರಾಜಕೀಯ ಅಧಿಕಾರದಲ್ಲಿ ನನಗೆ ಚೂರು ಆಸಕ್ತಿಯಿಲ್ಲ” ಕೋಟ್ಯಾಧೀಶರು ಸ್ಪಷ್ಟವಾಗಿಯೇ ಹೇಳಿದರು.
“ಆದರೆ ನೀವು, ನಿಮ್ಮ ಮಕ್ಕಳು, ಅಳಿಯಂದಿರು ಬೇರೆ ಬೇರೆ ರಾಜಕೀಯ ಪಕ್ಷದಲ್ಲಿ ಇದ್ದೀರಲ್ಲ.”
“ಪಕ್ಷದಲ್ಲಿದ್ದರೆ ಅಧಿಕಾರದಲ್ಲಿರಬೇಕಂತ ಎಲ್ಲಿದೆ?”
“ಬೇರೆ ಬೇರೆ ಪಕ್ಷಗಳಲ್ಲಿರುವುದರಿಂದ ನಿಮ್ಮ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟುವುದಿಲ್ಲವೆ?”
“ಖಂಡಿತವಾಗಿಯೂ ಇಲ್ಲ”
“ಒಂದೇ ಪಕ್ಷದಲ್ಲಿರುವವರ ನಡುವೆ ಸಹಮತ ಇರುವುದಿಲ್ಲ ಇದು ನಿಮಗೆ ಹೇಗೆ ಸಾಧ್ಯ?”
“ಸಾಧ್ಯವಿದೆ. ನಮಗೆ ಬಿಸಿನೆಸ್ಸು ಮುಖ್ಯ. ರಾಜಕೀಯ ಮುಖ್ಯವಲ್ಲ. ನಮ್ಮ ವ್ಯವಹಾರಕ್ಕೆ ಆಡಳಿತ ಪಕ್ಷ, ವಿರೋಧ ಪಕ್ಷ, ಎರಡೂ ಬೇಕು, ಅವುಗಳ ತತ್ವ ಸಿದ್ಧಾಂತಗಳಲ್ಲ. ರಾಜಕೀಯ ಅಧಿಕಾರ ತಾತ್ಕಾಲಿಕ. ಬಿಸಿನೆಸ್ಸು ನಿರಂತರ, ನಾವು ಎಲ್ಲ ಪಕ್ಷಗಳಲ್ಲಿರುವುದರಿಂದ ನಮಗೆ ಆತಂಕವಿಲ್ಲ” ಒಳಸತ್ಯವನ್ನು ಬಹಿರಂಗಗೊಳಿಸಿದರು ಕೋಟ್ಯಾಧೀಶರು.
ಪತ್ರಕರ್ತ ಅವರನ್ನು ಅದ್ಭುತ ಎಂಬಂತೆ ದೃಷ್ಟಿಸುತ್ತ ಕುಳಿತ.
*****